ಹದಿನೈದು ದಿನಗಳ ಹಿಂದೆ ನಾನು ಕಾಂಗ್ರೆಸ್ಗೆ ಬರುತ್ತೇನೆ ಸೇರಿಸಿಕೊಳ್ಳಿ ಅಂತಾ ಸಿ.ಪಿ.ಯೋಗೇಶ್ವರ್ ನನ್ನ ಮನೆಗೆ ಬಂದಿದ್ದ. ಯಡಿಯೂರಪ್ಪ ಅವರನ್ನ ಅಧಿಕಾರದಿಂದ ಕೆಳಗೆ ಇಳಿಸುತ್ತಿದ್ದಾರೆ, ಹೀಗಾಗಿ ಕಾಂಗ್ರೆಸ್ಗೆ ಬರ್ತಿನಿ ಅಂತ ನನ್ನ ಬಳಿ ಚರ್ಚೆ ಮಾಡಿದ. ಈಗ ಬಿಜೆಪಿಯಲ್ಲಿ ಇದ್ದೀಯಾ, ಅಲ್ಲೇ ಲಾಯಲ್ ಆಗಿರು. ನಾನೇ ಅಲ್ಲಿಯೇ ಇರು ಅಂತಾ ಕಿವಿ ಮಾತು ಹೇಳಿದೆ.
-ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ
ಬಿಜೆಪಿ ಶಾಸಕ ಸಿ.ಪಿ.ಯೋಗೇಶ್ವರ್ ಹಾಗೂ ಮಾಜಿ ಸಿಎಂ ಕುಮಾರಸ್ವಾಮಿ ನಡುವೆ ಶುರುವಾಗಿದ್ದ ಮಾತಿನ ಚಕಮಕಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಈ ರೀತಿಯ ಪ್ರತಿಕ್ರಿಯೆ ಕೊಡುವುದರೊಂದಿಗೆ ಹೊಸ ವಾಕ್ಸಮರಕ್ಕೆ ವೇದಿಕೆ ಸೃಷ್ಟಿಯಾಗಿದೆ.
ಸಿ.ಪಿ.ಯೋಗೇಶ್ವರ್ ಡಿ.ಕೆ.ಶಿವಕುಮಾರ್ ಬಳಿ ಹೋಗಿದ್ದು ನಿಜವೇ..? ಡಿಕೆಎಸ್ ಕಾಲು ಹಿಡಿದರೆ ಯೋಗೇಶ್ವರ್? ಅಸಲಿಗೇ ನಡೆದಿದ್ದೇನು? ಅನ್ನೋ ಚರ್ಚೆ ಶುರುವಾಗಿದೆ. ಜೊತೆಗೆ ಡಿ.ಕೆ.ಶಿವಕುಮಾರ್ ಹೇಳಿಕೆ ಸಾರ್ವಜನಿಕರ ವಲಯದಲ್ಲಿ ಸಿ.ಪಿ.ಯೋಗೇಶ್ವರ್ ಅವರತ್ತ ಅನುಮಾನದ ಕಣ್ಣುಗಳಿಂದ ನೋಡುವಂತೆ ಮಾಡಿದ ಮರುಕ್ಷಣ ಯೋಗೇಶ್ವರ್ ಸ್ಪಷ್ಟನೆಯೂ ಬಂದಿದೆ.
ಡಿಕೆಎಸ್ ಆರೋಪಕ್ಕೆ ಪ್ರತಿಕ್ರಿಯೆಯಾಗಿ ಬಿಜೆಪಿ ಶಾಸಕ ಸಿ.ಪಿ.ಯೋಗೇಶ್ವರ್ ಅವರು ‘ನಾನು ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯೂ ಮಾಡಿಲ್ಲ, ಅವರ ಜೊತೆ ಮಾತೂ ಆಡಿಲ್ಲ. ಇನ್ನು ಅವರ ಕಾಲು ಹಿಡಿಯುವ ಪ್ರಶ್ನೆಯೇ ಇಲ್ಲ ಎಂಬ ಸ್ಪಷ್ಟನೆ ನೀಡಿದ್ದಾರೆ.
