ಬೆಂಗಳೂರು: ಅಕ್ರಮ ಆಸ್ತಿ ಸಂಪಾದನೆ ಪ್ರಕರಣದಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವ ದಿವಂಗತ ಜಯಲಲಿತಾ ಆಪ್ತೆ ಶಶಿಕಲಾ ನಟರಾಜನ್ ಜನವರಿ 27 ರಂದು ಬಿಡುಗಡೆಯಾಗುತ್ತಿದ್ದು, ನಿಗದಿತ ದಿನಾಂಕಕ್ಕಿಂತ 17 ದಿನ ತಡವಾಗಿ ರಿಲೀಸ್ ಆಗುತ್ತಿದ್ದಾರೆ.
ತಮಿಳುನಾಡು ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಶಶಿಕಲಾ ಅವರ ಬಿಡುಗಡೆ ವಿಚಾರದಲ್ಲಿ ಭಾರೀ ರಾಜಕೀಯ ಲೆಕ್ಕಾಚಾರಗಳು ಆರಂಭವಾಗಿದೆ. ಇದರ ನಡುವೆಯೇ ಜೈಲಿನ ಕಟ್ಟು ನಿಟ್ಟಿನ ನಿಯಮಗಳ ಅನ್ವಯ ಅವರ ಬಿಡುಗಡೆ ತಡವಾಗುತ್ತಿದೆ.
1997 ರಲ್ಲಿ ಅಕ್ರಮ ಹಣ ಸಂಪಾದನೆ ಪ್ರಕರಣ ಬೆಳಕಿಗೆ ಬಂದಿತ್ತು. ಈ ಪ್ರಕರಣದಲ್ಲಿ ಅಪರಾಧಿ ಶಶಿಕಲಾ ಎರಡು ಬಾರಿ ಬಂಧನವಾಗಿದ್ದರು. ಮೊದಲು ಜನವರಿ 31, 1997 ರಲ್ಲಿ ಅರೆಸ್ಟ್ ಆಗಿದ್ದ ಶಶಿಕಲಾ, ಪುನಃ 2014 ರಲ್ಲಿ ಬಂಧನ ಆಗಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಶಶಿಕಲಾಗೆ 4 ವರ್ಷ ಜೈಲು 10 ಕೋಟಿ ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿತ್ತು. ಇದರಂತೆ ಫೆಬ್ರವರಿ 15, 2017 ರಂದು ಶಶಿಕಲಾ ಜೈಲು ಸೇರಿದ್ದರು. ಈ ಪ್ರಕರಣ ಬೆಳಕಿಗೆ ಬಂದು ಸದ್ಯ 21 ವರ್ಷ ಆಗಿದೆ.
ಹೆಚ್ಚುವರಿ 17 ದಿನ ಯಾವುದು?
ನ್ಯಾಯಾಲದ ತೀರ್ಪಿನ ಅನ್ವಯ 4 ವರ್ಷ ಅಂದರೇ 2021ರ ಫೆಬ್ರವರಿ 14ರ ವರೆಗೂ ಅವರು ಶಿಕ್ಷೆ ಅನುಭವಿಸಬೇಕಾಗಿತ್ತು. ಆದರೆ ಶಶಿಕಲಾ ಶಿಕ್ಷ ಅನುಭವಿಸ ಬೇಕಾದ ಸಮಯದಲ್ಲಿ ಶಶಿಕಲಾ 17 ದಿನಗಳ ಕಾಲ ಪೆರೋಲ್ ಪಡೆದಿದ್ದರು. ಸದ್ಯ ನಿಯಮಗಳ ಅನ್ವಯ 4 ವರ್ಷ ಶಿಕ್ಷೆ ಮುಗಿಯುವುದಕ್ಕೆ ಪೆರೋಲ್ 17 ದಿನ ಸೇರಿ, ಅದರಲ್ಲಿ 35 ದಿನಗಳ ಕನ್ ಕರೆಂಟ್ ಶಿಕ್ಷೆ ಕಡಿತಗೊಳಿಸಿ ಜನವರಿ 27 ರಂದು ಬಿಡುಗಡೆ ಮಾಡಲಾಗುತ್ತಿದೆ. ಒಂದೊಮ್ಮೆ ಕನ್ಕರೆಂಟ್ ದಿನಗಳ ಶಿಕ್ಷೆ ಕಡಿತಗೊಳಿಸದಿದ್ದರೆ 2021ರ ಮಾರ್ಚ್ 21ಕ್ಕೆ ಬಿಡುಗಡೆ ಮಾಡಬೇಕಾಗಿತ್ತು.
