ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಪಾಲಿಗೆ 2019ನೇ ವರ್ಷ ಅದೃಷ್ಟದ ವರ್ಷವೇ ಆಗಿತ್ತು. ಯಾಕಂದ್ರೆ, 2019ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ 303 ಸ್ಥಾನಗಳನ್ನು ಗೆಲ್ಲುವ ಮೂಲಕ ಎರಡನೇ ಬಾರಿಗೆ ಪ್ರಧಾನ ಮಂತ್ರಿಯಾದರು. ಅಷ್ಟೇ ಅಲ್ಲ, ಭಾರತೀಯ ಜನತಾ ಪಕ್ಷದ ಪ್ರಣಾಳಿಕೆಯ ಮೂಲ ವಿಷಯಗಳನ್ನ ಜಾರಿಗೆ ತರುವಲ್ಲಿ ಯಶಸ್ವಿಯೂ ಆದರು.
ಆದರೆ ದೇಶದ ಅರ್ಥ ವ್ಯವಸ್ಥೆಯನ್ನ ಸರಿದಾರಿಯಲ್ಲಿ ಹಿಡಿದಿಟ್ಟುಕೊಳ್ಳುವಲ್ಲಿ ಎಡವಿದರು. CAA ಹಾಗೂ NRC ವಿಚಾರದಲ್ಲಿ ದೇಶದಾದ್ಯಂತ ವಿರೋಧ ಪಕ್ಷಗಳ ನೇತೃತ್ವದಲ್ಲಿ ಪ್ರತಿಭಟನೆಗಳು ನಡೆದವು. ಹೀಗಾಗಿ 2020ನೇ ವರ್ಷ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಪಾಲಿನ ಅತ್ಯಂತ ಸವಾಲಿನ ವರ್ಷವಾಗಿರಲಿದೆ. ಮೋದಿಯವರ ಮುಂದೆ ಪ್ರಮುಖ 5 ಚಾಲೆಂಜ್ಗಳಿವೆ. ಆ ಪ್ರಮುಖ ಸವಾಲುಗಳ ಡಿಟೇಲ್ ಇಲ್ಲಿದೆ.
ಚಾಲೆಂಜ್ ನಂ.1: ದೆಹಲಿ-ಬಿಹಾರ ವಿಧಾನಸಭಾ ಯುದ್ಧ..!
ಭಾರತೀಯ ಜನತಾ ಪಕ್ಷ 2019ರ ಲೋಕಸಭಾ ಚುನಾವಣೆಯನ್ನ ಗೆದ್ದಿದೆ. ಆದರೆ ಅದೆ ವರ್ಷ ನಡೆದ ಮಹಾರಾಷ್ಟ್ರ ಮತ್ತು ಜಾರ್ಖಂಡ್ ವಿಧಾನಸಭಾ ಚುನಾವಣೆಗಳಲ್ಲಿ ಭಾರಿ ಮುಖಭಂಗವನ್ನೇ ಅನುಭವಿಸಿತು. ಮಹಾರಾಷ್ಟ್ರದಲ್ಲಿ ಎನ್ಡಿಎ ಅಂಗಪಕ್ಷವಾಗಿದ್ದ ಶಿವಸೇನೆಯ ನಾಯಕ ಉದ್ಧವ್ ಠಾಕ್ರೆ, ಎನ್ಸಿಪಿ ಹಾಗೂ ಕಾಂಗ್ರೆಸ್ ಜೊತೆ ಸೇರಿ ಸರ್ಕಾರ ರಚನೆ ಮಾಡಿದ್ದಾರೆ. ಜಾರ್ಖಂಡ್ನಲ್ಲಿ ಬಿಜೆಪಿ ನೆಲಕಚ್ಚಿದೆ. ಪರಿಸ್ಥತಿ ಹೀಗಿರುವಾಗ 2020ರಲ್ಲಿ ದೇಶದ ರಾಜಧಾನಿ ದೆಹಲಿ ಹಾಗೂ ಬಿಹಾರ ರಾಜ್ಯ ವಿಧಾನಸಭೆ ಚುನಾವಣೆಗಳು ನಡೆಯಲಿವೆ. ಆ ಎರಡೂ ರಾಜ್ಯಗಳಲ್ಲಿ ಬಿಜೆಪಿಯನ್ನ ಅಧಿಕಾರಕ್ಕೆ ತರುವ ಬಹುದೊಡ್ಡ ಸವಾಲು ಮೋದಿಯವರ ಎದುರಲ್ಲಿದೆ.
