ನವದೆಹಲಿ: ಭಾರತೀಯ ಸೇನೆ ಈವರೆಗೆ ಶಸ್ತ್ರಾಸ್ತ್ರಗಳಿಗಾಗಿ ವಿದೇಶಿ ಕಂಪನಿಗಳನ್ನ ಅವಲಂಬಿಸುತ್ತಿತ್ತು.. ಇದೀಗ ಸ್ವದೇಶಿ ಕಂಪನಿಗಳಿಗೆ ಬೃಹತ್ ಮೊತ್ತದ ಆರ್ಡರ್ ಒಂದನ್ನ ಕೊಡುವ ಮೂಲಕ ಭಾರತೀಯ ಸೇನೆ ಆತ್ಮನಿರ್ಭರ ಭಾರತದತ್ತ ಮತ್ತೊಂದು ಹೆಜ್ಜೆ ಇಟ್ಟಿದೆ.
ideaForge ಹೆಸರಿನ ಕಂಪನಿಯೊಂದಿಗೆ ಭಾರತೀಯ ಸೇನೆ SWITCH ಡ್ರೋನ್ಗಳಿಗಾಗಿ 20 ಮಿಲಿಯನ್ ಡಾಲರ್ನ ಅಂದ್ರೆ ಸುಮಾರು 130 ಕೋಟಿ ರೂಗಳ ಒಪ್ಪಂದವೊಂದನ್ನ ಮಾಡಿಕೊಂಡಿದೆ. ಎಷ್ಟು ಡ್ರೋಣ್ಗಳ ತಯಾರಿಕೆಗೆ ಈ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂಬುದನ್ನ ಬಹಿರಂಗಪಡಿಸಿಲ್ಲ.
ಭಾರತೀಯ ಸೇನೆ ನೂರಾರು SWITCH ಡ್ರೋಣ್ಗಳಿಗಾಗಿ ಈ ಒಪ್ಪಂದ ಮಾಡಿಕೊಂಡಿದೆ ಎಂದು ಅಂದಾಜಿಸಲಾಗಿದೆ. ಈ ಡ್ರೋನ್ಗಳು 6.5 ಕೆಜಿ ತೂಕ ಹೊಂದಿದ್ದು ವರ್ಟಿಕಲ್ ಟೇಕ್ಆಫ್, ಕನ್ವೆನ್ಷನಲ್ ಫ್ಲೈಟ್, 2 ಗಂಟೆ ಸುದೀರ್ಘ ಹಾರಾಟ, 4,000 ಮೀಟರ್ ಎತ್ತರದಲ್ಲಿ 15 ಕಿಮೀ ಸುತ್ತಳತೆಯನ್ನ ಸುತ್ತುವ ಸಾಮರ್ಥ್ಯ ಹೊಂದಿರಲಿವೆ.
ಹಲವಾರು ಸುತ್ತಿನ ಪ್ರಯೋಗಗಳಲ್ಲಿ ಈ ಡ್ರೋನ್ಗಳ ಸಾಮರ್ಥ್ಯ ಈಗಾಗಲೇ ಸಾಬೀತಾಗಿದೆ. ಬೆಂಗಳೂರಿನಲ್ಲಿ ನಿರ್ಮಾಣಗೊಳ್ಳಲಿರುವ ಈ ಭಾರತೀಯ ಸ್ವಿಚ್ ಡ್ರೋನ್‌ಗಳನ್ನು ಫಾಸ್ಟ್ ಟ್ರ್ಯಾಕ್ ಪ್ರೋಟೋಕಾಲ್‌ಗಳ ಅಡಿಯಲ್ಲಿ ಸೈನ್ಯಕ್ಕೆ ಶೀಘ್ರವಾಗಿ ತಲುಪಿಸಲಾಗುವುದು ಎನ್ನಲಾಗಿದೆ.
ಈ ಡ್ರೋನ್‌ಗಳನ್ನು ಭಾರತೀಯ ಸೇನಾ ಪಡೆಗಳಿಗೆ ಮತ್ತು ಪೂರ್ವ ಲಡಾಖ್‌ನ ಘರ್ಷಣೆ ಸ್ಥಳಗಳಲ್ಲಿ ನಿಯೋಜಿಸಲಾದ ವಿಶೇಷ ಪಡೆಗಳ ಘಟಕಗಳಿಗೆ ಆದ್ಯತೆಯ ಮೇರೆಗೆ ನಿಯೋಜಿಸಲಾಗುತ್ತದೆ ಎನ್ನುವ ಮಾಹಿತಿ ಇದೆ. ಈ ಹಿಂದೆಯೂ ಭಾರತೀಯ ಸೇನಾಪಡೆಗಳು ಡ್ರೋನ್ಗಳಿಗಾಗಿ ಐಡಿಯಾಫೋರ್ಜ್ ಜೊತೆಗೆ ಒಪ್ಪಂದ ಮಾಡಿಕೊಂಡಿತ್ತಾದರೂ ಈ ಬಾರಿಯ ಒಪ್ಪಂದ ದೊಡ್ಡ ಮೊತ್ತದ ಒಪ್ಪಂದ ಎನ್ನಲಾಗಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post