ಶಶಿಕಲಾ ನಟರಾಜನ್ ಪೆರೋಲ್ ದಿನಗಳು
ಶಶಿಕಲಾ ತಮ್ಮ ನಾಲ್ಕು ವರ್ಷಗಳ ಶಿಕ್ಷೆಯ ಅವಧಿಯಲ್ಲಿ ಎರಡು ಬಾರಿ ಪೆರೋಲ್ ಪಡೆದುಕೊಂಡಿದ್ದರು. ಮೊದಲ ಬಾರಿಗೆ ಪತಿಗೆಯ ಅನಾರೋಗ್ಯ ಹಿನ್ನೆಲೆಯಲ್ಲಿ 2017ರ ಅಕ್ಟೋಬರ್ 06 ರಿಂದ 12ರ ವರೆಗೂ ಅಂದರೇ 5 ದಿನ. ಆ ಬಳಿಕ ಪತಿ ನಟರಾಜನ್ ಸಾವನ್ನಪ್ಪಿದ ಹಿನ್ನೆಲೆಯಲ್ಲಿ 2018ರ ಮಾರ್ಚ್ 20 ರಿಂದ 31ರ ವರೆಗೂ ಅಂದರೇ 12 ದಿನ ಪೆರೋಲ್ ಮೇಲೆ ಬಿಡುಗಡೆಯಾಗಿದ್ದರು.
ಶಶಿಕಲಾಗೆ ಪೆರೋಲ್ ರಜೆ ಆಗಿ ಏಕೆ ಕನ್ಸಿಡರ್ ಆಗಿಲ್ಲ ಯಾಕೆ?
ಸಾಮಾನ್ಯವಾಗಿ ಪೆರೋಲ್ ದಿನಗಳು ರಜೆ ಅಂತಾ ತಿರ್ಮಾನಿಸಲಾಗುತ್ತೆ. ಆದರೆ ಸರ್ಕಾರದ ಎಲ್ಲಾ ರಜೆಯಂತೆ ಜೈಲಿನ ಕೈದಿಗಳಿಗೂ ಸಹ ರಜೆ ಇರುತ್ತೆ. ಆದರೆ ಶಶಿಕಲಾ ನಟರಾಜನ್ ವಿಚಾರದಲ್ಲಿ ಅದು ಕನ್ಸಿಡರ್ ಆಗಿಲ್ಲ. ಕಾರಣ ಪರಪ್ಪನ ಅಗ್ರಹಾರದಲ್ಲಿದ್ದ ಶಶಿಕಲಾಗೆ ಯಾವುದೇ ರಜೆ ಲಭಿಸಿಲ್ಲ. ಏಕೆಂದರೆ ಶಶಿಕಲಾಗೆ ವಿಧಿಸಲಾಗಿದ್ದ ಶಿಕ್ಷೆಯಲ್ಲಿ ಈ ರಜೆಗಳಿಗೆ ನಿಯಮಗಳ ಅನ್ವಯ ಅವಕಾಶವಿಲ್ಲ. ಭ್ರಷ್ಟಾಚಾರ, ಜೀವಮಾನ ಶಿಕ್ಷೆ ಸೇರಿದಂತೆ ಕೆಲ ಗಂಭೀರ ಪ್ರಕರಣಗಳಲ್ಲಿ ಅಪರಾಧಿಗಳಿಗೆ ರಜೆ ನೀಡಲು ಅವಕಾಶವಿಲ್ಲ. ಆದ್ದರಿಂದ ಈ ಪ್ರಕರಣದಲ್ಲಿ ಶಶಿಕಲಾಗೆ ಪೆರೋಲ್ ಕನ್ಸಿಡರ್ ಆಗಿಲ್ಲ.
