ಕೊರೊನಾ ಸಾಂಕ್ರಾಮಿಕ ಶುರುವಾದ ಬೆನ್ನಲ್ಲೇ ಶಾಲೆ, ಕಾಲೇಜುಗಳನ್ನ ಬಂದ್ ಮಾಡಿ ಮಕ್ಕಳು, ಯುವಕರು ಮನೆಯಲ್ಲೇ ಇರುವಂತೆ ನೋಡಿಕೊಳ್ಳಲಾಯ್ತು. ಉದ್ಯೋಗಿಗಳಿಗೂ ಮನೆಯಿಂದಲೇ ಕೆಲಸ ಮಾಡುವಂತೆ ಹೇಳಿ, ಅವರೂ ಕೂಡ ಕೊರೊನಾ ರಿಸ್ಕ್ಗೆ ಒಳಗಾಗದಂತೆ ಹಲವು ಕ್ರಮಗಳನ್ನ ಕೈಗೊಳ್ಳಲಾಯ್ತು. ಆದ್ರೆ ಇಂಥ ಸಂಕಷ್ಟದ ಪರಿಸ್ಥಿತಿಯಲ್ಲಿ ಮುನ್ನಲೆಯ ಯೋಧರಂತೆ ಕಳೆದ 8-9 ತಿಂಗಳಿನಿಂದ ಹೋರಾಡ್ತಿರೋದು ವೈದ್ಯರು, ನರ್ಸ್ಗಳು, ಆರೋಗ್ಯ ಸಿಬ್ಬಂದಿ, ಪೊಲೀಸರು ಹಾಗೂ ಪೌರಕಾರ್ಮಿಕರು. ಅದ್ರಲ್ಲೂ ಕೊರೊನಾ ಸೋಂಕಿನ ರಿಸ್ಕ್ ಇದ್ದರೂ ರೋಗಿಗಳಿಗೆ ಚಿಕಿತ್ಸೆ ನೀಡುತ್ತಾ ಹಗಲು ರಾತ್ರಿಯೆನ್ನದೇ ದುಡಿಯುತ್ತಿರುವ ವೈದ್ಯಲೋಕಕ್ಕೆ ಎಷ್ಟು ಥ್ಯಾಂಕ್ಸ್ ಹೇಳಿದ್ರೂ ಸಾಲದು.
ಕೊರೊನಾ ಸಾಂಕ್ರಾಮಿಕ ಆರೋಗ್ಯ ಸಿಬ್ಬಂದಿಯ ಜೀವನದ ಮೇಲೆ ಎಂಥ ಪರಿಣಾಮ ಬೀರಿದೆ ಅನ್ನೋದಕ್ಕೆ ಈ ನರ್ಸ್ ಉದಾಹರಣೆಯಾಗಿದ್ದಾರೆ. ಇವರನ್ನೊಮ್ಮೆ ನೋಡಿ. 8 ತಿಂಗಳ ಹಿಂದೆ ಹೇಗಿದ್ದವರು, ಈಗ ಹೇಗಾಗಿದ್ದಾರೆ ಅನ್ನೋದನ್ನ ಕಂಡರೆ ಹೃದಯ ಹಿಂಡಿದಂತಾಗುತ್ತೆ. ಇವರ ಹೆಸರು ಕ್ಯಾತ್ರಿನ್. ಅಮೆರಿಕಾದ ಟೆನೆಸೀಯಲ್ಲಿ ನರ್ಸ್ ಆಗಿ ಕೆಲಸ ಮಾಡ್ತಿದ್ದಾರೆ. ಟೆನೆಸೀ ರಾಜ್ಯದಲ್ಲಿ ಈವರೆಗೆ 3,30,000 ಕೋವಿಡ್ ಪ್ರಕರಣಗಳು ದಾಖಲಾಗಿದ್ದು, 4,200ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಅಲ್ಲಿಗೆ.. ಇಲ್ಲಿನ ವೈದ್ಯರು ರೋಗಿಗಳಿಗೆ ಚಿಕಿತ್ಸೆ ನೀಡಲು ಯಾವ ಮಟ್ಟಿಗೆ ಕೆಲಸ ಮಾಡ್ತಿದ್ದಾರೆ ಅನ್ನೋದನ್ನ ಬಿಡಿಸಿ ಹೇಳುವ ಅಗತ್ಯವಿಲ್ಲ.
