ಅಮೆರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಜೋ ಬೈಡನ್ ಗೆಲುವನ್ನ ವಿರೋಧಿಸಿ ಡೊನಾಲ್ಡ್ ಟ್ರಂಪ್ ಬೆಂಬಲಿಗರು ಕಳೆದ ವಾರ ಸಂಸತ್ ಕಟ್ಟಡದ ಮೇಲೆ ಮುತ್ತಿಗೆ ಹಾಕಿದ್ದು, ವಿಶ್ವದಾದ್ಯಂತ ಖಂಡನೆಗೆ ಗುರಿಯಾಗಿತ್ತು. ಇದರ ಬೆನ್ನಲ್ಲೇ ಟ್ರಂಪ್ ಅವರ ಟ್ವಿಟರ್ ಖಾತೆಯನ್ನ ಶಾಶ್ವತವಾಗಿ ರದ್ದು ಮಾಡಲಾಗಿದೆ. ಈ ದಿಟ್ಟ ನಿರ್ಧಾರವನ್ನ ಕೈಗೊಂಡಿದ್ದು ಭಾರತೀಯ ಮೂಲದವರಾದ, ಟ್ವಿಟರ್ನ ಉನ್ನತ ಅಧಿಕಾರಿ/ಲಾಯರ್ ವಿಜಯಾ ಗಡ್ಡೆ.
ಡೊನಾಲ್ಡ್ ಟ್ರಂಪ್ ಇತ್ತೀಚೆಗೆ ಮಾಡಿದ್ದ ಕೆಲವು ಟ್ವೀಟ್ಗಳು ಕ್ಯಾಪಿಟಲ್ ಬಿಲ್ಡಿಂಗ್ ಮೇಲಿನ ದಾಳಿಗೆ ಪ್ರಚೋದನೆ ನೀಡಿದೆ ಅಂತ ಕಳೆದ ಶುಕ್ರವಾರ ಅವರ ಖಾತೆಯನ್ನ ಟ್ವಿಟರ್ 24 ಗಂಟೆಗಳವರೆಗೆ ಸಸ್ಪೆಂಡ್ ಮಾಡಿತ್ತು. ಅದಾಗಿಯೂ ಟ್ರಂಪ್ ತಮ್ಮ ಪ್ರಚಾರ ಟೀಂನ ಖಾತೆ ಹಾಗೂ ಅಮೆರಿಕಾ ಅಧ್ಯಕ್ಷರ ಅಧಿಕೃತ ಖಾತೆಯಲ್ಲಿ ಟ್ವೀಟ್ ಮಾಡೋದು ಮುಂದುವರೆಸಿದ್ದರು. ಹೀಗಾಗಿ ಅವರ ಟ್ವೀಟ್ಗಳು ಮತ್ತಷ್ಟು ಪ್ರಚೋದನೆಗೆ ಎಡೆ ಮಾಡಿಕೊಡಲಿದೆ ಎಂದು ಟ್ರಂಪ್ ಅವರ ಖಾಸಗಿ ಟ್ವಿಟರ್ ಖಾತೆಯನ್ನ ಖಾಯಂ ಆಗಿ ಬ್ಲಾಕ್ ಮಾಡಲಾಗಿದೆ.
ವಿಜಯಾ ಗಡ್ಡೆ ಟ್ವಿಟರ್ನ ಲೀಗಲ್ ಪಾಸಿಸಿ ಆ್ಯಂಡ್ ಟ್ರಸ್ಟ್ ಮತ್ತು ಸೇಫ್ಟಿ ಇಶ್ಯೂಸ್ನ ಮುಖ್ಯಸ್ಥೆ. ಮುಂದೆ ನಡೆಯಬಹುದಾದ ಹಿಂಸಾಚಾರವನ್ನು ತಡೆಯುವ ಉದ್ದೇಶದಿಂದ ಟ್ರಂಪ್ ಅವರ ಖಾತೆಯನ್ನ ಖಾಯಂ ಆಗಿ ಅಮಾನತುಗೊಳಿಸಲಾಗಿದೆ ಎಂದು ವಿಜಯಾ ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ.
45 ವರ್ಷದ ವಿಜಯಾ ಭಾರತದಲ್ಲಿ ಜನಿಸಿ, ತಮ್ಮ ಬಾಲ್ಯದಲ್ಲೇ ಅಮೆರಿಕಾಗೆ ಶಿಫ್ಟ್ ಆಗಿದ್ರು. ಇವರ ತಂದೆ ಗಲ್ಫ್ ಆಫ್ ಮೆಕ್ಸಿಕೋದಲ್ಲಿ ಕೆಮಿಕಲ್ ಇಂಜಿನಿಯರ್ ಆಗಿ ಕೆಲಸ ಮಾಡಿದ್ದರು. ವಿಜಯಾ ಟೆಕ್ಸಾಸ್ನಲ್ಲಿ ಬೆಳೆದವರು. ಬಳಿಕ ಇವರ ಕುಟುಂಬ ಈಸ್ಟ್ ಕೋಸ್ಟ್ಗೆ ಶಿಫ್ಟ್ ಆಯ್ತು. ಇಲ್ಲಿನ ನ್ಯೂ ಜೆರ್ಸಿಯಲ್ಲಿ ವಿಜಯಾ ತಮ್ಮ ಹೈಸ್ಕೂಲ್ ವಿದ್ಯಾಭ್ಯಾಸ ಮುಗಿಸಿದ್ರು.
