ವಿಶ್ವದಾದ್ಯಂತ ಕೋಟ್ಯಾಂತರ ಜನರು ಪ್ರತಿನಿತ್ಯ ಸಂವಹನಕ್ಕೆ ಬಳಸುವ ವಾಟ್ಸ್ಆ್ಯಪ್ ಇತ್ತೀಚೆಗೆ ತನ್ನ ಪ್ರೈವೆಸಿ ಪಾಲಿಸಿಯನ್ನ ಬದಲಾಯಿಸಿ ವಿವಾದಕ್ಕೀಡಾಗಿದೆ. ಇದರ ಬೆನ್ನಲ್ಲೇ ಈಗ ಮತ್ತೆ ವಾಟ್ಸ್ಆ್ಯಪ್ ಗ್ರೂಪ್ಗಳ ಮಾಹಿತಿ ಗೂಗಲ್ ಸರ್ಚ್ನಲ್ಲಿ ಸಿಗುತ್ತಿದೆ ಅನ್ನೋ ಅಂಶ ಬೆಳಕಿಗೆ ಬಂದಿದ್ದು, ಬಳಕೆದಾರರಲ್ಲಿ ಆತಂಕ ಶುರುವಾಗಿದೆ.
ಹೌದು. ಈ ಹಿಂದೆಯೂ ಇಂಥದ್ದೊಂದು ಸಮಸ್ಯೆ ಎದುರಾದಾಗ ಅದನ್ನ ಸರಿಪಡಿಸಲಾಗಿದೆ ಎನ್ನಲಾಗಿತ್ತು. ಆದ್ರೀಗ ಮತ್ತೆ ವಾಟ್ಸ್ಆ್ಯಪ್, ಗ್ರೂಪ್ ಚಾಟ್ ಆಹ್ವಾನಗಳನ್ನ ಇಂಡೆಕ್ಸಿಂಗ್ ಮಾಡಲು ಅನುಮತಿಸಿದ್ದು, ಖಾಸಗಿ ಗ್ರೂಪ್ಗಳು ಇಂಟರ್ನೆಟ್ನಲ್ಲಿ ಲಭ್ಯವಾಗುವಂತೆ ಹಾಗೂ ಗೂಗಲ್ನಲ್ಲಿ ಕೇವಲ ಸರ್ಚ್ ಮಾಡಿದ್ರೆ ಸಾಕು ಆ ಲಿಂಕ್ಗಳು ಯಾರಿಗೆ ಬೇಕಾದ್ರೂ ಸಿಗುವಂತೆ ಆಗಿದೆ ಎಂದು ವರದಿಯಾಗಿದೆ.
ಲಿಂಕ್ ಲಭ್ಯವಾಗೋದ್ರಿಂದ ಏನಾಗುತ್ತೆ?
ಯಾರು ಬೇಕಾದ್ರೂ ಗೂಗಲ್ನಲ್ಲಿ ಸಿಗುವ ಈ ಲಿಂಕ್ನಿಂದ ನಿಮ್ಮ ಖಾಸಗಿ ವಾಟ್ಸ್ಆ್ಯಪ್ ಗ್ರೂಪಿಗೆ ಜಾಯಿನ್ ಆಗಬಹುದು. ಆಗ ನೀವು ಯಾವ ವಿಚಾರದ ಬಗ್ಗೆ ಏನೆಲ್ಲಾ ಚಾಟ್ ಮಾಡ್ತಿದ್ದೀರ ಎಂಬ ಸಂಪೂರ್ಣ ಮಾಹಿತಿ , ಗುಂಪಿನ ಪ್ರೊಫೈಲ್ ಫೋಟೋ ಹಾಗೂ ನಿಮ್ಮ ಗುಂಪಿನಲ್ಲಿ ಇರುವವರ ಫೋನ್ ನಂಬರ್ಗಳ ಮಾಹಿತಿ ಬೇರೆಯವರಿಗೆ ಸಿಗಲಿದೆ. ಗುಂಪಿನಲ್ಲಿ ಹೊಸದಾಗಿ ಸೇರ್ಪಡೆಯಾದ ವ್ಯಕ್ತಿ ಬಗ್ಗೆ ಯಾರೂ ಗಮನ ಹರಿಸದೇ ಹೋದರೆ ಆ ವ್ಯಕ್ತಿ ಸೈಲೆಂಟ್ ಆಗಿ ಕೆಲ ಕಾಲ ಗುಂಪಿನಲ್ಲಿದ್ದು ನಿಮ್ಮ ಚಾಟ್ಸ್ ಓದುತ್ತಿರಬಹುದು. ಒಂದು ವೇಳೆ ಆ ವ್ಯಕ್ತಿಯನ್ನ ಗುಂಪಿನಿಂದ ತೆಗೆದರೂ ಕೂಡ, ಈಗಾಗಲೇ ಗುಂಪಿನಲ್ಲಿದ್ದವರ ಫೋನ್ ನಂಬರ್ ಹಾಗೂ ಪ್ರೊಫೈಲ್ ಫೋಟೋ ಆತನ/ಆಕೆಯ ಬಳಿ ಇರುತ್ತದೆ.
