ಬೆಂಗಳೂರು: ಕುಂದಾನಗರಿ ಬೆಳಗಾವಿ ಸದ್ಯ ರಾಜ್ಯ ರಾಜಕೀಯದಲ್ಲಿಯೇ ಶಕ್ತಿಕೇಂದ್ರವಾಗಿದೆ. ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಐವರು ಸಚಿವರು ಸಂಪುಟಕ್ಕೆ ಸೇರಿದ್ದು, ಈ ಮೂಲಕ ಬೆಳಗಾವಿ ಜಿಲ್ಲೆ ರಾಜಕೀಯ ದಾಖಲೆ ಬರೆದಿದೆ.
ಇಲ್ಲಿನ ಘಟಾನುಘಟಿ ರಾಜಕಾರಣಿಗಳು, ಇತ್ತೀಚೆಗೆ ಯಾವುದೇ ಸರ್ಕಾರ ರಚನೆಯಾಗಲಿ, ಬೀಳಲಿ ಅದ್ರಲ್ಲಿ ಪ್ರಮುಖ ಪಾತ್ರವಹಿಸುತ್ತಲೇ ಇದ್ರು. ಬೆಳಗಾವಿ ಜಿಲ್ಲೆಯ 18 ವಿಧಾನಸಭಾ ಕ್ಷೇತ್ರಗಳಲ್ಲಿ ಅತಿ ಹೆಚ್ಚು ಬಿಜೆಪಿ ಶಾಸಕರಿದ್ದು, ಇದೇ ಕಾರಣಕ್ಕಾಗಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ ಜಿಲ್ಲೆಯಿಂದ ಮೊದಲು ನಾಲ್ವರು ಸಚಿವರಾಗಿದ್ರು. ಇದೀಗ ಇವತ್ತು ಉಮೇಶ್ ಕತ್ತಿ ಕ್ಯಾಬಿನೆಟ್ ಸೇರೋ ಮೂಲಕ ಅತಿಹೆಚ್ಚು ಸಚಿವರನ್ನ ಹೊಂದುವ ಮೂಲಕ ಜಿಲ್ಲೆ ಹೊಸ ಇತಿಹಾಸ ಬರೆದಿದೆ.
ಬೆಳಗಾವಿಗೆ 5 ಮಂತ್ರಿ ಸ್ಥಾನ
ಇದೀಗ ಬೆಳಗಾವಿ ಜಿಲ್ಲೆಗೆ ಒಟ್ಟು 5 ಸಚಿವ ಮಂತ್ರಿ ಸ್ಥಾನ ಸಿಕ್ಕಂತಾಗಿದೆ. ಸಿಎಂ ಯಡಿಯೂರಪ್ಪ ಸರ್ಕಾರದಲ್ಲಿ ಮೊದಲು ನಾಲ್ವರಿಗೆ ಮಂತ್ರಿ ಸ್ಥಾನ ಸಿಕ್ಕಿದೆ. ವಿಧಾನಸಭೆ ಚುನಾವಣೆಯಲ್ಲಿ ಸೋತರೂ ಸಹ ಲಕ್ಷ್ಮಣ ಸವದಿ ಉಪಮುಖ್ಯಮಂತ್ರಿಯಾಗಿದ್ದಾರೆ. ಜಲಸಂಪನ್ಮೂಲ ಸಚಿವರಾಗಿ ರಮೇಶ್ ಜಾರಕಿಹೊಳಿ, ಜವಳಿ ಸಚಿವರಾಗಿ ಶ್ರೀಮಂತ್ ಪಾಟೀಲ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾಗಿ ಶಶಿಕಲಾ ಜೊಲ್ಲೆ ಕಾರ್ಯನಿರ್ವಹಿಸುತ್ತಿದ್ದಾರೆ. ಇವತ್ತು ಸಚಿವ ಸಂಪುಟದಲ್ಲಿ ನೂತನ ಸಚಿವರಾಗಿ ಉಮೇಶ್ ಕತ್ತಿ ಅಧಿಕಾರ ಸ್ವೀಕರಿಸೋ ಮೂಲಕ ಬೆಳಗಾವಿ ಜಿಲ್ಲೆಗೆ ಐವರು ಸಚಿವರಾಗಿದ್ದಾರೆ.
ಇತರೆ ಜಿಲ್ಲೆಗಳ ನಾಯಕರ ಕೆಂಗಣ್ಣು..
