ಚಿಕ್ಕಬಳ್ಳಾಪುರ: ಪೊಲೀಸ್ ಅಧಿಕಾರಿಗಳಿಗೆ ಕೇಂದ್ರ ಸರ್ಕಾರದ ಗೃಹ ಸಚಿವಾಲಯ ಕೊಡುವ 2019ನೇ ಸಾಲಿನ ರಾಷ್ಟ್ರಪತಿ ಪದಕಕ್ಕೆ ಕರ್ನಾಟಕದಿಂದ 6 ಅಧಿಕಾರಿಗಳು ಆಯ್ಕೆಯಾಗಿದ್ದಾರೆ. ಅಂತಹ ದಕ್ಷ ಅಧಿಕಾರಿಗಳ ಪಟ್ಟಿಯಲ್ಲಿ ಚಿಕ್ಕಬಳ್ಳಾಪುರ ಉಪವಿಭಾಗದ ಡಿವೈಎಸ್ಪಿ ಕೆ.ರವಿಶಂಕರ್ ಸಹ ಒಬ್ಬರಾಗಿದ್ದಾರೆ.
ಗೌರಿ ಲಂಕೇಶ್ ಪ್ರಕರಣದ ಆರೋಪಿಗಳನ್ನು ಪತ್ತೆಹಚ್ಚಿದ ಐಪಿಎಸ್ ಅಧಿಕಾರಿ ಎಮ್.ಎನ್ ಚೇತನ್ ಸೇರಿದಂತೆ 6 ವಿವಿಧ ಱಂಕ್ಗಳಲ್ಲಿರುವ ಪೊಲೀಸ್ ಅಧಿಕಾರಿಗಳಿಗೆ ಇತ್ತೀಚೆಗೆ ಬೆಂಗಳೂರು ರಾಜಭವನದಲ್ಲಿ ರಾಜ್ಯಪಾಲ ವಜೂಭಾಯಿ ವಾಲ ಪ್ರಶಸ್ತಿ ನೀಡಿ ಗೌರವಿಸಿದರು. ಆ ಸಮಾರಂಭದಲ್ಲಿ ಪ್ರಶಸ್ತಿಯನ್ನ ಸ್ವೀಕರಿಸಿದ ಚಿಕ್ಕಬಳ್ಳಾಪುರದ ಡಿವೈಎಸ್ಪಿ ರವಿಶಂಕರ್ ಮೂಲತಃ ಬನ್ನರುಘಟ್ಟ ತಾಲೂಕಿಗೆ ಸೇರಿದವರಾಗಿದ್ದಾರೆ. ಇವರು 1994ರಲ್ಲಿ ಸೇವೆಗೆ ಪಾದಾರ್ಪಣೆ ಮಾಡಿದ್ದು ಕೊಡಗು, ರಾಮನಗರ, ಬೆಂಗಳೂರು, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ.
ರಾಜ್ಯದಿಂದ ಕೇರಳಕ್ಕೆ ಸಾಗಾಟ ಮಾಡುತ್ತಿದ್ದ ಕೋಟಾ ನೋಟು ಕಳ್ಳರನ್ನ ಬಂಧಿಸಿರುವ ಇವರು 2004-05ರಲ್ಲಿ ಕಾಡುಗಳ್ಳ ವೀರಪ್ಪನ್ನನ್ನು ಹಿಡಿಯಲು ಎಸ್.ಟಿ.ಎಫ್ ಕಾರ್ಯಾಚರಣೆಯಲ್ಲಿ ತಮಿಳುನಾಡಿನ ಲೂಯಿಸನ್ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು.
ಮಾಗಡಿ ಠಾಣಾ ವ್ಯಾಪ್ತಿಯಲ್ಲಿ ಜರುಗಿದ ದರೋಡೆ ಪ್ರಕರಣ ಬೇಧಿಸಿ ಬಂಧಿತರಿಂದ ₹4 ಲಕ್ಷ ಮೊತ್ತದ ಚಿನ್ನಾಭರಣ ರಿಕವರಿ ಮಾಡಿದ್ದಾರೆ. ರಾಮನಗರದಲ್ಲಿ ನಡೆಯುತ್ತಿದ್ದ ಮಾನವ ಕಳ್ಳಸಾಗಣೆ ಪ್ರಕರಣವನ್ನು ಪತ್ತೆ ಹಚ್ಚಿ 14 ಜನ ಬಾಂಗ್ಲಾದೇಶಿಗರನ್ನು ರಕ್ಷಿಸಿದ್ದಾರೆ. ಇವರಿಗೆ ರಾಷ್ಟ್ರಪತಿ ಪ್ರಶಸ್ತಿ ಸಿಕ್ಕಿರುವುದು ಜಿಲ್ಲೆಗೆ ಹೆಮ್ಮೆಯ ವಿಚಾರವಾಗಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post