ಹುಬ್ಬಳ್ಳಿ: ರಾಜ್ಯದಲ್ಲಿ ಕೊರೊನಾ ವ್ಯಾಕ್ಸಿನ್ ಪ್ರಯೋಗ ಯಶಸ್ವಿಯಾಗಿ ನಡೆದಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ತಿಳಿಸಿದ್ದಾರೆ.
ಇಂದು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಯುತ್ತಿದ್ದು, ಸಭೆಗೆ ತೆರಳುವ ಮುನ್ನ ಸಚಿವರು ಮಾಹಿತಿ ನೀಡಿದ್ದಾರೆ. ರಾಜ್ಯದಲ್ಲಿನ ಜಿಲ್ಲೆಗಳಿಗೆ ತೆರಳಿ ವ್ಯಾಕ್ಸಿನ್ ವಿತರಣೆ ಬಗ್ಗೆ ರಿವ್ಯೂವ್ ಮಾಡಲಾಗುತ್ತಿದೆ, ಪ್ರತೀ ಜಿಲ್ಲೆಯಲ್ಲಿ ಎರಡು ಕಡೆಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದೇನೆ. ಪ್ರಯೋಗ ಯಶಸ್ವಿಯಾಗಿ ನಡೆದಿದೆ, ಎಲ್ಲರೂ ವ್ಯಾಕ್ಸಿನ್ ತೆಗೆದುಕೊಳ್ಳುತ್ತಿದ್ದಾರೆ ಎಂದಿದ್ದಾರೆ.
ಇದೇ ವೇಳೆ ರಾಜ್ಯದಲ್ಲಿ ವ್ಯಾಕ್ಸಿನ್ ತೆಗೆದುಕೊಳ್ಳಲು ಜನರ ಹಿಂದೇಟು ಹಾಕುತ್ತಿದ್ದಾರೆ ಎಂಬ ವಿಚಾರವಾಗಿ ಮಾತನಾಡಿದ ಸುಧಾಕರ್ ದೇಶದಲ್ಲಿಯೇ ಕರ್ನಾಟಕ ರಾಜ್ಯದಲ್ಲಿ ಹೆಚ್ಚಿನ ಜನರು ನಿನ್ನೆ ವ್ಯಾಕ್ಸಿನ್ ತೆಗೆದುಕೊಂಡಿದ್ದಾರೆ. ಆರಂಭಿಕ ದಿನಗಳಲ್ಲಿ ಜನರಿಗೆ ಭಯ, ಆತಂಕ ಇರುವುದು ಸಹಜ, ಆದರೆ ಇದೀಗ ಎಲ್ಲ ಕಡೆ ವ್ಯಾಕ್ಸಿನ್ ತೆಗೆದುಕೊಳ್ಳುತ್ತಿದ್ದಾರೆ.
ಬಳ್ಳಾರಿ ಜಿಲ್ಲೆಯಲ್ಲಿ ವ್ಯಾಕ್ಸಿನ್ ಪಡೆದ ವ್ಯಕ್ತಿಗೆ ಹೃದಯಾಘಾತವಾದ ಬಗ್ಗೆ ಮಾತನಾಡಿ ಹೃದಯಾಘಾತಕ್ಕೂ ವ್ಯಾಕ್ಸಿನ್ಗೂ ಸಂಬಂಧ ಇಲ್ಲ.
ಮರಣೋತ್ತರ ವರದಿ ಬಂದಿದೆ, ಇದು ಬಹಳ ಗಂಭೀರ ವಿಷಯ. ಇದರ ಬಗ್ಗೆ ಸರಿಯಾದ ಮಾಹಿತಿಯನ್ನು ಜನರಿಗೆ ನೀಡಬೇಕಿದೆ, ಬಹಳ ಕಷ್ಟಪಟ್ಟು ನಮ್ಮ ವಿಜ್ಞಾನಿಗಳು ಲಸಿಕೆ ತಂದಿದ್ದಾರೆ ಎಂದಿದ್ದಾರೆ.
ಡಿ ಗ್ರೂಪ್ ನೌಕರರ ಮೇಲೆ ಲಸಿಕೆ ಪ್ರಯೋಗಕ್ಕೆ ಯು.ಟಿ ಖಾದರ್ ಅಸಮಾಧಾನ ಹೊರಹಾಕಿರುವ ಸಂಬಂಧ ಮಾತನಾಡಿದ ಸುಧಾಕರ್ ಆರೋಗ್ಯ ಕ್ಷೇತ್ರದಲ್ಲಿ ಕೆಲಸ ಮಾಡಿದವರಿಗೆ ಲಸಿಕೆ ನೀಡಲಾಗಿದೆ. ಪ್ರಜಾಪ್ರಭುತ್ವದ ಬುನಾದಿಯನ್ನು ಗಟ್ಟಿ ಮಾಡುವ ಪ್ರಯತ್ನ ಮಾಡುತ್ತಿದ್ದೇವೆ. ಜನರಿಗೆ ವ್ಯಾಕ್ಸಿನ್ ಬಗ್ಗೆ ಯಾವುದೇ ಆತಂಕ ಇಲ್ಲ, ವ್ಯಾಕ್ಸಿನ್ ಡಾಟಾ ಬಂದ ಮೇಲೆ ಇನ್ನು ತಯಾರಿಕಾ ಸಾಮರ್ಥ್ಯ ಹೆಚ್ಚಾಗಲಿದೆ ಎಂದು ತಿಳಿಸಿದ್ದಾರೆ.
ಸಚಿವ ಸಂಪುಟ ವಿಸ್ತರಣೆ ಬಳಿಕ ಶಾಸಕರ ಅಸಮಾಧಾನದ ವಿಚಾರವಾಗಿ ಮಾತನಾಡಿ ನಮ್ಮ ಮುಖ್ಯಮಂತ್ರಿ ಸಮರ್ಥರಿದ್ದಾರೆ.
ನಮ್ಮ ಹೈಕಮಾಂಡ್ ಬಲಿಷ್ಠವಾಗಿದೆ, ಯಾರಿಗೆ ಮಂತ್ರಿ ಸ್ಥಾನ, ಯಾವ ಇಲಾಖೆ ಕೊಡಬೇಕು ಅನ್ನೋದನ್ನ ಸರಿಯಾಗಿ ಮಾಡುತ್ತಾರೆ.
ಎಲ್ಲವನ್ನೂ ನಿಭಾಯಿಸುವ ಸಾಮರ್ಥ್ಯ ಅವರಲ್ಲಿದೆ, ಎಲ್ಲವೂ ಸರಿ ಹೋಗುತ್ತದೆ ಎಂದಿದ್ದಾರೆ.
ಸಿದ್ದರಾಮಯ್ಯ ಸಿಎಂ ಬದಲಾವಣೆ ವಿಚಾರವಾಗಿ ನುಡಿದಿರುವ ಭವಿಷ್ಯದ ಬಗ್ಗೆ ಪ್ರತಿಕ್ರಿಯೆ ನೀಡಿ ನಮ್ಮ ನಾಯಕರು ಅಮಿತ್ ಶಾ. ಅವರೇ ಯಡಿಯೂರಪ್ಪ ಅವರೇ ಸಿಎಂ ಎಂದಿದ್ದಾರೆ, ಈ ಅವಧಿ ಮಾತ್ರವಲ್ಲ ಮುಂದಿನ ಅವಧಿಯನ್ನು ಯಡಿಯೂರಪ್ಪ ನಿಭಾಯಿಸುತ್ತಾರೆ ಎಂದು ಟಾಂಗ್ ಕೊಟ್ಟಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post