ಅಮೆರಿಕಾದಲ್ಲಿ 70 ವರ್ಷಗಳ ಬಳಿಕ ಇದೇ ಮೊದಲು ಮಹಿಳಾ ಕೈದಿಯೊಬ್ಬಳನ್ನ ಮರಣದಂಡನೆಗೆ ಒಳಪಡಿಸಲಾಗಿದೆ. ಕಾನ್ಸಾಸ್ನ 52 ವರ್ಷ ವಯಸ್ಸಿನ ಲೀಸಾ ಮಂಟ್ಗೊಮೆರಿ ಎಂಬಾಕೆ ಶಿಕ್ಷೆಗೆ ಗುರಿಯಾದ ಅಪರಾಧಿ.
ಲೀಸಾ, ಮಿಸೌರಿಯಲ್ಲಿ 23 ವರ್ಷದ ಗರ್ಭಿಣಿಯೊಬ್ಬರನ್ನ ಕತ್ತು ಹಿಸುಕು ಕೊಂದು, ಆಕೆಯ ಮಗುವನ್ನ ಗರ್ಭದಿಂದ ಕಟ್ ಮಾಡಿ ತೆಗೆದುಕೊಂಡು ಹೋಗಿದ್ದಳು. ಪ್ರಕರಣದ ವಿಚಾರಣೆ ನಡೆಸಿ ಲೀಸಾ ದೋಷಿ ಎಂದು ತೀರ್ಪು ನೀಡಿದ ಕೋರ್ಟ್, ಆಕೆಗೆ ಮರಣದಂಡನೆ ವಿಧಿಸಿತ್ತು. ಇಂದು ಇಂಡಿಯಾನಾದ ಟೆರೆ ಹಾಟ್ನಲ್ಲಿರೋ ಫೆಡರಲ್ ಪ್ರಿಷನ್ ಕಾಂಪ್ಲೆಕ್ಸ್ನಲ್ಲಿ ಲೀಸಾಳಿಗೆ ಪೆಂಟೋಬಾರ್ಬಿಟಲ್( pentobarbital) ಇಂಜೆಕ್ಷನ್ ನೀಡಿ ಮರಣದಂಡನೆಗೆ ಗುರಿಪಡಿಸಲಾಗಿದೆ.
ಶಿಕ್ಷೆಗೆ ಗುರಿಪಡಿಸುವ ಮುನ್ನ ಲೀಸಾಳಿಗೆ ಕೊನೆಯದಾಗಿ ಏನಾದ್ರೂ ಹೇಳುವುದಿದೆಯಾ ಎಂದು ಕೇಳಲಾಯ್ತು. ಅದಕ್ಕೆ ಆಕೆ ಇಲ್ಲ ಎಂದು ಉತ್ತರಿಸಿದಳು. ಬಳಿಕ ಮರಣದಂಡನೆ ಪ್ರಕ್ರಿಯೆ ನಡೆಸಲಾಯ್ತು. ಮಧ್ಯರಾತ್ರಿ 1:31 ವೈದ್ಯರು ಬಂದು ಲೀಸಾಳನ್ನ ಪರೀಕ್ಷಿಸಿ, ಆಕೆ ಸಾವನ್ನಪ್ಪಿರುವುದಾಗಿ ದೃಢಪಡಿಸಿದ್ದಾರೆ.
