ಏಷ್ಯಾದ ಎರಡು ಬೃಹತ್ ಎಕಾನಮಿ ಹಾಗೂ ವಿಶ್ವದ ಅತ್ಯಂತ ಹೆಚ್ಚು ಜನಸಂಖ್ಯೆ ಹೊಂದಿರುವ ಎರಡು ಪ್ರಮುಖ ರಾಷ್ಟ್ರಗಳಾದ ಚೀನಾ ಮತ್ತು ಭಾರತದ ನಡುವೆ ಕಳೆದ ಜೂನ್ನಿಂದ ಯುದ್ಧದ ಕಾರ್ಮೋಡ ದಟ್ಟವಾಗಿ ಕವಿದಿತ್ತು. ಬೃಹತ್ ಸೇನೆ, ಯುದ್ಧ ವಿಮಾನಗಳು, ಹೆಲಿಕಾಪ್ಟರ್ಗಳು, ಬಲಿಷ್ಠ ನೌಕಾ ಸೇನೆಯನ್ನು ಕೂಡ ಹೊಂದಿರುವ ಈ ಎರಡೂ ರಾಷ್ಟ್ರಗಳ ನಡುವೆ ಯುದ್ಧ ನಡೆದರೆ ಯಾವ ಮಟ್ಟಿಗೆ ಹೋಗಬಹುದು ಅನ್ನೋ ಯೋಚನೆಯೇ ಮೈ ನಡುಗಿಸುವಂಥದ್ದು.
ಅದ್ರಲ್ಲೂ ಜೂನ್ 14ರ ಮಧ್ಯರಾತ್ರಿ ಭಾರತ ಮತ್ತು ಚೀನಿ ಸೈನಿಕರ ನಡುವೆ ನಡೆದ ಕದಾಟದ ಪರಿಣಾಮ ಭಾರತ 20 ಸೈನಿಕರನ್ನು ಕಳೆದುಕೊಂಡಿದ್ದರೆ, ಭಾರತೀಯ ಯೋಧರು 40ಕ್ಕೂ ಹೆಚ್ಚು ಚೀನಿ ಸೈನಿಕರನ್ನು ಹೊಡೆದು ಹಾಕಿದ್ದರು. ಬಹುಶಃ ಉಭಯ ರಾಷ್ಟ್ರಗಳ ನಡುವಿನ ಸಂಬಂಧ ಅತ್ಯಂತ ಕನಿಷ್ಠ ಮಟ್ಟ ಅದಾಗಿತ್ತು. ಅಂದಿನಿಂದ ಕವಿದಿದ್ದ ಯುದ್ಧದ ಕಾರ್ಮೋಡ ಈಗ ಕೊಂಚ ತಿಳಿಯಾಗುವಂಥ ಬೆಳವಣಿಗೆಗಳು ನಡೆದಿದ್ದು, ಉಭಯ ರಾಷ್ಟ್ರಗಳೂ ಮೂರು ಹೆಜ್ಜೆಯ ಹಾದಿ ಕ್ರಮಿಸಲು ಒಪ್ಪಿಕೊಂಡಿವೆ ಅಂತಾ ಹೇಳಲಾಗ್ತಿದೆ.
ಹಾಗಿದ್ದರೆ ಏನಿದು ಮೂರು ಹೆಜ್ಜೆಯ ಹಾದಿ? ಅನ್ನೋದನ್ನ ನೋಡೋದಾದ್ರೆ..
