ಗಿರೀಶ್ ಕಾರ್ನಾಡ್ ಕನ್ನಡ ಸಾಹಿತ್ಯ ಲೋಕ ಕಂಡ ಅದ್ಭುತ ನಾಟಕಕಾರ ಹಾಗೂ ಸಾಹಿತಿ. ಚಿತ್ರ ನಟರಾಗಿ ಮತ್ತು ನಿರ್ದೇಶಕರಾಗಿಯೂ ಗುರುತಿಸಿಕೊಂಡವರು. ಕನ್ನಡ, ಹಿಂದಿ, ತೆಲಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಅಭಿನಯ ಮಾಡಿದ್ದಾರೆ. ಪ್ರತಿಷ್ಠಿತ ಜ್ಞಾನಪೀಠ ಪ್ರಶಸ್ತಿ ಪಡೆದ ಕನ್ನಡದ ಏಳನೇ ಸಾಹಿತಿ ಕಾರ್ನಾಡ್. ಕನ್ನಡ ಸಾಹಿತ್ಯ ಲೋಕಕ್ಕೆ ಇವರ ಕೊಡುಗೆ ಅಪಾರ.
ಕಾರ್ನಾಡ್ ಅವರು ಬರೆದ `ನಾಗಮಂಡಲ’ ಕೃತಿ ಕರ್ನಾಟಕ ಸಾಹಿತ್ಯ ಪ್ರಶಸ್ತಿ ದೊರೆಕಿಸಿಕೊಟ್ಟಿತು. ಇದು ಮನುಷ್ಯನ ಕಾಮವನ್ನು ಬಹುರೂಪಿ ಸರ್ಪದೊಂದಿಗೆ ಸಮೀಕರಿಸಿ ಬರೆದಂತ ನಾಟಕ. ಮುಂದೆ 1997ರಲ್ಲಿ ಟಿ.ಎಸ್.ನಾಗಭರಣರ ನಿರ್ದೇಶನದಲ್ಲಿ ಚಲನಚಿತ್ರವಾಗಿ ಕೂಡ ತೆರೆಗೆ ಬಂತು.
ಮಹಾಭಾರತದ ಪಾತ್ರ ಯಯಾತಿ ಮೇಲೆ ಹೊರಬಂದ ನಾಟಕ `ಯಯಾತಿ‘ ವಿವಾಹಿತ ರಾಜನ ಅತೃಪ್ತ ಕಾಮ ವಾಸನೆಯ ಮೇಲೆ ಬೆಳಕು ಚೆಲ್ಲಿತು. ನೆಹರು ಕಾಲದ ಅತಿಯಾದ ಆದರ್ಶವಾದ ಮತ್ತು ಅದು ಹತಾಶೆಯಲ್ಲಿ ಪರ್ಯವಸಾನಗೊಂಡ ವ್ಯಥೆಯನ್ನು ತುಘಲಕ್‌ನೊಂದಿಗೆ ಸಮೀಕರಿಸಿ ಐತಿಹಾಸಿಕ `ತುಘಲಕ್’ ನಾಟಕ ರಚಿಸಿದ್ರು ಕಾರ್ನಾಡ್.
ಕಥಾಸರಿತ್ಸಾಗರದ ಕಥೆಯಾಧಾರಿತ `ಹಯವದನ’ ಮನುಷ್ಯನ ಅಪೂರ್ಣತೆ, ಪೂರ್ಣತೆಯೆಡಗಿನ ಬಯಕೆಯ ಮೇಲೆ ಬೆಳಕು ಚೆಲ್ಲಿತು. ನಂತರ ಬಂದ `ತಲೆದಂಡ’ 12ನೇ ಶತಮಾನದಲ್ಲಿ ಬಸವಕಲ್ಯಾಣದಲ್ಲಿ ಬಸವಾದಿ ಪ್ರಥಮರ ಮೇಲೆ ನಡೆದಂತ ದಬ್ಬಾಳಿಕೆ, ಕಗ್ಗೊಲೆಗಳನ್ನು ತೆರೆದಿಟ್ಟಿತು. ಇವರ `ಅಂಜು ಮಲ್ಲಿಗೆ’ ನಾಟಕ ಸಹೋದರ- ಸಹೋದರಿಯ ನಡುವೆ ಮೂಡುವ ನಿಷಿದ್ಧ ಪ್ರೇಮದೆಡೆಗೆ ಬೆಳಕು ಚೆಲ್ಲುತ್ತದೆ. ಹೀಗೆ ಕಾರ್ನಾಡರ ನಾಟಕ ಪ್ರಪಂಚ ಬದುಕಿನ ಮತ್ತು ಮನುಷ್ಯನ ಜೀವನ ಘಟ್ಟದ ಹಲವಾರು ಆಯಾಮಗಳ ಪರಿಚಯ ಮಾಡಿಸಿಕೊಡುತ್ತವೆ.
ಅವರ ಇನ್ನೂ ಕೆಲವು ನಾಟಕಗಳನ್ನ ನೋಡುವುದಾದರೆ, ಮಾ ನಿಷಾಧ (ಏಕಾಂಕ ನಾಟಕ), ತುಘಲಕ್, ಹಿಟ್ಟಿನ ಹುಂಜ (ಬಲಿ), ತಲೆದಂಡ, ಅಗ್ನಿ ಮತ್ತು ಮಳೆ, ಟಿಪ್ಪುವಿನ ಕನಸುಗಳು, ಒಡಕಲು ಬಿಂಬ, ಮದುವೆ ಆಲ್ಬಮ್, ಫ್ಲಾವರ್ಸ ಬೆಂದ ಕಾಳು ಆನ್ ಟೋಸ್ಟ್.. ಮುಂತಾದವು.
ಪ್ರಶಸ್ತಿಗಳು :-
ಕಾರ್ನಾಡ್ ಅವರು ಸಾಹಿತ್ಯ ಲೋಕಕ್ಕೆ ನೀಡಿದ ಕೊಡುಗೆಗಾಗಿ ಹಲವು ಪ್ರಶಸ್ತಿಗಳು ಹುಡುಕಿಕೊಂಡು ಬಂದವು. 1974ರಲ್ಲಿ ಅವರಿಗೆ ಭಾರತದ ನಾಲ್ಕನೇ ಅತ್ಯುನ್ನತ ಪ್ರಶಸ್ತಿಯಾದ ಪದ್ಮಶ್ರೀ ನೀಡಿ ಗೌರವಿಸಲಾಯಿತು. ಕನ್ನಡ ಸಾಹಿತ್ಯಕ್ಕೆ ನೀಡಿದ ಕೊಡುಗೆಗಾಗಿ 1998ರಲ್ಲಿ ಜ್ಞಾನಪೀಠ ಪ್ರಶಸ್ತಿ ಪಡೆದರು. ನಂತರ 1992ರಲ್ಲಿ ಪದ್ಮಭೂಷಣ ಪ್ರಶಸ್ತಿಗೆ ಭಾಜನರಾದರು. ಕಾಳಿದಾಸ ಸಮ್ಮಾನ್, ಸಿನಿಮಾ ಸೇವೆಗೆ ಗೌರವ ಡಾಕ್ಟರೇಟ್, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಗುಬ್ಬಿ ವೀರಣ್ಣ ಪ್ರಶಸ್ತಿ, ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಮುಂತಾದ ಪ್ರಶಸ್ತಿ ಗೌರವಗಳು ಕಾರ್ನಾಡ್ ಅವರಿಗೆ ಸಂದಿವೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post