ನವದೆಹಲಿ: ಸ್ಟೆರ್ಲಿಂಗ್ ಬಯೋಟೆಕ್ ಲಿಮಿಟೆಡ್/ ಸಂದೇಸರ ಮನಿ ಲಾಂಡರಿಂಗ್ ಪ್ರಕರಣ ಸಂಬಂಧ ಕಾಂಗ್ರೆಸ್ ಖಜಾಂಚಿ ಹಾಗೂ ಸೋನಿಯಾ ಗಾಂಧಿಯ ಪರಮಾಪ್ತರಾದ ಅಹ್ಮದ್ ಪಟೇಲ್ರನ್ನ ಜಾರಿ ನಿರ್ದೇಶನಾಲಯ ವಿಚಾರಣೆ ಮಾಡ್ತಿದೆ.
ಇಂದು ಅಹ್ಮದ್ ಪಟೇಲ್ ಅವರ ದೆಹಲಿ ನಿವಾಸಕ್ಕೆ ನಾಲ್ಕರಿಂದ ಐದು ಇಡಿ ಅಧಿಕಾರಿಗಳು ತಲುಪಿದ್ದು, ಪಟೇಲ್ ಅವರ ಮಗ ಹಾಗೂ ಅಳಿಯನನ್ನು ಕೂಡ ವಿಚಾರಣೆಗೆ ಒಳಪಡಿಸಲಿದೆ ಎಂದು ಹೇಳಲಾಗ್ತಿದೆ.
ಇ.ಡಿ ಅಧಿಕಾರಿಗಳು ಈ ಪ್ರಕರಣ ಸಂಬಂಧ ವಿಚಾರಣೆ ನಡೆಸಲು ಅಹ್ಮದ್ ಪಟೇಲ್ ಅವರಿಗೆ ಎರಡು ಬಾರಿ ನೋಟಿಸ್ ನೀಡಿದ್ದರು. ಆದ್ರೆ ಅಹ್ಮದ್ ಪಟೇಲ್ ತನ್ನ ವಯಸ್ಸು 60ಕ್ಕಿಂತ ಹೆಚ್ಚಿದ್ದು, ಕೊರೊನಾ ಹರಡುವ ಭೀತಿಯ ಕಾರಣ ನೀಡಿ, ವಿಚಾರಣೆಗೆ ಬರಲು ಆಗುವುದಿಲ್ಲ ಎಂದು ಹೇಳಿದ್ದರು.
5000 ಕೋಟಿ ರೂಪಾಯಿ ಬ್ಯಾಂಕ್ ಸಾಲ ಪಡೆದು ವಂಚನೆ ಆರೋಪದ ಮೇಲೆ ಸ್ಟೆರ್ಲಿಂಗ್ ಬಯೋಟೆಕ್ ಕಂಪನಿ ಹಾಗೂ ಅದರ ಪ್ರಮೋಟರ್ಗಳಾದ ನಿತಿನ್ ಸಂದೇಸರ, ಚೇತನ್ ಸಂದೇಸರ ಹಾಗೂ ದೀಪ್ತಿ ಸಂದೇಸರ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿತ್ತು. ಆಂಧ್ರ ಬ್ಯಾಂಕ್ ನೇತೃತ್ವದ ಬ್ಯಾಂಕ್ಗಳ ಒಕ್ಕೂಟದಿಂದ ಸ್ಟೆರ್ಲಿಂಗ್ ಬಯೋಟೆಕ್, 5 ಸಾವಿರ ಕೋಟಿ ರೂಪಾಯಿ ಸಾಲ ಪಡೆದು ವಂಚಿಸಿರೋ ಹಿನ್ನೆಲೆ ತನಿಖೆ ನಡೆಯುತ್ತಿದೆ. ಈ ಹಗರಣದಲ್ಲಿ ಅಹ್ಮದ್ ಪಟೇಲ್ ಅವರ ಮಗ ಹಾಗೂ ಅಳಿಯ ಕಿಕ್ಬ್ಯಾಕ್ ಪಡೆದಿದ್ದಾರೆ ಎಂಬ ಆರೋಪವಿದೆ. ಸಿಬಿಐ ತನಿಖೆ ಬೆನ್ನಲ್ಲೇ ಇ.ಡಿ ಕೂಡ ಪ್ರಕರಣ ದಾಖಲಿಸಿಕೊಂಡಿತ್ತು. ಸ್ಟೆರ್ಲಿನ್ ಗ್ರೂಪ್ ಹಾಗೂ ಸಂದೇಸರ ಸಹೋದರರು ಭಾರತೀಯ ಬ್ಯಾಂಕ್ಗಳಿಗೆ ಸುಮಾರು 14500 ಕೋಟಿ ರೂಪಾಯಿ ವಂಚಿಸಿದ್ದಾರೆ ಎಂದು ಇ.ಡಿ ಹೇಳಿದೆ. ಲೋನ್ ಹಣವನ್ನು ಬೇರೆ ಉದ್ದೇಶಗಳಿಗೆ ಬಳಸಲಾಗಿದೆ. ಕಂಪನಿಯ ಪ್ರಮುಖ ಪ್ರಮೋಟರ್ಗಳು ಸಾಲದ ಹಣವನ್ನ ತಮ್ಮ ನೈಜೀರಿಯಾದ ತೈಲ ವ್ಯವಹಾರಕ್ಕೆ ಹಾಗೂ ವೈಯಕ್ತಿಕ ಉದ್ದೇಶಗಳಿಗೆ ಬಳಸಿದ್ದಾರೆಂದು ಆರೋಪಿಸಲಾಗಿದೆ.
2017ರಲ್ಲಿ ಪ್ರಕರಣ ಸಂಬಂಧ ಸಂದೇಸರ ಗ್ರೂಪ್ನ ಉದ್ಯೋಗಿಯೊಬ್ಬನನ್ನು ಇ.ಡಿ ಬಂಧಿಸಿತ್ತು. ಆತ ವಿಚಾರಣೆ ವೇಳೆ, ತಾನು ಅಹ್ಮದ್ ಪಟೇಲ್ ಅವರ ಮಗ ಹಾಗೂ ಅಳಿಯನ ಮನೆಗೆ ಹೋಗಿ ಭಾರಿ ಮೊತ್ತದ ಹಣವನ್ನ ತಲುಪಿಸಿದ್ದಾಗಿ ಹೇಳಿದ್ದ. ಆದ್ರೆ ಪಟೇಲ್ ಅವರು ಈ ಎಲ್ಲಾ ಆರೋಪಗಳನ್ನ ತಳ್ಳಿಹಾಕಿದ್ದು, ರಾಜಕೀಯ ದುರುದ್ದೇಶದಿಂದ ಈ ಆರೋಪಗಳನ್ನ ಮಾಡಲಾಗ್ತಿದೆ ಎಂದಿದ್ರು.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post