ಚುನಾವಣಾ ಚತುರ ಹಾಗೂ ಜೆಡಿಯು ಉಪಾಧ್ಯಕ್ಷ ಪ್ರಶಾಂತ್ ಕಿಶೋರ್ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಪರ ಕೆಲಸ ಮಾಡಲು ನಿರ್ಧರಿಸಿದ್ದಕ್ಕೆ ಜೆಡಿಯು ಅಸಾಮಾಧಾನಗೊಂಡಿದೆ. ಪ್ರಶಾಂತ್ ನಡೆ ವಿರುದ್ಧ ಬಿಜೆಪಿ ಮುನಿಸಿಕೊಂಡಿದ್ದು, ಬಿಹಾರದಲ್ಲಿ ಎನ್ಡಿಎ ಮೈತ್ರಿಪಕ್ಷವಾಗಿರುವ ಜೆಡಿಯುಗೆ ತಲೆನೋವಾಗಿ ಪರಿಣಮಿಸಿದೆ. ಹೀಗಾಗಿ ನಿನ್ನೆ ಪ್ರಶಾಂತ್ ಕಿಶೋರ್ ಜೊತೆ ಬಿಹಾರ ಸಿಎಂ ನಿತೀಶ್ ಕುಮಾರ್ 1 ಗಂಟೆಗಳ ಕಾಲ ಮಾತುಕತೆ ನಡೆಸಿದ್ದಾರೆ.
ಇಬ್ಬರ ಮಾತುಕತೆ ಬಳಿಕ ನಡೆದ ಜೆಡಿಯು ಕಾರ್ಯಕಾರಿಣಿ ಸಭೆಯಲ್ಲೂ ಪ್ರಶಾಂತ್ ಕಿಶೋರ್ ನಡೆ ಬಗ್ಗೆ ಚರ್ಚೆ ನಡೆದಿದೆ. ಆದ್ರೆ ಸಭೆಯಲ್ಲಿ ಪ್ರಶಾಂತ್ ಕಿಶೋರ್ ಏನೂ ಉತ್ತರಿಸದೆ ಸುಮ್ಮನೇ ಕುಳಿತಿದ್ದರು ಎನ್ನಲಾಗಿದೆ. ಇನ್ನೊಂದೆಡೆ ಕೇಂದ್ರ ಸಂಪುಟ ರಚನೆ ವೇಳೆ ಮೋದಿ ಮತ್ತು ಅಮಿತ್ ಶಾ ಜೋಡಿ, ಜೆಡಿಯುಗೆ ಒಂದೇ ಒಂದು ಸಚಿವ ಸ್ಥಾನ ನೀಡಲು ಮುಂದಾಗಿತ್ತು. ಬಿಜೆಪಿ ನಡೆ ವಿರುದ್ಧ ಮುನಿಸಿಕೊಂಡಿದ್ದ ನಿತೀಶ್ ಕುಮಾರ್ ಸಚಿವ ಸ್ಥಾನವನ್ನು ನಿರಾಕರಿಸಿದ್ದರು. ಈಗ ಪ್ರಶಾಂತ್ ಕಿಶೋರ್ರನ್ನ ಪಶ್ಚಿಮ ಬಂಗಾಳದಲ್ಲಿ ಮುಂದೆ ಬಿಟ್ಟು ಕೇಸರಿ ಪಡೆ ವಿರುದ್ಧ ಸೇಡು ತೀರಿಸಿಕೊಳ್ಳಲು ನಿತೀಶ್ ಕುಮಾರ್ ಮುಂದಾಗಿದ್ದಾರಾ ಅಂತಾ ಗುಸುಗುಸು ಕೇಳಿಬರ್ತಿದೆ.
‘‘ಆದ್ರೆ ಹಾಗೇನು ಇಲ್ಲಾ , ಪ್ರಶಾಂತ್ ಕಿಶೋರ್ ವೃತ್ತಿ ಜೀವನಕ್ಕೂ ಜೆಡಿಯುಗೂ ಸಂಬಂಧವಿಲ್ಲ. ಆಂಧ್ರಪ್ರದೇಶ ಸಿಎಂ ಜಗನ್ ಮೋಹನ್ ರೆಡ್ಡಿ ಪರ ಪ್ರಶಾಂತ್ ಕಿಶೋರ್ ಚುನಾವಣಾ ತಂತ್ರಗಾರಿಕೆ ಹೂಡಿದ್ದಾಗ ಯಾರೂ ಪ್ರಶ್ನೆ ಮಾಡಿರಲಿಲ್ಲ. ಆದ್ರೆ ಈಗ್ಯಾಕೆ ಈ ಪ್ರಶ್ನೆ ಎದ್ದಿದೆ. ಮಮತಾ ಬ್ಯಾನರ್ಜಿ ಪಶ್ಚಿಮ ಬಂಗಾಳದಲ್ಲಿ ಸೋಲಬೇಕು ಅಂತಾ ಜೆಡಿಯೂ ಕೂಡ ಬಯಸುತ್ತಿದೆ’’ ಎಂದು ಜೆಡಿಯು ರಾಷ್ಟ್ರೀಯ ಕಾರ್ಯದರ್ಶಿ ಕೆ.ಸಿ.ತ್ಯಾಗಿ ಹೇಳಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post