ರಾಮನಗರ : ಮಧ್ಯಪ್ರದೇಶದಿಂದ ಕೂಲಿ ಕೆಲಸಕ್ಕೆಂದು ಬಂದಿದ್ದ 26 ಕಾರ್ಮಿಕರು, ನಿರಾಶ್ರಿತರ ಕೇಂದ್ರ ಸೇರಿದ್ದಾರೆ. ಕೆಲಸ ಕೊಡಿಸೋದಾಗಿ ಕಾರ್ಮಿಕರನ್ನು ಕರೆಸಿದ್ದ ಕಾಂಟ್ರ್ಯಾಕ್ಟರ್, ಲಾಕ್ಡೌನ್ ಘೋಷಣೆ ಆಗ್ತಿದ್ದಂತೆ ರಸ್ತೆಯಲ್ಲೇ ಅವರನ್ನೆಲ್ಲ ಬಿಟ್ಟು ಎಸ್ಕೇಪ್ ಆಗಿದ್ದಾನೆ. ಮಾರ್ಚ್ 20ರಂದು ತುಮಕೂರಿನ ಪಾವಗಡದಿಂದ ಚನ್ನಪಟ್ಟಣದ ಕೆಂಗಲ್ ಗೆ ಕಾರ್ಮಿಕರನ್ನು ಕರೆಸಿದ್ದ ಗುತ್ತಿಗೆದಾರ, ಲಾಕ್ಡೌನ್ ಆಗ್ತಿದ್ದಂತೆ ಅವರನ್ನು ಬಿಟ್ಟು ನಾಪತ್ತೆಯಾಗಿದ್ದಾನೆ.
ಕೊನೆಗೆ ಬೇರೆ ದಾರಿ ಕಾಣದೆ ತಮ್ಮ ಊರಿಗೆ ತೆರಳಲು ಮುಂದಾಗಿದ್ದ ಕಾರ್ಮಿಕರು, ಬೆಂಗಳೂರಿನತ್ತ ಕಾಲ್ನಡಿಗೆಯಲ್ಲಿ ಬರುತ್ತಿದ್ದಾಗ ರಾಮನಗರದ ಐಜೂರು ಪೋಲಿಸರು ಅವರನ್ನು ರಕ್ಷಣೆ ಮಾಡಿದ್ದಾರೆ. ಈ ವಿಷಯ ತಿಳಿದು ಸ್ಥಳಕ್ಕೆ ಬಂದ ರಾಮನಗರ ಮುನ್ಸಿಪಾಲ್ ಆಯುಕ್ತೆ ಶೋಭ, ಕಾರ್ಮಿಕರ ಮನವೊಲಿಸಿ ಹಾಜಿನಗರದ ನಿರಾಶ್ರಿತರಕ್ಕೆ ಕೇಂದ್ರಕ್ಕೆ ಶಿಫ್ಟ್ ಮಾಡಿದ್ದಾರೆ.
ಖಾಸಗಿ ಕಟ್ಟಡವೊಂದರಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಕಾರ್ಮಿಕರನ್ನ ಆರೈಕೆ ಮಾಡಲಾಗ್ತಿದೆ. ವೈದ್ಯ ಅಧಿಕಾರಿಗಳಿಂದ ಕಾರ್ಮಿಕರ ಆರೋಗ್ಯ ತಪಾಸಣೆ ನಡೆಸಲಾಗ್ತಿದೆ. ಮಧ್ಯಪ್ರದೇಶದ ಈ 26 ಕಾರ್ಮಿಕರರು, ನಗರದ ಇತರೆ ನಿರಾಶ್ರಿತರು ಸೇರಿದಂತೆ ಒಟ್ಟು 150ಕ್ಕೂ ಹೆಚ್ವು ಮಂದಿಯನ್ನ ರಕ್ಷಿಸಿ ನಿರಾಶ್ರಿತರ ಕೇಂದ್ರದಲ್ಲಿ ನೋಡಿಕೊಳ್ಳಲಾಗ್ತಿದೆ.