ಅಸಲಿಗೇ ನಡೆದಿದ್ದೇನು..?
ಮೂಲಗಳ ಮಾಹಿತಿಯ ಪ್ರಕಾರ ಕೆಲ ದಿನಗಳ ಹಿಂದೆ ಸಿ.ಪಿ. ಯೋಗೇಶ್ವರ್ ಅವರು ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದು ನಿಜ. ಆದರೆ ಸಿ.ಪಿ. ಯೋಗೇಶ್ವರ್ ಡಿ.ಕೆ.ಶಿವಕುಮಾರ್ ಅವರ ಕಾಲು ಹಿಡಿದು ಬೇಡಿಕೊಂಡರು ಅನ್ನೋದು ಸುಳ್ಳು. ಇಬ್ಬರು ಅನುಭವಿ ನಾಯಕರ ನಡುವೆ ನಡೆದ ಅತ್ಯಂತ ರಹಸ್ಯ ಹಾಗೂ ಅಷ್ಟೇ ಗಂಭೀರವಾದ ಭೇಟಿ ಅದಾಗಿತ್ತು ಅಂತಾ ನ್ಯೂಸ್ಫಸ್ಟ್ಗೆ ಮೂಲಗಳು ಮಾಹಿತಿ ನೀಡಿವೆ.
ಗೀವ್ ಆಂಡ್ ಟೇಕ್ ಪಾಲಿಸಿಯ ಆಫರ್
ಈ ಭೇಟಿ ನಡೆದಾಗ ಇನ್ನೂ ಸಿ.ಪಿ. ಯೋಗೇಶ್ವರ್ಗೆ ವಿಧಾನ ಪರಿಷತ್ ಸ್ಥಾನದ ಖಾತ್ರಿ ಇರಲಿಲ್ಲ. ಬದಲಾಗಿ ಇವರಿಗೆ ಪರಿಷತ್ ಸ್ಥಾನ ತಪ್ಪಿಸುವ ಷಡ್ಯಂತ್ರ ತೀವ್ರಗೊಂಡಿತ್ತು ಅಂತಾ ಹೇಳಲಾಗ್ತಿತ್ತು. ಕೆಲ ತಿಂಗಳ ಹಿಂದಷ್ಟೇ ನಡೆದ ಸಂಪುಟ ವಿಸ್ತರಣೆಯ ವೇಳೆ ಮಂತ್ರಿ ಪಟ್ಟಕ್ಕೆ ಯೋಗೇಶ್ವರ್ ಹೆಸರು ಫೈನಲ್ ಹಂತದವರೆಗೂ ಬಂದು ಕಟ್ಟಕಡೆಯ ಕ್ಷಣದಲ್ಲಿ ಬಿಎಸ್ವೈ ಆಪ್ತರೇ ಮಂತ್ರಿ ಪಟ್ಟ ತಪ್ಪಲು ಕಾರಣರಾಗಿದ್ದರು ಅನ್ನೋ ಆರೋಪ ಕೂಡ ಕೇಳಿ ಬಂದಿತ್ತು. ಆಗ ಅವರು ಪ್ರಯೋಗಿಸಿದ ‘ಸೋತವರಿಗ್ಯಾಕೆ ಸಚಿವ ಸ್ಥಾನ’ ಎಂಬ ಅಸ್ತ್ರ ಯೋಗೇಶ್ವರ್ ಎದೆಯಲ್ಲಿ ಅಳಿಸಲಾಗದ ಗಾಯ ಮಾಡಿಯಾಗಿತ್ತು ಅಂತಾ ಹೇಳಲಾಗ್ತಿದೆ.
