ಜೈಪುರ: ಬಾಲಾಕೋಟ್ನಲ್ಲಿ ಏರ್ಸ್ಟ್ರೈಕ್ ನಡೆಸಿ ಉಗ್ರರ ಸಂಹಾರ ಮಾಡಿದ ವಾಯುಸೇನೆಯ ಸಾಧನೆಯನ್ನು ರಾಜಸ್ಥಾನ ಸರ್ಕಾರ 9ನೇ ತರಗತಿಯ ಪಠ್ಯಪುಸ್ತಕದಲ್ಲಿ ಪಾಠವಾಗಿಸಿದೆ. ಜೊತೆಗೆ ಪಾಕಿಸ್ತಾನದ ಎಫ್-16 ಹೊಡೆದುರುಳಿಸಿ, ಪಾಕ್ ನೆಲದಲ್ಲೇ ವೀರತ್ವ ಪ್ರದರ್ಶಿಸಿದ್ದ ವಿಂಗ್ ಕಮಾಂಡರ್ ಅಭಿನಂದನ್ ಸಾಧನೆಯನ್ನೂ ಸಮಾಜ ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ. ಪಾಕ್ ಪುಂಡಾಟಕ್ಕೆ ಪ್ರತಿಕ್ರಿಯಿಸಲು ವಾಯುಸೇನೆ ತನ್ನ ‘ಬ್ರೇವ್ ಹಾರ್ಟ್’ ಅಭಿನಂದನ್ಗೆ ಸೂಚಿಸಿತ್ತು. ತಾನಿದ್ದ ವಿಮಾನಕ್ಕಿಂತ ಬಲಶಾಲಿಯಾಗಿದ್ದ ವಿಮಾನವನ್ನು ಹೊಡೆದುರುಳಿಸಿದ ಅಭಿನಂದನ್ ಶ್ರೇಷ್ಠತೆ ಪ್ರದರ್ಶಿಸಿದರು ಅಂತಾ ಪುಸ್ತಕದಲ್ಲಿ ಉಲ್ಲೇಖವಾಗಿದೆ.
ಏರ್ಸ್ಟ್ರೈಕ್ ಹಾಗೂ ಅಭಿನಂದನ್ ಬಗ್ಗೆ ಬರೆಯಲಾಗಿರುವ ಗದ್ಯಕ್ಕೆ ಯಾವುದೇ ಹೆಡ್ಲೈನ್ ನೀಡಲಾಗಿಲ್ಲ. ಬದಲಿಗೆ ‘ರಾಷ್ಟ್ರೀಯ ಭದ್ರತೆ ಮತ್ತು ಶೌರ್ಯ ಸಂಪ್ರದಾಯ’ ಎಂಬ ಗದ್ಯಪಾಠದಲ್ಲಿ ಈ ಸಾಧನೆಗಳ ಬಗ್ಗೆ ಉಲ್ಲೇಖಿಸಲಾಗಿದೆ. ಏರ್ಸ್ಟ್ರೈಕ್ನಲ್ಲಿ ಎಷ್ಟು ಉಗ್ರರು ಸತ್ತರು ಎಂಬ ಬಗ್ಗೆ ಪುಸ್ತಕದಲ್ಲಿ ದಾಖಲಿಸಿಲ್ಲ.
ಇನ್ನೊಂದು ವಿಚಾರವೇನೆಂದ್ರೆ, ಆರಂಭದಲ್ಲಿ ಏರ್ಸ್ಟ್ರೈಕ್ ಬಗ್ಗೆ ಕಾಂಗ್ರೆಸ್ನ ಕೆಲ ನಾಯಕರು ಅನುಮಾನ ವ್ಯಕ್ತಪಡಿಸಿ ಪ್ರಶ್ನೆಗಳನ್ನು ಕೇಳಿದ್ದರು. ಈಗ ರಾಜಸ್ಥಾನ ಪಠ್ಯಪುಸ್ತಕದಲ್ಲಿ ಏರ್ಸ್ಟ್ರೈಕ್ ಬಗ್ಗೆ ದಾಖಲಾಗಿದೆ. ರಾಜಸ್ಥಾನದಲ್ಲಿರೋದು ಕಾಂಗ್ರೆಸ್ ಸರ್ಕಾರ ಎನ್ನುವುದೇ ವಿಶೇಷ.