ಅಧ್ಯಕ್ಷ ಡೊನಾಲ್ಡ್ ಟ್ರಂಪ್ 17 ವರ್ಷಗಳ ಬಳಿಕ ಕಳೆದ ಜುಲೈನಿಂದ ಫೆಡರಲ್ ಎಕ್ಸಿಕ್ಯೂಷನ್(ಮರಣದಂಡನೆ)ಯನ್ನು ಪುನರಾರಂಭಿಸಿದ್ರು. ಆ ಬಳಿಕ ಮಾರಕ ಇಂಜೆಕ್ಷನ್ ಪಡೆದ 11ನೇ ಕೈದಿ ಲೀಸಾ. ಅಲ್ಲದೆ ಅಮೆರಿಕಾದ ಇತಿಹಾಸದಲ್ಲಿ 1953ರ ನಂತರ ಮಹಿಳೆಯೊಬ್ಬಳು ಗಲ್ಲು ಶಿಕ್ಷೆಗೆ ಗುರಿಯಾಗಿರುವುದು ಇದೇ ಮೊದಲು. ಈ ಹಿಂದೆ ಮಿಸೌರಿಯಲ್ಲಿ 6 ವರ್ಷದ ಬಾಲಕನನ್ನು ಅಪಹರಿಸಿ ಕೊಲೆ ಮಾಡಿದ್ದಕ್ಕಾಗಿ ಫೆಡರಲ್ ಸರ್ಕಾರ ಡಿಸೆಂಬರ್ 18, 1953 ರಂದು, ಬೋನಿ ಬ್ರೌನ್ ಹೆಡಿ ಎಂಬ ಮಹಿಳೆಯನ್ನ ಮರಣದಂಡನೆಗೆ ಗುರಿಪಡಿಸಿತ್ತು.
ಅಮೆರಿಕಾವನ್ನೇ ಬೆಚ್ಚಿಬೀಳಿಸಿದ್ದ ಲೀಸಾಳ ಹಾರರ್ ಸ್ಟೋರಿ
ಈ ಕಥೆಯಲ್ಲಿ ಎರಡು ವರ್ಷನ್ ಇದೆ. ಲೀಸಾ 2004ರಲ್ಲಿ ಮಿಸ್ಸೌರಿಯ ಸ್ಕಿಡ್‌ಮೋರ್‌ನಲ್ಲಿ ಎಂಟು ತಿಂಗಳ ಗರ್ಭಿಣಿ ಬಾಬ್ಬಿ ಜೋ ಸ್ಟಿನ್ನೆಟ್ರನ್ನು ಕೊಂದಿದ್ದಳು. ಹಗ್ಗವನ್ನು ಬಳಸಿ ಸ್ಟಿನ್ನೆಟ್ರ ಕತ್ತಿಗೆ ಬಿಗಿದು, ನಂತರ ಅವರ ಗರ್ಭದಿಂದ ಹೆಣ್ಣು ಮಗುವನ್ನು ಚಾಕುವಿನಿಂದ ಕತ್ತರಿಸಿ ತನ್ನೊಂದಿಗೆ ಕೊಂಡೊಯ್ದಿದ್ದಳು. ಮಗು ತನ್ನದೇ ಎಂಬಂತೆ ಬಿಂಬಿಸಲು ಆಕೆ ಪ್ರಯತ್ನಿಸಿದ್ದಳು ಎಂಬುದು ಪ್ರಾಸಿಕ್ಯೂಷನ್ ವಾದ
ಆದ್ರೆ ಲೀಸಾ ಬಾಲ್ಯದಲ್ಲಿ ಕಿರುಕುಳಕ್ಕೆ ಒಳಗಾಗಿದ್ದಳು. ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರದಂಥ ಕೃತ್ಯಗಳು ನಡೆದಿದ್ದು, ಮಾನಸಿಕ ಅಸ್ವಸ್ಥೆಯಾಗಿದ್ದಳು ಎಂದು ಲೀಸಾ ಪರ ವಕೀಲರು ವಾದಿಸಿದ್ದರು. ಆದ್ರೆ ಲೀಸಾ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವುದು ನಾಟಕ. ಯಾಕಂದ್ರೆ ಸ್ಟಿನ್ನೆಟ್ರನ್ನ ಕೊಲ್ಲಲು ಆಕೆ ಮೊದಲೇ ಪ್ಲಾನ್ ಮಾಡಿದ್ದಳು. ಪಿತೂರಿ ನಡೆಸಿದ್ದಳು. ಸಿ-ಸೆಕ್ಷನ್(ಸಿಜೇರಿಯನ್) ಮಾಡುವುದು ಹೇಗೆ ಎಂಬ ಬಗ್ಗೆ ಇಂಟರ್ನೆಟ್ನಲ್ಲಿ ತೀವ್ರ ಸಂಶೋಧನೆ ಮಾಡಿದ್ದಳು ಅಂತ ವಿಚಾರಣೆ ವೇಳೆ ಪ್ರಾಸಿಕ್ಯೂಟರ್ಗಳು ವಾದ ಮಂಡಿಸಿದ್ದರು.
