ಬೆಂಗಳೂರು : ಈ ಬಾರಿಯ ಕನ್ನಡ ರಾಜ್ಯೋತ್ಸವಕ್ಕೆ ಬಿಬಿಎಂಪಿ ಮೇಯರ್ ಎಂ. ಗೌತಮ್ ಕುಮಾರ್ ಕನ್ನಡಿಗರಿಗೆ ಸರ್ಪ್ರೈಸ್ ಗಿಫ್ಟ್ ನೀಡಲು ಮುಂದಾಗಿದ್ದಾರೆ. ಕನ್ನಡಿಗರ ಬಹು ದಿನಗಳ ಬೇಡಿಕೆಯಂತೆ ಕನ್ನಡ ನಾಮಫಲಕ ಕಡ್ಡಾಯಗೊಳಿಸಿ ಮೇಯರ್ ಆದೇಶಿಸಿದ್ದಾರೆ. ಇದೇ ನವೆಂಬರ್ 1ರಿಂದ ನಗರದಾದ್ಯಂತ ಕಡ್ಡಾಯ ನಾಮಫಲಕ ಆದೇಶ ಜಾರಿಗೆ ಬರಲಿದೆ.
ಕನ್ನಡದಲ್ಲಿ ನಾಮಫಲಕ ಹಾಕಲು ನಿರಾಕರಿಸುವ ಅಂಗಡಿ ಮುಂಗಟ್ಟುಗಳು, ಮಳಿಗೆಗಳು, ಕಚೇರಿ, ಕಾರ್ಖಾನೆ, ಕಂಪನಿಗಳಿಗೆ ಲೈಸೆನ್ಸ್ ನೀಡದಿರುವುದಕ್ಕೆ ಮೇಯರ್ ಮುಂದಾಗಿದ್ದಾರೆ. ಸಂಬಂಧಪಟ್ಟ ಹಿರಿಯ ಅಧಿಕಾರಿಗಳೊಂದಿಗೆ ಇಂದು ಸಭೆ ನಡೆಸಿರುವ ಮೇಯರ್ ಗೌತಮ್‍ಕುಮಾರ್, ನವೆಂಬರ್ ತಿಂಗಳಿನಾದ್ಯಂತ ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವ ಮಳಿಗೆಗಳ ಮೇಲೆ ಕನ್ನಡ ನಾಮಫಲಕ ಹಾಕಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡುವಂತೆ ಸೂಚಿಸಿದ್ದು, ಮುಂಬರುವ ನವೆಂಬರ್ 1ರಿಂದ ಕನ್ನಡ ನಾಮಫಲಕ ಕಡ್ಡಾಯಗೊಳಿಸಲು ನಿರ್ಧರಿಸಲಾಗಿದೆ.
ನಗರದ ಪ್ರತಿಯೊಂದು ವಾಣಿಜ್ಯ ಮಳಿಗೆಗಳು, ಸಂಘ ಸಂಸ್ಥೆಗಳು, ಕಂಪನಿಗಳು, ಅಂಗಡಿ ಮುಂಗಟ್ಟುಗಳ ಮೇಲೆ ದೊಡ್ಡ ಅಕ್ಷರಗಳಲ್ಲಿ ಕನ್ನಡ ನಾಮಫಲಕ ಹಾಕಿಸಬೇಕು. ಕನ್ನಡ ಅಕ್ಷರಗಳು ಶೇಕಡಾ 70ರಷ್ಟು ದೊಡ್ಡದಾಗಿದ್ದರೆ, ಇಂಗ್ಲಿಷ್ ಅಕ್ಷರ ಶೇಕಡಾ 30ರಷ್ಟಿರುವ ನಾಮಫಲಕ ಅಳವಡಿಕೆಗೆ ಸೂಚನೆ ನೀಡಲಾಗಿದೆ. ಕನ್ನಡ ನಾಮಫಲಕ ಅಳವಡಿಸದ ಮಳಿಗೆಗಳಿಗೆ ಟ್ರೇಡ್ ಲೈಸೆನ್ಸ್ ನೀಡದಂತೆ ಅಧಿಕಾರಿಗಳಿಗೆ ಮೇಯರ್ ಕಟ್ಟಪ್ಪಣೆ ಹೊರಡಿಸಿದ್ದಾರೆ.
ಕಡ್ಡಾಯ ಕನ್ನಡ ನಾಮಫಲಕ ಅಳವಡಿಕೆಗೆ ಒತ್ತಾಯಿಸಿದ್ದ ಕನ್ನಡಪರ ಸಂಘಟನೆಗಳು..!
