ಬೆಂಗಳೂರು: ವಿಶ್ವಾದ್ಯಂತ ಮಹಾಮಾರಿಯಾಗಿ ಹರಡುತ್ತಿರುವ ಕೊರೊನಾ ವೈರಸ್ ಬಗ್ಗೆ ಹಲವು ರೀತಿಯ ಗೊಂದಲಗಳಿವೆ. ಕೊರೊನಾ ವೈರಸ್ ಹರಡುವ ಬಗೆ ಹೇಗೆ, ಅದರಿಂದ ತಪ್ಪಿಸಿಕೊಳ್ಳುವುದಾದರೂ ಹೇಗೆ, ಕೊರೊನಾ ಹರಡಿದರೆ ಏನು ಮಾಡಬೇಕು ಎಂಬುದು ಎಲ್ಲರಲ್ಲೂ ಇರುವ ಸಾಮಾನ್ಯ ಪ್ರಶ್ನೆ. ಈ ಪ್ರಶ್ನೆಗಳಿಗೆ ಬೆಂಗಳೂರಿನ ಪಬ್ಲಿಕ್ ಹೆಲ್ತ್ ಫೌಂಡೇಶನ್ ಆಫ್ ಇಂಡಿಯಾದ ಲೈಫ್‌ಕೋರ್ಸ್ ಎಪಿಡೆಮಿಯೋಲಜಿ ವಿಭಾಗದ ಮುಖ್ಯಸ್ಥ ಫ್ರೊ. ಗಿರಿಧರ ಆರ್ ಬಾಬು ಉತ್ತರಿಸಿದ್ದು ನ್ಯೂಸ್‌ಫಸ್ಟ್ ಜೊತೆ ಮಾಹಿತಿ ಹಂಚಿಕೊಂಡಿದ್ದಾರೆ.
ಡಸ್ಟ್, ಟೆಂಪರೇಚರ್ ಚೇಂಜ್ ಆಗೋದ್ರಿಂದ ಕೊರೊನಾ ವೈರಸ್ ಹರಡುತ್ತಾ..?
ಸಂಶೋಧನೆ ಪ್ರಕಾರ ಡಸ್ಟ್ ಅಥವಾ ಗಾಳಿಯಿಂದ ಕೊರೊನಾ ವೈರಸ್ ಹರಡುತ್ತದೆ ಎಂಬುದಕ್ಕೆ ಸಾಕ್ಷಿಗಳಿಲ್ಲ. ಆದ್ದರಿಂದ ಅಂದಾಜು ಒಂದರಿಂದ ಮೂರು ಮೀಟರ್ ಅಂದರೆ, ಪೂರ್ತಿಯಾಗಿ ಕೈ ಚಾಚಿ, ಅದರ ಮೂರು ಪಟ್ಟು ಅಂತರವನ್ನ ಕಾಯ್ದುಕೊಂಡರೆ ವೈರಸ್ ಬರುವುದನ್ನ ತಡೆಯಬಹುದು. ಕೆಲವರಿಗೆ ಕೆಮ್ಮು, ನೆಗಡಿ, ಗಂಟಲು ಉರಿ ಸಮಸ್ಯೆ ಬರುತ್ತದೆ. ಆದ್ರೆ ಅದಕ್ಕೂ ಕೊರೊನಾ ವೈರಸ್ಗೂ ಸಂಬಂಧವಿಲ್ಲ.
ರೋಗ ಲಕ್ಷಣ ಕಾಣಿಸಿದ್ರೂ ಯಾವ ಸಂದರ್ಭದಲ್ಲಿ ವೈದ್ಯರ ಬಳಿ ಹೋಗಬೇಕು..?
ವೈರಲ್ ಫೀವರ್ ಕೂಡ ಬರಬಹುದು. ಆದ್ರೆ ಜ್ವರ ಜಾಸ್ತಿಯಾಗುತ್ತಿದೆ, ಕೆಮ್ಮು ನಿಲ್ಲುತ್ತಿಲ್ಲ, ಉಸಿರಾಟದ ತೊಂದರೆಯಾಗುತ್ತಿದೆ ಎಂದಾಗ ತಕ್ಷಣವೇ ವೈದ್ಯರ ಬಳಿ ತೆರಳಿ ಚಿಕಿತ್ಸೆ ಪಡೆಯಬೇಕು. ಒಂದು ದಿನ ಅಥವಾ ಎರಡು ದಿನಕ್ಕೆ ಜ್ವರ ಕಡಿಮೆಯಾಗುತ್ತಿದೆ ಎಂದು ತಿಳಿದಾಗ ಆರೋಗ್ಯ ಇಲಾಖೆಗೆ ಮಾಹಿತಿ ನೀಡಬೇಕು.
ಕೆಲವರು ಗೊತ್ತಿಲ್ಲದೆ ಕೆಮ್ಮುವುದು, ಸೀನುವುದು ಮಾಡಿದಾಗ ಏನು ಮಾಡಬೇಕು?
