ಮರ್ಯಾದಾ ಪುರುಷೋತ್ತಮ ಶ್ರೀರಾಮ ಮಂದಿರ ನಿರ್ಮಾಣದ ಕಾರ್ಯ ಇನ್ನೇನು ರಾಮನವಮಿಗೆ ಶುರುವಾಗಲಿದೆ. ರಾಮ ಅದೆಷ್ಟು ಜನರಿಂದ ಪೂಜಿಸಲ್ಪಡುತ್ತಾನೋ ರಾಮನ ಭಂಟ ಆಂಜನೇಯನೂ ಅಷ್ಟೇ ಪೂಜಿಸಲ್ಪಡುತ್ತಾನೆ. ಅದೆಷ್ಟರ ಮಟ್ಟಿಗೆ ಅಂದ್ರೆ ದೇಶದ ಪ್ರತಿಯೊಂದು ರಾಮನ ದೇವಸ್ಥಾನದಲ್ಲಿಯೂ ಅಂಜನಿ ಪುತ್ರ ಸ್ಥಾನ ಪಡೆದಿದ್ದಾನೆ. ಅತ್ತ ಅಯೋಧ್ಯೆ ಶ್ರೀರಾಮ ಜನ್ಮಭೂಮಿಯಲ್ಲಿ ರಾಮನ ಮೂರ್ತಿ ನಿರ್ಮಿಸಲು ಸಿದ್ಧತೆ ನಡೆದ್ರೆ ಇತ್ತ ಹನುಮನ ಜನ್ಮಭೂಮಿ ಕಿಷ್ಕಿಂದೆಯಲ್ಲೂ ಹನುಮನ ಮೂರ್ತಿ ನಿರ್ಮಿಸುವ ಯೋಜನೆ ಸಿದ್ಧವಾಗಿದೆ.
ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ತಯಾರಿ ಶುರುವಾಗುತ್ತಿದ್ದಂತೆಯೇ ರಾಮನ ಭಂಟ ಹನುಮನ ಮೂರ್ತಿ ನಿರ್ಮಾಣಕ್ಕೂ ಚಿಂತನೆ ನಡೆಸಲಾಗಿದೆ. ಹನುಮಾನ್ ಜನ್ಮಭೂಮಿ ಟ್ರಸ್ಟ್, ವಿಶ್ವದ ಅತೀ ಎತ್ತರದ ಹನುಮಾನ್ ಮೂರ್ತಿಯನ್ನು ನಿರ್ಮಿಸಲಿದೆ. ಅದು ಕೂಡ ಕೇಸರಿನಂದನ ಜನ್ಮಭೂಮಿಯಾದ ಹಂಪಿ(ಕಿಷ್ಕಿಂದೆ)ಯಲ್ಲಿ ರಾಮ ಭಂಟ ಹನುಮನ ಬರೋಬ್ಬರಿ 215 ಅಡಿ ಎತ್ತರದ ಮೂರ್ತಿಯನ್ನು ನಿರ್ಮಿಸೋ ಪ್ಲಾನ್ನ್ನ ಹನುಮಾನ್ ಜನ್ಮಭೂಮಿ ಟ್ರಸ್ಟ್ ಕೈಗೊಂಡಿದೆ.
ಸುಪ್ರೀಂ ಕೋರ್ಟ್ ನಿರ್ದೇಶನದಂತೆ 2020 ರ ಫೆಬ್ರವರಿ 5 ರಂದು ರಾಮ ಜನ್ಮಭೂಮಿ ಟ್ರಸ್ಟ್ ರಚನೆಯಾದ ದಿನದಂದೇ ಕರ್ನಾಟಕ ಹನುಮಾನ್ ಜನ್ಮಭೂಮಿ ಟ್ರಸ್ಟ್ ರಚನೆಯಾಯಿತು. ಹಂಪಿಯ ಕಿಷ್ಕಿಂದೆ ಪಂಪಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಈ ಟ್ರಸ್ಟ್ನ್ನು ರಚನೆ ಮಾಡಲಾಗಿದೆ. ಗೋವಿಂದಾನಂದ ಸರಸ್ವತಿ ಸ್ವಾಮಿ ನೇತೃತ್ವದ ಈ ಟ್ರಸ್ಟ್ ಇದೇ ಶಿವರಾತ್ರಿಯಂದು ಕಿಷ್ಕಿಂದೆ ಮತ್ತು ಸುತ್ತಮುತ್ತ ಪ್ರದೇಶಗಳಲ್ಲಿ ಮೆರವಣಿಗೆ ನಡೆಸಲಿದೆ.
ರಾಮನಿಗಿಂತ 10 ಅಡಿ ಕಡಿಮೆ ಎತ್ತರದಲ್ಲಿ ಹನುಮನ ಮೂರ್ತಿ..!
