ಬೆಂಗಳೂರು: ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆಯ ಸಿದ್ಧತೆ ಕುರಿತು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಹಾಗೂ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್, ಇಂದು ಮಾಣಿಕ್ಯ ಷಾ ಪರೇಡ್ ಗ್ರೌಂಡ್ನಲ್ಲಿ ಸುದ್ದಿಗೋಷ್ಠಿ ನಡೆಸಿದ್ರು.
ಈ ವೇಳೆ ಮಾತನಾಡಿದ ಮಂಜುನಾಥ್ ಪ್ರಸಾದ್ ಸ್ವಾತಂತ್ರ್ಯ ದಿನಾಚರಣೆಗೆ ಆಗಮಿಸಲು ಸಾರ್ವಜನಿಕರಿಗೆ ಅವಕಾಶವಿಲ್ಲ. 75 ಕೊರೊನಾ ವಾರಿಯರ್ಗಳಿಗೆ ಮಾತ್ರ ಆಮಂತ್ರಣ ನೀಡಲಾಗಿದ್ದು, ಕೆಲವು ಗಣ್ಯರನ್ನ ಮಾತ್ರ ಆಹ್ವಾನಿಸಲಾಗಿದೆ ಎಂದು ತಿಳಿಸಿದ್ರು. ಧ್ವಜಾರೋಹಣ ಮಾಡಲಿರುವ ಸಿಎಂ ಬಿ.ಎಸ್ ಯಡಿಯೂರಪ್ಪ ನಂತರ ಪರೇಡ್ನಲ್ಲಿ ಗೌರವ ಸ್ವೀಕರಿಸಿ ನಾಡಿನ ಜನತೆಗೆ ಸ್ವಾತಂತ್ರೋತ್ಸವದ ಸಂದೇಶ ನೀಡುತ್ತಾರೆ ಎಂದರು.
ನಂತರ ಮಾತನಾಡಿದ ಪೊಲೀಸ್ ಆಯುಕ್ತ ಕಮಲ್ ಪಂತ್, ಕೇಂದ್ರ ಸರ್ಕಾರದ ಆದೇಶದಂತೆ ಹೆಚ್ಚು ಜನ ಒಂದೆಡೆ ಸೇರಲು ಅವಕಾವಿಲ್ಲ. ಈ ಹಿನ್ನೆಲೆ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮಕ್ಕೆ ಸಾರ್ವಜನಿಕರಿಗೆ ಪ್ರವೇಶವಿರುವುದಿಲ್ಲ. ಪರೇಡ್ ನೇತೃತ್ವವನ್ನು ಡಿಸಿಪಿ ಸಿ.ಆರ್. ಗಿರೀಶ್ ವಹಿಸಲಿದ್ದಾರೆ ಎಂದು ತಿಳಿಸಿದ್ರು. ಪರೇಡ್ನಲ್ಲಿ ಟ್ರಾಫಿಕ್ ಪೊಲೀಸ್ , ಕೆಎಸ್ಆರ್ಪಿ, ಬಿ.ಎಸ್.ಎಫ್, ಸಿಎಆರ್, ಟ್ರಾಫಿಕ್ ಪೊಲೀಸ್, ಮಹಿಳಾ ಪೊಲೀಸ್, ಹೋಂ ಗಾರ್ಡ್ಸ್ ಸೇರಿದಂತೆ 16 ತುಕಡಿಗಳ 350 ಮಂದಿ ಭಾಗವಹಿಸುತ್ತಾರೆ. ಬೆಂಗಳೂರು ವೆಸ್ಟ್ ಅಡಿಷನಲ್ ಸಿಪಿ ನೇತೃತ್ವದಲ್ಲಿ ಭದ್ರತೆ ನೀಡಲಾಗಿದ್ದು, 9 ಜನ ಡಿಸಿಪಿ ಸೇರಿದಂತೆ 680 ಜನ ಭದ್ರತಾ ಕೆಲಸದಲ್ಲಿ ಹಾಜರಿರುತ್ತಾರೆ ಎಂದು ಹೇಳಿದ್ರು.
70 ಸಿ.ಸಿ.ಕ್ಯಾಮರಾಗಳ ಅಳವಡಿಕೆ ಮಾಡಲಾಗಿದೆ ಹಾಗೂ 2 ಬ್ಯಾಗೇಜ್ ಸ್ಕ್ಯಾನರ್ ಮಾಡಲಾಗಿದೆ. ಸ್ವಾತಂತ್ರ್ಯ ದಿನಾಚರಣೆ ವೀಕ್ಷಿಸಲು 500 ಆಸನಗಳ ವ್ಯವಸ್ಥೆ ಮಾಡಲಾಗಿದೆ. ಕಾರ್ಯಕ್ರಮಕ್ಕೆ ವಿವಿಧ ಇಲಾಖೆಯ 100 ಕೊರೊನಾ ವಾರಿಯರ್ಸ್ ಹಾಗೂ ಕೊರೊನಾದಿಂದ ಗುಣಮುಖರಾದ ಎಲ್ಲಾ ವಯೋಮಾನದ 25 ಜನರನ್ನು ಆಹ್ವಾನಿಸಲಾಗಿದೆ. ಕಾರ್ಯಕ್ರಮದ ನೇರ ಪ್ರಸಾರವನ್ನು ದೂರದರ್ಶನ ಹಾಗೂ ವೆಬ್ ಕ್ಯಾಸ್ಟ್ ಮೂಲಕ ಪ್ರಸಾರ ಮಾಡಲಾಗುತ್ತದೆ. ಆಹ್ವಾನಿತರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಹಾಗೂ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಕಡ್ಡಾಯ ಎಂದು ಹೇಳಿದ್ರು.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post