ವಾಟ್ಸ್ಆ್ಯಪ್ ಹೇಳಿಕೆ
ಮಾರ್ಚ್ 2020 ರಿಂದ, ವಾಟ್ಸ್ಆ್ಯಪ್ನ ಎಲ್ಲಾ ಡೀಪ್ ಲಿಂಕ್ ಪುಟಗಳಲ್ಲಿ ನೋ ಇಂಡೆಕ್ಸ್ ಟ್ಯಾಗ್ ಸೇರಿಸಿದೆ. ಗೂಗಲ್ ಪ್ರಕಾರ, ಅವುಗಳನ್ನು ಇಂಡೆಕ್ಸಿಂಗ್ನಿಂದ ಹೊರಗಿಡಲಾಗುತ್ತದೆ. ಈ ಚಾಟ್‌ಗಳನ್ನು ಇಂಡೆಕ್ಸ್ ಮಾಡದಂತೆ ನಾವು ಗೂಗಲ್ಗೆ ಹೇಳಿದ್ದೇವೆ ಅಂತ ವಾಟ್ಸ್ಆ್ಯಪ್ ತಿಳಿಸಿದೆ. ಯಾರಾದರೂ ಗುಂಪಿಗೆ ಸೇರಿದಾಗ, ಆ ಗುಂಪಿನಲ್ಲಿರುವ ಪ್ರತಿಯೊಬ್ಬರೂ ನೋಟಿಸ್ ಸ್ವೀಕರಿಸುತ್ತಾರೆ ಮತ್ತು ಗುಂಪಿನ ಅಡ್ಮಿನ್ ಯಾವುದೇ ಸಮಯದಲ್ಲಿ ಗ್ರೂಪ್ ಇನ್ವೈಟ್ ಲಿಂಕ್ ಹಿಂತೆಗೆದುಕೊಳ್ಳಬಹುದು ಅಥವಾ ಬದಲಾಯಿಸಬಹುದು. ಇಂಟರ್ನೆಟ್ನಲ್ಲಿ ಹುಡುಕಬಹುದಾದ ಅಥವಾ ಸಾರ್ವಜನಿಕ ಚಾನೆಲ್‌ಗಳಲ್ಲಿ ಹಂಚಲಾದ ಇತರೆ ವಿಷಯಗಳಂತೆ, ಸಾರ್ವಜನಿಕವಾಗಿ ಪೋಸ್ಟ್ ಮಾಡಲಾದ ವಾಟ್ಸ್ಆ್ಯಪ್ ಗ್ರೂಪ್ ಆಹ್ವಾನ ಲಿಂಕ್‌ಗಳನ್ನು ಕೂಡ ಇತರ ವಾಟ್ಸಾಪ್ ಬಳಕೆದಾರರು ಕಾಣಬಹುದು. ಬಳಕೆದಾರರು ತಮಗೆ ತಿಳಿದಿರುವ ಮತ್ತು ನಂಬುವ ಜನರೊಂದಿಗೆ ಖಾಸಗಿಯಾಗಿ ಹಂಚಿಕೊಳ್ಳಲು ಬಯಸುವ ಲಿಂಕ್‌ಗಳನ್ನು ಯಾವುದೇ ಕಾರಣಕ್ಕೂ ಸಾರ್ವಜನಿಕವಾಗಿ ವೆಬ್‌ಸೈಟ್‌ನಲ್ಲಿ ಪೋಸ್ಟ್ ಮಾಡಬಾರದು ಎಂದು ವಾಟ್ಸ್ಆ್ಯಪ್ ಹೇಳಿದೆ.
