ಶಿವಮೊಗ್ಗ: ಜಿಲ್ಲೆಯ ಹೊರವಲಯದ ಹುಣಸೋಡು ಗ್ರಾಮದ ಕ್ರಷರ್ನಲ್ಲಿ ಗುರುವಾರ ರಾತ್ರಿ ನಡೆದ ಸ್ಫೋಟದ ಘಟನೆ ಜಿಲ್ಲೆಯಲ್ಲಿ ನಡೆಯುತ್ತಿರುವ ಕಲ್ಲು ಬಂಡೆಗಳ ಕರಾಳ ಮುಖವನ್ನು ಅನಾವರಣಗೊಳಿಸಿದೆ.
ಹತ್ತಾರು ವರ್ಷಗಳಿಂದ ಯಾವುದೇ ಎಗ್ಗಿಲ್ಲದೆ ನಡೆಯುತ್ತಿರುವ ಬಂಡೆಗಳ ಸ್ಫೋಟ ಹಾಗೂ ಇದಕ್ಕೆ ಬಳಕೆಯಾಗುತ್ತಿರುವ ಸ್ಫೋಟಕಗಳ ಮೂಲವನ್ನು ಕೆದಕುತ್ತಾ ಹೋದರೆ ಅದು ಭದ್ರಾವತಿ ತಾಲೂಕಿನ ಅಂತರಗಂಗೆ ಬಳಿಯ ಕೆ.ಎಚ್.ನಗರ ಅಂದರೆ ಕೆಂಗಲ್ ಹನುಮಂತಯ್ಯ ನಗರಕ್ಕೆ ಹೋಗಿ ನಿಲ್ಲುತ್ತದೆ.
ಈ ಗ್ರಾಮದಲ್ಲಿರುವ ಹೆಚ್ಚಿನವರು ಕಲ್ಲುಬಂಡೆಗಳನ್ನು ಸ್ಫೋಟಿಸಲು ಬಳಸುವ ಟ್ರ್ಯಾಕ್ಟರ್ ಕಂಪ್ರೆಸರ್ನ್ನು ಹೊಂದಿರುವುದು ಕಂಡು ಬರುತ್ತದೆ. ಸುತ್ತಮುತ್ತಲಿನ ಯಾವುದೇ ಹಳ್ಳಿಯ ರೈತರು ತಮ್ಮ ಜಮೀನಿನಲ್ಲಿರುವ ಕಲ್ಲು ಬಂಡೆಗಳನ್ನು ಸ್ಫೋಟಿಸಬೇಕೆಂದರೆ ಈ ಕೆ.ಎಚ್.ನಗರದವರನ್ನು ಸಂಪರ್ಕಿಸುವುದು ಸಾಮಾನ್ಯ ಎಂಬಂತಾಗಿದೆ.
ಈ ಮಾತಿಗೆ ಪುಷ್ಟಿ ನೀಡುವಂತೆ ಗುರುವಾರ ರಾತ್ರಿ ಶಿವಮೊಗ್ಗ ಹೊರ ವಲಯದ ಹುಣಸೋಡು ಗ್ರಾಮದ ಕ್ರಷರ್ನಲ್ಲಿ ಸಂಭವಿಸಿದ ಸ್ಫೋಟ ದುರಂತದಲ್ಲಿ ಮೃತಪಟ್ಟ ಪ್ರವೀಣ ಹಾಗೂ ಮಂಜುನಾಥ ಅವರು ಬಸವನಗುಡಿ ಮತ್ತು ಉಕ್ಕುಂದ ಕ್ರಾಸ್ನವರು. ಇದು ಕೆ.ಎಚ್.ನಗರದಿಂದ ಒಂದೂವರೆ ಕಿ.ಮೀ.ದೂರದಲ್ಲಿದೆ.
ಹೆಚ್ಚಿನ ಸಂಖ್ಯೆಯಲ್ಲಿ ಟ್ರ್ಯಾಕ್ಟರ್ ಕಂಪ್ರೆಸರ್ಗಳು ಕಂಡು ಬರುವ ಈ ಗ್ರಾಮದಲ್ಲಿ ಯಾರೂ ಕಲ್ಲುಬಂಡೆಯನ್ನು ಸ್ಫೋಟಿಸುವ ಪರವಾನಗಿ ಪಡೆದಿಲ್ಲ. ಅಕ್ರಮವಾಗಿ ಪೂರೈಕೆಯಾಗುವ ಜೆಲೆಟಿನ್ ಕಡ್ಡಿ ಹಾಗೂ ಡಿಟೋನೇಟರ್ಗಳನ್ನು ಬಳಸಿಯೇ ಕಲ್ಲು ಬಂಡೆಗಳನ್ನು ಸ್ಫೋಟಿಸುವ ಪ್ರವೃತ್ತಿ ಇಲ್ಲಿ ಕಂಡು ಬರುತ್ತದೆ.
