ಅಯೋಧ್ಯೆಯಲ್ಲಿ ಶ್ರೀರಾಮನಿಗೆ ನಮೋ ನಮಃ.. ಇಂದು ಜಗತ್ತಿನ ಮೂಲೆ ಮೂಲೆಯಿಂದ ಶ್ರೀ ರಾಮನ ಘೋಷವಾಕ್ಯ ಕೇಳಿ ಬರುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರೇ ಖುದ್ದು ಅಯೋಧ್ಯೆಗೆ ತೆರಳಿ ಮಂದಿರಕ್ಕೆ ಭೂಮಿ ಪೂಜೆ ನೆರವೇರಿಸಿದ್ದಾರೆ. ಆದ್ರೆ ಇದರ ಹಿಂದೆ ಮೋದಿಯವರದ್ದೊಂದು ಪ್ರತಿಜ್ಞೆಯ ಕತೆಯಿದೆ.
ಇಡೀ ವಿಶ್ವದ ಚಿತ್ತ ಇಂದು ಅಯೋಧ್ಯೆಯತ್ತ ನೆಟ್ಟಿತ್ತು. ಐತಿಹಾಸಕ ಕಾರ್ಯಕ್ರಮಕ್ಕೆ ಅಯೋಧ್ಯೆ ಇಂದು ಸಾಕ್ಷಿಯಾಗಿತ್ತು. ಮಂದಿರ ಭೂಮಿ ಪೂಜೆಗೆ ಸ್ವತಃ ದೇಶದ ಪ್ರಧಾನಿ ಮೋದಿ ಅಯೋಧ್ಯೆಗೆ ಆಗಮಿಸಿದ್ರು. ದಶಕಗಳಿಂದಲೂ ವಿವಾದದ ಸುಳಿಯಲ್ಲೇ ಸಿಲುಕಿದ್ದ ಅಯೋಧ್ಯೆಗೆ ಇದುವರೆಗೂ ಯಾವುದೇ ಪ್ರಧಾನಿಗಳು ಭೇಟಿ ನೀಡಿದ್ದೇ ಇಲ್ಲ. ಹೀಗಾಗಿ ಪ್ರಧಾನಿಯೊಬ್ಬರು ಅಯೋಧ್ಯೆಗೆ ಭೇಟಿ ನೀಡಿರೋದು ಇದೇ ಮೊದಲು ಅನ್ನೋದು ವಿಶೇಷ. ಅದರಲ್ಲೂ ಭೂಮಿ ಪೂಜೆ ನೆರವೇರಿಸಲು ಪ್ರಧಾನಿ ಆಗಮನವಾಗಿರೋದ್ರ ಹಿಂದೆ ಒಂದು ಪ್ರತಿಜ್ಞೆಯ ಹಿನ್ನೆಲೆಯಿದೆ. 29 ವರ್ಷದ ಹಿಂದಿನ ಕತೆಯಿದೆ.
ವರ್ಷಗಳ ನಂತರ ಅಯೋಧ್ಯೆಗೆ ಆಗಮಿಸಿದ ಮೋದಿ
ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ದೇಶ ವಿದೇಶಗಳನ್ನು ಸುತ್ತಿದ್ರು. ಅಯೋಧ್ಯೆ ಪಕ್ಕದ ಜಿಲ್ಲೆಗೂ ಬಂದಿದ್ದರು.. ಚುನಾವಣೆ ಪ್ರಚಾರದ ಸಮಯದಲ್ಲಂತೂ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ದೇಶದ ಉದ್ದಗಲಕ್ಕೂ ಸಂಚಿರಿಸಿದ್ರು. ಆದರೂ ರಾಮ ಜನ್ಮ ಭೂಮಿ ಅಯೋಧ್ಯೆಗೆ ಮಾತ್ರ ಅವರು ಬಾರದೇ ಇದ್ದಿದ್ದು ಹಲವಾರು ಪ್ರಶ್ನೆಗಳನ್ನು ಹುಟ್ಟು ಹಾಕುತ್ತಿತ್ತು. ಆ ಪ್ರಶ್ನೆ ಹಿಂದೆ ಇರೋದೆ ಈ ಶಪಥದ ಕತೆ ಎನ್ನಲಾಗುತ್ತಿದೆ.
