ಕೊಪ್ಪಳ: ಕೊಪ್ಪಳ, ಬಳ್ಳಾರಿ, ರಾಯಚೂರು ಹಾಗೂ ಆಂಧ್ರ ತೆಲಂಗಾಣ ಭಾಗದ ಜನರ ಜೀವನಾಡಿಯಾಗಿದ್ದ ತುಂಗಾಭದ್ರ ಜಲಾಶಯ ಬಿಸಿಲಿನ ತಾಪಕ್ಕೆ ಬರಿದಾಗುತ್ತಿದೆ. ಕಳೆದ ವರ್ಷ ಮಲೆನಾಡಿನಲ್ಲಿ ಸುರಿದ ಮಳೆಗೆ ಜಲಾಶಯ ತುಂಬಿತ್ತು. ಹೆಚ್ಚಾದ ನೀರನ್ನು ನದಿ, ಕಾಲುವೆಗಳಿಗೆ ಹರಿಬಿಡಲಾಗಿತ್ತು. ಇನ್ನು ಮಳೆಗಾಲವೇ ಶುರುವಾಗಿಲ್ಲ. ಡ್ಯಾಂನಲ್ಲಿರುವ ಜಲ ಕಡಿಮೆಯಾಗುತ್ತಿದೆ. ಈಗ ಜಲಾಶಯದ ಅಂಗಳ ಯುವಕರಿಗೆ ಹಾಗೂ ಶಾಲಾ ಮಕ್ಕಳಿಗೆ ಆಟದ ಮೈದಾನವಾಗಿದೆ. ಜಲಾಶಯದ ಅಂಗಳವನ್ನೇ ಆಟದ ಮೈದಾನವಾಗಿ ಮಾಡಿಕೊಂಡು ಮುನಿರಾಬಾದ್ ಪ್ರಿಮಿಯರ್ ಲೀಗ್ ಕ್ರಿಕೆಟ್ ಟೂರ್ನಾಮೆಂಟ್ ಆಡಿ ಯುವಕರು ಸಂಭ್ರಮಿಸುತ್ತಿದ್ದಾರೆ.
ತುಂಗಭದ್ರಾ ಜಲಾಶಯ 133 ಟಿಎಂಸಿ ಸಾಮರ್ಥ್ಯವನ್ನು ಹೊಂದಿದೆ. ಜಲಾಶಯದಲ್ಲಿ 33 ಟಿಎಂಸಿ ಹೂಳು ತುಂಬಿರುವುದರಿಂದ 100 ಟಿಎಂಸಿಯಷ್ಟು ನೀರು ಮಾತ್ರ ಸಂಗ್ರಹವಾಗುತ್ತದೆ. ಆದರೆ ಈ ವರ್ಷ ಮೇ ತಿಂಗಳು ಕಳೆಯುತ್ತ ಬಂದರೂ ಇನ್ನೂ ಮಳೆಯಾಗಿಲ್ಲ. 38 ಡಿಗ್ರಿ ಬಿಸಿಲು ಇರುವುದರಿಂದ ನೀರು ಬತ್ತಿ ಹೋಗಿದೆ. ಏಪ್ರಿಲ್ ತಿಂಗಳಲ್ಲಿ 4 ಟಿಎಂಸಿ ಇದ್ದ ನೀರು. ಈಗ ಕೇವಲ 3 ಟಿಎಂಸಿಯಷ್ಟು ಇದೆ. ಇದರಲ್ಲಿ 2 ಟಿಎಂಸಿಯಷ್ಟು ನೀರನ್ನು ಡೆಡ್‌ಸ್ಟಾಕ್ ಇಡಬೇಕಾಗುತ್ತದೆ. ಕಾರಣ ಬಚಾವತ್ ಆಯೋಗದ ವರದಿ ಪ್ರಕಾರ ಜಲಚರಗಳು, ಪ್ರಾಣಿ, ಪಕ್ಷಿಗಳ ರಕ್ಷಣೆಗೆ ನೀರನ್ನು ಉಳಿಸಬೇಕಾಗುತ್ತದೆ. ಉಳಿದ ಒಂದು ಟಿಎಂಸಿಯಲ್ಲಿ ಅರ್ಧ ಟಿಎಂಸಿ ನೀರು ಆವಿಯಾಗಿ ಹೋಗುತ್ತದೆ. ಉಳಿದ ಅರ್ಧ ಟಿಎಂಸಿ ನೀರನ್ನು ವಿಜಯನಗರ ಹಾಗೂ ರಾಯಬಸವಣ್ಣ ಕಾಲುವೆಗಳಿಗೆ ವರ್ಷದ 11 ತಿಂಗಳೂ ನೀರು ಹರಿಸಬೇಕಾಗುತ್ತದೆ. ನೀರಿನ ಪ್ರಮಾಣ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿರುವುದರಿಂದ ಜಲಾಶಯದ ನೀರನ್ನೇ ಅವಲಂಬಿಸಿರುವ ಈ ಭಾಗದ ಜನರು ಆತಂಕಕ್ಕೀಡಾಗಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post