ನವದೆಹಲಿ: ಕೊರೊನಾ ವೈರಸ್ ತಡೆಗಟ್ಟುವ ಹಿನ್ನೆಲೆ ಇಂದು ಪ್ರಧಾನಿ ನರೇಂದ್ರ ಮೋದಿ ವಾರಣಾಸಿಯ ಜನತೆಯೊಂದಿಗೆ ವೀಡಿಯೋ ಕಾನ್ಫರೆನ್ಸ್ ನಡೆಸಿದರು. ಶ್ವೇತ ಸಮವಸ್ತ್ರ ಧರಿಸಿ ಆಸ್ಪತ್ರೆಗಳಲ್ಲಿ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ಇಂದು ದೇವರ ಸಮಾನರಾಗಿದ್ದಾರೆ ಈ ವೇಳೆ ಮೋದಿ ವೈದ್ಯಕೀಯ ಸಿಬ್ಬಂದಿ, ಡಾಕ್ಟರ್ಗಳು, ಅಧಿಕಾರಿಗಳ ಕೆಲಸವನ್ನು ಶ್ಲಾಘಿಸಿದರು.
ಕೊರೊನಾ ವೈರಸ್ ಕುರಿತ ಖಚಿತ ಮಾಹಿತಿಗಾಗಿ ಸರ್ಕಾರ ವಾಟ್ಸಾಪ್ನೊಂದಿಗೆ ಕೈ ಜೋಡಿಸಿದ್ದು, 9013151515 ನಂಬರ್ನ್ನು ಉಪಯೋಗಿಸಬಹುದು ಎಂದು ಮಾಹಿತಿ ನೀಡಿದ್ದಾರೆ.
ಕೋವಿಡ್ 19 ಯಾವುದೇ ಶ್ರೀಮಂತ ಅಥವಾ ಬಡವ ಎನ್ನುವ ತಾರತಮ್ಯ ಮಾಡುವುದಿಲ್ಲ. ದಿನನಿತ್ಯ ಯೋಗ ವ್ಯಾಯಾಮ ಮಾಡುವದರಿಂದಲೂ ಇದನ್ನು ತಪ್ಪಿಸಲು ಸಾಧ್ಯವಿಲ್ಲ. ಗಾಳಿಮಾತುಗಳಿಗೆ ಕಿವಿಗೊಡದೆ ಖಚಿತ ಮಾಹಿತಿ ದೊರೆಯುವಲ್ಲಿ ಮಾತ್ರ ಗಮನ ಹರಿಸಬೇಕು ಎಂದರು.
ಅಲ್ಲದೆ, ಇಂದು ನವರಾತ್ರಿಯ ಮೊದಲ ದಿನ. ಪೂಜೆ ಪುನಸ್ಕಾರಗಳಲ್ಲಿ ಭಾಗಿಯಾಗಬೇಕಿದ್ದ ನೀವುಗಳು ಈ ಸಂವಾದಕ್ಕಾಗಿ ಸ್ವಲ್ಪ ಸಮಯ ಬಿಡುವು ಮಾಡಿಕೊಂಡದ್ದಕ್ಕಾಗಿ ಕೃತಜ್ಞನಾಗಿದ್ದೇನೆ, ಶೈಲಪುತ್ರಿ ದೇವಿಯು ಈ ದೇಶ ಕೊರೊನಾ ವಿರುದ್ಧ ನೀಡಲು ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದರು.
ಇಂದು ನಾನು ವಾರಣಾಸಿಯ ಜನರೊಂದಿಗೆ ಇರಬೇಕಿತ್ತು. ಆದರೆ, ದೆಹಲಿಯ ಕೆಲಸಗಳು ನಿಮಗೆ ಗೊತ್ತು. ಕಾಲಕಾಲಕ್ಕೆ ನಾನು ವಾರಣಾಸಿಯ ಆಗುಹೋಗುಗಳ ಕುರಿತು ನನ್ನ ಸಂಬಂಧಪಟ್ಟವರೊಂದಿಗೆ ಮಾತನಾಡಿ ಮಾಹಿತಿ ಪಡೆದುಕೊಳ್ಳುತ್ತಿದ್ದೇನೆ.
ಯಾರಿಂದ ಸಾಧ್ಯವೋ ಅವರು 21 ದಿನಗಳ ಕಾಲ 9 ಕುಟುಂಬಗಳ ಬಗ್ಗೆ ಜವಾಬ್ದಾರಿ ತೆಗೆದುಕೊಳ್ಳಿ, ಮತ್ತು ಲಾಕ್ಡೌನ್ನಿಂದ ಪ್ರಾಣಿಗಳಿಗೂ ತೊಂದರೆಯಾಗಲಿದ್ದು ಅವುಗಳ ಬಗ್ಗೆ ಜಾಗೃತಿ ವಹಿಸಿ ಎಂದು ಮೋದಿ ಇದೇ ವೇಳೆ ಜನರಲ್ಲಿ ಮನವಿ ಮಾಡಿಕೊಂಡರು.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post