ಸಿಡ್ನಿ ಟೆಸ್ಟ್ನ ವಿರೋಚಿತ ಡ್ರಾ ಬೆನ್ನಲ್ಲೇ, ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ಗೆ ಹೊಸ ಆಘಾತ ಎದುರಾಗಿದೆ. ಇದರಿಂದಾಗಿ ಸರಣಿಯನ್ನ ನಿರ್ಧರಿಸೋ ಟೆಸ್ಟ್ನಲ್ಲಿ ಅನಿವಾರ್ಯವಾಗಿ ಪ್ರಯೋಗಕ್ಕೆ ಮುಂದಾಗಬೇಕಿದೆ.
ಟೀಮ್ ಇಂಡಿಯಾವನ್ನ ಬಿಡದೇ ಕಾಡ್ತಿದೆ ಇಂಜುರಿ
ಆಸಿಸ್ ಟೆಸ್ಟ್ ಸರಣಿ ಆರಂಭದಿಂದ ಟೀಮ್ ಇಂಡಿಯಾವನ್ನ ಬಿಟ್ಟು ಬಿಡದೇ ಕಾಡುತ್ತಿರುವ ಅತಿದೊಡ್ಡ ಸಮಸ್ಯೆ ಎಂದರೆ ಅದು ಇಂಜುರಿ. ಸಿಡ್ನಿ ಮೈದಾನದಲ್ಲಿ ವಿರೋಚಿತ ಡ್ರಾ ಕಂಡ ಖುಷಿಯಲ್ಲಿದ್ದ, ರಹಾನೆ ಬಳಗಕ್ಕೆ ಬ್ರಿಸ್ಬೇನ್ ಟೆಸ್ಟ್ ಸವಾಲಾಗಿ ಪರಿಣಮಿಸಿದೆ. ಸ್ಟಾರ್ ಆಟಗಾರರಿಬ್ಬರು ಇಂಜುರಿಗೆ ತುತ್ತಾಗಿರೋದು ಮ್ಯಾನೇಜ್ಮೆಂಟ್ಗೆ ಹೊಸ ತಲೆನೋವು ತಂದೊಡ್ಡಿದೆ.
ಮಯಾಂಕ್ ಕಣಕ್ಕಿಳಿಯೋದು ಬಹುತೇಕ ಡೌಟ್
ಹೌದು ಸಿಡ್ನಿ ಟೆಸ್ಟ್ ಪಂದ್ಯದ 2ನೇ ಇನ್ನಿಂಗ್ಸ್ ಬೌಲಿಂಗ್ ವೇಳೆ ಬಳಲಿದ್ದ ಬೂಮ್ರಾ, ಅಬ್ಡಾಮಿನಲ್ ಇಂಜುರಿಗೆ ತುತ್ತಾಗಿರೋದು ನಿನ್ನೆ ನಡೆದ ಪರೀಕ್ಷೆಯಲ್ಲಿ ಖಚಿತವಾಗಿದೆ. ವೈದ್ಯಕೀಯ ಸಿಬ್ಬಂದಿ 3ರಿಂದ 4 ವಾರಗಳ ಕಾಲ ವಿಶ್ರಾಂತಿ ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಬೂಮ್ರಾ, ಬೆಂಗಳೂರಿನ ಎನ್ಸಿಎಗೆ ಬಂದಿಳಿಯಲಿದ್ದಾರೆ ಎಂದೇ ಹೇಳಲಾಗ್ತಿದೆ.
ಬೂಮ್ರಾ ಬೆನ್ನಲ್ಲೇ 4ನೇ ಟೆಸ್ಟ್ನಲ್ಲಿ ಕಣಕ್ಕಿಳಿಯಲಿದ್ದಾರೆ ಎನ್ನಲಾಗಿದ್ದ ಮಯಾಂಕ್ ಅಗರ್ವಾಲ್ ಕೂಡ ಅಭ್ಯಾಸದ ವೇಳೆ ಗಾಯಕ್ಕೆ ತುತ್ತಾಗಿದ್ದಾರೆ. ಹ್ಯಾಮ್ಸ್ಟ್ರಿಂಗ್ ಇಂಜುರಿಗೆ ಪರ್ಯಾಯ ಎಂದೇ ಭಾವಿಸಲಾಗಿದ್ದ ಮಯಾಂಕ್ ಗಾಯಗೊಂಡಿರೋದು ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ಗೆ ಮತ್ತೊಂದು ತಲೆನೋವು ತಂದಿದೆ. ಒಂದು ವೇಳೆ ಅಂತಿಮ ಟೆಸ್ಟ್ ವೇಳೆ ಕನ್ನಡಿಗ ಫಿಟ್ ಆಗದಿದ್ರೆ ಯಾರಿಗೆ ಮಣೆ ಹಾಕೋದು ಅನ್ನೋದೇ ಸವಾಲಾಗಿದೆ.
