ಈಗಾಗಲೇ ಫಸ್ಟ್ ಲುಕ್ ಪೋಸ್ಟರ್ ಮೂಲಕ ಸಾಕಷ್ಟು ನಿರೀಕ್ಷೆ ಹುಟ್ಟಿಸಿರುವ, ಪ್ರಶಾಂತ್ ನೀಲ್ ಆ್ಯಕ್ಷನ್ ಕಟ್ ಹೇಳಲಿರುವ ‘ಸಲಾರ್’ ಸಿನಿಮಾ ಮತ್ತೆ ಸದ್ದು ಮಾಡಿದೆ. ಸಂಕ್ರಾಂತಿ ಹಬ್ಬದ ಪ್ರಯುಕ್ತ ಚಿತ್ರದ ಮುಹೂರ್ತ ಕಾರ್ಯಕ್ರಮವನ್ನ ನೆರವೇರಿಸಲು ‘ಸಲಾರ್’ ಚಿತ್ರತಂಡ ಸಿದ್ಧತೆ ಮಾಡಿಕೊಂಡಿದೆ. ಜನವರಿ 15ರಂದು .. ಅಂದ್ರೆ ನಾಳೆ ಹೈದರಾಬಾದ್ನಲ್ಲಿ ಬೆಳಗ್ಗೆ 11 ಗಂಟೆಗೆ ಚಿತ್ರದ ಮಹೂರ್ತ ನಡೆಯಲಿದೆ.
ಮುಖ್ಯ ಅತಿಥಿಯಾಗಿ ರಾಜ್ಯದ ಉನ್ನತ ಶಿಕ್ಷಣ ಸಚಿವರು ಮತ್ತು ಉಪಮುಖ್ಯಮಂತ್ರಿಗಳೂ ಆಗಿರುವ ಡಾ. ಸಿ.ಎನ್ ಅಶ್ವತ್ಥ್ ನಾರಾಯಣ್ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ನಟ ರಾಕಿಂಗ್ ಸ್ಟಾರ್ ಯಶ್ ಈ ಮುಹೂರ್ತ ಕಾರ್ಯಕ್ರಮದಲ್ಲಿ ಇರಲಿದ್ದು, ಟಾಲಿವುಡ್ನ ಖ್ಯಾತ ನಿರ್ದೇಶಕ ಎಸ್.ಎಸ್ ರಾಜಮೌಳಿ ಕೂಡ ಭಾಗವಹಿಸಲಿದ್ದಾರೆ ಅಂತ ಹೇಳಲಾಗ್ತಿದೆ.
ಅಂದ್ಹಾಗೇ, ಪ್ರಭಾಸ್ ಫಸ್ಟ್ ಲುಕ್ ಮೂಲಕ ಭಾರೀ ಸದ್ದು ಮಾಡಿದ್ದ ‘ಸಲಾರ್’ ತಂಡ, ನಟ ಪ್ರಭಾಸ್ಗೂ ಕುತೂಹಲ ಕೆರಳಿಸಿದೆ. ತಮ್ಮ ಫಸ್ಟ್ ಲುಕ್ಗೆ ಸಿಕ್ಕಂತ ಪ್ರಶಂಸೆ ಬಗ್ಗೆ ಪ್ರಭಾಸ್ ಮಾತನಾಡಿದ್ದಾರೆ. ‘ಈ ಸಿನಿಮಾದ ಮುಹೂರ್ತ ಮತ್ತು ಶೂಟಿಂಗ್ನಲ್ಲಿ ಪಾಲ್ಗೊಳ್ಳುವುದಕ್ಕೆ ನಾನು ತುಂಬ ಕೌತುಕನಾಗಿದ್ದೇನೆ. ನನ್ನ ಲುಕ್ ಹೇಗಿರಲಿದೆ ಅನ್ನೋದನ್ನ ಅಭಿಮಾನಿಗಳಿಗೆ ತೋರಿಸಲು ಅಷ್ಟೇ ಉತ್ಸುಕನಾಗಿದ್ದೇನೆ’ ಎಂದಿದ್ದಾರೆ.
‘ಸಲಾರ್’ ಸಿನಿಮಾ ಶುಕ್ರವಾರ ಮುಹೂರ್ತ ಮುಗಿಸಿಕೊಂಡು, ಇದೇ ತಿಂಗಳ ಅಂತ್ಯಕ್ಕೆ ಚಿತ್ರೀಕರಣಕ್ಕೂ ಚಾಲನೆ ನೀಡಲಿದೆ. ಈಗಾಗಲೇ ಅದಕ್ಕಾಗಿ ಭರ್ಜರಿ ತಯಾರಿ ಸಹ ಶುರುವಾಗಿದೆ. ಚಿತ್ರದಲ್ಲಿ ಇನ್ನಳಿದ ಪಾತ್ರಗಳ ಮಾಹಿತಿಯನ್ನ ಮುಂದಿನ ದಿನಗಳಲ್ಲಿ ಚಿತ್ರತಂಡ ನೀಡಲಿದೆ. ‘ಸಲಾರ್’ ಪ್ರಶಾಂತ್ ನೀಲ್ ನಿರ್ದೇಶನದಲ್ಲಿ, ಹೊಂಬಾಳೆ ಫಿಲ್ಮ್ಸ್ ಬ್ಯಾನರ್ನಡಿಯಲ್ಲಿ ತಯಾರಾಗ್ತಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post