ಟಾಪ್ ಸುದ್ದಿಗಳ ಸಂಕ್ಷಿಪ್ತ ಹೂರಣ ಇಲ್ಲಿದೆ.. ನಿಮಗಿಲ್ಲಿ ಸಿಗಲಿದೆ ಫಟಾಫಟ್ 10 ಸುದ್ದಿ..!
1. ನೇಕಾರ ಸಮ್ಮಾನ್ ಯೋಜನೆಗೆ ಸಿಎಂ ಚಾಲನೆ
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ನೇಕಾರ ಸಮ್ಮಾನ್ ಯೋಜನೆಯ ಫಲಾನುಭವಿಗಳಿಗೆ ನೇರ ನಗದು ವರ್ಗಾವಣೆ ಮಾಡುವ ಮೂಲಕ ಯೋಜನೆಗೆ ಚಾಲನೆ ನೀಡಿದ್ದಾರೆ. ಮೊದಲನೇ ಹಂತದಲ್ಲಿ 19,744 ಕೈಮಗ್ಗ ನೇಕಾರರಿಗೆ ನೇರ ನಗದು ವರ್ಗಾವಣೆ ಮಾಡುವ ಮುಖಾಂತರ, ಪ್ರತಿ ನೇಕಾರರಿಗೆ ರೂ. 2,000/- ಗಳ ವಾರ್ಷಿಕ ನೆರವನ್ನು ಅವರ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆಗೆ ಮಾಡಲಾಗುತ್ತೆ. ನಾಲ್ಕನೇ ರಾಷ್ಟ್ರೀಯ ಕೈಮಗ್ಗ ಗಣತಿಯ ಪ್ರಕಾರ ರಾಜ್ಯದಲ್ಲಿ ಒಟ್ಟು 54,789 ಕೈಮಗ್ಗ ನೇಕಾರರು ನೋಂದಣಿ ಮಾಡಿಕೊಂಡಿದ್ದಾರೆ. ರಾಜ್ಯದಲ್ಲಿನ ರೇಷ್ಮೆ, ಹತ್ತಿ ಹಾಗೂ ಉಣ್ಣೆ ವಲಯದ ಕೈಮಗ್ಗ ಮತ್ತು ಪೂರಕ ಚಟುವಟಿಕೆಗಳಲ್ಲಿ ತೊಡಗಿರುವ ಕೈಮಗ್ಗ ನೇಕಾರರು ಈ ಯೋಜನೆಗೆ ಅರ್ಹರಾಗಿರುತ್ತಾರೆ ಅಂತಾನೂ ಸಿಎಂ ತಿಳಿಸಿದ್ದಾರೆ.
2. ಆನ್ಲೈನ್ ಕ್ಲಾಸ್; ನಿಷೇಧ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ತೀರ್ಪು ನಾಳೆ
ಒಂದರಿಂದ ಐದನೇ ತರಗತಿ ಮಕ್ಕಳಿಗೆ ಆನ್ ಲೈನ್ ಶಾಲೆ ತೆರೆಯುವ ವಿಚಾರಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಮುಖ್ಯ ವಿಭಾಗೀಯ ಪೀಠ ನಾಳೆಗೆ ಪ್ರಕರಣದ ತೀರ್ಪನ್ನು ಕಾಯ್ದಿರಿಸಿದೆ. ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯವರ ನೇತೃತ್ವದ ಪೀಠದಲ್ಲಿ ಇಂದು ಅರ್ಜಿಯ ವಿಚಾರಣೆ ನಡೆಯಿತು. ರಾಜ್ಯ ಸರ್ಕಾರ ಈಗಾಗಲೇ 1-5 ನೇ ತರಗತಿ ಮಕ್ಕಳ ಆನ್ಲೈನ್ ಕ್ಲಾಸ್ ನಿಷೇಧಿಸಿದೆ, ಇದನ್ನು ಪ್ರಶ್ನಿಸಿ ಕೆಲ ಖಾಸಗಿ ಸಂಸ್ಥೆಗಳ ಮಾಲೀಕರು ಹೈಕೋರ್ಟ್ ಮೆಟ್ಟಿಲೇರಿದ್ದರು.