ದೆಹಲಿಯಲ್ಲಿ ಬಿಜೆಪಿ ಅಧಿಕಾರ ಕಳೆದುಕೊಂಡು 20 ವರ್ಷಗಳಾಯ್ತು. ಸದ್ಯ ಅಧಿಕಾರದಲ್ಲಿರುವ ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್ ಆಡಳಿತದ ಬಗ್ಗೆ ದೆಹಲಿಯ ಜನರಲ್ಲೂ ಒಳ್ಳೆಯ ಅಭಿಪ್ರಾಯವಿದೆ. ಇಂಥಹ ಸ್ಥಿತಿಯಲ್ಲಿ ದೆಹಲಿಯನ್ನ ಗೆಲ್ಲುವುದು ಮೋದಿಯವರಿಗೆ ರಿಯಲ್ ಚಾಲೆಂಜ್ ಆಗಲಿದೆ. ಇನ್ನು ಬಿಹಾರದಲ್ಲಿ ಈಗಾಗಲೇ ಕಾಂಗ್ರೆಸ್ ಹಾಗೂ ಆರ್ಜೆಡಿ ನಡುವಿನ ಮೈತ್ರಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನ ಕಂಗೆಡಿಸಿದೆ. ಅದರಲ್ಲೂ ಜಾರ್ಖಂಡ್ ಚುನಾವಣಾ ಫಲಿತಾಂಶ ಬಿಹಾರದ ಮತದಾರರ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇದೆ. ಹೀಗಾಗಿ ಬಿಹಾರ ಚುನಾವಣೆ ಕೂಡ ಮೋದಿ ಪಾಲಿನ ಬಹುದೊಡ್ಡ ಸವಾಲಾಗಿ ಪರಿಣಮಿಸಲಿದೆ.
ಚಾಲೆಂಜ್ ನಂ.2: ಅಲ್ಪಸಂಖ್ಯಾತ ಸಮುದಾಯದ ವಿಶ್ವಾಸ..!
ಪೌರತ್ವ ತಿದ್ದುಪಡಿ ಕಾಯ್ದೆ (CAA) ಹಾಗೂ NRC ವಿಚಾರವಾಗಿ ದೇಶಾದ್ಯಂತ ಅಲ್ಪಸಂಖ್ಯಾತ ಮುಸ್ಲಿಂ ಸಮಾಜ ಪ್ರಧಾನಿ ಮೋದಿ ವಿರುದ್ಧ ಸಿಡಿದೆದ್ದಿದೆ. ಈ ಹೋರಾಟ ಜಗತ್ತಿನ ಅನೇಕ ಮುಸ್ಲಿಂ ರಾಷ್ಟ್ರಗಳ ಪ್ರಮುಖ ನಗರಗಳಿಗೂ ವ್ಯಾಪಿಸಿದ್ದು, ಬಿಜೆಪಿ ಸರ್ಕಾರದ ವಿರುದ್ಧ ಪ್ರತಿಭಟನೆಗಳು ನಡೆಯುತ್ತಿವೆ. ಇದರ ಪರಿಣಾಮವೇ ಪ್ರಧಾನಮಂತ್ರಿ ಮೋದಿ ಹಾಗೂ ಗೃಹ ಸಚಿವ ಅಮಿತ್ ಷಾ ಅವರು CAA ಹಾಗೂ NRC ವಿಚಾರದ ಬಗ್ಗೆ ಸಮಜಾಯಿಷಿ ಕೊಟ್ಟಿದ್ದು.