ಅಮೆರಿಕಾದ ಜಿಲ್ಲಾ ನ್ಯಾಯಾಧೀಶ ಜೇಮ್ಸ್ ಪ್ಯಾಟ್ರಿಕ್ ಹ್ಯಾನ್ಲಾನ್, ಲೀಸಾಳ ಮರಣದಂಡನೆಗೆ ತಡೆ ನೀಡಿದ್ದಾಗ, ಆಕೆ ಅಸ್ವಸ್ಥತೆ ಮತ್ತು ಖಿನ್ನತೆಯಿಂದ ಬಳಲುತ್ತಿದ್ದಾಳೆ ಎಂದು ಉಲ್ಲೇಖಿಸಿದ್ದರು. ಲೀಸಾ ಸೂಡೊಸೈಸಿಸ್ ಎಂಬ ಅತ್ಯಂತ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದಾಳೆ. ಈ ಕಾಯಿಲೆ ಇದ್ದವರು ತಾನು ಗರ್ಭಿಣಿ ಎಂದು ನಂಬಿರುತ್ತಾರೆ. ಈ ನಂಬಿಕೆಯಿಂದ ಆ ಮಹಿಳೆಯಲ್ಲಿ ನಿಜವಾಗಿಯೂ ಗರ್ಭಿಣಿಯಾದಾಗ ಉಂಟಾಗುವ ಹಾರ್ಮೋನಲ್ ಬದಲಾವಣೆ ಹಾಗೂ ದೈಹಿಕ ಬದಲಾವಣೆ ಉಂಟಾಗುತ್ತದೆ ಎಂಬುದನ್ನ ತಿಳಿಸಿದ್ದರು.
ಆದ್ರೆ ಪ್ರತಿವಾದ ಮಂಡಿಸಿದ್ದ ಪ್ರಾಸಿಕ್ಯೂಟರ್ಗಳು, ಲೀಸಾ ತನಗೆ ಟ್ಯೂಬಲ್ ಲೈಗೇಷನ್ ( ಮಕ್ಕಳಾಗದಂತ ಆಪರೇಷನ್) ಮಾಡಿಸಿಕೊಂಡಿದ್ದಳು. ಆದ್ರೆ ಡಿವೋರ್ಸ್ ಬಳಿಕ ತನ್ನ ಮಾಜಿ ಪತಿಯಿಂದ ನಾಲ್ವರು ಮಕ್ಕಳ ಕಸ್ಟಡಿ ಪಡೆಯಲು ತಾನು ಮತ್ತೆ ಗರ್ಭಣಿಯಾಗಿರುವುದಾಗಿ ನಂಬಿಸಲು ಪ್ರಯತ್ನಿಸಿದ್ದಳು. ಈ ಬಗ್ಗೆ ಕೋರ್ಟ್ನಲ್ಲಿ ವಿಚಾರಣಾ ದಿನಾಂಕ ಸಮೀಪಿಸಿದ್ದರಿಂದ, ಅದಕ್ಕೂ ಮುನ್ನ ಆಕೆಯ ಬಳಿ ಮಗು ಇರಬೇಕಿತ್ತು. ಹೀಗಾಗಿ ಕೆಲವು ಡಾಗ್ ಶೋಗಳಲ್ಲಿ ತನಗೆ ಪರಿಚಯವಾಗಿದ್ದ ಸ್ಟಿನ್ನೆಟ್ಗಳನ್ನ ಟಾರ್ಗೆಟ್ ಮಾಡಿದ್ದಳು. ನಾಯಿಯೊಂದನ್ನ ದತ್ತು ಪಡೆಯಬೇಕಿದೆ ಅಂತ ಸ್ಟಿನ್ನೆಟ್ಗೆ ಹೇಳಿದ್ದ ಲೀಸಾ, ತನ್ನ ಕಾನ್ಸಾಸ್ನ ಮನೆಯಿಂದ 170 ಮೈಲಿ ಡ್ರೈವ್ ಮಾಡಿಕೊಂಡು ಸ್ಟಿನ್ನೆಟ್ ವಾಸವಿದ್ದ ಮಿಸೌರಿಗೆ ಬಂದಿದ್ದಳು. ಬಳಿಕ ಆಕೆಯ ಕತ್ತು ಹಿಸುಕಿ ಮಗುವನ್ನ ಕತ್ತರಿಸಿಕೊಂಡು ಹೊತ್ತೊಯ್ದಿದ್ದಳು. ಬಳಿಕ ತನ್ನ ಗಂಡನಿಗೆ ಕರೆ ಮಾಡಿ, ನನಗೆ ಡೆಲಿವರಿ ಆಗಿದೆ ಅಂತ ತಿಳಿಸಿದ್ದಳು. ಆಕೆ ಮಾಡಿದ ಕೃತ್ಯವೆಲ್ಲವೂ ಪೂರ್ವಯೋಜಿತ ಎಂದು ಹೇಳಿದ್ರು.
ಇಂಡಿಯಾನಾದ ಕೋರ್ಟ್, ಲೀಸಾ ಮಾನಸಿಕ ಅಸ್ವಸ್ಥಳಾಗಿರಬಹುದು. ಆಕೆಯನ್ನ ಮರಣದಂಡನೆಗೆ ಗುರಿಪಡಿಸುವುದನ್ನ ಅರ್ಥೈಸಲು ಸಾಧ್ಯವಿಲ್ಲ ಎಂದಿತ್ತು. ಆದ್ರೆ ಈ ತೀರ್ಪನ್ನ ಮೇಲ್ಮನವಿ ನ್ಯಾಯಾಲಯವು ತಿರಸ್ಕರಿಸಿತ್ತು. ಬಳಿಕ ಮತ್ತೊಂದು ಅಪೀಲ್ ಕೋರ್ಟ್ ಮತ್ತೆ ಲೀಸಾಳ ಮರಣದಂಡನೆಗೆ ತಡೆ ನೀಡಿತ್ತು. ಆದರೆ ನಂತರ ಎರಡೂ ಮೇಲ್ಮನವಿಗಳನ್ನು ತೆಗೆದುಹಾಕಿ, ಲೀಸಾಗೆ ಮರಣದಂಡನೆ ಶಿಕ್ಷೆ ನೀಡಲು ಆದೇಶಿಸಲಾಗಿತ್ತು.
ಈ ಪ್ರಕರಣದ ವಿಚಾರಣೆ ನಡೆಯುವಾಗ, ಭಯಾನಕ ವಿವರವನ್ನ ಕೇಳಿ ಹಲವಾರು ಬಾರಿ ಸ್ವತಃ ನ್ಯಾಯಾಧೀಶರ ಪೀಠವೇ ಕಣ್ಣೀರಿಟ್ಟಿ ಪ್ರಸಂಗವೂ ನಡೆದಿತ್ತು.
ಇದನ್ನೂ ಓದಿ: ಮರಣದಂಡನೆ ಶಿಕ್ಷೆಗೆ ಒಳಗಾದ ಈ ಮಹಿಳೆಯ ಭಯಾನಕ ಕಥೆ ಎಂಥದ್ದು ಗೊತ್ತಾ?
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post