3. ಜನಾರ್ಧನ ಪೂಜಾರಿಗೆ ಕೊರೊನಾ
ಕಾಂಗ್ರೆಸ್ ಹಿರಿಯ ನಾಯಕ ಜನಾರ್ಧನ ಪೂಜಾರಿಯವರಿಗೆ ನಿನ್ನೆ ಕೊರೊನಾ ಪಾಸಿಟಿವ್ ಬಂದಿದೆ. ಈ ಕುರಿತು ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ಕಾಂಗ್ರೆಸ್ ಹಿರಿಯ ನಾಯಕ ಜನಾರ್ಧನ ಪೂಜಾರಿ ಅವರಿಗೆ ಕೋವಿಡ್ ಸೋಂಕು ತಗುಲಿರುವ ವಿಚಾರ ಕೇಳಿ ನೋವಾಗಿದೆ. ಹುಟ್ಟು ಹೋರಾಟಗಾರರಾದ ಪೂಜಾರಿ ಕೋವಿಡ್ ವಿರುದ್ದದ ಹೋರಾಟದಲ್ಲಿ ಗೆದ್ದು ಮತ್ತೆ ಎಂದಿನಂತೆ ಮಾರ್ಗದರ್ಶನ ನೀಡಲಿ ಎಂದು ದೇವರನ್ನ ಪ್ರಾರ್ಥಿಸುತ್ತೇನೆ ಅಂತಾ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
4. ವಾರ್ಡ್ ಮಟ್ಟದಲ್ಲಿ ಕೊರೊನಾ ನಿಯಂತ್ರಣ
ಬೆಂಗಳೂರಿನಲ್ಲಿ ಕೊರೊನಾ ಮಹಾಸ್ಫೋಟ ಹಿನ್ನಲೆಯಲ್ಲಿ ವಾರ್ಡ್ ಮಟ್ಟದಲ್ಲಿ ಕೊರೊನಾ ನಿಯಂತ್ರಣ ಸಾಧಿಸಲು ಕಾರ್ಪೋರೇಟರ್ ಜೊತೆಗೆ ಇಂದು ಆರ್ .ಅಶೋಕ್ ಸಭೆ ನಡೆಸಿದ್ರು. ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಕಾರ್ಪೊರೇಟರ್ಸ್ ಜೊತೆಗೆ ಕೆಂಪೇಗೌಡ ಪೌರ ಸಭಾಂಗಣದಲ್ಲಿ ಸಭೆ ನಡೆಸಿದ್ದು, ಇಂದು ವಾರ್ಡ್ ನಂ1 ರಿಂದ ವಾರ್ಡ್ ನಂ 70 ರ ವರೆಗಿನ ಕಾರ್ಪೋಟರ್ ಜೊತೆ ಸಭೆಯಲ್ಲಿ ಚರ್ಚೆ ಮಾಡಲಾಗಿದೆ. ಇನ್ನೂ ಮೂರು ದಿನ ಇದೇ ರೀತಿ ಕಾರ್ಪೊರೇಟರ್ಸ್ ಸಭೆ ನಡೆಯಲಿದೆ.
5. ಆ ಗ್ರಾಮಕ್ಕೆ ಹೋದ್ರೆ ಬೀಳುತ್ತೆ 5 ಸಾವಿರ ದಂಡ..!
ಕೊರೊನಾ ಎಲ್ಲೆಡೆ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆ ಮಂಡ್ಯ ಜಿಲ್ಲೆ, ಮಂಡ್ಯ ತಾಲ್ಲೂಕಿನ ಗ್ರಾಮವೊಂದರಲ್ಲಿ ಹೊಸ ಆದೇಶ ಹೊರಡಿಸಲಾಗಿದೆ. ಈ ಗ್ರಾಮಕ್ಕೆ ಬೆಂಗಳೂರು ಹಾಗೂ ಮೈಸೂರಿನಿಂದ ಯಾರು ಬರೋ ಹಾಗಿಲ್ಲ. ಒಂದೊಮ್ಮೆ ಬಂದ್ರೆ 5 ಸಾವಿರ ದಂಡ ವಿಧಿಸುವುದಾಗಿ ಗ್ರಾಮಸ್ಥರು ನಿರ್ಧಾರ ಮಾಡಿ ಡಂಗೂರ ಸಾರಿಸಿದ್ದಾರೆ. ಇದೀಗ ಡಂಗೂರ ಸಾರಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದರ ಜೊತೆಗೆ ಮತ್ತಷ್ಟು ಗ್ರಾಮಗಳಲ್ಲಿ ಇದೆ ರೀತಿಯ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ.