ಶಶಿಕಲಾ ನಟರಾಜನ್ ಕನ್ಕರೆಂಟ್ ಪಿರಿಯಡ್
ಪ್ರಕರಣದಲ್ಲಿ ಶಶಿಕಲಾ ನಟರಾಜನ್ 1997ರ ಜನವರಿ 31 ರಿಂದ ಫೆಬ್ರವರಿ 12ರ ವರೆಗೂ ಬಂಧನವಾಗಿ 13 ದಿನ ಜೈಲಿನಲ್ಲಿದ್ದರು. ಆ ಬಳಿಕ 2014ರ ಸೆಪ್ಟೆಂಬರ್ 27 ರಿಂದ ಅಕ್ಟೋಬರ್ 18ರ ವರೆಗೂ ಬಂಧನವಾಗಿ 22 ದಿನ ಜೈಲಿನಲ್ಲಿದ್ದರು. ಈ ಎರಡೂ ಅವಧಿಗಳ ಒಟ್ಟು 35 ದಿನಗಳ ಕಾಲ ಶಿಕ್ಷೆಗೂ ಮೊದಲು ಜೈಲಿನಲ್ಲಿದ್ದ ಕಾರಣ ಅವರಿಗೆ ಕನ್ಕರೆಂಟ್ ಪಿರಿಯಡ್ ಲಭಿಸಿದೆ. ನಾಲ್ಕು ವರ್ಷ ಶಿಕ್ಷೆ ಹಾಗೂ ಪೆರೋಲ್ ಅವಧಿ ಸೇರಿ 2021ರ ಮಾರ್ಚ್ 3ರಂದು ಬಿಡುಗಡೆಯಾಗಬೇಕಿತ್ತು. ಈಗ ಅದರಲ್ಲಿ 35 ದಿನ ಕಳೆದು ಜನವರಿ 27ಕ್ಕೆ ಬಿಡುಗಡೆಯಾಗಿದ್ದಾರೆ.
ಸದ್ಯ ಜನವರಿ 27ಕ್ಕೆ ಬಿಡುಗಡೆಯಾಗುತ್ತಿರುವ ಶಶಿಕಲಾ ಸಂತೋಷದಿಂದ ಇದ್ದಾರೆ ಎನ್ನಲಾಗಿದ್ದು, ಜೈಲಿನಲ್ಲಿ ಸಹಕೈದಿಗಳಿಗೆ ಸೀರೆ ಮತ್ತು ಸಿಹಿ ನೀಡಿದ್ದಾಳೆ ಎಂಬ ಮಾಹಿತಿ ಲಭಿಸಿದೆ. 27 ರಂದು ಜೈಲಿನಿಂದ ಬಿಡುಗಡೆ ಆಗಲಿರುವ ಶಶಿಕಲಾ, ಬೆಂಗಳೂರಿನಿಂದ ನೇರ ಹೊಸೂರಿಗೆ ಹೋಗಲಿದ್ದು, ಅಲ್ಲಿ ಮತ್ತೆ ರಾಜಕೀಯಕ್ಕೆ ಡೀ ಎಂಟ್ರಿ ನೀಡಲಿದ್ದಾರೆ. ಅಂದಹಾಗೇ ಜೈಲಿನಿಂದ ಬಿಡುಗಡೆಯಾಗುವ ವೇಳೆ ಶಶಿಕಲಾರನ್ನು ಮೆರವಣಿಗೆ ಮೂಲಕ ಕರೆದುಕೊಂಡು ಹೋಗಲು ಬೆಂಬಲಿಗರು ಅನುಮತಿ ಕೇಳಿದ್ದರು. ಆದರೆ ಪೊಲೀಸರು ಅನುಮತಿ ನಿರಾಕರಿಸಿದ್ದರು. ಇನ್ನು ಜನವರಿ 27ರ ಸಂಜೆ ಶಶಿಕಲಾ ಜೈಲಿನಿಂದ ಬಿಡುಗಡೆ ಆಗಲಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post