27 ವರ್ಷದ ಕ್ಯಾತ್ರಿನ್ 8 ತಿಂಗಳ ಹಿಂದೆ ತೆಗೆಸಿಕೊಂಡಿರೋ ಫೋಟೋದಲ್ಲಿ ಮುಗುಳ್ನಗುತ್ತಾ ಲವಲವಿಕೆಯಿಂದ ಕಾಣ್ತಾರೆ. ಅದರ ಪಕ್ಕದಲ್ಲಿರೋ ಇತ್ತೀಚಿನ ಫೋಟೋದಲ್ಲಿ, ಅವರ ಮುಖ ಕಳೆಗುಂದಿದೆ. ಅಲ್ಲದೆ ಗಂಟೆಗಳ ಕಾಲ ಮಾಸ್ಕ್ ಹಾಗೂ ಪಿಪಿಇ ಕಿಟ್ ಧರಿಸೋದ್ರಿಂದ ಅವರ ಮುಖದ ಮೇಲೆ ಉಂಟಾಗಿರೋ ಮಾರ್ಕ್ ಕಾಣಬಹುದು. ಹೊರಗಡೆ ಒಂದರೆಗಳಿಗೆ ಹೋಗಿಬರಬೇಕೆಂದಾಗ ಮಾಸ್ಕ್ ಹಾಕಬೇಕು ಅಂದ್ರೆ ಉಸಿರುಗಟ್ಟಿದಂತಾಗುತ್ತೆ. ಇನ್ನು ಕಳೆದ 8 ತಿಂಗಳಿನಿಂದ ಪ್ರತಿದಿನ, ಬೆಳಗ್ಗೆಯಿಂದ ರಾತ್ರಿವರೆಗೆ ನರ್ಸ್ಗಳು, ವೈದ್ಯರು ಮಾಸ್ಕ್ ಧರಿಸಿಯೇ ಕೆಲಸ ಮಾಡದೇ ಬೇರೆ ವಿಧಿಯಿಲ್ಲ. ಅವರ ಪರಿಸ್ಥಿತಿ ಎಂಥದ್ದು ಅನ್ನೋದನ್ನ ನರ್ಸ್ ಕ್ಯಾತ್ರಿನ್ರ ಈ ಎರಡು ಫೋಟೋಗಳೇ ಹೇಳುತ್ತಿವೆ. ಕ್ಯಾತ್ರಿನ್ ಈ ಫೋಟೋವನ್ನ ಟ್ವಿಟರ್ನಲ್ಲಿ ಹಂಚಿಕೊಂಡಿದ್ದು, ಅವರ ಸ್ಥಿತಿ ನೋಡಿ ಜನರು ಮರುಗಿದ್ದಾರೆ. ನಿಮ್ಮ ಬಗ್ಗೆ ಕಾಳಜಿ ವಹಿಸಿ, ಸುರಕ್ಷಿವಾಗಿರಿ ಎಂದು ಹಾರೈಸುತ್ತಿದ್ದಾರೆ.
ಒಟ್ಟಾರೆ.. ಜಗವೆಲ್ಲಾ ನಗುತಿರಲಿ, ಜಗದಳುವು ನನಗಿರಲಿ… ಅಂತ ದುಡಿಯುತ್ತಿರೋ ವೈದ್ಯಲೋಕಕ್ಕೆ ಕೋಟಿ ನಮನ ಹೇಳಿದರೂ ಸಾಲದು. ಅವರ ಅವಿರತ ಪರಿಶ್ರಮಕ್ಕೆ ನಾವು ಹ್ಯಾಟ್ಆಫ್ ಹೇಳಲೇಬೇಕು.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post