ದೇಶದಾದ್ಯಂತ ಕೊರೊನಾ ಲಸಿಕೆ ವಿತರಣೆಗೆ ಕ್ಷಣಗಣನೆ ಆರಂಭವಾಗಿದೆ. ದೇಶದೆಲ್ಲೆಡೆ ಬಹಳಷ್ಟು ಕಡೆ ಈಗಾಗ್ಲೇ ವ್ಯಾಕ್ಸಿನೇಷನ್ ಡ್ರೈ ರನ್ ಕೂಡ ಮಾಡಲಾಗ್ತಿದ್ದು, ಕೆಲವೇ ದಿನಗಳಲ್ಲಿ ಮೊದಲ ಹಂತದ ಲಸಿಕಾ ವಿತರಣೆ ನಡೆಯುತ್ತೆ. ಆದರೂ ಕೂಡ ಲಸಿಕೆ ಬಗ್ಗೆ ಜನತೆಗೆ ಒಂದಿಷ್ಟು ಅನುಮಾನಗಳಿವೆ. ಲಸಿಕೆ ಫ್ರಿಯಾಗಿ ಸಿಗುತ್ತಾ..? ಎಷ್ಟು ಕಾಸು ಕೊಟ್ಟು ಲಸಿಕೆ ಖರೀದಿ ಮಾಡಬೇಕು..? ಹೀಗೆ ಸಾಕಷ್ಟು ಪ್ರಶ್ನೆಗಳು ಕಾಡ್ತಿತ್ತು.
ದೇಶದಾದ್ಯಂತ ನಿನ್ನೆಯಿಂದ ಆರಂಭವಾಗಿದೆ ಕೋವಿಡ್ ಡ್ರೈ ರನ್
ಲಸಿಕೆ ಅಭಿವೃದ್ಧಿಯಾಗದೇ ಕೊರೊನಾ ಮಹಾಮಾರಿಯನ್ನ ಮಟ್ಟ ಹಾಕೋಕೆ ಸಾಧ್ಯವೇ ಇಲ್ಲ. ಸದ್ಯ ವಿಶ್ವದ ಬಹಳಷ್ಟು ಬಯೋಟೆಕ್ ಕಂಪನಿಗಳು, ಸಾಕಷ್ಟು ಮಂದಿ ವಿಜ್ಞಾನಿಗಳು ಸತತ ಪರಿಶ್ರಮ ಹಾಕಿ ವ್ಯಾಕ್ಸಿನ್ ಸಿದ್ಧಪಡಿಸಿದ್ದಾರೆ. ಅವುಗಳ ಪೈಕಿ ಕೆಲ ವ್ಯಾಕ್ಸಿನ್ಗಳು ಬಳಕೆಯಲ್ಲಿದ್ರೆ ಇನ್ನೂ ಕೆಲವು ಲಸಿಕೆಗಳು ಪ್ರಯೋಗದ ಅಂತಿಮ ಹಂತದಲ್ಲಿವೆ. ಕೊರೊನಾದಿಂದ ಅತೀ ಹೆಚ್ಚು ಎಫೆಕ್ಟ್ ಆಗಿರೋ ದೇಶಗಳ ಪೈಕಿ ಭಾರತ ಎರಡನೇ ಸ್ಥಾನದಲ್ಲಿದೆ. ಹೇಳಿ ಕೇಳಿ ದೇಶದಲ್ಲಿನ ಜನಸಂಖ್ಯೆ ಕೂಡ ಜಾಸ್ತಿನೆ ಇದೆ. ಹೀಗಿರುವಾಗ ಇಲ್ಲಿ ವ್ಯಾಕ್ಸಿನ್ ವಿತರಣೆಯನ್ನ ತುಂಬಾನೇ ಮುತುವರ್ಜಿಯಿಂದ ಮಾಡಬೇಕು. ಇದಕ್ಕೆ ಸರ್ಕಾರ ಎಲ್ಲಾ ರೀತಿಯಿಂದಲೂ ಸಿದ್ಧತೆ ಮಾಡಿಕೊಳ್ತಿದೆ. ದೇಶದಲ್ಲಿ ನಿನ್ನೆಯಿಂದ ಕೋವಿಡ್ ಡ್ರೈ ರನ್ ಕೂಡ ಆರಂಭವಾಗಿದೆ.
ದೇಶದಲ್ಲಿ ಯಾರಿಗೆ ಫ್ರೀಯಾಗಿ ಸಿಗುತ್ತೆ ಲಸಿಕೆ..?
