ಟೀಮ್ ಇಂಡಿಯಾದ ಆ ಯುವ ಬ್ಯಾಟ್ಸ್ಮನ್, ಆಸಿಸ್ ನೆಲದಲ್ಲಿ ನಾನೇ ಕಿಂಗ್ ಅಂತಿದ್ದಾರೆ. ತಾನು ವಿಸಿಟರ್ ಬ್ಯಾಟ್ಸ್ಮನ್ ಆಗಿದ್ರೂ, ವಿರಾಟ್ ಕೊಹ್ಲಿ, ಅಲೆಸ್ಟರ್ ಕುಕ್, ಕೇನ್ ವಿಲಿಯಮ್ಸನ್, ರಹಾನೆ, ಪೂಜಾರ ಸೇರಿದಂತೆ, ಇತರೆ ದಿಗ್ಗಜ ಕ್ರಿಕಟಿಗರನ್ನ ಮೀರಿಸಿದ್ದಾರೆ.
ರಿಷಭ್ ಪಂತ್ ಟೀಮ್ ಇಂಡಿಯಾದ ಡೈನಾಮಿಕ್ ಬ್ಯಾಟ್ಸ್ಮನ್ ಕಮ್ ವಿಕೆಟ್ ಕೀಪರ್. ಟೀಮ್ ಇಂಡಿಯಾ ಫ್ಲಾಪ್ ಸ್ಟಾರ್ ಪಟ್ಟಿಯಲ್ಲೇ ಇವರನ್ನ ಗುರುತಿಸುತ್ತಿದ್ದ ಕ್ರಿಕೆಟ್ ಪಂಡಿತರು, ಈತ ವಿಕೆಟ್ ಹಿಂದೆ ನಾಲಾಯಕ್ ಅಂತಾ ಜರಿದ್ದಿದ್ದೂ ಉಂಟು. ಅದೇ ರೀತಿ ವಿಕೆಟ್ ಮುಂದೆ ಕೂಡ ಬೇಜವಾಬ್ದಾರಿ ಆಟಗಾರ ಅಂತಾನೇ ಬಿಂಬಿಸಲಾಗಿತ್ತು. ಕಳೆದ ಮೂರು ವರ್ಷಗಳಿಂದ ಟೀಮ್ ಇಂಡಿಯಾ ಪ್ರತಿನಿಧಿಸುತ್ತಿದ್ದರು, ಟೆಸ್ಟ್ ತಂಡಕ್ಕೆ ಈತ ವಿಸಿಟರ್ ವಿಕೆಟ್ ಕೀಪರ್ ಮಾತ್ರ.
ಹೌದು, 2018ರಲ್ಲಿ ಟೀಮ್ ಇಂಡಿಯಾ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದಿದ್ದ ಪಂತ್ ಇಂಗ್ಲೆಂಡ್ ವಿರುದ್ಧದ ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ 11 ಕ್ಯಾಚ್ಗಳನ್ನ ಪಡೆದು, ಧೋನಿ ಉತ್ತಾರಾಧಿಕಾರಿ ನಾನೇ ಅನ್ನೋದನ್ನ ಫ್ರೂವ್ ಮಾಡಿದ್ದರು. ನಂತರ 2018-19ರ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಸೆಂಚೂರಿ ಸಿಡಿಸಿದ್ದ ಪಂತ್ ಆಸ್ಟ್ರೇಲಿಯಾ ವಿರುದ್ಧ ಶತಕ ಬಾರಿಸಿದ ಮೊದಲ ಭಾರತೀಯ ವಿಕೆಟ್ ಕೀಪರ್ ಎಂಬ ಹಿರಿಮೆಗೂ ಪಾತ್ರನಾಗಿದ್ದರು. ಬಳಿಕ ಹಿನ್ನಡೆ ಅನುಭವಿಸಿದ್ದ ಪಂತ್, ಟೀಕಕಾರಿಗೆ ಆಹಾರವಾಗಿದ್ದರು.
ಸಿಡ್ನಿಯಲ್ಲಿ ಸಿಡಿದೆದ್ದ ಯಂಗ್ ರಿಷಭ್ ಪಂತ್..!
