ಬೆಂಗಳೂರು: ಅಯೋಧ್ಯೆಯಲ್ಲಿ ರಾಮ ಮಂದಿರದ ಭೂಮಿ ಪೂಜೆ ನೆರವೇರಿದೆ. ಭಾರತೀಯರ ಪಾಲಿಗೆ ಇಂದು ಐತಿಹಾಸಿಕ ದಿನವಾಗಿದೆ. ಅದರಂತೆ ಬಿಜೆಪಿ ರಾಜ್ಯ ಕಾರ್ಯದರ್ಶಿ ತುಳಸಿ ಮುನಿರಾಜುಗೌಡ, ಅಂದು ತಾವು ರಾಮ ಮಂದಿರಕ್ಕಾಗಿ ನಡೆಸಿದ ಹೋರಾಟದ ಅನುಭವವನ್ನ ನ್ಯೂಸ್ಫಸ್ಟ್ ಜೊತೆ ಹಂಚಿಕೊಂಡಿದ್ದಾರೆ.
ರಾಮ ಮಂದಿರಕ್ಕಾಗಿ ನಡೆದ ಹೋರಾಟದ ಅನುಭವ ಹೇಗಿತ್ತು..?
‘‘1992ರಲ್ಲಿ ನಾನು 6 ನೇ ತರಗತಿಯಲ್ಲಿ ಓದುತ್ತಿದ್ದೆ. ಅಂದು ನಾನು ಸಂಘ ಪರಿವಾರದ ಶಾಖೆಗೆ ಹೋಗುವ ಅಭ್ಯಾಸವನ್ನೂ ರೂಢಿಸಿಕೊಂಡಿದ್ದೆ. 1992ರಲ್ಲಿ ಇಡೀ ದೇಶದಲ್ಲಿ ಒಂದು ಹೊಸ ಸಂಚಲನ ಸೃಷ್ಟಿಸುವ ವಾತಾವರಣ ನಿರ್ಮಾಣವಾಯಿತು. ಅದುವೇ ಅಯೋಧ್ಯೆಯ ರಾಮ ಜನ್ಮಭೂಮಿಯಲ್ಲಿ ಶ್ರೀರಾಮ ಮಂದಿರ ನಿರ್ಮಿಸಬೇಕೆಂಬುದು. ಶಾಖೆಯಲ್ಲಿ ನಮಗೆ ರಾಮನ ಬಗ್ಗೆ ಅನೇಕ ವಿಚಾರಗಳನ್ನು ಹೇಳುತ್ತಿದ್ರು. ಅಂದು ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ಬಗ್ಗೆಯೂ ಮಾಹಿತಿ ನೀಡುತ್ತಿದ್ರು. ಶತಾಯ ಗತಾಯ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಆಗಲೇಬೇಕೆಂದು ಬಿಜೆಪಿ ಘಟಾನುಘಟಿ ನಾಯಕರಾದ ಅಟಲ್ ಬಿಹಾರಿ ವಾಜಪೇಯಿ, ಲಾಲ್ ಕೃಷ್ಣ ಅಡ್ವಾಣಿ, ಮುರಳಿ ಮನೋಹರ್ ಜೋಶಿ ಹೋರಾಟವನ್ನ ಆರಂಭಿಸಿದ್ದರು’’.‘‘ನಾನು ಅಂದು ವಾಜಪೇಯಿ ಮತ್ತು ಅಡ್ವಾಣಿ ಅವರಿಂದ ಪ್ರೇರೇಪಿತನಾದೆ. ಜೀವನದಲ್ಲಿ ಒಂದು ಬಾರಿಯಾದ್ರೂ ಈ ಇಬ್ಬರು ನಾಯಕರನ್ನು ನೋಡಲೇಬೇಕೆಂದು ಪಣತೊಟ್ಟೆ. ಅದೇ ಸಮಯಕ್ಕೆ ಸರಿಯಾಗಿ ಶಾಖೆಯಲ್ಲೂ ರಾಮ ಮಂದಿರದ ನಿರ್ಮಾಣಕ್ಕೆ ಸಹಿ ಸಂಗ್ರಹ ಮಾಡುವ ಅಭಿಯಾನ ಶುರುವಾಗಿತ್ತು. ಅಂದು ನಾನು ವಿಜಯನಗರ ಬಡಾವಣೆಯಲ್ಲಿ ವಾಸವಿದ್ದೆ. ರಾಮ ಮಂದಿರ ನಿರ್ಮಾಣದ ವಿಚಾರದಲ್ಲಿ ಉಂಟಾಗಿದ್ದ ಗಲಭೆಯ ಹಿನ್ನೆಲೆಯಲ್ಲಿ, ಸಾಕಷ್ಟು ದಿನ ಶಾಲೆಗಳಿಗೆ ರಜೆ ನೀಡಿದ್ರು. ಇದಾದ ಬಳಿಕ ಶಾಲೆ ಆರಂಭವಾಯಿತಾದ್ರೂ, ಬೆಳಗ್ಗೆಯಿಂದ ಮಧ್ಯಾಹ್ನದವರೆಗೂ ಮಾತ್ರ ತರಗತಿಗಳು ನಡೆಯುತ್ತಿತ್ತು. ನಾನು ಮಧ್ಯಾಹ್ನ ಶಾಲೆಯಿಂದ ಮನೆಗೆ ಬಂದ ಬಳಿಕ ಸಹಿ ಸಂಗ್ರಹಕ್ಕೆ ಹೊರಡುತ್ತಿದ್ದೆ. ಆ ದಿನಗಳು ಇನ್ನು ನನಗೆ ಬಹಳ ನೆನಪಿನಲ್ಲಿದೆ. ಅಂದು ಒಂದು ತಿಂಗಳ ಕಾಲ, ಸುಮಾರು ಒಂಭತ್ತು ಹತ್ತು ಸಾವಿರ ಮಂದಿಯನ್ನು ಭೇಟಿಯಾಗಿ ಸಹಿ ಸಂಗ್ರಹ ಮಾಡಿದ್ದೇನೆ‘‘.
‘‘ಇದೆಲ್ಲಾ ಆದ ಬಳಿಕ ನಾನು 1994 ರ ಲೋಕಸಭಾ ಚುನಾವಣೆಯಲ್ಲಿ ಮೊದಲ ಬಾರಿಗೆ ಪಕ್ಷದ ಕಾರ್ಯಕರ್ತನಾಗಿ ಕೆಲಸ ಮಾಡಿದ್ದೆ. ಬಳಿಕ 2012-13 ರಲ್ಲಿ ಮಾಜಿ ಉಪ-ಪ್ರಧಾನಿ ಲಾಲ್‌ಕೃಷ್ಣ ಆಡ್ವಾಣಿ ನೇತೃತ್ವದಲ್ಲಿ ನಡೆದ ಜನಚೇತನಾ ಯಾತ್ರೆಯಲ್ಲಿ 40 ದಿನ ದೇಶ ಸುತ್ತಿದ ಅನುಭವ ನನಗಿದೆ. ಇಂದು ಇಡೀ ದೇಶವೇ ಹೆಮ್ಮೆ ಪಡುವ ದಿನವಾಗಿತ್ತು. ನಾನು ಬಾಲ್ಯದಲ್ಲಿ ಸಹಿ ಸಂಗ್ರಹ ಮಾಡಿದ್ದೇನೆ. ಇಂದು ಪ್ರಧಾನಿಗಳು ರಾಮ ಮಂದಿರ ನಿರ್ಮಾಣಕ್ಕೆ ಅಡಿಗಲ್ಲು ಹಾಕಿದ್ದಾರೆ. ನಾನು ರಾಮ ಮಂದಿರಕ್ಕಾಗಿ ಹೋರಾಟ ಮಾಡಿದ್ದೇನೆ. ನಾನು ರಾಮ ಮಂದಿರ ನಿರ್ಮಾಣದಲ್ಲೂ ಇದ್ದೇನೆ. ಇದು ನನ್ನ ಸೌಭಾಗ್ಯ‘‘.
-ತುಳಸಿ ಮುನಿರಾಜುಗೌಡ, ಬಿಜೆಪಿ ರಾಜ್ಯ ಕಾರ್ಯದರ್ಶಿ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post