ಅನುಭವಿಗಳಾದ ಶಮಿ, ಇಶಾಂತ್, ಉಮೇಶ್ ಅಲಭ್ಯತೆಯಲ್ಲಿ ಟೀಮ್ ಇಂಡಿಯಾ ಬೌಲಿಂಗ್ ವಿಭಾಗವನ್ನ ಬೂಮ್ರಾ ಮುನ್ನಡೆಸುತ್ತಿದ್ದರು. ಈಗ ಅವರೂ ಗಾಯಕ್ಕೆ ತುತ್ತಾಗಿರೋದು ಟೀಮ್ ಇಂಡಿಯಾಗೆ ದೊಡ್ಡ ತಲೆನೋವು ತಂದೊಡ್ಡಿದೆ. ಬೂಮ್ರಾ ಭಾರತಕ್ಕೆ ವಾಪಸ್ಸಾಗಲಿದ್ದು, ಯುವ ಬೌಲಿಂಗ್ ವಿಭಾಗಕ್ಕೆ ಸಮರ್ಥ ಮಾರ್ಗದರ್ಶನ ನೀಡೋ ಹೊಣೆ ಕ್ಯಾಪ್ಟನ್ ಮೇಲೆ ಬಿದ್ದಿದೆ. ಮೊಹಮದ್ ಸಿರಾಜ್, ನವದೀಪ್ ಸೈನಿ ಈ ಇಬ್ಬರು ಅಂತರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದು ಇದೇ ಸರಣಿಯಲ್ಲಿ. ಇನ್ನು ಬೆಂಚ್ ಬಿಸಿ ಮಾಡ್ತಿರೋ ಬೌಲರ್ಗಳ ಪೈಕಿ ಶಾರ್ದೂಲ್ ಠಾಕೂರ್ 1 ಪಂದ್ಯವನ್ನಾಡಿದ್ರೆ, ಟಿ ನಟರಾಜನ್ ಇನ್ನಷ್ಟೇ ಡೆಬ್ಯೂ ಮಾಡಬೇಕಿದೆ. ಅನುಭವಿಗಳ ಅಲಭ್ಯತೆಯಲ್ಲಿ ಯುವ ಆಟಗಾರರೊಂದಿಗೆ ಕಣಕ್ಕಿಳಿಯಬೇಕಾದ ಅನಿವಾರ್ಯತೆ ಟೀಮ್ ಇಂಡಿಯಾಗೆ ಎದುರಾಗಿದೆ.
ಬೌಲಿಂಗ್ ಯುನಿಟ್ ಮಾತ್ರವಲ್ಲ, ಬ್ಯಾಟಿಂಗ್ ಆರ್ಡರ್ನಲ್ಲೂ ಬದಲಾವಣೆ ಅನಿವಾರ್ಯವಾಗುವ ಸಾಧ್ಯತೆಯಿದೆ. ಮಯಾಂಕ್ಗೆ ಗಾಯ ದೊಡ್ಡ ಮಟ್ಟದಲ್ಲಿ ಆಗಿದ್ದೇ ಆದ್ರೆ, ವೈಫಲ್ಯ ಅನುಭವಿಸ್ತಾ ಇರೋ ಪೃಥ್ವಿ ಶಾಗೆ ಮಣೆ ಹಾಕಬೇಕಾದ ಅನಿವಾರ್ಯ ಎದುರಾಗಲಿದೆ.
ಇದೀಗ ಪ್ರತಿಷ್ಠಿತ ಸರಣಿ ಗೆಲ್ಲೋ ಕನಸು ಕಾಣ್ತಾ ಇರೋ ಟೀಮ್ ಇಂಡಿಯಾಗೆ ಇಂಜುರಿ ಪ್ರತಿ ಪಂದ್ಯಕ್ಕೂ ಒಬ್ಬೊಬ್ಬ ಆಟಗಾರನಿಗೆ ಗೇಟ್ ಪಾಸ್ ನೀಡ್ತಿದೆ. ಇದೇ ಅಂತಿಮ ಟೆಸ್ಟ್ ಮುಗಿಯುವವರೆಗೆ ಯಾವುದೇ ಇಂಜುರಿ ತಂಡಕ್ಕೆ ಕಾಡದಿರಲಿ ಅನ್ನೋ ಫ್ಯಾನ್ಸ್ ಪ್ರಾರ್ಥನೆಗೆ ಕಾರಣವಾಗಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post