ಫೆ.14ರಂದು ಉಗ್ರರು ಪುಲ್ವಾಮಾದಲ್ಲಿ ದಾಳಿ ನಡೆಸಿ 40ಕ್ಕೂ ಹೆಚ್ಚು ಯೋಧರ ಬಲಿದಾನಕ್ಕೆ ಕಾರಣವಾಗಿದ್ದರು. ಇದಕ್ಕೆ ಪ್ರತೀಕಾರವಾಗಿ ಭಾರತೀಯ ವಾಯುಸೇನೆ ಫೆಬ್ರವರಿ 26ರಂದು 12 ಮಿರಾಜ್-2000 ಯುದ್ಧವಿಮಾನಗಳ ಮೂಲಕ ಗಡಿ ನಿಯಂತ್ರಣಾ ರೇಖೆ ದಾಟಿ. ಉಗ್ರರ ನೆಲೆಗಳ ಮೇಲೆ ದಾಳಿ ನಡೆಸಿ ಅಪಾರ ಸಂಖ್ಯೆಯಲ್ಲಿ ಭಯೋತ್ಪಾದಕರನ್ನು ಸಂಹರಿಸಿತ್ತು. ತದನಂತರ ಇದಕ್ಕೆ ಪ್ರತಿಕಾರವೆಂಬಂತೆ ಭಾರತದ ಗಡಿದಾಟಿ ಬಂದ ಪಾಕಿಸ್ತಾನದ ಎಫ್-16 ವಿಮಾನವನ್ನು, ಮಿಗ್-21 ವಿಮಾನ ಬಳಸಿ ಬೆನ್ನಟ್ಟಿದ್ದ ವಿಂಗ್ ಕಮಾಂಡರ್ ಅಭಿನಂದನ್ ಎಫ್16 ಹೊಡೆದುರುಳಿಸಿದ್ದರು. ಬಳಿಕ ತಾನಿದ್ದ ಮಿಗ್-21 ಪತನಗೊಂಡ ಕಾರಣ ಜೀವ ಉಳಿಸಿಕೊಳ್ಳಲು ಪ್ಯಾರಾಚೂಟ್ ಸಹಾಯದಿಂದ ಕೆಳಕ್ಕೆ ಹಾರಿ ಪಾಕ್ ಸೈನಿಕರ ವಶಕ್ಕೆ ಸಿಕ್ಕಿದ್ದರು. ಪಾಕಿಸ್ತಾನದ ನೆಲದಲ್ಲೂ ಕೆಚ್ಚೆದೆ ತೋರಿದ ಅಭಿನಂದನ್, ಸೇನೆಗೆ ಸಂಬಂಧಿಸಿದ ಯಾವ ಗುಟ್ಟನ್ನೂ ರಟ್ಟು ಮಾಡಿರಲಿಲ್ಲ. ಭಾರತ ಸರ್ಕಾರ ಕೂಡ ಪಾಕಿಸ್ತಾನದ ನಡೆ ವಿರುದ್ಧ ಅಂತಾರಾಷ್ಟ್ರೀಯ ಮಟ್ಟದಲ್ಲಿ ಒತ್ತಡ ಹೇರಿತ್ತು. ಅಭಿನಂದನ್ಗೆ ಏನಾದ್ರೂ ಆದ್ರೆ ತಕ್ಕ ಪಾಠ ಕಲಿಸುತ್ತೇವೆ ಅಂತಾ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿತ್ತು. ಕೊನೆಗೆ ಎರಡು ದಿನಗಳ ಬಳಿಕ ವಾಘಾ ಗಡಿಯ ಮೂಲಕ ಅಭಿನಂದನ್ ಸುರಕ್ಷಿತವಾಗಿ ಭಾರತಕ್ಕೆ ವಾಪಸ್ ಕಳುಹಿಸಿಕೊಡಲಾಗಿತ್ತು.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post