ಕೊಪ್ಪಳ: ಆ ಅಜ್ಜಿಗೆ ಸುಮಾರು 70 ವರ್ಷ ಇರಬಹುದು ಮಕ್ಕಳು. ಪತಿ ಇಲ್ಲದ ಏಕಾಂಗಿ ಜೀವನ. ಒಂಟಿ ಬುದುಕಿನ ಪಯಣ. ವಾಸ ಮಾಡುವುದಕ್ಕೆ ಓಣಿ ಮಂದಿ ಸಹಾಯದಿಂದ ಕಟ್ಟಿದ ಒಂದು ಸಣ್ಣ ಗೂಡು. ದುಡಿದರೆ, ಹೊಟ್ಟೆ ತುಂಬಿಸಿಕೊಳ್ಳುವ ಜೀವನ. ಮಾಡುವ ಕಾಯಕ ಕಣ್ಣಿನಲ್ಲಿ ಹರಳನ್ನು ತೆಗೆಯುವುದು. ಆದರೆ ಕೊರೊನಾ ಆ ಅಜ್ಜಿಗೆ ದುಡಿಮೆ ಇಲ್ಲದಂತೆ ಮಾಡಿದೆ, ಯಾರಾದ್ರೂ ಸಹಾಯ ಮಾಡಿದ್ರೆ ಹೊಟ್ಟೆ ತುಂಬಿಸಿಕೊಳ್ಳುತ್ತಾಳೆ ಇಲ್ಲವಾದ್ರೆ ಸ್ವಾಭಿಮಾನದ ಜೀವನ ನಡೆಸುತ್ತಾಳೆ ಈ ಅಜ್ಜಿ.
ಕೊಪ್ಪಳ ನಗರದ 15ನೇ ವಾರ್ಡಿನ ಸರದಾರಗಲ್ಲಿಯಲ್ಲಿ ವಾಸಿಸುವ ಜೈನಬಿ ಎಂಬ 70 ವರ್ಷದ ಈ ವೃದ್ಧೆ, ಕಳೆದ 35 ವರ್ಷಗಳಿಂದ ವೈದ್ಯರನ್ನು ಮೀರಿಸುವಂತೆ ಕಣ್ಣಿನಲ್ಲಿ ಬಿದ್ದ ಹರಳನ್ನು, ಕಟ್ಟಿಗೆ ಅಥವಾ ಕಬ್ಬಿಣದ ಸೂಕ್ಷ್ಮ ತುಂಡುಗಳನ್ನು ತಮ್ಮ ಪೂರ್ವಜರ ಹಳೆ ಪದ್ಧತಿಯಲ್ಲಿ ಒಂದು ಸಣ್ಣ ಬಟ್ಟೆ ತುಂಡಿನಿಂದ ತೆಗೆಯುತ್ತಾರೆ. ಹರಳು ಕಣ್ಣಿನಲ್ಲಿ ಎಲ್ಲೇ ಅಡಗಿರಲಿ, ಅದನ್ನು ತುಂಡು ಬಟ್ಟೆಯಿಂದ ಹೊರಗಡೆ ತಗೆಯುತ್ತಾರೆ. ಇದು ಎಂಥವರನ್ನೂ ರೋಮಾಂಚನ ಗೊಳಿಸುತ್ತದೆ. ಕಣ್ಣಿಗೆ ಒಂದಿಷ್ಟೂ ಹಾನಿಯಾಗುವುದಿಲ್ಲ. ಅಂಥ ಕಲೆಯನ್ನು ಜೈನಬಿ ಅಜ್ಜಿ ಕರಗತ ಮಾಡಿಕೊಂಡಿದ್ದಾರೆ.
ವಯಸ್ಸು 70 ಆದ್ರೂ ಈಕೆ ಕಣ್ಣು ಮುಪ್ಪಾಗಿಲ್ಲ. ದೂರದ ಹಾಗೂ ಸುತ್ತಮುತ್ತಲಿನ ಊರಿನ ಜನರು ಈ ಜೈನಬಿ ಅಜ್ಜಿಯನ್ನು ಹುಡುಕಿಕೊಂಡು ಬಂದು ಕಣ್ಣಿನಲ್ಲಿ ಸೇರಿಕೊಂಡ ಸಣ್ಣ ಸಣ್ಣ ಸೂಕ್ಷ್ಮ ಹರಳುಗಳನ್ನು ತೆಗೆಸಿಕೊಂಡು ಹೋಗುತ್ತಾರೆ. ಜನರು ತಿಳಿದಷ್ಟು ಹಣಕೊಟ್ಟರೆ ಅದನ್ನು ತೆಗೆದುಕೊಳ್ಳುತ್ತಾರೆ. ಕೊಡದಿದ್ದರೆ ಅದೊಂದು ತನ್ನ ಸೇವೆ ಎಂದು ಒಳ್ಳೆಯದಾಗಲಿ ಎಂದು ಆಶೀರ್ವಾದ ಮಾಡಿ ಕಳುಹಿಸುತ್ತಾರೆ. ಯಾರಿಗೂ ಕೊಡು ಅಂತಾ ಒತ್ತಾಯ ಮಾಡುವುದಿಲ್ಲ, ಸ್ವಾಭಿಮಾನಿ ನಿಸ್ವಾರ್ಥ ಮನಸ್ಸು ಅಜ್ಜಿಯದ್ದು.
