ವಾಷಿಂಗ್ಟನ್: ಮಾರಕ ಕೊರೊನಾ ವೈರಸ್ ಅಮೆರಿಕಾವನ್ನು ಹಿಡಿದು ಮುಕ್ಕುತ್ತಿದೆ. ಇಲ್ಲಿಯವರೆಗೂ ಅಮೆರಿಕಾದಲ್ಲಿ ಬರೋಬ್ಬರಿ 10 ಲಕ್ಷಕ್ಕೂ ಅಧಿಕ ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, 60 ಸಾವಿರಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಆದ್ರೆ, ಇದಕ್ಕೆಲ್ಲಾ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ರ ನಿರ್ಲಕ್ಷ್ಯವೇ ಕಾರಣ ಅಂತಾ ಹೇಳಲಾಗ್ತಿದೆ.
ಯಾಕಂದ್ರೆ, ಕೊರೊನಾ ವೈರಸ್ ಘಾತುಕತೆಯ ಬಗ್ಗೆ ಅಮೆರಿಕಾದ ಕೇಂದ್ರ ಗುಪ್ತಚರ ಸಂಸ್ಥೆ ಸಿಐಎ ಮೊದಲೇ ಎಚ್ಚರಿಕೆ ನೀಡಿತ್ತಂತೆ. ಜನವರಿ ಮತ್ತು ಫೆಬ್ರವರಿಯಲ್ಲಿ ಕೊರೊನಾದಿಂದ ಆಗಬಹುದಾದ ಅನಾಹುತದ ಬಗ್ಗೆ ಟ್ರಂಪ್ಗೆ ಬರೋಬ್ಬರಿ 12 ಎಚ್ಚರಿಕೆಯ ಸಂದೇಶಗಳನ್ನು ಸಿಐಎ ನೀಡಿತ್ತಂತೆ.
ಆದರೂ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯಾವುದೇ ಮುನ್ನಚ್ಚರಿಕಾ ಕ್ರಮ ತೆಗೆದುಕೊಳ್ಳಲಿಲ್ವಂತೆ. ಈ ವಿಚಾರವನ್ನ ಸ್ವತಃ ಅಮೆರಿಕಾದ ಗುಪ್ತಚರ ಅಧಿಕಾರಿಗಳೇ ವಾಷಿಂಗ್ಟನ್ ಪೋಸ್ಟ್ಗೆ ತಿಳಿಸಿದ್ದಾರೆ.
ಈ ಬಗ್ಗೆ ಸ್ಪಷ್ಟನೆ ನೀಡಿರುವ ಅಮೆರಿಕಾದ ಸಿಐಎ ಸಿಬ್ಬಂದಿಯೊಬ್ಬರು. ಜನವರಿ ಹಾಗೂ ಫೆಬ್ರುವರಿಯಲ್ಲಿ ಗುಪ್ತಚರ ಇಲಾಖೆಯಿಂದ ಅತಿ ಸೂಕ್ಷ್ಮ ಎನಿಸುವಂತಹ ವರದಿಗಳನ್ನು ನೀಡಲಾಗಿತ್ತು. ಜಾಗತಿಗ ಬೆಳವಣಿಗೆ ಹಾಗೂ ಭದ್ರತಾ ಬೆದರಿಕೆಯ ಬಗ್ಗೆ ಡೊನಾಲ್ಡ್ ಟ್ರಂಪ್ ಅವರ ಗಮನ ಸೆಳೆಯಲಾಗಿತ್ತು. ಆದರೆ ಟ್ರಂಪ್ ಅದನ್ನು ಗಂಭೀರವಾಗಿ ಪರಿಗಣಿಸದೇ ಇದ್ದದ್ದು ಇಂದಿನ ಅನಾಹುತಕ್ಕೆ ಕಾರಣವಾಗಿದೆ ಅಂತ ಹೇಳಿದ್ದಾರೆ.
ಸತತ ಒಂದು ವಾರಗಳ ಕಾಲ ಅಧ್ಯಕ್ಷರ ದಿನದ ಮಾಹಿತಿ ವಿವರಣೆಯಲ್ಲಿ (ಪಿಡಿಬಿ) ಈ ಬಗ್ಗೆ ಸ್ಪಷ್ಟವಾಗಿ ಹೇಳಲಾಗಿತ್ತು. ವೈರಸ್ ಜಾಗತಿಕವಾಗಿ ಮೂಡಿಸುತ್ತಿರುವ ಆತಂಕ, ಹರಡುತ್ತಿರುವ ತೀವ್ರತೆಯ ಬಗ್ಗೆ ವರದಿ ನೀಡಲಾಗಿತ್ತು. ಚೀನಾಮ ತನ್ನ ದೇಶದಲ್ಲಿ ವೈರಸ್ ಮಾಡಿದ ಅನಾಹುತಗಳ ಬಗ್ಗೆ ನೀಡಿರುವ ಅಂಕಿ ಸಂಖ್ಯೆಗಳು ನಂಬಲು ಅರ್ಹವಲ್ಲ ಎಂದು ಕೂಡ ತಿಳಿಸಲಾಗಿತ್ತು. ಆದರೂ ಕೂಡ ಟ್ರಂಪ್ ಈ ಬಗ್ಗೆ ಗಂಭೀರವಾಗಿ ವಿಚಾರ ಮಾಡಲಿಲ್ಲ. ವರದಿಯಲ್ಲಿರುವ ಪ್ರಮುಖ ಅಂಶಗಳನ್ನೇ ಓದುವ ಗೋಜಿಗೆ ಹೋಗಲಿಲ್ಲ ಅಂತ ಟ್ರಂಪ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post