ಬೆಂಗಳೂರು: ವೀರಶೈವ ಲಿಂಗಾಯತ ಸಮುದಾಯವನ್ನ ಒಬಿಸಿಗೆ ಸೇರಿಸಲು ಸಿಎಂ ಬಿ.ಎಸ್. ಯಡಿಯೂರಪ್ಪ ಶಿಫಾರಸು ಕಳಿಸಲಿದ್ದಾರೆ ಎನ್ನಲಾಗಿದೆ. ಈ ಕುರಿತು ನಾಳಿನ ಕ್ಯಾಬಿನೆಟ್ ಮೀಟಿಂಗ್ನಲ್ಲಿ ಸಿಎಂ ಅಧಿಕೃತ ಘೋಷಣೆ ಸಾಧ್ಯತೆ ಇದೆ ಎನ್ನಲಾಗಿದೆ. ಇಂದು ಮಧ್ಯಾಹ್ನ ಲಿಂಗಾಯತ ಪಂಚಮಶಾಲಿ ಜಗದ್ಗುರುಗಳು ಸಿಎಂ ಬಿಎಸ್ವೈ ಅವರನ್ನು ಭೇಟಿಯಾಗಿದ್ದರು ಈ ವೇಳೆ ಈ ವಿಚಾರವಾಗಿ ಪಂಚಮಶಾಲಿ ಜಗದ್ಗುರುಗಳು ಮನವಿ ಸಲ್ಲಿಸಿದ್ದರು.
ನಾಳೆ ಕ್ಯಾಬಿನೆಟ್ನಲ್ಲಿ ಚರ್ಚಿಸಿ ಕೇಂದ್ರಕ್ಕೆ ಸಿಎಂ ಶಿಫಾರಸು ರವಾನೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ. ಇನ್ನು ನಾಳೆ ಸಿಎಂ ಮಹತ್ವದ ಸುದ್ದಿಗೋಷ್ಟಿ ನಡೆಸಲಿದ್ದಾರೆ. ಈ ಸುದ್ದಿಗೋಷ್ಟಿಯಲ್ಲಿ ಈ ವಿಚಾರವನ್ನು ಉಲ್ಲೇಖಿಸುವ ಸಾಧ್ಯತೆಗಳಿವೆ ಎನ್ನಲಾಗಿದೆ.
ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ ರಾಜ್ಯ ಸರ್ಕಾರದ 2 ಎ ಹಾಗೂ ಕೇಂದ್ರ ಸರ್ಕಾರದ ಒಬಿಸಿ ಮೀಸಲಾತಿ ಹಕ್ಕೊತ್ತಾಯಕ್ಕೆ ಕೆಲವೇ ದಿನಗಳಲ್ಲಿ ಒಳ್ಳೆಯ ನಿರ್ಧಾರವನ್ನು ಕೈಗೊಳ್ಳುತ್ತೇವೆ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು ಇಂದು ( 26 ನವಂಬರ್ 20) ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಜಗದ್ಗುರು ಬಸವ ಜಯ ಮೃತ್ಯುಂಜಯ ಸ್ವಾಮೀಜಿಯವರ ನಿಯೋಗಕ್ಕೆ ಸಕಾರಾತ್ಮಕ ಭರವಸೆ ನೀಡಿದ್ದಾರಂತೆ.
ಪಂಚಮಸಾಲಿ ಮೀಸಲಾತಿಗಾಗಿ ಆಗ್ರಹಿಸಿ ಕೂಡಲಸಂಗಮ ಜಗದ್ಗುರುಗಳವರು ಅಕ್ಟೋಬರ್ 28ರಂದು ಬೆಳಗಾವಿಯ ಸುವರ್ಣ ವಿಧಾನಸೌಧದ ಮುಂಭಾಗದಲ್ಲಿ ಐತಿಹಾಸಿಕ ಉಪವಾಸ ಸತ್ಯಾಗ್ರಹ ಹಮ್ಮಿಕೊಂಡಿದ್ದರು. ಮುಖ್ಯಮಂತ್ರಿಗಳು ಫೋನ್ ಮೂಲಕ ಉಪವಾಸ ಕೈಬಿಡುವಂತೆ ಸಂಪರ್ಕಿಸಿದಾಗ , ನವಂಬರ್ 28 ರ ಒಳಗಾಗಿ ಸರ್ಕಾರ ಸ್ಪಂದಿಸಬೇಕು ಎಂಬ ಕಾಲಮಿತಿಯನ್ನು ಸಿಎಂ ಒಪ್ಪಿದ ಮೇಲೆ ಶ್ರೀಗಳು ಸತ್ಯಾಗ್ರಹವನ್ನು ಅಂತ್ಯಗೊಳಿಸಿದರು. ಅದರಂತೆ ಇಂದು ಭೇಟಿ ಮಾಡಿದಾಗ ಮುಖ್ಯಮಂತ್ರಿಗಳು ಕೆಲವೇ ದಿನಗಳಲ್ಲಿ ಒಳ್ಳೆಯ ನಿರ್ಧಾರವನ್ನು ತೆಗೆದುಕೊಳ್ಳುತ್ತೇವೆ ಎಂದು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎನ್ನಲಾಗಿದೆ.
ಈ ಸಂದರ್ಭದಲ್ಲಿ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ರಾಜ್ಯ ಯುವ ಘಟಕದ ಅಧ್ಯಕ್ಷರಾದ ಸೋಮಶೇಖರ್ ಹಲ್ಯಾಲ್ ಉಪಸ್ಥಿತರಿದ್ದರು.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post