ಹಲವು ಕನ್ನಡಪರ ಸಂಘಟನೆಗಳು ಬೆಂಗಳೂರಿನಾದ್ಯಂತ ಇರುವ ಪ್ರತಿಯೊಂದು ಮಳಿಗೆಗಳು ಕನ್ನಡ ನಾಮಫಲಕ ಅಳವಡಿಸುವಂತೆ ಚಳುವಳಿ ನಡೆಸಿದ್ದವು. ಅಲ್ಲದೆ ಈ ಹಿಂದಿನ ಹಲವಾರು ಬಿಬಿಎಂಪಿ ಮೇಯರ್ಗಳನ್ನು ಭೇಟಿಯಾಗಿ ಕನ್ನಡ ನಾಮಫಲಕ ಕಡ್ಡಾಯಗೊಳಿಸುವಂತೆ ಒತ್ತಾಯಿಸಿದ್ದವು. ಇದೀಗ ಮೇಯರ್ ಆಗಿ ಅಧಿಕಾರ ವಹಿಸಿಕೊಂಡಿರುವ ಗೌತಮ್‍ಕುಮಾರ್ ಒಂದೇ ವಾರದಲ್ಲಿ ಕನ್ನಡ ನಾಮಫಲಕ ಕಡ್ಡಾಯಗೊಳಿಸಲು ಆದೇಶಿಸಿ ಕನ್ನಡಿಗರ ಬಹುದಿನಗಳ ಬೇಡಿಕೆಗೆ ಸ್ಪಂದಿಸಿದ್ದಾರೆ.
ಕನ್ನಡಿಗರ ಓಲೈಕೆಗೆ ಮುಂದಾದ್ರಾ ಗೌತಮ್ ಕುಮಾರ್ ಜೈನ್..!
ಜೈನ ಸಮುದಾಯದವರಾದ ಎಂ.ಗೌತಮ್ ಕುಮಾರ್ ಅನ್ನು ಬಿಜೆಪಿ ಅನೀರಿಕ್ಷಿತವಾಗಿ ಬಿಬಿಎಂಪಿ ಮೇಯರ್ ಆಗಿ ಆಯ್ಕೆ ಮಾಡಿದ್ದು, ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿತ್ತು. ಯಾವಾಗ ಗೌತಮ್ ಕುಮಾರ್ ಪಾಲಿಕೆ ಮೇಯರ್ ಆಗಿ ಅಧಿಕಾರ ಸ್ವೀಕರಿಸಿದ್ರೋ ಆ ಕ್ಷಣದಿಂದ, ಬೆಂಗಳೂರಿಗೆ ಮಾರ್ವಾಡಿ ಮೇಯರ್ ಬೇಡ ಅಂತಾ ಕನ್ನಡಪರ ಸಂಘಟನೆಗಳು ಬೀದಿಗಿಳಿದು ಪ್ರತಿಭಟನೆಯನ್ನೂ ನಡೆಸಿದ್ವು. ಅಲ್ಲದೇ, ಟ್ವಿಟರ್ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ “ಮಾರ್ವಾಡಿ ಮೇಯರ್ ಬೇಡ” “ಕನ್ನಡಿಗರಿಗೆ ಮೇಯರ್ ಸ್ಥಾನ” ನೀಡಿ ಎಂದು ಕನ್ನಡಿಗರು ಅಭಿಯಾನ ನಡೆಸಿದ್ರು.
ಇಷ್ಟೆಲ್ಲಾ ಬೆಳವಣಿಗೆಯಿಂದ ಕನ್ನಡಿಗರನ್ನು ಕಡೆಗಣಿಸಿ ಜೈನ್ ಸಮುದಾಯದವರಿಗೆ ಮೇಯರ್ ಸ್ಥಾನ ನೀಡಿದ್ದ ಬಿಜೆಪಿ, ರಾಜ್ಯಾದ್ಯಂತ ಟೀಕೆಗೆ ಗುರಿಯಾಗಿತ್ತು. ಇದೀಗ ಅದರ ಕಳಂಕ ತೊಳೆದುಕೊಳ್ಳಲು ಬಿಜೆಪಿಯ ಮೇಯರ್ ಗೌತಮ್ ಕುಮಾರ್ ಇಂತಹದ್ದೊಂದು ನಿರ್ಧಾರಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ. ಆರಂಭದಲ್ಲೇ ಕನ್ನಡಿಗರನ್ನು ಓಲೈಸುವ ಮೇಯರ್ ಗೌತಮ್ ಕುಮಾರ್ ನಿರ್ಧಾರದ ಹಿಂದೆ, ಕನ್ನಡಿಗರ ವಿಶ್ವಾಸ ಗಳಿಸಿ ಮುಂದಿನ ದಿನಗಳಲ್ಲಿ ಸುಗಮ ಆಡಳಿತ ನಡೆಸುವ ಉದ್ದೇಶ ಇರುವುದನ್ನು ಅಲ್ಲಗೆಳೆಯುವಂತಿಲ್ಲ.
-ರಘುಪಾಲ್, ನ್ಯೂಸ್ಫಸ್ಟ್
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post