ಈ ನಡುವೆ ಕೆಲಸ ಕೊಡಿಸೋದಾಗಿ ಕಾರ್ಮಿಕರನ್ನು ಕರೆಸಿ ಲಾಕ್ ಡೌನ್ ಆದ ಕೂಡಲೇ ಎಸ್ಕೇಪ್ ಆದ ಕಾಂಟ್ರ್ರಾಕ್ಟರ್ಗಾಗಿ ಪೊಲೀಸರು ಹುಡುಕಾಟ ನಡೆಸ್ತಿದ್ದಾರೆ. ಕಾರ್ಮಿಕರ ಹಿತ ಕಾಯುವ ಬದಲು ಬೀದಿಪಾಲು ಮಾಡಿದ್ದಕ್ಕೆ ನಗರ ಮುನ್ಸಿಪಲ್ ಆಯುಕ್ತೆ ಶೋಭ ಗರಂ ಆಗಿದ್ದು, ಗುತ್ತಿಗೆದಾರರನ್ನು ಪತ್ತೆ ಹಚ್ಚಿ ಸೂಕ್ತ ಕ್ರಮ ಜರುಗಿಸಲು ನಿರ್ಧರಿಸಿದ್ದಾರೆ.
ಕನ್ನಡ ಭಾಷೆ ಗೊತ್ತಿಲ್ಲದೇ ಆತಂಕ
ಇನ್ನು ಕಾರ್ಮಿಕರಿಗೆ ಕನ್ನಡದ ಭಾಷೆ ಗೊತ್ತಿಲ್ಲ, ಕರೆಸಿದ ಕಾಂಟ್ರಾಕ್ಟರ್ ಕೈಗೆ ಸಿಕ್ತಿಲ್ಲ. ಕೊರೊನಾ ವೈರಸ್ ಬಗ್ಗೆ ಮೊದಲೇ ಮಾಹಿತಿಯಿಲ್ಲದ ಕಾರ್ಮಿಕರು, ತಮ್ಮನ್ನು ಇಲ್ಲಿ ಏಕೆ ಕೂಡಿ ಹಾಕಿದ್ದಾರೆ, ನಾವೇನು ತಪ್ಪು ಮಾಡಿದ್ದೇವೆ ಅಂತ ಪರಿ ಪರಿಯಾಗಿ ಕೇಳಿಕೊಳ್ತಿದ್ದಾರೆ.
ನಮ್ಮನ್ನು ನಮ್ಮ ಊರಿಗೆ ಕಳುಹಿಸಿ ಬಿಡಿ ಎಂದು ಅಧಿಕಾರಿಗಳಿಗೆ ಮೊರೆಯಿಡುತ್ತಿದ್ದಾರೆ. ಅವರು ಮನೋ ಖಿನ್ನತೆಗೆ ಒಳಗಾಗದಂತೆ ಕೌನ್ಸಿಲಿಂಗ್ ಮಾಡಿ ಇತರೆ ಚಟುವಟಿಕೆಗಳಲ್ಲಿ ತೊಡಗಿಸಲು ನಿರ್ಧರಿಸಲಾಗಿದೆ. ಇತ್ತ ಕೊರೊನಾ ಸೋಂಕಿನಿಂದ ಬಳಲುತ್ತಿರುವವರು ಇಲ್ಲಿ ಕೂಡಿ ಹಾಕಿದ್ದಾರಾ ಎಂದು ಸ್ಥಳೀಯರು ರಂಪಾಟ ನಡೆಸ್ತಿದ್ದಾರೆ. ಹೀಗಾಗಿ ಅಧಿಕಾರಿಗಳಿಗೆ ನಿರಾಶ್ರಿತರ ಕೇಂದ್ರ ನಿರ್ವಹಣೆ ಕೆಲಸವೇ ತಲೆನೋವಾಗಿ ಪರಿಣಮಿಸಿದೆ. ಪೊಲೀಸ್ ಸುಪರ್ದಿಯಲ್ಲಿ ನಿರಾಶ್ರಿತರ ಸೌಕರ್ಯ ನೋಡಿಕೊಳ್ಳಬೇಕಾದ ಪರಿಸ್ಥಿತಿ ಬಂದಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post