ಚಿಕ್ಕಬಳ್ಳಾಪುರ: ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅನೈತಿಕ ಸಂಬಂಧ ಆಗುತ್ತೆ ಅಂತ ನಾನು ಮೊದಲೇ ಹೇಳಿದ್ದೆ ಎಂದು ವೈದ್ಯಕೀಯ ಶಿಕ್ಷಣ ಮತ್ತು ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಹೇಳಿದ್ದಾರೆ.
ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಅವರ ನಡುವಿನ ಆರೋಪ-ಪ್ರತ್ಯರೋಪಗಳ ಕುರಿತು ಪ್ರತಿಕ್ರಿಯೆ ನೀಡಿದ ಸಚಿವ ಸುಧಾಕರ್, ಜನಾಭಿಪ್ರಾಯದ ವಿರುದ್ಧ ಸರ್ಕಾರ ಆಗುತ್ತಿದೆ ಎಂದು ನಾನು ಹೇಳಿದ್ದೆ. ಈ ಸತ್ಯವನ್ನು ಇಬ್ಬರು ಒಪ್ಪಿಕೊಂಡಿರೋದು ಸಂತೋಷ ತಂದಿದೆ. ಇನ್ನಾದ್ರೂ ಇಬ್ಬರು ಕೂಡ ಅರ್ಥ ಮಾಡಿಕೊಂಡು ಬೇರೆ ಬೇರೆಯಾಗಿರಿ ಎಂದರು.
ನಿಮ್ಮ ಧೋರಣೆಗಳ ಪ್ರಕಾರ ಇಬ್ಬರು ಕೂಡ ಬೇರೆ ಬೇರೆಯಾಗಿ ಜನಗಳ ಬಳಿ ಹೋಗಿ. ಕಾಂಗ್ರೆಸ್-ಜೆಡಿಎಸ್ ಇಬ್ಬರು ಪರಸ್ಪರ ದೂರ ಉಳಿಯಲಿ. ಇದು ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರಿಗೂ ಗೌರವ. ಕಾಂಗ್ರೆಸ್-ಜೆಡಿಎಸ್ ಎಷ್ಟು ಸಲ ಮದುವೆಯಾಗೋದು? ಡೈವೋರ್ಸ್ ಆಗೋದು? ಮದುವೆ ಆಗಿ ಹೋಗಿದ್ದು, ಸಿಎಂ ಆಗಿ ಯಡಿಯೂರಪ್ಪ ಆಗಿದ್ದಾರೆ. ಕುಮಾರಸ್ವಾಮಿ ಅವರಿಗೆ ಒಂದೇ ವರ್ಷ ಸಿಎಂ ಆಗಬೇಕು ಅಂತ ಬರೆದಿತ್ತು. ಇದೆಲ್ಲಾ ವಿಧಿಯಾಟ ಯಾರು ಏನು ಮಾಡೋಕಾಗಲ್ಲ ಎಂದರು.
ಸಚಿವ ಸಂಪುಟ ವಿಸ್ತರಣೆ ವಿಳಂಬ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಸಿಎಂ ಹಾಗೂ ಪ್ರಧಾನ ಕಾರ್ಯದರ್ಶಿಗಳು ಚರ್ಚೆ ಮಾಡಲಿದ್ದಾರೆ. ಸರಿಯಾದ ಸಂದರ್ಭಕ್ಕೆ ಸಚಿವ ಸಂಪುಟ ವಿಸ್ತರಣೆ ಮಾಡಲಿದ್ದಾರೆ ಎಂದರು. ಹೈದರಾಬಾದ್ ಮಹಾನಗರ ಪಾಲಿಕೆ ಚುನಾವಣಾ ಫಲಿತಾಂಶದಲ್ಲಿ ನೀರಿಕ್ಷೆಯಂತೆ ಮತಗಳು ಬಂದಿವೆ. ಮೊದಲು ಶೇ.10 ರಷ್ಟು ಇದ್ದ ಮತಗಳು ಈಗ 36 ರಷ್ಟು ಬಂದಿವೆ. ಟಿಆರ್ಎಸ್ನ ದುರಾಡಳಿತ, ಭ್ರಷ್ಟಾಚಾರ ಕುಟುಂಬ ರಾಜಕಾರಣ ವಿರುದ್ಧ ಜನರು ಸೆಣಸಿದ್ದಾರೆ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸರ್ಕಾರ ಆಡಳಿತಕ್ಕೆ ಬರಲಿದೆ ಎಂದರು.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post