ಶಿವಮೊಗ್ಗ: ಗಮನ ಬೇರೆಡೆ ಸೆಳೆದು ಹಣ ಕಳ್ಳತನ ಮಾಡುವುದನ್ನೇ ಕಾಯಕ ಮಾಡಿಕೊಂಡಿದ್ದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ತೀರ್ಥಹಳ್ಳಿ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ. ತಮಿಳುನಾಡಿನ ತಿರುಚನಾಪಳ್ಳಿ ಜಿಲ್ಲೆಯ ಗಾಂಧಿನಗರದ ಕಾರ್ತಿಕ್‌ಯಾನೆ ಶಿವರಾಜ್ (30) ಮತ್ತು ಕಾರ್ತಿಕೇಯನ್ (30) ಬಂಧಿತ ಆರೋಪಿಗಳು.
ಈ ಇಬ್ಬರೂ ತೀರ್ಥಹಳ್ಳಿ ಪಟ್ಟಣದಲ್ಲಿ 2 ತಿಂಗಳ ಹಿಂದೆ ನಡೆದಿದ್ದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಭಾಗಿಯಾಗಿದ್ದಾಗಿ ತಿಳಿದುಬಂದಿದೆ. ಬ್ಯಾಂಕ್‌ನಿಂದ ಹಣ ಬಿಡಿಸಿಕೊಂಡು ಹೊರಬರುತ್ತಿದ್ದ ವೇಳೆ ಇಬ್ಬರು ವ್ಯಕ್ತಿಗಳ ಗಮನವನ್ನು ಬೇರೆಡೆಗೆ ಸೆಳೆದು ಅವರ ಬಳಿ ಇದ್ದ 2 ಲಕ್ಷ ರೂಪಾಯಿ ನಗದು ದೋಚಿಕೊಂಡು ಪರಾರಿಯಾಗಿದ್ದರು. ಆರೋಪಿಗಳ ಪತ್ತೆಗೆ ತೀರ್ಥಹಳ್ಳಿ ಠಾಣೆಯ ಸಿಪಿಐ ಗಣೇಶಪ್ಪ ನೇತೃತ್ವದಲ್ಲಿ ಸಬ್ ಇನ್ಸ್‌ಪೆಕ್ಟರ್ ಸುಷ್ಮಾ ಅವರನ್ನೊಳಗೊಂಡ ತಂಡವನ್ನು ರಚಿಸಲಾಗಿತ್ತು. ಪ್ರಕರಣವನ್ನು ಕೂಲಂಕುಷವಾಗಿ ತನಿಖೆ ನಡೆಸಿದ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ ಅವರಿಂದ 2 ಲಕ್ಷ ರೂಪಾಯಿ ನಗದು, ಕೃತ್ಯಕ್ಕೆ ಬಳಸಿದ ಬೈಕ್ ಹಾಗೂ 3 ಮೊಬೈಲ್ ಫೋನ್ಗಳನ್ನು ವಶಕ್ಕೆ ಪಡೆದಿದ್ದಾರೆ.
ಇದೀಗ ಇಬ್ಬರು ಆರೋಪಿಗಳ ಬಂಧನದಿಂದ ಕೆಲ ಪ್ರಕರಣಗಳ ಪತ್ತೆ ಕಾರ್ಯಕ್ಕೆ ಅನುಕೂಲವಾಗಲಿದೆ. ಆದ್ರೆ ಈ ಪ್ರಕರಣಗಳಲ್ಲಿ ಇನ್ನೂ ಕೆಲವರ ಬಂಧನವಾಗಬೇಕಿದ್ದು ಹೊರ ರಾಜ್ಯಗಳಲ್ಲಿರುವ ಆರೋಪಿಗಳ ಪತ್ತೆ ಕಾರ್ಯ ಮುಂದುವರಿದಿದೆ ಎಂದು ಅಪರ ಎಸ್‌ಪಿ ಶೇಖರ್ ಟೇಕಣ್ಣನವರ್ ತಿಳಿಸಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post