ಇನ್ನೊಂದೆಡೆ ಜಮ್ಮು ಕಾಶ್ಮೀರಕ್ಕೆ ನೀಡಿದ್ದ ಆರ್ಟಿಕಲ್ 370 ವಿಶೇಷ ಸ್ಥಾನಮಾನವನ್ನ ರದ್ದುಗೊಳಿಸಿ ತಿಂಗಳುಗಳು ಕಳೆದರೂ ಪರಿಸ್ಥಿತಿ ತಿಳಿಗೊಂಡಿಲ್ಲ. ಇಂದಿಗೂ ಅಲ್ಲಿನ ರಾಜಕೀಯ ನಾಯಕರು ಹಾಗೂ ಸಾಮಾಜಿಕ ಕಾರ್ಯಕರ್ತರ ಮೇಲೆ ನಿಗಾ ಇಡಲಾಗಿದೆ. ಈ ಎಲ್ಲಾ ಕಾರಣಗಳಿಂದಾಗಿ ಜಮ್ಮು ಕಾಶ್ಮೀರ ಸೇರಿದಂತೆ ದೇಶದ ಬಹುತೇಕ ಅಲ್ಪಸಂಖ್ಯಾತ ಸಮುದಾಯ ಬಿಜೆಪಿ ವಿರುದ್ಧ ಸಿಡಿದೆದ್ದಿದೆ. ಹೀಗಿರುವಾಗ ಅಲ್ಪಸಂಖ್ಯಾತ ಸಮಾಜದ ವಿಶ್ವಾಸ ಗಳಿಸಬೇಕಾದ ದೊಡ್ಡ ಸವಾಲು ಮೋದಿಯವರ ಎದುರಿಗಿದೆ.
ಚಾಲೆಂಜ್ ನಂ.3: ಅರ್ಥವ್ಯವಸ್ಥೆಯನ್ನ ಸರಿದಾರಿಗೆ ತರಬೇಕಿದೆ..!
ಮೋದಿ ಸರ್ಕಾರದ ಎರಡನೇ ಅವಧಿ ಆರಂಭವಾಗುತ್ತಿದ್ದಂತೆ ದೇಶದ ಅರ್ಥವ್ಯವಸ್ಥೆ ಹದಗೆಟ್ಟಿದೆ. ಜಿಡಿಪಿ ಪ್ರಗತಿಯ ದರ ಆರು ವರ್ಷಗಳಲ್ಲೇ ಅತ್ಯಂತ ಕನಿಷ್ಠ ಮಟ್ಟಕ್ಕೆ ಬಂದು ನಿಂತಿದೆ. ಇದರ ಪರಿಣಾಮ ದೇಶದೆಲ್ಲೆಡೆ ಯುವಕರ ಉದ್ಯೋಗದಿಂದ ಹಿಡಿದು ವ್ಯವಸಾಯ ಕ್ಷೇತ್ರವನ್ನೂ ಬಾಧಿಸುತ್ತಿದೆ. ಹೀಗಾಗಿ ದೇಶದ ಅರ್ಥ ವ್ಯವಸ್ಥೆಯನ್ನ ಸರಿದಾರಿಗೆ ತರಬೇಕಾದಲ್ಲಿ ಮೋದಿ ಸರ್ಕಾರ ಕ್ರಾಂತಿಕಾರಿ ಹೆಜ್ಜೆಯನ್ನ ಇಡಲೇಬೇಕು.