ಸದ್ಯ ದೇಶದಲ್ಲಿ ಕೋವಿಡ್ ಡ್ರೈ ರನ್ ಆರಂಭವಾಗಿದ್ದು, ಈ ತಿಂಗಳ ಮಧ್ಯದಲ್ಲಿ ಅಥವಾ ಕೊನೆಯಲ್ಲಿ ಲಸಿಕೆ ವಿತರಣೆ ಪ್ರಕ್ರಿಯೆ ಆರಂಭವಾಗಲಿದೆ. ಈ ಬಗ್ಗೆ ಖುದ್ದು ಕೇಂದ್ರ ಆರೋಗ್ಯ ಸಚಿವಾಲಯವೇ ಖಚಿತಪಡಿಸಿದ್ದು, ಮೊದಲ ಹಂತದಲ್ಲಿ ಯಾರು ಯಾರಿಗೆ ಲಸಿಕೆ ಕೊಡಬೇಕು ಎಂಬ ಪಟ್ಟಿ ಸಿದ್ಧಮಾಡಿಕೊಂಡಿದೆ. ಮೊದಲನೇ ಹಂತದ ವ್ಯಾಕ್ಸಿನೇಷನ್ನಲ್ಲಿ, ಜೀವದ ಹಂಗು ತೊರೆದು ಹಗಲಿರುಳು ದುಡಿಯುತ್ತಿರು ವೈದ್ಯರು, ನರ್ಸ್ ಹಾಗೂ ಇತರೆ ಆರೋಗ್ಯ ಸಿಬ್ಬಂದಿಗೆ ಲಸಿಕೆ ವಿತರಣೆ ಮಾಡಲಾಗುತ್ತೆ. ಈಗಾಗಲೇ ಫಲಾನುಭವಿಗಳ ಪಟ್ಟಿಯನ್ನ ಸರ್ಕಾರ ಸಿದ್ಧಪಡಿಸಿಕೊಂಡಿದೆ. ಅಂದಾಜಿನ ಪ್ರಕಾರ ದೇಶದಲ್ಲಿ ಒಟ್ಟು 1 ಕೋಟಿ ಆರೋಗ್ಯ ಕಾರ್ಯಕರ್ತರಿದ್ದಾರೆ. ಫ್ರಂಟ್ಲೈನ್ ವರ್ಕರ್ಸ್ಗೆ ಕೂಡ ಮೊದಲ ಹಂತದಲ್ಲೇ ಲಸಿಕೆ ಕೊಡಲಾಗ್ತಿದ್ದು ಒಟ್ಟು 2 ಕೋಟಿ ಕಾರ್ಯಕರ್ತರಿದ್ದಾರೆ. 50 ವರ್ಷ ಮೇಲ್ಪಟ್ಟ 27 ಕೋಟಿ ಮಂದಿಗೆ ವ್ಯಾಕ್ಸಿನೇಷನ್ ಮಾಡಲಾಗುತ್ತೆ.ಸದ್ಯ ಮೊದಲ ಹಂತದಲ್ಲಿ ಒಟ್ಟು 30ಕೋಟಿ ಮಂದಿಗೆ ಲಸಿಕೆ ಕೊಡೋಕೆ ನಿರ್ಧಾರ ಮಾಡಿದ್ದು, ಎಲ್ಲರಿಗೂ ಉಚಿತವಾಗಿಯೇ ವ್ಯಾಕ್ಸಿನ್ ಕೊಡೋದಾಗಿ ಕೇಂದ್ರ ಆರೋಗ್ಯ ಸಚಿವಾಲಯ ಅನೌನ್ಸ್ ಮಾಡಿದೆ.
ಲಸಿಕೆ ಬಗ್ಗೆ ಭಯ ಬೇಡ ಎಂದ ಕೇಂದ್ರ ಆರೋಗ್ಯ ಸಚಿವ ಹರ್ಷ್ವರ್ಧನ್
ದೇಶದಲ್ಲಿ ಉಚಿತ ಲಸಿಕೆ ಕೊಡೋದಾಗಿ ಹೇಳಿ ಜನರಿಗಿದ್ದ ದೊಡ್ಡ ಅನುಮಾನವೊಂದನ್ನ ಸಚಿವ ಹರ್ಷವರ್ಧನ್ ಪರಿಹಾರ ಮಾಡಿದ್ದಾರೆ. ಈಗಾಗ್ಲೇ ಬೇರೆ ಬೇರೆ ದೇಶದಲ್ಲಿ ಎರಡು ಲಸಿಕೆಗಳು ಬಳಕೆಯಲ್ಲಿವೆ. ಸದ್ಯ ಆಸ್ಟ್ರಾಝೆನೆಕಾ ಲಸಿಕೆಗೂ ಕೂಡ ತುರ್ತು ಬಳಕೆಗೆ ಅನುಮತಿ ಕೊಟ್ಟಿದೆ. ಆದ್ರೆ ಕೆಲವು ಲಸಿಕೆಗಳಿಂದ ಸೈಡ್ ಎಫೆಕ್ಟ್ ಕಾಣಿಸಿಕೊಳ್ತಿದ್ದು, ದೇಶದಲ್ಲಿ ಬಳಕೆ ಮಾಡುವ ಲಸಿಕೆಯೂ ಸೈಡ್ ಎಫೆಕ್ಟ್ ಉಂಟುಮಾಡಲಿದ್ಯಾ ಅನ್ನೋ ಮಾತುಗಳು ಕೇಳಿ ಬರ್ತಿವೆ.
