ಕೇಂದ್ರ ಸರ್ಕಾರ, 370 ನೇ ವಿಧಿ ರದ್ದು ಮಾಡಿ ಜಮ್ಮು ಮತ್ತು ಕಾಶ್ಮೀರ, ಹಾಗೂ ಲಡಾಖ್ ಅನ್ನ ಎರಡು ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶಗಳನ್ನಾಗಿ ಮಾಡಿತ್ತು. ಇದರ ಬೆನ್ನಲ್ಲೇ ಭಾರತ ಹಾಗೂ ಪಾಕಿಸ್ತಾನ ಗಡಿಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಭಾರತ- ಪಾಕ್ ನಡುವೆ ಶೀತಲ ಸಮರ ಕೂಡ ಆರಂಭವಾಗಿದೆ. ಭಾರತ ಹಾಗೂ ಪಾಕಿಸ್ತಾನಗಳ ನಡುವೆ ಓಡಾಡುತ್ತಿರುವ ಸಂಝೋತಾ ಎಕ್ಸ್ಪ್ರೆಸ್ ರೈಲಿನ ಸೇವೆ ಸ್ಥಗಿತಗೊಂಡಿತ್ತು. ಇದರೊಂದಿಗೆ ದೆಹಲಿ- ಲಾಹೋರ್ ಮಧ್ಯದ ಬಸ್ ಸೇವೆ ಕೂಡಾ ರದ್ದಾಗಿತ್ತು. ಪಾಕಿಸ್ತಾನ ಭಾರತದ ರಾಯಭಾರಿಯನ್ನ ಉಚ್ಛಾಟಿಸಿತು. ದ್ವಿಪಕ್ಷೀಯ ಒಪ್ಪಂದಗಳನ್ನ ರದ್ದು ಪಡಿಸಿತು. ಇದ್ರಿಂದ ಲಾಭಕ್ಕಿಂತ ನಷ್ಟ ಅನುಭವಿಸಿದ್ದು ಮಾತ್ರ ಪಾಕಿಸ್ತಾನ.
ಭಾರತ ಪುಲ್ವಾಮದಂತಹ ದಾಳಿಯನ್ನು ಮತ್ತೊಮ್ಮೆ ನೋಡಬೇಕಾಗಿ ಬರಬಹುದು ಅಂತಾ ಪರೋಕ್ಷವಾಗಿ ಹೇಳಿ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಭಾರತವನ್ನು ಕೆಣಕಿದರು. ಈಗ ಲಡಾಖ್ ಮತ್ತು ಪಾಕಿಸ್ತಾನದ ಗಡಿ ಪ್ರದೇಶದಲ್ಲಿ ಪಾಕಿಸ್ತಾನದ ಯುದ್ಧ ವಿಮಾನಗಳು ಕಾಣಿಸಿಕೊಳ್ಳುವ ಮೂಲಕ ಪಾಕ್ ಮತ್ತೆ ಕ್ಯಾತೆ ತೆಗೆದಿದೆ. ಮೊದಲಿನಿಂದಲೂ ಭಾರತದ ಪಾಲಿಗೆ ಶತ್ರು ರಾಷ್ಟ್ರವಾಗಿಯೇ ಗುರುತಿಸಿಕೊಂಡಿರುವ ಪಾಕಿಸ್ತಾನದ ಚಲನವಲನಗಳನ್ನ ಭಾರತ ಹದ್ದಿನ ಕಣ್ಣಿಟ್ಟು ವೀಕ್ಷಿಸುತ್ತಿದೆ. ಈ ನಡುವೆಯೇ ಪಾಕಿಸ್ತಾನ ಲಡಾಖ್ನ ಗಡಿ ಪ್ರದೇಶಕ್ಕೆ ಯುದ್ಧ ಸಾಮಗ್ರಿಗಳನ್ನು ರವಾನಿಸುತ್ತಿದೆ. ಇನ್ನೂ ಹೆಚ್ಚಿನ ಯುದ್ಧ ಸಾಮಗ್ರಿಗಳ ಬಂದಿಳಿಯುವ ಸಾಧ್ಯತೆಯಿದೆ ಎನ್ನುವ ಮಾಹಿತಿ ಭಾರತೀಯ ಗುಪ್ತಚರ ಇಲಾಖೆಗೆ ಲಭ್ಯವಾಗಿದೆ. ಹಾಗಾದ್ರೆ ಪಾಕಿಸ್ತಾನ ಈಗ ಭಾರತದ ಮೇಲೆ ಯುದ್ಧ ಸಾರಲು ಮುಂದಾಗಿದೆಯೇ ಎಂಬ ಶಂಕೆ ಬಲವಾಗುತ್ತಿದೆ.
ಅಜಿತ್ ದೋವಲ್ ಅವರಿಂದ ವೈಮಾನಿಕ ಸಮೀಕ್ಷೆ..!