ಈಗಾಗಲೇ ಪ್ರವಾಸಿ ಕೇಂದ್ರವಾಗಿರೋ ಹಂಪಿಯನ್ನು ಯಾತ್ರಾ ಕ್ಷೇತ್ರವನ್ನಾಗಿ ಪರಿವರ್ತಿಸಲಾಗುವುದು ಅಂತಾ ಟ್ರಸ್ಟ್ ಮೂಲಗಳು ತಿಳಿಸಿವೆ. ಇದು ಅಯೋಧ್ಯೆಯಲ್ಲಿ ರಾಮ ಮಂದಿರದಂತೆ ಭವ್ಯವಾಗಿರುತ್ತದೆ. ಅಯೋಧ್ಯೆಯಲ್ಲಿ 225 ಅಡಿ ಎತ್ತರದಲ್ಲಿ ವಿಶ್ವದ ಅತೀ ದೊಡ್ಡ ರಾಮನ ಮೂರ್ತಿಯನ್ನು ನಿರ್ಮಿಸಲಾಗ್ತಿದೆ. ಅದೇ ರೀತಿ ವಿಶ್ವದ ಅತೀ ಎತ್ತರದ ಹನುಮನ ಮೂರ್ತಿಯನ್ನು ನಾವು ಹಂಪಿಯಲ್ಲಿ ನಿರ್ಮಿಸುತ್ತಿದ್ದೇವೆ. ಆದ್ರೆ ರಾಮನ ಮೂರ್ತಿಗಿಂತ 10 ಅಡಿ ಕಡಿಮೆ ಅಂದ್ರೆ 215 ಅಡಿ ಎತ್ತರದಲ್ಲಿ ಈ ಹನುಮಾನ್ ಮೂರ್ತಿಯನ್ನು ನಿರ್ಮಿಸುತ್ತೇವೆ. ಮತ್ತು ಇದು ಸಂಪೂರ್ಣ ತಾಮ್ರದಿಂದ ಮಾಡಲ್ಪಟ್ಟಿರುತ್ತದೆ ಅಂತಾ ಟ್ರಸ್ಟ್ ಮೂಲಗಳು ತಿಳಿಸಿವೆ.
ದೇಶದಾದ್ಯಂತ ಸಂಚರಿಸಲಿದೆ ಹನುಮಂತ ರಥ..!
ಈ ವರ್ಷದಿಂದ 45 ಲಕ್ಷ ರೂಪಾಯಿಗಳಲ್ಲಿ ವಿನ್ಯಾಸಗೊಂಡ ಹನುಮಂತನ ರಥ ದೇಶದಾದ್ಯಂತ ಸಂಚರಿಸಲಿದೆ. ಇದು ದೇಶದ ಪ್ರತಿ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳ ಮೂಲಕ ಹಾದುಹೋಗಲಿದ್ದು, ಅಲ್ಲಿ ಮೂರ್ತಿ ಮತ್ತು ಇತರ ಖರ್ಚುಗಳಿಗಾಗಿ ಚಂದಾ ಸಂಗ್ರಹಿಸಲಾಗುತ್ತೆ. ಈ ರಥಯಾತ್ರೆ ಅಯೋಧ್ಯೆಯಲ್ಲಿ ಕೊನೆಗೊಳ್ಳುತ್ತದೆ. ಈ ರಥಯಾತ್ರೆ ಪೂರ್ಣಗೊಳ್ಳಲು ಕನಿಷ್ಠ 3 ವರ್ಷ ಸಮಯ ಬೇಕಾಗುತ್ತೆ. ಅದೇ ಸಮಯದಲ್ಲಿ ಕಿಷ್ಕಿಂದೆಯ ಕೆಲಸವೂ ಪ್ರಾರಂಭವಾಗುತ್ತದೆ. ಮೂರ್ತಿ ಮತ್ತು ದೇವಾಲಯ ನಿರ್ಮಾಣಕ್ಕಾಗಿ 10 ಎಕರೆ ಭೂಮಿ ಖರೀದಿಸಲು ಟ್ರಸ್ಟ್ ಯೋಜನೆ ಹಾಕಿಕೊಂಡಿದೆ. ಮಾತ್ರವಲ್ಲದೇ ಈ ವರ್ಷದ ಹನುಮ ಜಯಂತಿಗೆ ಅಯೋಧ್ಯೆಯ 101 ಸಂತರಿಗೆ ಆಹ್ವಾನ ನೀಡಲು ತೀರ್ಮಾನಿಸಲಾಗಿದೆ ಅಂತ ಟ್ರಸ್ಟ್ ಮೂಲಗಳು ತಿಳಿಸಿವೆ.
ಹಂಪಿಯನ್ನು ರಾಮಾಯಣ ಪರಿಧಿಯೊಳಗೆ ಸೇರಿಸಲು ಕೇಂದ್ರ ಪ್ರವಾಸೋದ್ಯಮ ಇಲಾಖೆ ಚಿಂತನೆ ನಡೆಸಿದೆ. ಇತ್ತ ರಾಜ್ಯ ಸರ್ಕಾರವೂ ಕಿಷ್ಕಿಂದೆವನ್ನು ಅಭಿವೃದ್ಧಿಪಡಿಸಲು ಉತ್ಸುಕವಾಗಿದೆ. ಮುಂಬರುವ ಬಜೆಟ್‌ನಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಈ ಯೋಜನೆಗೆ ಹಣ ಹಂಚಿಕೆ ಮಾಡುವ ಸಾಧ್ಯತೆ ಇದೆ ಅಂತಾ ಟ್ರಸ್ಟ್ ಮೂಲಗಳು ತಿಳಿಸಿವೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post