ಇದಕ್ಕೆ ಉತ್ತರ ಕೊಟ್ಟಿರೋ ಹರ್ಷವರ್ಧನ್, ಲಸಿಕೆ ಬಗ್ಗೆ ಯಾವುದೇ ರೀತಿಯ ಹೆದರಿಕೆಯೂ ಬೇಡ. ಲಸಿಕೆಯ ಸಂಪೂರ್ಣ ಮಾಹಿತಿ ಪಡೆದೇ ವ್ಯಾಕ್ಸಿನೇಷನ್ ಮಾಡಲಾಗುವುದು ಎಂದಿದ್ದಾರೆ. ಅಲ್ಲದೇ ಆರಂಭದ ದಿನಗಳಲ್ಲಿ ಪೋಲಿಯೋ ಲಸಿಕೆ ಬಗ್ಗೆ ಕೂಡ ಹೀಗೆ ಮಾತುಗಳು ಕೇಳಿ ಬಂದಿದ್ವು. ಸಾಕಷ್ಟು ರೂಮರ್ಸ್ ಹಬ್ಬಿತ್ತು. ಆದ್ರೆ ಆ ಲಸಿಕೆ ಹೇಗೆ ಕ್ಲಿಕ್ ಆಯ್ತು ಅನ್ನೋದು ನಿಮಗೆ ಗೊತ್ತಿದೆ. ಅಂತೆಯೇ ಕೊರೊನಾ ಲಸಿಕೆ ಕೂಡ ಆಗಲಿದೆ ಎಂದು ಹೇಳಿದ್ದಾರೆ.
ಸದ್ಯ ದೇಶದಲ್ಲಿ 1 ಕೋಟಿ ಮಂದಿಯಲ್ಲಿ ಕೊರೊನಾ ಕಾಣಿಸಿಕೊಂಡಿದ್ದು,1.5 ಲಕ್ಷ ಮಂದಿ ಕೋವಿಡ್ಗೆ ಬಲಿಯಾಗಿದ್ದಾರೆ. ದೇಶದಲ್ಲಿಯೇ ಎರಡು ವಿಶ್ವಾಸಾರ್ಹ ಲಸಿಕೆಗಳು ಸಿದ್ಧವಾಗ್ತಿದೆ. ಒಂದು ರೀತಿಯಲ್ಲಿ ಎಷ್ಟು ಬೇಗನೆ ಲಸಿಕೆ ಸಿಗುತ್ತೊ ಅಷ್ಟು ಒಳ್ಳೆಯದು. ಇದೇ ಕಾರಣಕ್ಕೆ ಕೊರೊನಾ ಲಸಿಕೆಯನ್ನು ಉಚಿತವಾಗಿ ನೀಡುತ್ತಿರುವುದಾಗಿ ಸಚಿವ ಡಾ.ಹರ್ಷವರ್ಧನ್ ಸ್ಪಷ್ಟಪಡಿಸಿದ್ದಾರೆ. ಈ ವ್ಯಾಕ್ಸಿನ್ಗೆ ಯಾವುದೇ ರೀತಿಯ ಶುಲ್ಕವಿರುವುದಿಲ್ಲ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಾತ್ರವಲ್ಲ, ಇಡೀ ದೇಶಾದ್ಯಂತ ಉಚಿತ ಕೊರೊನಾ ಲಸಿಕೆ ನೀಡಲಾಗುತ್ತದೆ ಎಂದು ಹೇಳಿದ್ದಾರೆ. ಈ ಮೂಲಕ ಕೋವಿಡ್ ವ್ಯಾಕ್ಸಿನ್ ಬಗ್ಗೆ ಇದ್ದ ಎಲ್ಲಾ ವದಂತಿಗಳಿಗೆ ಸಚಿವರು ತೆರೆ ಎಳೆದಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post