ಕೊರೊನಾ ವೈರಸ್ ಹರಡಿದೆ ಎಂದಾಗ ಒಬ್ಬರಿಂದ ನೂರು ಜನ ಸಂಪರ್ಕದಲ್ಲಿದ್ದರೆ, ಒಬ್ಬರಿಗೆ ಅಥವಾ ಇಬ್ಬರಿಗೆ ಗರಿಷ್ಠ ಮೂವರಿಗೆ ವೈರಸ್ ಹರಡಬಹುದು. ಕೆಮ್ಮಿದಾಗ ಕೊರೊನಾ ಬಂದಿದೆ ಎಂದು ಭಾವಿಸುವುದು ತಪ್ಪು. ಶೀಘ್ರವಾಗಿ ವೈರಸ್ ಹರಡುವುದಿಲ್ಲ. ಹೊರಗಡೆ ಹೋಗಿ ಬಂದಾಗ ಕೈ ಕಾಲು ತೊಳೆದುಕೊಳ್ಳಬೇಕು. ಆದಷ್ಟು ಬಾಯಿ, ಕಿವಿ ಹಾಗೂ ಮೂಗು ಮುಟ್ಟದೆ ಇರುವುದರಿಂದ ಕೊರೊನಾ ವೈರಸ್ ದೇಹ ಸೇರುವುದನ್ನು ತಡೆಗಟ್ಟಬಹುದು. ಆಹಾರ ಪದಾರ್ಥಗಳಿಗಾಗಿ, ಅನಿವಾರ್ಯವಾಗಿ ಹೊರಗಡೆ ಹೋಗಿ ಬಂದಾಗ ಮೊದಲಿಗೆ ಸೋಪಿನಿಂದ ಕೈಗಳನ್ನು ಸರಿಯಾಗಿ ತೊಳೆದುಕೊಂಡಷ್ಟು ಕೊರೊನಾ ವೈರಸ್ ತಡೆಯಲು ಸಾಧ್ಯ.
ಸೋಂಕಿತರು ಮುಟ್ಟಿದ ಕರೆನ್ಸಿ ನೋಟನ್ನು ಮುಟ್ಟಿದ್ರೂ ಕೊರೊನಾ ಹರಡುತ್ತಾ..?
ಇದರಲ್ಲಿ ನಾವು ಅಲರ್ಟ್ ಆಗಿರಬೇಕು. ಆದ್ರೆ ಎಲ್ಲದಕ್ಕೂ ಹೆದರುವುದು ಬೇಡ. ಸಾಮಾಜಿಕ ಅಂತರವನ್ನು ರೂಢಿ ಮಾಡಿಕೊಳ್ಳಿ. ಹಾಲಿನ ಪ್ಯಾಕೆಟ್ ಮುಟ್ಟಿದಾಗ, ಸಾಮಾಗ್ರಿಗಳನ್ನ ಮುಟ್ಟಿದಾಗ, ಅನುಮಾನ ಬಂದಾಗ ಶೀಘ್ರವಾಗಿ ಹ್ಯಾಂಡ್ ವಾಶ್ ಮಾಡಬೇಕು.
ಕೊರೊನಾ ವೈರಸ್ ಎಷ್ಟು ದಿನ ಆಕ್ಟೀವ್ ಇರುತ್ತೆ..?
ಕೊರೊನಾ ವೈರಸ್ ಬಗ್ಗೆ ತಿಳುವಳಿಕೆ ಇರಬೇಕು. ಸೋಂಕಿತರ ಜೊತೆ ಸಂಪರ್ಕವಿದ್ದರೆ ದೂರವಿರಬೇಕು, ಮನೆ ಮುಂದೆ ಓಡಾಡಬಾರದು, ಏರಿಯಾಗಳಿಂದ ಹೊರಟು ಹೋಗುವುದರಿಂದ ಯಾವುದೇ ಪ್ರಯೋಜನವಿಲ್ಲ. ವೈರಸ್ ಬಂದಾಗ ಸರಿಯಾಗಿ ಟ್ರೀಟ್‌ಮೆಂಟ್ ಪಡೆದರೆ 14 ದಿನದ ಬಳಿಕ ಹೊರಟು ಹೋಗುತ್ತೆ. ಆದ್ರೆ ನೂರಕ್ಕೆ ಮೂರು ಜನರಿಗೆ ಸಮಸ್ಯೆಗಳಾಗಬಹುದು. ಶೇ.90ರಷ್ಟು ಗುಣಮುಖರಾಗ್ತಾರೆ, ಇನ್ನೂ ಶೇ.10ರಷ್ಟು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಾರೆ.
ಹೀಗಂತ ನ್ಯೂಸ್‌ಫಸ್ಟ್‌ಗೆ ಮಾಹಿತಿ ನೀಡಿರುವ ಪ್ರೊ. ಗಿರಿಧರ್ ಆರ್ ಬಾಬು, ಅಸಂಬದ್ಧವಾಗಿ ವಾಟ್ಸ್ಆ್ಯಪ್ ಗ್ರೂಪ್ಗಳಲ್ಲಿ ಅಥವಾ ಸೋಶಿಯಲ್ ಮೀಡಿಯಾಗಳಲ್ಲಿ ಬರುವ ಫಾರ್ವರ್ಡ್ ಮೆಸೇಜ್ಗಳನ್ನ ನಂಬಬೇಡಿ, ಅಧಿಕೃತವಾಗಿ ಆರೋಗ್ಯ ಇಲಾಖೆಯಿಂದ ಬರುವ ಮಾಹಿತಿಯನ್ನೇ ಪಡೆಯಿರಿ ಅಂತ ಸಲಹೆ ನೀಡಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post