ಮೊದಲ ಹೆಜ್ಜೆ: ಶಸ್ತ್ರಾಸ್ತ್ರ ಭರಿತ ಆರ್ಮರ್ಡ್ ವೆಹಿಕಲ್ಸ್ ಮತ್ತು ಟ್ಯಾಂಕ್ಗಳನ್ನು ಹಿಂಪಡೆಯುವುದು
ಚೀನಾದ ಕಮ್ಯುನಿಸ್ಟ್ ಸೇನೆ ಕಾಲು ಕೆರೆದು ಭಾರತದ ಗಡಿ ಮೇಲೆ ಕಣ್ಣು ಹಾಕಿದಾಗಲೇ ಭಾರತೀಯ ಸೇನೆ ಸಿಡಿದೆದ್ದಿತ್ತು. ಚೀನಿ ಸೇನೆಗೆ ಸರಿಸಮವಾಗಿ ಭಾರತೀಯ ಸೆನೆ ಕೂಡ ಮಿರರ್ ಡೆಪ್ಲಾಯ್ಮೆಂಟ್ ಮಾಡಿತ್ತು. ಅಲ್ಲದೇ ಉಭಯ ದೇಶಗಳೂ ತಮ್ಮ ಆರ್ಮರ್ಡ್ ವೆಹಿಕಲ್ಸ್ ಹಾಗೂ ಟ್ಯಾಂಕ್ಸ್ಗಳನ್ನು ವಿವಾದಾತ್ಮ ಪ್ರದೇಶಕ್ಕೆ ತಂದು ನಿಲ್ಲಿಸಿದ್ದವು. ಸದ್ಯಕ್ಕೆ ಆ ವಾಹನಗಳನ್ನು ಗಡಿಯಿಂದ ಸಾಕಷ್ಟು ದೂರಕ್ಕೆ ತೆಗೆದುಕೊಂಡು ಹೋಗಲು ಉಭಯ ಸೇನೆಗಳೂ ಒಪ್ಪಿಕೊಂಡಿವೆ. ಅಲ್ಲದೇ ಒಂದೇ ದಿನದಲ್ಲಿ ಈ ಕಾರ್ಯವನ್ನು ಅವು ಕಂಪ್ಲೀಟ್ ಮಾಡಬೇಕಿದೆ ಎನ್ನಲಾಗಿದೆ.
ಎರಡನೇ ಹೆಜ್ಜೆ: ಫಿಂಗರ್-4ನಿಂದ ಫಿಂಗರ್-8ಗೆ ಹಿಂದೆ ಸರಿಯಲಿರುವ ಚೀನಿ ಸೇನೆ
ಉಭಯ ದೇಶಗಳ ಸಂಬಂಧ ವೃದ್ಧಿಗೆ ಮತ್ತು ಶಾಂತಿಗೆ ಈ ಹೆಜ್ಜೆ ಅತ್ಯಂತ ಪ್ರಮುಖವಾಗಿದೆ. ಏಕೆಂದ್ರೆ ಉಭಯ ದೇಶಗಳ ಕಾಮನ್ ಪ್ರೆಟ್ರೋಲಿಂಗ್ ಪಾಯಿಂಟ್ ಆಗಿದ್ದ ಪ್ಯಾಂಗಾಗ್ ಸೋ ಲೇಕ್ನ ಉತ್ತರ ಭಾಗದಲ್ಲಿನ ಫಿಂಗರ್ ಏರಿಯಾದಲ್ಲಿ ಚೀನಿ ಸೇನೆ ಕಿರಿಕ್ ಆರಂಭಿಸಿತ್ತು. ಅಂದರೆ ಕೈ ಬೆರಳಿನ ಆಕಾರದಲ್ಲಿರುವ ಪರ್ವತ ಶ್ರೇಣಿಯನ್ನು ಫಿಂಗರ್ – ರಿಂದ ಫಿಂಗರ್ -8 ಎಂದು ಗುರ್ತಿಸಲಾಗಿದೆ. ಈ ಭಾಗದಲ್ಲಿ ಫಿಂಗರ್-4ನಲ್ಲಿ ಚೀನಿ ಸೇನೆ ಬಂದು ಕುಳಿತಿತ್ತು. ಅಲ್ಲಿಂದ ಉಭಯ ದೇಶಗಳ ನಡುವೆ ಚಟಾಪಟಿ ಜೋರಾಗಿತ್ತು. ಹೀಗಾಗಿ ಈಗ ಚೀನಿ ಸೇನೆ ಫಿಂಗರ್-4ನಿಂದ ಫಿಂಗರ್-8ಗೆ ಮರಳಿ ತೆರಳಲು ಒಪ್ಪಿಕೊಂಡಿದೆ. ಜೊತೆಗೆ ಉಭಯ ದೇಶಗಳ ಸೇನೆಯು ಪ್ರತಿದಿನ ಶೇ.30ರಷ್ಟು ತಮ್ಮ ಸೈನಿಕರನ್ನು ಹಿಂಪಡೆಯಲು ಕೂಡ ಒಪ್ಪಿಕೊಂಡಿವೆ.
