ಮಧ್ಯ ಪ್ರದೇಶ : ಸಮಾಜದಲ್ಲಿ ಶಾಂತಿ, ಭದ್ರತೆ, ಸಾರ್ವಜನಿಕ ಹಿತಾಸಕ್ತಿ ಕಾಪಾಡೋ ಪೊಲೀಸರ ಬಗ್ಗೆ ಸಾರ್ವಜನಿಕರಲ್ಲಿ ಒಂದು ರೀತಿಯಾದ ಅಸಮಾಧಾನವಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಪೊಲೀಸರು ಮಾನವೀಯತೆಗೆ ಮೆರೆದ ಹಲವು ಉದಾಹರಣೆಗಳನ್ನು ನಾವು ಕಾಣಬಹುದು. ಇಂತಹದ್ದೇ ಪೊಲೀಸರ ಮಾನವೀಯತಗೆ ಸಾಕ್ಷಿಯಾದ ಸ್ಟೋರಿ ಇಲ್ಲಿದೆ.
ಮಧ್ಯ ಪ್ರದೇಶದ ಚೋಟಿ ಬಜಾರಿಯ ಪೊಲೀಸ್ ಠಾಣೆಯ ಸಿಬ್ಬಂದಿ ತಮ್ಮ ಪ್ರೀತಿಯ ಗೆಳೆಯ ‘ಸುಲ್ತಾನ್’ನ ಆರೈಕೆಯಲ್ಲಿ ಬ್ಯುಸಿಯಾಗಿದ್ದಾರೆ. ಸುಲ್ತಾನ್, ಪೊಲೀಸ್ ಠಾಣೆಯಲ್ಲಿ ಆಶ್ರಯ ಪೆಡೆಯುತ್ತಿರುವ ಒಬ್ಬ ಅಪರಾಧಿ ಮನೆಯ ನಾಯಿ. ಸುಲ್ತಾನ್ಗೆ ದಿನಾ ಸ್ನಾನ ಮಾಡಿಸುವುದು, ಆಹಾರ ನೀಡುವುದು, ವಾಕಿಂಗ್ ಕೆರೆದುಕೊಂಡು ಹೋಗುವುದು ಪೊಲೀಸ್ ಠಾಣೆ ಸಿಬ್ಬಂದಿಯ ನಿತ್ಯದ ದಿನಚರಿಯಾಗಿದೆ.
ಈ ಹಿಂದೆ ಸುಲ್ತಾನ್ ನಾಯಿಯ ಯಜಮಾನ ಮನೋಹರ್ ಅಹಿರ್ವಾರ್ ಹಾಗೂ ಅವನ ಇಬ್ಬರ ಮಕ್ಕಳು ಆಸ್ತಿ ವಿಚಾರವಾಗಿ ತಮ್ಮ ಸ್ವಂತ ಸಂಬಂಧಿಕರನ್ನೇ ಕೊಲೆ ಮಾಡಿ ಜೈಲು ಪಾಲಾಗಿದ್ದರು. ನಂತರ ಸಾಕ್ಷಿ ಆಧಾರದ ಮೇಲೆ ಆರೋಪ ಸಾಬೀತಾಗಿದ್ದು ಸದ್ಯ ಶಿಕ್ಷೆ ಅನುಭವಿಸುತ್ತಿದ್ದಾರೆ.
ಆದರೆ, ಈ ಮಧ್ಯೆ ಮನೋಹರ್ ಅಹಿರ್ವಾರ್ ಮನೆಯ ನಾಯಿ ಅನಾಥವಾಗಿತ್ತು. ಇದನ್ನು ಗಮನಿಸಿದ ಚೋಟಿ ಬಜಾರಿಯ ಪೊಲೀಸ್ ಠಾಣೆಯ ಸಿಬ್ಬಂದಿ ನಾಯಿಯನ್ನು ಪೊಲೀಸ್ ಠಾಣೆಗೆ ಕರೆ ತಂದಿದ್ದಾರೆ. ಜೊತೆಗೆ ಅದರ ಆರೈಕೆಯ ಜವಾಬ್ದಾರಿ ಕೂಡ ಇವರೇ ನಿರ್ವಹಿಸುತ್ತಿದ್ದಾರೆ. ಈ ಬಗ್ಗೆ ಖಾಸಗಿ ವಾಹಿನಿಯೊಂದಿಗೆ ಮಾತನಾಡಿದ ಪೊಲೀಸ್ ಸಿಬ್ಬಂದಿ ಮನೀಶ್ ತಿವಾರಿ “ಅನಾಥವಾದ ನಾಯಿಯನ್ನು ಸಾಕುವಂತೆ ಅಪರಾಧಿಯ ಸಂಬಂಧಿಕರಿಗೆ, ನೆರೆಹೊರೆಯವರಿಗೆ ಹೇಳಿದೆವು ಆದರೆ ಅವಱರು ಒಪ್ಪಲಿಲ್ಲ, ನಂತರ ನಾವೂ ಬಿಟ್ಟು ಬಂದರೆ ಅದು ಸಾಯುತ್ತದೆ ಎಂದು ಪೊಲೀಸ್ ಠಾಣೆಗೆ ತಂದೆವು. ಅದು ಇಲ್ಲಿಗೆ ಹೊಂದಿಕೊಂಡು ಈ ಠಾಣೆಯ ಒಬ್ಬ ಸದಸ್ಯನಂತಾಗಿದೆ ಎಂದಿದ್ದಾರೆ.
ಸದ್ಯ ಸುಖವಾಗಿರುವ ಸುಲ್ತಾನ್ಗೆ ಪೊಲೀಸ್ ಠಾಣೆಯೇ ಮನೆಯಂತಾಗಿದೆ. ಪೊಲೀಸರು ಕೂಡ ನಾಯಿಯನ್ನು ಬಹಳ ಜಾಗರೂಕತೆಯಿಂದ ಮುದ್ದಿನಿಂದ ಸಾಕುತ್ತಿದ್ದಾರೆ. ಪೊಲೀಸರೆಂದರೆ ಭಯ ಪಡುವ ಜನರು ಇಂತಹ ಪೊಲೀಸರು ನಮ್ಮ ನಡುವೆ ಇದ್ದಾರೆ ಎಂಬುದನ್ನು ತಿಳಿದುಕೊಳ್ಳಬೇಕು.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post