6. ಉಪ ನೋಂದಣಿ ಕಚೇರಿಯಲ್ಲಿ ಮಾತ್ರ ಮದುವೆ
ರಾಜ್ಯದಲ್ಲಿ ದಿನೇ ದಿನೇ ಕೊರೊನಾ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿವೆ. ಮದುವೆ ಇನ್ನಿತರೆ ಸಮಾರಂಭದಲ್ಲಿ ಭಾಗಿಯಾದವರಿಗೆ ಸೋಂಕು ಹರಡಿದ ಪ್ರಕರಣಗಳು ವರದಿಯಾಗ್ತಿವೆ. ಈ ಹಿನ್ನೆಲೆ ಕಲಬುರಗಿಯಲ್ಲಿ ಮದುವೆ ಸಮಾರಂಭಗಳಿಗೆ ಬ್ರೇಕ್ ಬಿದ್ದಿದೆ. ಇನ್ಮುಂದೆ ಹೆಚ್ಚು ಜನರು ಸೇರುವ ಮದುವೆ ಕಾರ್ಯಕ್ರಮಗಳಿಗೆ ಅನುಮತಿ ಇರಲ್ಲ. ಉಪ ನೋಂದಣಿ ಕಚೇರಿಯಲ್ಲಿ ಮಾತ್ರ ಮದುವೆ ಕಾರ್ಯ ನಡೆಸಲು ಪರವಾನಗಿ ನೀಡುವಂತೆ ಜಿಲ್ಲಾಧಿಕಾರಿಗೆ ಡಿಸಿಎಂ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಸೂಚಿಸಿದ್ದಾರೆ.
7. ಆರ್ಟಿಪಿಎಸ್ನ ವಿದ್ಯುತ್ ಘಟಕಗಳು ಸ್ಥಗಿತ
ರಾಜ್ಯದಲ್ಲಿ ವಿದ್ಯುತ್ ಬೇಡಿಕೆ ಇಳಿಮುಖಗೊಂಡ ಹಿನ್ನೆಲೆಯಲ್ಲಿ ಎಂಟು ವಿದ್ಯುತ್ ಕೇಂದ್ರಗಳ ಉತ್ಪಾದನೆ ನಿಲ್ಲಿಸಲಾಗಿದೆ. ಕೊರೊನಾ ಹಿನ್ನೆಲೆಯಲ್ಲಿ ಕೈಗಾರಿಕೆಗಳನ್ನ ಬಂದ್ ಮಾಡಲಾಗಿದ್ದು ರಾಜ್ಯದಲ್ಲಿ ಮೂರು ತಿಂಗಳಿಂದ ವಿದ್ಯತ್ಬೇಡಿಕೆ ಕುಸಿದಿದೆ, ಹಾಗೂ ಈ ಬಾರಿ ಬೇಸಿಗೆಯಲ್ಲೂ ವಿದ್ಯತ್ ಬೇಡಿಕೆ ಹೆಚ್ಚಾಗಿಲ್ಲ. ಕಳೆದ ತಿಂಗಳು ಎರಡು ಘಟಕ ಮಾತ್ರ ಕಾರ್ಯನಿರ್ವಹಿಸಿದ್ದು, ಪವನ, ಜಲ ವಿದ್ಯತ್ ಸ್ಧಾವರಗಳಿಂದ ರಾಜ್ಯಕ್ಕೆ ವಿದ್ಯತ್ ಪೂರೈಕೆ ಮಾಡಲಾಗಿದೆ. ರಾಜ್ಯದಲ್ಲಿ ಒಟ್ಟು 9009 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆಯಾಗುತ್ತಿದ್ದು, ಪ್ರಸುತ ಬೇಡಿಕೆ ಇರೋದು 8992 ಮೆಗಾವ್ಯಾಟ್ಗಳಿಗೆ.
8. ರಾಜ್ಯದ ಈ 5 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್
ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಬೆಳಗಾವಿ, ಧಾರವಾಡ ಸೇರಿದಂತೆ ರಾಜ್ಯದ ಐದು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆಯಿದೆ. ಈ 5 ಜಿಲ್ಲೆಗಳಿಗೆ ಹವಾಮಾನ ಇಲಾಖೆ ಯೆಲ್ಲೋ ಆಲರ್ಟ್ ಘೋಷಣೆ ಮಾಡಿದೆ. ಕಳೆದ 24 ಗಂಟೆಗಳಲ್ಲಿ ಕರಾವಳಿ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗಿದ್ದು, ಇಂದಿನಿಂದ 10 ರವರೆಗೆ ಕರಾವಳಿ ಭಾಗದ ಜಿಲ್ಲೆಗಳಲ್ಲಿ ಸಾಧಾರಣ ಹಾಗೂ ಕೆಲವಡೆ ಭಾರೀ ಮಳೆಯಾಗಲಿದೆ. ಜು.8, 9, 10 ರಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಬಹುತೇಕ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ನಿರ್ದೇಶಕ ಸಿ.ಎಸ್ ಪಾಟೀಲ್ ಮಾಹಿತಿ ನೀಡಿದ್ದಾರೆ.