2020 ಜನವರಿಯಿಂದ ಮಾರ್ಚ್ ತಿಂಗಳವರೆಗೆ ದೇಶದಲ್ಲಿ ದಿನಬಳಕೆ ವಸ್ತುಗಳ ಬೆಲೆ ಹೆಚ್ಚಾಗಲಿದೆ ಎಂದು ಈಗಾಗಲೇ ಆರ್ಬಿಐ ಎಚ್ಚರಿಕೆ ನೀಡಿದೆ. ಬೇಡಿಕೆ ಹೆಚ್ಚಾದಂತೆ ಬೆಲೆ ಏರಿಕೆಯಾಗುತ್ತದೆ. ಇಂಥಹ ಪರಿಸ್ಥಿತಿಯಲ್ಲಿ ದೇಶದ ಆರ್ಥಿಕತೆಯನ್ನ ಸಂಬಾಳಿಸುವುದು ಕೇಂದ್ರ ಸರ್ಕಾರಕ್ಕೆ ತುಂಬಾನೇ ಕಷ್ಟದ ಕೆಲಸ. ಒಟ್ಟಾರೆ 2020ನೇ ಸಾಲಿನಲ್ಲಿ ದೇಶದ ಅರ್ಥ ವ್ಯವಸ್ಥೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಪಾಲಿನ ದೊಡ್ಡ ಚಾಲೆಂಜ್ ಆಗಲಿದೆ.
ಚಾಲೆಂಜ್ ನಂ.4: ಎನ್ಡಿಎ ಕೂಟದ ಒಗ್ಗಟ್ಟು ಕಾಪಾಡುವುದು..!
ಬಿಜೆಪಿ ನೇತೃತ್ವದ ಎನ್ಡಿಎ ಕೂಟದ ಅತೀ ಹಳೆಯ ದೋಸ್ತಿಯಾಗಿದ್ದ ಶಿವಸೇನೆ, ಮಹಾರಾಷ್ಟ್ರ ಚುನಾವಣಾ ಫಲಿತಾಂಶ ಬರುತ್ತಿದ್ದಂತೆ ದೂರ ಸರಿದಿದೆ. ಎನ್ಡಿಎ ಕೂಟದಿಂದ ದೂರವಾಗಿ ಕಾಂಗ್ರೆಸ್ ನೇತೃತ್ವದ ಯುಪಿಎ ಕೂಟವನ್ನ ಸೇರಿಕೊಂಡಿದೆ. ನಿಜ ಹೇಳಬೇಕು ಅಂದ್ರೆ, ಶಿವಸೇನೆಯಂತಾ ಕಟ್ಟರ್ ಹಿಂದುತ್ವದ ಪಕ್ಷ ಎನ್ಡಿಎ ಕೂಟದಿಂದ ದೂರ ಸರಿದಿರುವುದು ರಾಜಕೀಯವಾಗಿ ಬಿಜೆಪಿಗೆ ಬಹುದೊಡ್ಡ ಆಘಾತ. ಅದೇ ರೀತಿಯಲ್ಲಿ ಜಾರ್ಖಂಡ್ನಲ್ಲೂ ಸೀಟ್ ಹಂಚಿಕೆಯಲ್ಲಿ ಒಮ್ಮತ ಮೂಡದ ಕಾರಣ ಬಿಜೆಪಿ ಮತ್ತು AJSU ಪಕ್ಷಗಳು ದೂರವಾದವು.
ಬಿಜೆಪಿ ಮಾಡಿಕೊಂಡ ಯಡವಟ್ಟಿನಿಂದಾಗಿ ಮಹಾರಾಷ್ಟ್ರ ಹಾಗೂ ಜಾರ್ಖಂಡ್ನಲ್ಲಿ ಬಿಜೆಪಿಗೆ ದೊಡ್ಡ ಮರ್ಮಾಘಾತ ಉಂಟಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಅಂದರೆ 2020ರಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು ಬದಲಾಗುತ್ತಿದ್ದಾರೆ. ಹೀಗಿರುವಾಗ ಪಕ್ಷದ ನೂತನ ಅಧ್ಯಕ್ಷರು ಹಾಗೂ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಎನ್ಡಿಎ ಪಕ್ಷಗಳ ವಿಶ್ವಾಸವನ್ನ ಉಳಿಸಿಕೊಳ್ಳಬೇಕಿದೆ. ಅದರಲ್ಲೂ 2020ರಲ್ಲಿ ಚುನಾವಣೆ ಎದುರಿಸಲಿರುವ ಬಿಹಾರದಲ್ಲಿ ಜೆಡಿಯು ಜೊತೆಗಿನ ಸಂಬಂಧವನ್ನ ಕಾಪಾಡಿಕೊಳ್ಳಲೇಬೇಕಾದ ಅನಿವಾರ್ಯತೆ ಇದೆ. ಯಾಕಂದ್ರೆ, 2015ರಲ್ಲಿ ಜೆಡಿಯು ಜೊತೆಗಿನ ಸಂಬಂಧ ಕಡಿದುಕೊಂಡ ಬಿಜೆಪಿ ಅದರ ಪರಿಣಾಮವನ್ನ ಎದುರಿಸಿತ್ತು. ಹೀಗಾಗಿ ಪುನಃ ಅದೇ ತಪ್ಪನ್ನ ಮಾಡಲು ಬಿಜೆಪಿ ಮುಂದಾಗುವುದಿಲ್ಲ.