ಸಿಡ್ನಿಯಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯ ಟೀಮ್ ಇಂಡಿಯಾಕ್ಕೆ ಪ್ರತಿಷ್ಠೆಯ ಪಂದ್ಯವಾಗಿತ್ತು. ಮೊದಲೆರೆಡು ಇನ್ನಿಂಗ್ಸ್ಗಳಲ್ಲಿ ವೈಫಲ್ಯ ಅನುಭವಿಸಿದ್ದ ಪಂತ್ ಆಟದ ಬಗ್ಗೆ, ಕೆಲ ಮಾಜಿ ಕ್ರಿಕೆಟಿಗರು ಗುಡುಗಿದ್ದರು. ಆದರೆ ನಿರ್ಣಾಯಕ ಹಂತದಲ್ಲಿ ತಂಡದ ಕೈ ಹಿಡಿದ ಪಂತ್, 118 ಎಸೆತಗಳಲ್ಲಿ 12 ಬೌಂಡರಿ, 3 ಸಿಕ್ಸರ್ ಒಳಗೊಂಡ 97 ರನ್ ಚಚ್ಚಿದರು. ಆ ಮೂಲಕ ಆಸ್ಟ್ರೇಲಿಯಾ ವಿರುದ್ಧ ನೆಲದಲ್ಲಿ ಹಲವು ದಾಖಲೆಗಳನ್ನ ಮುಡಿಗೇರಿಸಿಕೊಂಡಿದ್ದಾರೆ.
ಕಾಂಗರೂ ನಾಡಲ್ಲಿ ಯಂಗ್ ಸ್ಟಾರ್ ಪಂತ್ ಹವಾ..!
ಹೌದು ಟೀಮ್ ಇಂಡಿಯಾ ಟೆಸ್ಟ್ ತಂಡದಲ್ಲಿ ಆಗೊಮ್ಮೆ ಹೀಗೊಮ್ಮೆ ಆಡುವ ಪಂತ್, ಆಸ್ಟ್ರೇಲಿಯಾ ನೆಲದಲ್ಲಿ ಕಿಂಗ್ ಆಗಿ ಮೆರೆದಿದ್ದಾರೆ. ಕಾಂಗರೂ ನಾಡಿನಲ್ಲಿ ದಿಗ್ಗಜ ಬ್ಯಾಟ್ಸ್ಮನ್ಗಳೂ ಮಾಡದಂತ ಸಾಧನೆಯನ್ನ ಕೂಡ ಮಾಡಿದ್ದಾರೆ. ಕಳೆದೊಂದು ದಶಕದಿಂದ ಟೆಸ್ಟ್ ತಂಡಗಳ ಅವಿಭಾಜ್ಯ ಅಂಗವಾಗಿರುವ ಬ್ಯಾಟ್ಸ್ಮನ್ಗಳೇ, ವಿಸಿಟರ್ ಬ್ಯಾಟ್ಸ್ಮನ್ ಪಂತ್ ಖದರ್ ಮುಂದೆ ಡಲ್ ಆಗಿದ್ದಾರೆ. ಇದನ್ನ ಅಂಕಿಅಂಶಗಳೇ ಸಾಬೀತು ಪಡಿಸಿವೆ. ಕಳೆದೊಂದು ದಶಕದಿಂದ ಆಸ್ಟ್ರೇಲಿಯಾ ನೆಲದಲ್ಲಿ ದಿಗ್ಗಜ ಆಟಗಾರರ ಆವರೇಜ್ ಜೊತೆ, ಪಂತ್ ಬ್ಯಾಟಿಂಗ್ ಆವರೇಜ್ ಹೋಲಿಕೆ ಮಾಡಿ ನೋಡೋದಾದರೆ, ಪಂತ್ಎನ್ನರನ್ನೂ ಹಿಂದಿಕ್ಕಿದ್ದಾರೆ.
