ಗದಗ: ಜಿಲ್ಲೆಯ ಗಜೇಂದ್ರಗಡ ತಾಲೂಕಿನ ನರೇಗಲ್ ಪಟ್ಟಣದಲ್ಲಿ ಒಂದು ಕಾಲದಲ್ಲಿ ಬರ ತಾಂಡವವಾಡ್ತಿತ್ತು. ಜನ ಜಾನುವಾರು ಸೇರಿದಂತೆ ಊರಿಗೆ ಊರೇ ನೀರಿಗಾಗಿ ಪರದಾಡುತ್ತಿತ್ತು. ಗ್ರಾಮದಲ್ಲಿರುವ ಕೆರೆಗಳನ್ನ ತುಂಬಿಸಿಕೊಡಿ ಅಂತ ಗ್ರಾಮಸ್ಥರು ಎಷ್ಟೇ ಬಾರಿ ಮನವಿ ಮಾಡಿದ್ರೂ ಸರ್ಕಾರ ತಲೆ ಕೆಡಿಸಿಕೊಂಡಿರಲಿಲ್ಲ. ಕೊನೆಗೆ ಸರ್ಕಾರವನ್ನ ನಂಬಿ ಪ್ರಯೋಜನವಿಲ್ಲ ಅಂತ ತಾವೇ ಕೆರೆ ಅಭಿವೃದ್ಧಿಗೊಳಿಸಿದ್ದರು. ಪರಿಣಾಮ ಇಂದು ನರೇಗಲ್ನಲ್ಲಿ 4 ಕೆರೆಗಳು ತುಂಬಿವೆ.
ನರೇಗಲ್ ಗ್ರಾಮಸ್ಥರು ಈ ನೀರಿಗಾಗಿ ಭಗೀರಥ ಪ್ರಯತ್ನ ಮಾಡಿದ್ದಾರೆ. ಅದರ ಫಲವೇ ತುಂಬಿರುವ ಈ ಕೆರೆಗಳು. ಈ ಗ್ರಾಮದಲ್ಲಿ ಹಲವಾರು ವರ್ಷಗಳ ಹಿಂದೆ ಸಾಕಷ್ಟು ನೀರಿನ ಸಮಸ್ಯೆ ಇತ್ತು. ಗ್ರಾಮದಲ್ಲಿನ ಎಲ್ಲಾ ಕೆರೆಗಳು ಬರಿದಾಗಿ, ನೀರಿಲ್ಲದೇ ಜನ-ಜಾನುವಾರು ಪರದಾಡುವಂತಾಗಿತ್ತು. ಹೀಗಾಗಿ ಇಲ್ಲಿನ ಕೆಲ ಮುಖಂಡರು ಮತ್ತು ರೈತರು ತಾವೇ ಖರ್ಚು ಮಾಡಿ ಕೆರೆಗಳ ಹೂಳು ತೆಗಿಸಿದ್ದಾರೆ. ಗ್ರಾಮದ ಅಣ್ಣದಾನೇಶ್ವರ ಸ್ವಾಮೀಜಿ ಸಹ ರೈತರ ಪ್ರಯತ್ನಕ್ಕೆ ಸಾಥ್ ಕೊಟ್ಟಿದ್ದರು. ಹೀಗೆ ಸುಮಾರು 6 ತಿಂಗಳು ಕೆರೆಯ ಹೂಳು ತೆಗೆದ ಪ್ರತಿಫಲವಾಗಿ ಗಂಗೆ ಪ್ರತ್ಯಕ್ಷವಾಗಿದ್ದಾಳೆ. ನಾಲ್ಕು ಕೆರೆಗಳು ಭರ್ತಿಯಾಗಿವೆ.
ಸದ್ಯ ಗ್ರಾಮದಲ್ಲಿನ ಅಂತರ್ಜಲದಿಂದ ಬೋರ್ವೆಲ್ಗಳು ಕೂಡ ಸಂಪೂರ್ಣ ತುಂಬಿದ್ದು, ಈ ಮೊದಲು 15 ದಿನಗಳಿಗೊಮ್ಮೆ ಬರುತ್ತಿದ್ದ ನೀರು ಈಗ ಪ್ರತಿ ದಿನ ಅಥವಾ ಎರಡು ದಿನಕ್ಕೊಮ್ಮೆ ಬರ್ತಿದೆ. ಇದ್ರ ಜೊತೆಗೆ ಅಕ್ಕಪಕ್ಕದ ಜಮೀನಿನ ಬೋರ್ ವೆಲ್ಗಳೂ ರೀಚಾರ್ಜ್ ಆಗಿವೆ.
ಒಟ್ಟಾರೆ ಯಾವ ಸರ್ಕಾರಗಳೂ ಮಾಡದ ಕೆಲಸವನ್ನ ತಾವೇ ಮಾಡಿ ತಮ್ಮ ದಾಹ ನೀಗಿಸಿಕೊಳ್ಳುವ ಮೂಲಕ ಈ ಗ್ರಾಮದ ರೈತರು, ಇತರರಿಗೆ ಮಾದರಿಯಾಗಿದ್ದಾರೆ.
ವರದಿ: ಸುರೇಶ್ ಕಡ್ಲಿಮಟ್ಟಿ, ಗದಗ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post