ಮೂರನೇ ಹೆಜ್ಜೆ: ಪೆಂಗಾಂಗ್ ಸೋ ಲೇಕ್ನ ದಕ್ಷಿಣ ಭಾಗದಲ್ಲೂ ಡಿಸ್-ಎಂಗೇಜ್ಮೆಂಟ್ಗೆ ಒಪ್ಪಿಗೆ
ಚೀನಿ ಸೇನೆ ಪೆಂಗಾಂಗ್ ಸೋ ಲೇಕ್ನ ಉತ್ತರ ಭಾಗದಲ್ಲಿ ಬಾಲ ಬಿಚ್ಚುತ್ತಿದ್ದಂತೆ, ದಕ್ಷಿಣ ಭಾಗದಲ್ಲಿ ಭಾರತೀಯ ಸೇನೆ ಅಗ್ರೆಸ್ಸಿವ್ ಆಗಿತ್ತು. ಜೊತೆಗೆ, ಚೀನಿ ಸೇನೆಯ ಸಂಪೂರ್ಣ ಮೂವ್ಮೆಂಟ್ ಕಾಣುವ ರೀತಿಯಲ್ಲಿ ಉನ್ನತ ಶಿಖರಗಳನ್ನು ವಶಕ್ಕೆ ಪಡೆದಿತ್ತು. ಸದ್ಯ ಫಿಂಗರ್-4ನಿಂದ ಚೀನಿ ಸೇನೆ ಹಿಂದೆ ಸರಿಯಲು ಒಪ್ಪಿಕೊಂಡಿದ್ದರಿಂದಾಗಿ, ದಕ್ಷಿಣ ಭಾಗದಲ್ಲೂ ಡಿಸ್-ಎಂಗೇಜ್ಮೆಂಟ್ಗೆ ಭಾರತೀಯ ಸೇನೆ ಒಪ್ಪಿಕೊಂಡಿದೆ.
ಅದರಂತೆ ಮೂರನೇ ಹೆಜ್ಜೆಯಲ್ಲಿ, ಉಭಯ ರಾಷ್ಟ್ರಗಳ ಸೇನೆಗಳೂ ಪೆಂಗಾಂಗ್ ಸೋ ಸರೋವರದ ದಕ್ಷಿಣದ ದಂಡೆಯಲ್ಲಿನ ಫ್ರಂಟ್ಲೈನ್ ಏರಿಯಾದಿಂದ ಹಿಂದಕ್ಕೆ ಸರಿಯಲು ಒಪ್ಪಿಕೊಂಡಿವೆ. ಚುಶುಲ್ ಹಾಗೂ ರೇಜಾಂಗ್ ಪ್ರದೇಶದ ಸುತ್ತಮುತ್ತ ಪ್ರದೇಶದಿಂದ ಉಭಯ ದೇಶಗಳೂ ತಮ್ಮ ತಮ್ಮ ಸೇನೆಯನ್ನು ಹಿಂಪಡೆಯಲಿವೆ ಎನ್ನಲಾಗಿದೆ.