ಕಾರ್ನೆಲ್ ವಿಶ್ವವಿದ್ಯಾಲಯ ಮತ್ತು ನ್ಯೂಯಾರ್ಕ್ ಯೂನಿವರ್ಸಿಟಿ ಲಾ ಸ್ಕೂಲ್‌ನ ಪದವೀಧರರಾದ ವಿಜಯಾ, 2011ರಲ್ಲಿ ಸೋಷಿಯಲ್-ಮೀಡಿಯಾ ಕಂಪನಿ ಟ್ವಿಟರ್ಗೆ ಕೆಲಸಕ್ಕೆ ಸೇರಿದ್ರು. ಇದಕ್ಕೂ ಮೊದಲು ಟೆಕ್ ಸ್ಟಾರ್ಟ್ಅಪ್‌ಗಳೊಂದಿಗೆ ಕೆಲಸ ಮಾಡುವ ಬೇ ಏರಿಯಾ ಮೂಲದ ಕಾನೂನು ಸಂಸ್ಥೆಯಲ್ಲಿ ಸುಮಾರು 10 ವರ್ಷ ಕಾರ್ಯನಿರ್ವಹಿಸಿದ್ದರು.
ಕಾರ್ಪೊರೇಟ್ ವಕೀಲರಾಗಿ ವಿಜಯಾ ಸ್ವತಃ ನೀತಿಗಳನ್ನು ರೂಪಿಸುವ ಹಿನ್ನೆಲೆಯಲ್ಲಿ ಕಾರ್ಯನಿರ್ವಹಿಸುತ್ತಾರೆ. ಕಳೆದ ದಶಕದಿಂದೀಚೆಗೆ ಟ್ವಿಟರ್ ಅನ್ನು ರೂಪಿಸಲು ಇವರ ಪ್ರಭಾವ ಬಹಳಷ್ಟು ಸಹಾಯ ಮಾಡಿದೆ. ಜಾಗತಿಕ ರಾಜಕಾರಣದಲ್ಲಿ ಟ್ವಿಟ್ಟರ್ ಪಾತ್ರ ಹೆಚ್ಚಾದಂತೆ, ವಿಜಯಾ ಅವರ ಪಾತ್ರವೂ ಹೆಚ್ಚಾಗಿದೆ ಅಂತ ವರದಿಯಾಗಿದೆ.
ಟ್ವಿಟರ್ ಸಹಸಂಸ್ಥಾಪಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಾಕ್ ಡಾರ್ಸೆ ಕಳೆದ ವರ್ಷ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿಯಾದಾಗ ವಿಜಯಾ ಅವರು ಓವಲ್ ಕಚೇರಿಗೆ ಬಂದಿದ್ದರು. ಮತ್ತು 2018ರ ನವೆಂಬರ್‌ನಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾದಾಗ ಕೂಡ ವಿಜಯಾ ಡಾರ್ಸೆ ಅವರೊಂದಿಗೆ ಉಪಸ್ಥಿತರಿದ್ದರು.
ವಿಜಯಾ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಗಮನ ಸೆಳೆದಿದ್ದಾರೆ. ಅಮೆರಿಕಾದ ಹಲವು ಪ್ರಮುಖ ಪತ್ರಿಕೆಗಳು ಇವರ ಬಗ್ಗೆ ವರದಿ ಮಾಡಿವೆ. ದಿ ಪೊಲಿಟಿಕೊ ಪತ್ರಿಕೆ ವಿಜಯಾ ಅವರನ್ನು ನೀವು ಎಂದೂ ಕೇಳಿರದ ಅತ್ಯಂತ ಶಕ್ತಿಶಾಲಿ ಸೋಷಿಯಲ್ ಮೀಡಿಯಾ ಎಕ್ಸಿಕ್ಯೂಟಿವ್ ಎಂದು ಬಣ್ಣಿಸಿದೆ. ಇದೀಗ ಟ್ರಂಪ್ ಖಾತೆಯನ್ನ ಪರ್ಮನೆಂಟ್ ಆಗಿ ರದ್ದು ಮಾಡುವ ದಿಟ್ಟ ನಿರ್ಧಾರದ ಮೂಲಕ ವಿಜಯಾ ಮತ್ತೆ ವಿಶ್ವದಾದ್ಯಂತ ಸುದ್ದಿಯಾಗಿದ್ದಾರೆ.
The account of @realDonaldTrump has been permanently suspended from Twitter due to the risk of further violence. We've also published our policy enforcement analysis – you can read more about our decision here: https://t.co/fhjXkxdEcw
— Vijaya Gadde (@vijaya) January 8, 2021
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post