ಹೌದು.. ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ 370 ರದ್ದು ಮಾಡಲು 1992-93ರ ದಶಕದಲ್ಲಿ ದೇಶದಲ್ಲಿ ತಿರಂಗಾ ಯಾತ್ರೆ ಕೈಗೊಳ್ಳಲಾಗಿತ್ತು. ಆ ಯಾತ್ರೆಯಲ್ಲಿ ಬಿಜೆಪಿ ಹಿರಿಯ ನಾಯಕ ಎಂ.ಎಂ ಜೋಶಿ ನೇತೃತ್ವ ವಹಿಸಿದ್ದರು. ನರೇಂದ್ರ ಮೋದಿಯವರು ಜೋಶಿ ಬಲಗೈ ಬಂಟನಂತೆ ಸಾಥ್ ನೀಡಿದ್ರು. ಈ ವೇಳೆ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೂ ತೀವ್ರ ಹೋರಾಟ ನಡೆಸಲಾಗ್ತಿತ್ತು. ಈ ಹೋರಾಟದಲ್ಲೂ ಮೋದಿಯವರು ಅಡ್ವಾಣಿ ಸೇರಿದಂತೆ ಹಿರಿಯ ನಾಯಕರ ಜೊತೆ ಗುರುತಿಸಿಕೊಂಡಿದ್ದರು. ಆದ್ರೆ ಬಾಬ್ರಿ ಮಸೀದಿ ಧ್ವಂಸದ ಬಳಿಕ ಯಾರೂ ಅತ್ತ ಸುಳಿದಿರಲಿಲ್ಲ. ಅದಕ್ಕೆ ಅವಕಾಶವೂ ಇರಲಿಲ್ಲ. ಹೀಗಾಗಿಯೇ ತಿರಂಗಾ ಯಾತ್ರೆಯಲ್ಲಿ ಕಾಣಿಸಿಕೊಂಡಿದ್ದ ಮೊದಿಯವರನ್ನ, ಅಲ್ಲೇ ಕೆಲವರು ಅಯೋಧ್ಯೆಗೆ ಯಾವಾಗ ಬರುತ್ತೀರಾ ಅಂತಾ ಕೇಳಿದ್ದರಂತೆ. ಅದಕ್ಕೆ ಉತ್ತರಿಸಿದ ಮೋದಿ, ಅಯೋಧ್ಯೆಯಲ್ಲಿ ಯಾವಾಗ ಶ್ರೀ ರಾಮ ಮಂದಿರ ನಿರ್ಮಾಣ ಆಗುತ್ತೋ ಆವತ್ತೇ ನಾನು ಅಯೋಧ್ಯೆಗೆ ಆಗಮಿಸುತ್ತೇನೆ ಅಂತ ಹೇಳಿದ್ರಂತೆ.
ಇಂದು ಅದೇ ರಾಮ ಜನ್ಮ ಭೂಮಿಯಲ್ಲಿ ಭವ್ಯ, ದಿವ್ಯ ಮಾರ್ಯಾದಾ ಪುರುಷೋತ್ತಮನ ಮಂದಿರ ನಿರ್ಮಾಣವಾಗ್ತಿದೆ. ಅಂದು ಮೋದಿ ಹೇಳಿದ್ದಂತೆಯೇ ಇಂದು ಪ್ರಧಾನಿಯಾಗಿ ಖುದ್ದು ಅಯೋಧ್ಯೆಗೆ ಭೇಟಿ ನೀಡಿದ್ದಾರೆ. ಸ್ವತಃ ಮಂದಿರ ನಿರ್ಮಾಣದ ಶಿಲಾನ್ಯಾಸ ನೆರವೇರಿಸಿದ್ದಾರೆ. ಅಂದು ಅವರು ಬಾಯಿ ಮಾತಲ್ಲಿ ಹೇಳಿದ ಮಾತೇ ಒಂಥರದಲ್ಲಿ ಶಪಥದಂತೆ ಪ್ರತಿಧ್ವನಿಸಿದೆ. ಅದು ಇಂದು ಇಡೇರಿದಂತೆ ಕೂಡ ಆಗಿರೋದು ವಿಶೇಷ.
ವಿಶೇಷ ಬರಹ: ಈರಣ್ಣಾ ಬಸವಾ, ನ್ಯೂಸ್ ಡೆಸ್ಕ್
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post