2019ರಲ್ಲಿ ಇಂಥದ್ದೇ ಸಮಸ್ಯೆ ಎದುರಾದಾಗ ಸೆಕ್ಯೂರಿಟಿ ಸಂಶೋಧಕರೊಬ್ಬರು ಈ ವಿಚಾರವನ್ನ ಫೇಸ್ಬುಕ್ಗೆ ವರದಿ ಮಾಡಿದ್ದರು. ಈ ವಿಚಾರ ಭಾರೀ ಸುದ್ದಿಯಾದ ಬೆನ್ನಲ್ಲೇ ಅದನ್ನ ಸರಿಪಡಿಸಲಾಗಿತ್ತು. 2019 ರಲ್ಲಿ ಬಹಿರಂಗಗೊಂಡಿದ್ದ ಗುಂಪುಗಳು ಇನ್ನು ಮುಂದೆ ಇಂಡೆಕ್ಸ್ ಆಗುವುದಿಲ್ಲ. ಆದ್ರೆ ಈಗ ಬೇರೆ ಸಮಸ್ಯೆಯಿಂದ ಮತ್ತೆ ಅಂಥದ್ದೇ ದೋಷ ಕಾಣಿಸಿಕೊಂಡಿದೆ ಎಂದು ವರದಿಯಾಗಿದೆ.
ಖಾಸಗಿ ಬಳಕೆದಾರರ ಮಾಹಿತಿಯೂ ಗೂಗಲ್ನಲ್ಲಿ ಲಭ್ಯ
ಕೇವಲ ವಾಟ್ಸ್ಆ್ಯಪ್ ಗ್ರೂಪ್ಗಳ ಇನ್ವೈಟ್ ಲಿಂಕ್ ಮಾತ್ರವಲ್ಲ, ಬಳಕೆದಾರರ ವೈಯಕ್ತಿಕ ಪ್ರೊಫೈಲ್ನ ಯುಆರ್ಎಲ್ಗಳು ಕೂಡ ಗೂಗಲ್ನಲ್ಲಿ ಹುಡುಕಬಹುದಾಗಿದೆ. ಇದರಿಂದ ಅಪರಿಚಿತರಿಗೆ ವಾಟ್ಸ್ಆ್ಯಪ್ ಬಳಕೆದಾರರ ಫೋನ್ ನಂಬರ್ ಹಾಗೂ ಕೆಲ ಸಂದರ್ಭಗಳಲ್ಲಿ ಅವರ ಪ್ರೊಫೈಲ್ ಫೋಟೋ ಸಿಗುತ್ತದೆ. ಈ ಹಿಂದೆಯೂ ಇಂಥ ಸಮಸ್ಯೆ ಉಂಟಾಗಿದ್ದು ಅದನ್ನ 2020ರ ಜೂನ್ನಲ್ಲಿ ಸರಿಪಡಿಸಲಾಗಿದೆ ಎಂದು ತಿಳಿದುಬಂದಿದೆ.
ಆದ್ರೆ ಈಗ ವಾಟ್ಸ್ಆ್ಯಪ್ ಪ್ರೈವೆಸಿ ಪಾಲಿಸಿ ಬದಲಾವಣೆ ಮಾಡಿರುವ ಹೊತ್ತಲ್ಲೇ ಮತ್ತೆ ಈ ಸಮಸ್ಯೆಗಳು ಮುನ್ನೆಲೆಗೆ ಬಂದಿದೆ. ಈಗಾಗಲೇ ಬಹುತೇಕ ಮಂದಿ ಹೊಸ ಪ್ರೈವೆಸಿ ಪಾಲಿಸಿಯನ್ನ ಇಷ್ಟಪಡದೇ ಬೇರೆ ಆ್ಯಪ್ಗಳಿಗೆ ವಲಸೆ ಹೋಗ್ತಿದ್ದು, ಈ ಹೊಸ ಸಮಸ್ಯೆ ಆ್ಯಪ್ ಬಗ್ಗೆ ವಿಶ್ವಾಸ ಕುಸಿಯುವಂತೆ ಮಾಡಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post