ಸರಕಾರದಿಂದ ಬರುವ 600 ರುಪಾಯಿ ಪಿಂಚಣಿ ಹಾಗೂ ನ್ಯಾಯಬೆಲೆ ಅಂಗಡಿಯಲ್ಲಿ ಕೊಡುವ 7 ಕೆಜಿ ಅಕ್ಕಿಯಲ್ಲೇ ಈ ಅಜ್ಜಿ ಜೀವನ ಸಾಗುತ್ತಿದೆ. ಕೇವಲ ಹರಳು ತೆಗೆಯುವ ಕೆಲಸವಷ್ಟೇ ಅಲ್ಲದೇ, ಕಾಮಾಲೆ ಕಾಯಿಲೆ ಇರುವುದನ್ನೂ ಕಂಡು ಹಿಡಿದು ಮನೆಯಲ್ಲಿ ಉಪಚಾರ ಮಾಡುವುದರ ಬಗ್ಗೆ ಹಾಗೂ ಗರ್ಭಿಣಿಯರ ನಾಡಿ ಹಿಡಿದು ಕಂಡಿಷನ್ ಹೇಗೆ ಇದೆ ಎನ್ನುವುದನ್ನು ಜೈನಬಿ ಅಜ್ಜಿ ಹೇಳುತ್ತಾರೆ. ಮತ್ತೊಂದು ವಿಶೇಷ ಅಂದ್ರೆ ಒಣ ಕೆಮ್ಮು ಅಂದ್ರೆ ಕಿರುನಾಲಿಗೆ ಬಾಧೆಯನ್ನು ಒಂದು ಹರಳು ಉಪ್ಪಿನಿಂದ ಗಟ್ಟಿಯಾಗಿ ಪ್ರೆಸ್ ಮಾಡುವುದರ ಮೂಲಕ ಚಿಟಿಕೆಯಲ್ಲಿ ಕೆಮ್ಮನ್ನು ಗುಣಪಡಿಸುತ್ತಾಳೆ ಜೈನಬಿ ಅಜ್ಜಿ.
ಕೊರೊನಾ ಕಾಯಿಲೆ ಹರಡಿದೆ ಎನ್ನುವುದು ಗೊತ್ತಿರದಷ್ಟು ಮುಗ್ದೆ ಈ ವೃದ್ಧೆ. ಸದ್ಯ ಲಾಕ್ ಡೌನ್ ಹಿನ್ನೆಲೆ ಯಾರೊಬ್ಬರೂ ಬರುತ್ತಿಲ್ಲ. ದುಡಿಮೆಯೂ ಇಲ್ಲ. ಸರಕಾರ ಕೊಟ್ಟ ಒಂದಿಷ್ಟು ಅಗತ್ಯ ವಸ್ತುಗಳು ಖಾಲಿ ಆಗಿವೆ. ಕಳೆದ ವಾರದ ಹಿಂದಷ್ಟೇ ವಿಪರೀತ ಜ್ವರದಿಂದ ಅಜ್ಜಿ ಬಳಲಿದ್ದರು. ಕೊರೊನಾದ ಭೀತಿ ಹಿನ್ನೆಲೆ ಅಕ್ಕಪಕ್ಕದ ಜನರು ಅಜ್ಜಿ ಬಳಿ ಹೋಗಲು ಭಯ ಪಟ್ಟಿದ್ದರು. ವಾರ್ಡಿನ ನಗರ ಸಭೆ ಮಾಜಿ ಸದಸ್ಯ ಮಾನ್ವಿ ಪಾಷ್ ಎನ್ನುವವರು ವೈದ್ಯರಿಗೆ ತಿಳಿಸಿದ ಹಿನ್ನೆಲೆ, ವೈದ್ಯರು ಬಂದು ಜೈನಬಿ ಅಜ್ಜಿಗೆ ತಪಾಸಣೆ ಮಾಡಿ ಒಂದಿಷ್ಟು ಮಾತ್ರೆ, ಇಂಜೆಕ್ಷನ್ ನೀಡಿದ್ದರಿಂದ ಗುಣಮುಖರಾಗಿದ್ದಾರೆ. ಓಡಾಡುತ್ತಿದ್ದಾರೆ, ಮತ್ತೆ ತಮ್ಮ ಕಾಯಕವನ್ನು ಮಾಡುತ್ತಿದ್ದಾರೆ.
ಮೂಲತಃ ಜೈನಬಿ ರಾಯಚೂರಿನ ನಿವಾಸಿ ಕೊಪ್ಪಳ ಮೆಹಬೂಬ್ ಎನ್ನುವವರನ್ನು ಮದುವೆಯಾಗಿ ಕಳೆದ 45 ವರ್ಷಗಳಿಂದ ಕೊಪ್ಪಳದಲ್ಲಿಯೇ ವಾಸವಾಗಿದ್ದಾರೆ. ಇಂಥಾ ಪರಿಸ್ಥಿತಿಯಲ್ಲಿಯೂ ಈ ವೃದ್ಧೆ ಯಾರ ಮುಂದೆಯೂ ಕೈ ಚಾಚದೇ ಸ್ವಾಭಿಮಾನಿಯಾಗಿ ಬದುಕುತ್ತಿರೋ ಇವರಿಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ವರದಿ: ರಾಜು ಬಿ. ಆರ್.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post