ಪರೀಕ್ಷೆಗಾಗಿ ಡ್ರೋಣ್ ಬಳಕೆ:
ಇನ್ನು ಸದ್ಯದ ಪರಿಸ್ಥಿತಿಯಲ್ಲಿ ಚೀನಿಯನ್ನು ನಂಬುವುದು ಅತ್ಯಂತ ಕಠಿಣ ಸಂಗತಿಯಾಗಿದೆ. ಹೀಗಾಗಿ, ಉಭಯ ರಾಷ್ಟ್ರಗಳ ಸೇನೆಗಳೂ ಸರಿಯಾದ ರೀತಿಯಲ್ಲಿ ಹಿಂದೆಸರಿಯವ ಪ್ರಕ್ರಿಯೆ ಸರಿಯಾಗಿ ನಡೆಯುತ್ತಿದೆಯಾ? ಇಲ್ಲವಾ? ಅನ್ನೋದನ್ನು ಗಮನಿಸಲು ಜಾಯಿಂಟ್ ಮೆಕ್ಯಾನಿಸಮ್ ಹೊಂದಲು ನಿರ್ಧರಿಸಿವೆ. ಇದಕ್ಕಾಗಿ ಡ್ರೋಣ್ಗಳನ್ನು ಕೂಡ ಬಳಸಾಗುತ್ತದೆ. ಅಲ್ಲದೇ ಉಭಯ ರಾಷ್ಟ್ರಗಳ ಬಳಿ ಅನ್ ಮ್ಯಾನ್ಡ್ ಏರಿಯಲ್ ವೆಹಿಕಲ್ಸ್ ಕೂಡ ಬಳಸಾಗುತ್ತದೆ ಎಂದು ತಿಳಿದು ಬಂದಿದೆ.
ಭಾರತದಿಂದ ಎಚ್ಚರಿಕೆಯ ನಡೆ:
ಹೌದು.. ಸದ್ಯ ಅಪನಂಬಿಕೆಗೆ ಇನ್ನೊಂದು ಹೆಸರೇ ಚೀನಾ ಅನ್ನೋವಂಥ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ, ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಅತ್ಯಂತ ನಂಬಿಕಸ್ಥ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ಚೀಫ್ ಆಫ್ ಡಿಫೆನ್ಸ್ ಸ್ಟಾಫ್ ಜನರಲ್ ಬಿಪಿನ್ ರಾವತ್, ಆರ್ಮಿ ಚೀಫ್ ಜನರಲ್ ಮುಕುಂದ್ ನರ್ವಾಣೆ ಹಾಗೂ ವಾಯುಸೇನೆ ಮುಖ್ಯಸ್ಥ ಆರ್ಕೆಎಸ್ ಭಡೋಯಾರಿ ಅವರನ್ನೊಳಗೊಂಡ ನಂಬಿಕಸ್ಥ ತಂಡ ಈ ಪ್ರಕ್ರಿಯೆ ಮೇಲ್ವಿಚಾರಣೆ ಮಾಡುತ್ತಿದೆ ಎನ್ನಲಾಗಿದೆ.
ಒಟ್ಟಿನಲ್ಲಿ ಕೊರೊನಾ ಮಹಾಮಾರಿ ಭುಗಿಲೆದ್ದಿರುವ ಹಾಗೂ ವಿಶ್ವದ ಆರ್ಥಿಕತೆ ಕುಸಿಯುವ ಹಂತದಲ್ಲಿರುವ ಈ ಸಂದರ್ಭದಲ್ಲಿ ಯುದ್ಧ ಯಾರಿಗೂ ಬೇಡದ ವಿಷಯ. ಹೀಗಾಗಿ, ಚೀನಾ ಕೊಟ್ಟ ಮಾತಿನಂತೆ ಈಗಲಾದರೂ ನಡೆದುಕೊಳ್ಳುತ್ತದೆಯಾ? ತನ್ನ ಕುಟಿಲ ಸಲಾಮಿ ಸ್ಲೈಸಿಂಗ್ ಮನೋರೋಗವನ್ನು ವಾಸಿಮಾಡಿಕೊಳ್ಳುತ್ತಾ? ತನ್ನ ಅಕ್ಕಪಕ್ಕದ ದೇಶದಗಳ ಸಾರ್ವಭೌಮನತೆಯನ್ನು ಗೌರವಿಸುತ್ತದೆಯಾ? ಅನ್ನೋದು ಸದ್ಯದ ಪ್ರಶ್ನೆಯಾಗಿದೆ. ವಿಶ್ವಶಾಂತಿಗೆ ಅದು ಹೀಗೆ ಮಾಡಲೇಬೇಕಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post