ಚಾಲೆಂಜ್ ನಂ.5: ನೆರೆ ರಾಷ್ಟ್ರಗಳ ಜೊತೆ ಉತ್ತಮ ಸಂಬಂಧ..!
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಕೇವಲ ದೇಶದ ಒಳಗಷ್ಟೇ ಅಲ್ಲ, ದೇಶದ ಹೊರಗೂ ಸಾಕಷ್ಟು ಸವಾಲುಗಳನ್ನ ಎದುರಿಸಬೇಕಿದೆ. ಸದ್ಯದ ಪರಿಸ್ಥಿತಿಯಲ್ಲಿ ಸರ್ಕಾರ ನೆರೆ ರಾಷ್ಟ್ರಗಳ ಜೊತೆಯಲ್ಲಿ ಉತ್ತಮ ಬಾಂಧ್ಯವವನ್ನ ಕಾಪಾಡಿಕೊಳ್ಳಲೇಬೇಕು. ಅದರಲ್ಲೂ ಪ್ರಮುಖವಾಗಿ ಪಾಕಿಸ್ತಾನದ ಜೊತೆ, ಭಯೋತ್ಪಾದನೆ ಮತ್ತು ಮಾತುಕತೆ ಎರಡೂ ಜೊತೆಯಲ್ಲಿ ನಡೆಯುವುದಿಲ್ಲ ಎನ್ನುವ ತನ್ನ ವಾದಕ್ಕೆ ಮೋದಿ ಸರ್ಕಾರ ಬದ್ಧವಾಗಿರಬೇಕು. ಇನ್ನು ನೇಪಾಳ, ಬಾಂಗ್ಲಾದೇಶ, ಶ್ರೀಲಂಕಾ ಸೇರಿದಂತೆ ಚೀನಾ ದೇಶದ ಪ್ರಭಾವ ಹೆಚ್ಚಾಗುತ್ತಿರುವ ನಮ್ಮ ನೆರೆ ರಾಷ್ಟ್ರಗಳ ಜೊತೆಗಿನ ವಿಶ್ವಾಸ ಇನ್ನಷ್ಟು ಗಟ್ಟಿಗೊಳ್ಳಬೇಕಿದೆ.
ಇಷ್ಟೆಲ್ಲರ ನಡುವೆಯೂ 303 ಸ್ಥಾನಗಳನ್ನು ಗೆಲ್ಲಿಸಿಕೊಡುವ ಮೂಲಕ ಇಡೀ ದೇಶವೇ ಮೋದಿಯವರ ಬೆನ್ನಿಗೆ ನಿಂತಿದೆ. ಹೀಗಾಗಿ ಆ ಜನರ ವಿಶ್ವಾಸವನ್ನ ಕೂಡ ಮೋದಿಯವರು ಉಳಿಸಿಕೊಳ್ಳಬೇಕು. ಈ ಎಲ್ಲ ವಿಚಾರಗಳನ್ನ ಗಮನಿಸಿದರೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಪಾಲಿಗೆ 2020ನೇ ವರ್ಷ ದೊಡ್ಡ ಸವಾಲುಗಳ ವರ್ಷವೇ ಆಗಿರಲಿದೆ.
ವಿಶೇಷ ಬರಹ- ಸತೀಶ್ ಕುಮಾರ್ ಎಂ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post