ಪಾಕ್ ಪತ್ರಕರ್ತ ಮಾಡಿದ್ದ ಟ್ವೀಟ್ ಬೆನ್ನಲ್ಲೇ ಶ್ರೀನಗರ ಮತ್ತು ದಕ್ಷಿಣ ಕಾಶ್ಮೀರದ ಪ್ರದೇಶಗಳಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ವೈಮಾನಿಕ ಸಮೀಕ್ಷೆ ನಡೆಸಿದ್ದಾರೆ. ಅಷ್ಟೇ ಅಲ್ಲ, ಪೊಲೀಸ್ ಮುಖ್ಯಸ್ಥ ದಿಲ್‌ಬಾಗ್ ಸಿಂಗ್ ಮತ್ತು ಸೇನಾ ಕಮಾಂಡರ್‌ಗಳು ವಿವಿಧ ಭಾಗಗಳಲ್ಲಿ ಪ್ರತ್ಯೇಕ ವೈಮಾನಿಕ ಸಮೀಕ್ಷೆ ನಡೆಸಿದ್ದು, ಭದ್ರತಾ ಸ್ಥಿತಿಯನ್ನು ಅವಲೋಕಿಸಿದ್ದಾರೆ.
ವೈಮಾನಿಕ ಸಮೀಕ್ಷೆಯಲ್ಲಿ ಸಿಕ್ಕಿದ್ದೇನು..?
ಅಜಿತ್ ದೋವಲ್ ಸೇರಿದಂತೆ ಹಲವು ಅಧಿಕಾರಿಗಳು ಒಟ್ಟಾಗಿ ನಡೆಸಿದ ವೈಮಾನಿಕ ಸಮೀಕ್ಷೆಯಲ್ಲಿ ಪಾಕಿಸ್ತಾನಿ ವಾಯುಸೇನೆಗೆ ಸೇರಿದ ಮೂರು ಜೆಎಫ್-17 ಫೈಟರ್ ಯುದ್ಧ ವಿಮಾನಗಳನ್ನು ಲಡಾಖ್ಗೆ ವಿರುದ್ಧ ದಿಕ್ಕಿನಲ್ಲಿರುವ ಪಾಕ್ನ ಸ್ಕರ್ದು ವಾಯುನೆಲೆಯ ಕಡೆಗೆ ಸಾಗಿಸಲಾಗಿದೆ ಎನ್ನುವ ಮಾಹಿತಿಯೂ ಇದೆ. ಅಮೆರಿಕ ಪೂರೈಕೆ ಮಾಡಿದ್ದ C-130 ಟ್ರಾನ್ಸ್ ಪೋರ್ಟ್ ವಿಮಾನದ ಹಳೆಯ ಆವೃತ್ತಿಯನ್ನು ಹೊಂದಿರುವ ಪಾಕಿಸ್ತಾನ, ಜೆಎಫ್ -17 ಫೈಟರ್ ವಿಮಾನಗಳನ್ನು ಗಡಿ ಪ್ರದೇಶದಲ್ಲಿ ನಿಯೋಜನೆ ಮಾಡಿದೆ ಎನ್ನಲಾಗಿದೆ.
ಪಾಕ್ ಪತ್ರಕರ್ತನಿಂದಲೇ ಬಯಲಾಯಿತು ಪಾಕ್ನ ದುಷ್ಟಬುದ್ಧಿ…!
ಲಡಾಖ್ಗೆ ಪಾಕ್ ಯುದ್ಧಸಾಮಾಗ್ರಿಗಳನ್ನ ರವಾನಿಸುತ್ತಿದ್ದ ವಿಚಾರ ತಿಳಿದು ಬಂದಿದ್ದು ಪಾಕ್ನ ಪತ್ರಕರ್ತನಿಂದ. ಭಾರೀ ಶಸ್ತ್ರಾಸ್ತ್ರಗಳನ್ನು ಹೊತ್ತ ಪಾಕ್ ಸೈನಿಕರು ಎಲ್‌ಒಸಿಯತ್ತ ಹೋಗುತ್ತಿದ್ದಾರೆ ಎಂದು ಪಾಕ್ ಪತ್ರಕರ್ತ ಹಮೀದ್ ಮಿರ್ ಕಳೆದ ಭಾನುವಾರ ಟ್ವೀಟ್ ಮಾಡಿದ್ದರು. ಆತನ ಉದ್ದೇಶವೇ ಬೇರೆಯಿತ್ತು. ಆದರೆ ಪಾಕ್ನ ಪ್ರತಿ ನಡೆಯನ್ನು ಸೂಕ್ಷ್ಮವಾಗಿ ಅವಲೋಕಿಸುವ ಭಾರತ ಆತ ಮಾಡಿದ್ದ ಟ್ವೀಟ ಅನ್ನ ಗಂಭೀರವಾಗಿ ಪರಿಣಿಗಣಿಸಿ ಬೇಹುಗಾರಿಕೆಗೆ ಇಳಿದಿತ್ತು. ಪಾಕಿಸ್ತಾನದ ಪ್ರತಿಕ್ಷಣದ ಚಟುವಟಿಕೆಯ ಮೇಲೂ ಭಾರತದ ಗುಪ್ತಚರ ಸಂಸ್ಥೆ, ಸೇನಾ ಪಡೆ ಹಾಗೂ ವಾಯುಪಡೆ ತೀವ್ರ ನಿಗಾ ಇರಿಸಿದೆ. ಲಡಾಖ್ ಗಡಿ ಪ್ರದೇಶದಲ್ಲಿ ಪಾಕ್ನ ಯುದ್ಧವಿಮಾನ ಇರುವುದು ಖಚಿತವಾಗಿದ್ದು, ಪಾಕಿಸ್ತಾನ ಯಾವುದೇ ರೀತಿಯ ಕ್ರಮಕ್ಕೆ ಮುಂದಾದರೆ ಸೂಕ್ತ ಪ್ರತ್ಯುತ್ತರ ನೀಡಲು ಭಾರತ ಸಿದ್ಧವಾಗಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post