2022ರ ಆರ್ಥಿಕ ವರ್ಷದಲ್ಲಿ ಎಕಾನಮಿಯು ಶೇ. 11ರಷ್ಟು ಬೆಳವಣಿಗೆ ಹೊಂದಲಿದೆ ಎಂದು ಬ್ರಿಕ್‌ವರ್ಕ್ ರೇಟಿಂಗ್ಸ್ ಅಂದಾಜಿಸಿದೆ.
ಅಂಕಿಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ ಬಿಡುಗಡೆ ಮಾಡಿರುವ ಜಿಡಿಪಿಯ ಮೊದಲ ಮುಂಗಡ ಅಂದಾಜು(Advance Estimates) ಪ್ರಕಾರ, 2021ರ ಆರ್ಥಿಕ ವರ್ಷದಲ್ಲಿ ಆರ್ಥಿಕತೆ ಶೇ. 7.7ರಷ್ಟು ಕುಗ್ಗಲಿದೆ. ನಾವು ಜಿಡಿಪಿ ಶೇ. 7ರಿಂದ 7.5ರಷ್ಟು ಕುಗ್ಗಲಿದೆ ಎಂದು ಅಂದಾಜಿಸಿದ್ದು, ಸಚಿವಾಲಯದ ಅಂದಾಜಿಗೂ ನಮ್ಮ ವರದಿಗೂ ಸಾಮ್ಯತೆ ಇದೆ ಎಂದು ಬ್ರಿಕ್‌ವರ್ಕ್ ರೇಟಿಂಗ್ಸ್ ಹೇಳಿದೆ. ಆದ್ರೆ ಈ ಅಂಕಿ ಅಂಶಗಳನ್ನ ಪರಿಷ್ಕರಣೆ ಮಾಡಬೇಕಿದೆ. ಆದ್ರೂ ಇತ್ತೀಚೆಗಿನ ಆರ್ಥಿಕ ಚೇತರಿಕೆಯ ಕಾರಣದಿಂದಾಗಿ ಎರಡನೇ ಮುಂಗಡ ಅಂದಾಜಿನಲ್ಲಿ ಈ ಅಂಕಿಅಂಶಗಳು ಮೇಲ್ಮುಖವಾಗಿ ಪರಿಷ್ಕರಣೆಯಾಗುವ ಸಾಧ್ಯತೆ ಇದೆ ಎಂದು ಹೇಳಿದೆ.
ಕೊರೊನಾ ಸಾಂಕ್ರಾಮಿಕದಿಂದಾಗಿ ಉಂಟಾಗಿರುವ ಉದ್ಯೋಗ ನಷ್ಟ, ಆದಾಯ ಹಾಗೂ ಬಳಕೆಯಲ್ಲಿನ ಗಣನೀಯ ಇಳಿಕೆ ಸೇರಿದಂತೆ ಒಟ್ಟಾರೆ ಆರ್ಥಿಕ ಚಟುವಟಿಕೆಗಳಿಗೆ ಉಂಟಾಗಿರುವ ತೊಂದರೆ ಹಿಂದೆಂದೂ ಕಂಡಿಲ್ಲ. ಇದರಿಂದ 2021ನೇ ಆರ್ಥಿಕ ವರ್ಷದ ಜಿಡಿಪಿಗೆ 11 ಟ್ರಿಲಿಯನ್ ರೂಪಾಯಿ ನಷ್ಟವಾಗಿದೆ. ಇದು ಆರ್ಥಿಕತೆ ಮೇಲೆ ದೀರ್ಘ ಕಾಲ ಪರಿಣಾಮ ಬೀರಲಿದೆ ಎಂದು ವರದಿಯಲ್ಲಿ ತಿಳಿಸಿದೆ.
ಇದೇ ವೇಳೆ 2022ರ ಆರ್ಥಿಕ ಮುನ್ನೋಟದ ವರದಿ ನೀಡಿರುವ ಬ್ರಿಕ್ಸ್ವರ್ಕ್ ರೇಟಿಂಗ್ಸ್, ಆರ್ಥಿಕ ಚಟುವಟಿಕೆಗಳು ಕ್ರಮೇಣವಾಗಿ ಕೊರೊನಾ ಸಾಂಕ್ರಾಮಿಕ ಕಾಲದ ಹಿಂದಿನ ಸ್ಥಿತಿಗೆ ಮರಳುತ್ತಿವೆ. 2021ರ ದ್ವಿತೀಯಾರ್ಧದಲ್ಲಿ ಆರ್ಥಿಕತೆ ಉತ್ತಮ ಬೆಳವಣಿಗೆ ಕಾಣಲಿದೆ. ಕೆಲವು ಕ್ಷೇತ್ರಗಳಲ್ಲಿ ಮಾತ್ರ ಸಾಮಾಜಿಕ ಅಂತರ ಪಾಲನೆ ನಿಯಮದ ಕಾರಣ ಬೆಳವಣಿಗೆಯಲ್ಲಿ ಏರಿಳಿತ ಇರಲಿದೆ. ಆದ್ರೂ ಲಸಿಕೆಗಳನ್ನ ಅಭಿವೃದ್ಧಿಪಡಿಸುವಲ್ಲಿ ಪ್ರಗತಿ ಹೊಂದಿರುವ ಹಿನ್ನೆಲೆ ಮುಂದಿನ ಹಣಕಾಸು ವರ್ಷದ ಮುನ್ನೋಟ ಸುಧಾರಿಸಿದೆ ಎಂದು ತಿಳಿಸಿದೆ.
ಕೈಗಾರಿಕಾ ವಲಯವು 2022ರ ಆರ್ಥಿಕ ವರ್ಷದಲ್ಲಿ ಶೇ. 11.5 ರಷ್ಟು ಬೆಳವಣಿಗೆ ಕಾಣಲಿದೆ ಎಂದು ಬ್ರಿಕ್‌ವರ್ಕ್ ರೇಟಿಂಗ್ಸ್ ಅಂದಾಜಿಸಿದೆ. ಹಾಗೇ 2021ರಲ್ಲಿ ಶೇ. 7ರಿಂದ 7.5ರಷ್ಟು ಕುಗ್ಗಲಿರುವ ಜಿಡಿಪಿ 2022ರಲ್ಲಿ, ಶೇ. 11ರಷ್ಟು ಬೆಳವಣಿಗೆ ಕಾಣಲಿದೆ ಎಂದು ನಾವು ನಿರೀಕ್ಷಿಸಿದ್ದೇವೆ ಅಂತ ಹೇಳಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post