ಬೆಂಗಳೂರು: ಎಲ್ಲಾ ಮುಗಿದು ಹೋಗಿದೆ.. ನಿನ್ನೆ ಬೆಳಗ್ಗೆಯವರೆಗೆ ಚೆನ್ನಾಗಿಯೇ ಇದ್ದ ಆ ಯುವ ನಟ ಈಗ ನೆನಪಾಗಿ ಉಳಿದಿದ್ದಾರೆ. ಚಿರಂಜೀವಿ ಅಂತಾ ಹೆಸರಲ್ಲೇ ಇದ್ದರೂ ಅಲ್ಪಾವಧಿಯಲ್ಲೇ ಎಲ್ಲರನ್ನೂ ಬಿಟ್ಟು ಹೋಗಿದ್ದಾರೆ. ಆದ್ರೆ, ಸುಮಾರು 15 ವರ್ಷಗಳ ಕಾಲ ಸ್ನೇಹಿತನಾಗಿದ್ದು, 10 ವರ್ಷಗಳ ಕಾಲ ಪ್ರೇಯಸಿಯಾಗಿ ಎರಡು ವರ್ಷಗಳಿಂದ ಪತ್ನಿಯಾಗಿ, ಈಗ ಚಿರು ಮಗುವಿಗೆ ತಾಯಿಯಾಗಲಿದ್ದ ಮೇಘನಾ ನೋವು ಅಕ್ಷರಗಳಲ್ಲಿ ಹಿಡಿದಿಡುವಂಥದ್ದಲ್ಲ. ಆ ನೋವು ತುಂಬಲು ಆಗಸವೂ ಚಿಕ್ಕದೇ..
ಇದ್ದಕ್ಕಿದ್ದಂತೆ ಎದ್ದು ಹೋದ ಪತಿ ನೆನೆದು.. ತನ್ನ ಪ್ರೀತಿಯ ಚಿರು ಪಾರ್ಥಿವ ಶರೀರದ ಮೇಲೆ ಮಲಗಿ.. ಪ್ಲೀಸ್ ಬಂದು ಬಿಡು.. ನನ್ನ ಬಿಟ್ಟು ಹೋಗಬೇಡ.. ಅಂತ ಕಣ್ಣೀರ ತರ್ಪಣ ಬಿಟ್ಟ ಹೆಣ್ಣುಮಗಳ ಆ ದೃಶ್ಯ ಕಲ್ಲನ್ನು ನೀರಾಗಿಸಬಲ್ಲಂಥ ನೋವು. ಕಷ್ಟ ಪಟ್ಟು ಇಷ್ಟ ಪಟ್ಟ ಪತಿ ಪಡೆದ ಆಕೆ, ಕೊನೆಯಾದಗಿ ಹಣೆಗೆ ಚುಂಬಿಸಿದಾಗ ಅಲ್ಲಿದ್ದ ನೂರಾರು ಮನಸ್ಸುಗಳಲ್ಲಿ ಒಮ್ಮೆಲೇ ಜ್ವಾಲಾಮುಖಿ ಸ್ಫೋಟಿಸಿದ ಅನುಭವವಾಗಿದ್ದು ಸುಳ್ಳಲ್ಲ.
ಯಾಕಿಂಥ ನೋವು? ಯಾಕಿಂಥ ಶಿಕ್ಷೆ? ನಾನು ಏನು ಮಾಡಿದ್ದೆ..? ಅಂತಾ ಆಕೆಯ ನೋಟ ಪ್ರಶ್ನಿಸುವಂತಿದ್ದರೆ, ಉತ್ತರಿಸಲಾಗದ ವಿಧಿಯೇ ಕಣ್ಣೀರಾಗಿ ಹರಿದು ಪಲಾಯನ ಮಾಡುತ್ತಿದ್ದಂತೆ ಭಾಸವಾಗಿತ್ತು. ಯಾರು ಏನು ಅಂದರೂ ವಿಧಿ ತನ್ನ ಕೆಲಸ ಮಾಡಿಯಾಗಿದೆ. ತಾನೂ ನಗುತ್ತ, ತನ್ನ ಜೊತೆಯವರನ್ನೂ ನಗಿಸುತ್ತಿದ್ದ ಚಿರು ಸರ್ಜಾ, ಇಂದು ತಾನು ನಿರ್ಲಿಪ್ತನಾಗಿ ಕುಣಿ ಸೇರಿದ್ದರೆ, ತನ್ನ ಜೊತೆಗಿದ್ದವರಿಗೆಲ್ಲಾ ಭರಿಸಲಾಗದ ದುಃಖ ನೀಡಿ ಹೋಗಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post