ಇದರ ಬೆನ್ನಲ್ಲೇ, ನಾಯಕತ್ವ ಬದಲಾವಣೆಯ ಚರ್ಚೆ ರಾಜಕೀಯ ಪಡಸಾಲೆಗಳಲ್ಲಿ ಭಾರೀ ತಿರುವು ಪಡೆದಿತ್ತು. ಯಾವ ಯಡಿಯೂರಪ್ಪನವರನ್ನು ನಂಬಿ ಬಿಜೆಪಿಗೆ ಬಂದೆನೋ ಅವರ ನಾಯಕತ್ವದ ಬದಲಾದರೆ ನನ್ನ ಅಸ್ತಿತ್ವವೇ ಮುಗಿದು ಹೋದಿತು ಎಂದು ಅರಿತ ಯೋಗೇಶ್ವರ್, ಬಹಳ ಯೋಚಿಸಿದ ನಂತರವೇ ವಿಶ್ವಾಸದ ನೆಲೆಗಟ್ಟಿನಲ್ಲೇ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿದ್ದರು. ಎದುರುಗೊಂಡಾಗ ಕೈಮುಗಿದಿದ್ದು ಬಿಟ್ಟರೆ ಯೋಗೇಶ್ವರ್ ಅವರು ಡಿ.ಕೆ.ಶಿವಕುಮಾರ್ ಎದುರು ತಲೆಯನ್ನೂ ತಗ್ಗಿಸಿರಲಿಲ್ಲ ಎನ್ನುತ್ತವೆ ಮೂಲಗಳು.
ಎದೆಯುಬ್ಬಿಸಿ ಕುಳಿತಿದ್ದ ಡಿ.ಕೆ.ಶಿವಕುಮಾರ್ ಎದುರು ತಲೆ ಎತ್ತಿಯೇ ಮಾತಾಡಿದ ಯೋಗೇಶ್ವರ್, ಕಾಂಗ್ರೆಸ್ನಲ್ಲಿ ಅವಕಾಶ ಕೊಟ್ಟು ಚನ್ನಪಟ್ಟಣದ ಟಿಕೆಟ್ ಖಾತ್ರಿ ಮಾಡಿದರೆ ನಿಮ್ಮನ್ನು ಸಿಎಂ ಮಾಡಲು ಸಹಕಾರ ಕೊಡೋದಾಗಿ ಹೇಳಿದ್ರು. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಡಿ.ಕೆ.ಸುರೇಶ್ ಗೆಲುವಿಗೆ ಸಹಕಾರ ನೀಡುವ ಭರವಸೆಯನ್ನೂ ಕೊಟ್ರು.
ಆದರೆ ಡಿ.ಕೆ.ಶಿವಕುಮಾರ್ ಕಿವಿ ಚುರುಕಾಗಿದ್ದು ಮಾತ್ರ ಕೆಲ ರಹಸ್ಯ ದಾಖಲೆಗಳನ್ನೂ ಕೊಡುವ ಮಾತನ್ನು ಕೇಳಿದಾಗ..! ಆಗ ಅದೇನು ಮೊದಲು ಕೊಡಿ ಆಮೇಲೆ ಡಿಸೈಡ್ ಮಾಡ್ತೀನಿ ಅಂದಿದ್ದರಂತೆ ಡಿಕೆ ಶಿವಕುಮಾರ್, ಆಯಿತು ಎಂದಷ್ಟೇ ಹೇಳಿ ಮರಳಿದ್ದರು ಯೋಗೇಶ್ವರ್. ಅಷ್ಟೇ, ಮತ್ತೆ ಹೋಗಿ ದಾಖಲೆ ಕೊಟ್ಟರೋ, ಬಿಟ್ಟರೋ ಗೊತ್ತಿಲ್ಲ. ಆದರೆ ಭೇಟಿ ಎಷ್ಟು ರಹಸ್ಯವಾಗಿ ನಿಗದಿಯಾಗಿತ್ತೋ ಅಷ್ಟೇ ರಹಸ್ಯವಾಗಿ ಮುಗಿದಿತ್ತು ಅನ್ನೋದು ನ್ಯೂಸ್ ಫಸ್ಟ್ ಮೂಲಗಳ ಖಚಿತ ಮಾಹಿತಿಯಾಗಿದೆ.
ವಿಶೇಷ ವರದಿ: ವೀರೇಂದ್ರ ಉಪ್ಪಂದ, ಪೊಲಿಟಿಕಲ್ ಬ್ಯೂರೋ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post