ಬೆಂಗಳೂರು ಹೊರತುಪಡಿಸಿ ಅತಿ ಹೆಚ್ಚಿನ ಅಧಿಕಾರ ಗಿಟ್ಟಿಸಿಕೊಂಡ ಜಿಲ್ಲೆ ಬೆಳಗಾವಿ ಎಂಬ ಹೆಗ್ಗಳಿಕೆ ಮುಡಿಗೇರಿಸಿಕೊಂಡಿದೆ. ಸದ್ಯ ಈ ವಿಚಾರ ಉಳಿದ ಜಿಲ್ಲೆಗಳ ಸಚಿವಾಕಾಂಕ್ಷಿಗಳ ಕೆಂಗಣ್ಣಿಗೆ ಗುರಿಯಾಗಿದ್ದು, ಹೊನ್ನಾಳಿ ಶಾಸಕ ರೇಣುಕಾಚಾರ್ಯ ಬೆಳಗಾವಿಗೇಕೆ ಅಷ್ಟೊಂದು ಸಚಿವರು ಎಂದು ಪ್ರಶ್ನೆ ಮಾಡಿ, ತಗಾದೆ ತೆಗೆದಿದ್ದಾರೆ.
ಇದು ಬೆಂಗಳೂರು ಬೆಳಗಾವಿ ಕ್ಯಾಬಿನೆಟ್ ಆಗಿದೆ. ಮಧ್ಯ ಕರ್ನಾಟಕಕ್ಕೆ ಅನ್ಯಾಯವಾಗಿದೆ. ನನಗೆ ಬೇಸರವಾಗಿದೆ. ನಾವು ಯಾರ ಮುಂದೆ ಆಸಮಾಧಾನ ಹೇಳಿಕೊಳ್ಳಬೇಕು. ಸ್ವಾಭಿಮಾನ ಬಿಟ್ಟು ಬದುಕುವ ವ್ಯಕ್ತಿ ನಾನಲ್ಲ. ಕ್ಷೇತ್ರದ ಜನ ಹೇಳಿದಂತೆ ಕೇಳುವ ವ್ಯಕ್ತಿ ನಾನು. ಯಾರ ಬಳಿಯೂ ಲಾಬಿ ಮಾಡುವ ಹವ್ಯಾಸವಿಲ್ಲ
-ಎಂಪಿ ರೇಣುಕಾಚಾರ್ಯ, ಹೊನ್ನಾಳಿ ಶಾಸಕ
ಬೆಳಗಾವಿ ಜಿಲ್ಲೆಯಿಂದ ಉಪ ಸಭಾಪತಿಯಾಗಿ ಆನಂದ ಮಾಮನಿ, ಕೆಎಂಎಫ್ ಅಧ್ಯಕ್ಷರಾಗಿ ಬಾಲಚಂದ್ರ ಜಾರಕಿಹೊಳಿ, ರಾಜ್ಯಸಭಾ ಸದಸ್ಯರಾಗಿ ಈರಣ್ಣ ಕಡಾಡಿ, ಸರ್ಕಾರದ ಮುಖ್ಯ ಸಚೇತಕರಾಗಿ ಮಹಾಂತೇಶ ಕವಟಗಿಮಠ, ಪಿ.ರಾಜೀವ್, ದುರ್ಯೋಧನ ಐಹೊಳೆ, ಮಹೇಶ್ ಕುಮಟಳ್ಳಿ ಸೇರಿ ಮೂರು ಶಾಸಕರು ನಿಗಮ ಮಂಡಳಿ ಗಿಟ್ಟಿಸಿಕೊಳ್ಳೋ ಮೂಲಕ ರಾಜಕೀಯವಾಗಿ ಬೆಳಗಾವಿ ಜಿಲ್ಲೆ ಶಕ್ತಿ ಕೇಂದ್ರವಾಗಿದೆ.
ರಾಜ್ಯ ರಾಜಕಾರಣದಲ್ಲಿಯೇ ಪ್ರಪ್ರಥಮ ಬಾರಿಗೆ ಗಡಿ ಜಿಲ್ಲೆ ಬೆಳಗಾವಿಗೆ ಅತಿಹೆಚ್ಚು ಮಂತ್ರಿ ಸ್ಥಾನ ಸಿಕ್ಕ ಖುಷಿಯಲ್ಲಿ ಜನರಿದ್ದಾರೆ. ಉಳಿದ ಜಿಲ್ಲೆಗಳ ರಾಜಕೀಯ ನಾಯಕರು, ಬೆಳಗಾವಿ ಜಿಲ್ಲೆಗೆ ನೀಡಿದ ಪ್ರಾತಿನಿಧ್ಯ ನಮ್ಮ ಜಿಲ್ಲೆಗೆ ಯಾಕಿಲ್ಲ ಅಂತ ತಗಾದೆ ತೆಗೆದಿದ್ದಾರೆ.
ಶ್ರೀಕಾಂತ್ ಕುಬಕಡ್ಡಿ, ನ್ಯೂಸ್ಫಸ್ಟ್, ಬೆಳಗಾವಿ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post