9. ತಿರುವನಂತಪುರದಲ್ಲೂ ‘ತ್ರಿಪಲ್ ಲಾಕ್ಡೌನ್’
ಕೇರಳದ ಕಾಸರಗೋಡು ಮಾದರಿಯಲ್ಲೇ ತಿರುವನಂತಪುರಂನಲ್ಲೂ ಕೊರೋನಾ ನಿಯಂತ್ರಣಕ್ಕೆ ತರಲು ಕೇರಳ ಸರ್ಕಾರ ‘ತ್ರಿಪಲ್ ಲಾಕ್ಡೌನ್’ಜಾರಿಗೊಳಿಸಿದೆ. ಮೂರು ಹಂತದ ಲಾಕ್ಡೌನ್ ನಲ್ಲಿ ಮೊದಲನೇ ಹಂತ ‘ವಾಹನ ಮತ್ತು ಜನರ ಸಂಚಾರ ಸಂಪೂರ್ಣ ಬಂದ್ ಮಾಡುವುದು’ ಎರಡನೇ ಹಂತ ‘ಜಿಲ್ಲೆಯ ಯಾವ ನಗರಗಳಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಿದೆಯೋ ಆ ಏರಿಯಾ ಲಾಕ್ಡೌನ್ ಮಾಡುವುದು’ ಮೂರನೇ ಹಂತ ‘ಸಮುದಾಯಕ್ಕೆ ಹರಡದಂತೆ ತಡೆಯಲು ಕೊರೋನಾ ರೋಗಿ ಮನೆಯಿಂದ ಹೊರಬರದಂತೆ ನಿರ್ಬಂಧಿಸುವುದು’. ಹೀಗೆ ಮೂರು ಹಂತದ ಲಾಕ್‌ಡೌನ್‌ಗೆ ಕೇರಳ ಸರ್ಕಾರ ಮುಂದಾಗಿದೆ.
10. ‘ಬೆಸ್ಟ್ ಆ್ಯಕ್ಟರ್’ ಜೊತೆಗೆ ಯೋಗಿ
ಕಥೆ ಆಯ್ಕೆಯಲ್ಲಿ ಈಗ ತುಂಬಾನೇ ಚ್ಯೂಸಿ ಆಗಿರೋ ಯೋಗಿ, ಒಂದೊಳ್ಳೆ ಕಮರ್ಷಿಯಲ್ ಪ್ರಯೋಗದತ್ತ ಕಣ್ಣಿಟ್ಟಿದ್ದಾರೆ. ಇದೀಗ ‘ದಿ ಬೆಸ್ಟ್ ಆ್ಯಕ್ಟರ್’ ಶಾರ್ಟ್ ಮೂವಿಯಿಂದ ಗಮನ ಸೆಳೆದಿದ್ದ, ನಿರ್ದೇಶಕ ನಾಗರಾಜ್ ಸೋಮಯಾಜಿ ನಿರ್ದೇಶನದ ‘ಅಕಟಕಟ’ದಲ್ಲಿ ಯೋಗಿ ನಟಿಸುತ್ತಿದ್ದಾರೆ. ಈ ಬಗ್ಗೆ ನಿರ್ದೇಶಕ ನಾಗರಾಜ್ ಸೋಮಯಾಜಿ ಮಾಹಿತಿ ನೀಡಿದ್ದು, ಇದು ವರ್ಲ್ಡ್ ಮಟ್ಟದಲ್ಲಿ ಇರುವ ಸಿನಿಮಾ. ತಾಯಿ-ಮಗನ ಸೆಂಟಿಮೆಂಟ್ ಜೊತೆಗೆ ಕಮರ್ಷಿಯಲ್ ಎಳೆಯಿರೋ ಸಿನಿಮಾ. ಕೇವಲ 10 ನಿಮಿಷದಲ್ಲೇ ಕಥೆ ಕೇಳಿ, ಯೋಗಿ ಒಪ್ಪಿಕೊಂಡಿದ್ರು. ಎರಡು ಶೇಡ್‌ಗಳಲ್ಲಿ ಯೋಗಿ ಕಾಣಿಸಿಕೊಳ್ಳುತ್ತಿರುವ ಸಿನಿಮಾ ಆಗಿದೆ ಅಂತಾ ನಿರ್ದೇಶಕ ನಾಗರಾಜ್ ಸೋಮಯಾಜಿ ತಿಳಿಸಿದರು.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post