ಆಸಿಸ್ನಲ್ಲಿ ಬ್ಯಾಟ್ಸ್ಮನ್ಗಳ ಸಾಧನೆ
ಆಸ್ಟ್ರೇಲಿಯಾ ನೆಲದಲ್ಲಿ 06 ಪಂದ್ಯಗಳನ್ನಾಡಿರುವ ಪಂತ್, 56.88 ಸರಾಸರಿಯಲ್ಲಿ 512 ರನ್ ಕಲೆಹಾಕಿದ್ದಾರೆ. 13 ಪಂದ್ಯಗಳನ್ನಾಡಿರುವ ಕೊಹ್ಲಿ, 54.08ರ ಆವರೇಜ್ನಲ್ಲಿ 1352 ರನ್ ಪೇರಿಸಿದ್ರೆ, 10 ಪಂದ್ಯಗಳನ್ನಾಡಿರುವ ಪೂಜಾರ 48.00 ಸರಾಸರಿಯಲ್ಲಿ 912 ರನ್ ಕಲೆಹಾಕಿದ್ದಾರೆ. 11 ಪಂದ್ಯಗಳನ್ನಾಡಿರುವ ರಹಾನೆ, 823 ರನ್ಗಳಿಸಿದ್ದು, 43.41ರ ಸರಾಸರಿ ಹೊಂದಿದ್ದಾರೆ. 07 ಪಂದ್ಯಗಳನ್ನಾಡಿರುವ ಕೇನ್ ವಿಲಿಯಮ್ಸನ್ 557 ರನ್ ಬಾರಿಸಿದ್ದು, 42.84 ಆವರೇಜ್ ಹೊಂದಿದ್ದಾರೆ. ಅಷ್ಟೇ ಅಲ್ಲ ಟೆಸ್ಟ್ ಸ್ಪೆಷಲಿಸ್ಟ್ ಬ್ಯಾಟ್ಸ್ಮನ್ ಆಗಿರುವ ಅಲೆಸ್ಟರ್ ಕುಕ್, 11 ಪಂದ್ಯಗಳನ್ನಾಡಿದ್ದು, 42.68ರ ಆವರೇಜ್ ಮಾತ್ರ ಹೊಂದಿದ್ದಾರೆ.
ಆಸಿಸ್ ವಿರುದ್ಧ ಈ ಸಾಧನೆ ಮಾಡಿದ ಅತಿ ಕಿರಿಯ..!
ಸಿಡ್ನಿ ಪಂದ್ಯದಲ್ಲಿ ರಿಷಭ್ ಪಂತ್ ಶತಕ ಮಿಸ್ ಮಾಡಿಕೊಂಡರೂ, ಮಹತ್ವದ ದಾಖಲೆ ಬರೆದಿದ್ದಾರೆ. ಟೆಸ್ಟ್ ಪಂದ್ಯದ 4ನೇ ಇನ್ನಿಂಗ್ಸ್ನಲ್ಲಿ ಗರಿಷ್ಠ ರನ್ ಬಾರಿಸಿದ ಅತಿ ಕಿರಿಯ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಎಂಬ ಖ್ಯಾತಿಗೆ ಭಾಜನರಾಗಿದ್ದಾರೆ. ಈ ಹಿಂದೆ ಆಸ್ಟ್ರೇಲಿಯಾದ ಮಾಜಿ ವಿಕೆಟ್ ಕೀಪರ್ ಇಯಾನ್ ಹೀಲಿ, 24 ವರ್ಷ 216 ದಿನಗಳು ಈ ಸಾಧನೆ ಮಾಡಿದ್ರು. ಆದ್ರೀಗ 23 ವರ್ಷದ ಟೀಮ್ ಇಂಡಿಯಾ ವಿಕೆಟ್ ಕೀಪರ್ ಪಂತ್, 4ನೇ ಇನ್ನಿಂಗ್ಸ್ನಲ್ಲಿ 97 ರನ್ ದಾಖಲಿಸುವ ಮೂಲಕ ನೂತನ ರೆಕಾರ್ಡ್ ನಿರ್ಮಿಸಿದ್ದಾರೆ. ಒಟ್ನಲ್ಲಿ ಟೀಕಕಾರಿಗೆ ಆಹಾರವಾಗಿದ್ದ ಪಂತ್, ಭರ್ಜರಿ ಬ್ಯಾಟಿಂಗ್ ಮೂಲಕ ಟೀಮ್ ಇಂಡಿಯಾಕ್ಕೆ ತಮ್ಮ ಅವಶ್ಯಕತೆ ಎಷ್ಟಿದೆ ಅನ್ನೋದನ್ನ ಫ್ರೂವ್ ಮಾಡಿದ್ದಾರೆ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post