ಹಾಗೆಯೇ ಇಲ್ಲಿನ ಕೆಲ ಯುವಕರು ಬೊಲೆರೋ ಪಿಕ್ ಅಪ್ ವಾಹನವನ್ನು ಬಾಡಿಗೆಗೆ ನೀಡುವುದು, ಬಾಡಿಗೆಗೆ ಚಲಾಯಿಸುವುದು ಸಾಮಾನ್ಯವಾಗಿದೆ. ಇದಕ್ಕೆ ಪುಷ್ಟಿ ನೀಡುವಂತೆ ಹುಣಸೋಡು ಗ್ರಾಮದಲ್ಲಿ ನಡೆದ ದುರ್ಘಟನೆಯಲ್ಲಿ ಸುಟ್ಟು ಕರಕಲಾಗಿರುವ ಬೊಲೆರೋ ವಾಹನ ದೇವರ ನರಸಿಪುರ ಗ್ರಾಮದ ರಾಮು ಎಂಬುವರಿಗೆ ಸೇರಿದ್ದು ಎಂದು ಹೇಳಲಾಗುತ್ತಿದೆ. ಘಟನಾ ಸ್ಥಳದಲ್ಲಿ ದೊರೆತ ಚಾಸಿ ಸಂಖ್ಯೆ ಆಧರಿಸಿ ತನಿಖೆ ಕೈಗೊಂಡಿರುವ ಪೊಲೀಸರು ವಾಹನ ಮಾಲೀಕ ರಾಮುವನ್ನು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ. ಇದನ್ನು ನಾಪತ್ತೆಯಾಗಿರುವ ಪುನೀತ್ ತೆಗೆದುಕೊಂಡು ಹೋಗಿದ್ದ. ಹಾಗಾಗಿ ಹೊಸಮನೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಾಪತ್ತೆಯಾಗಿರುವ ಪುನೀತ್ ತನ್ನದೇ ಸ್ವಂತ ಟಾಟಾ ಏಸ್ ಹೊಂದಿದ್ದರೂ ಅದನ್ನು ತೆಗೆದುಕೊಂಡಿಲ್ಲ.
ಹಾಗೆಯೇ ಇದೇ ದೇವರ ನರಸೀಪುರ ಗ್ರಾಮದ ಚಂದ್ರಶೇಖರ್ ಎಂಬುವರಿಗೆ ಸೇರಿದ ಬೊಲೆರೋವನ್ನು ಕೆ.ಎಚ್.ನಗರದ ಶಶಿ ಎಂಬಾತ ತೆಗೆದುಕೊಂಡು ಹೋಗಿದ್ದ ಎಂಬ ಮಾಹಿತಿ ಪೊಲೀಸರಿಗೆ ದೊರೆತಿದೆ. ಇನ್ನು ಘಟನೆ ನಡೆದ ಮರು ದಿನ ಹೊಸಮನೆ ಪೊಲೀಸ್ ಠಾಣೆಗೆ ತನ್ನ ಬೊಲೆರೋ ಕಳ್ಳತನವಾಗಿದೆ ಎಂದು ದೂರು ನೀಡಿದ್ದಾನೆ ಎನ್ನಲಾಗಿದೆ.
ಇನ್ನು ಗೌರಾಪುರದ ನಾಗ ಎಂಬುವನೂ ನಾಪತ್ತೆಯಾಗಿದ್ದಾನೆ. ಒಂದು ಕಾಲದಲ್ಲಿ ಏನೂ ಅಲ್ಲದ ಗದ್ದೆ ಕೆಲಸ ಮಾಡುವ ಈತ ಕೇವಲ ಎರಡರಿಂದ ಮೂರು ವರ್ಷದ ಈಚೆಗೆ ದೊಡ್ಡಮಟ್ಟದಲ್ಲಿ ಬೆಳೆದಿರುವುದು ಅನೇಕ ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ಒಟ್ಟಿನಲ್ಲಿ ಶಿವಮೊಗ್ಗದ ಘಟನೆಗೂ ಭದ್ರಾವತಿಯ ಕೆ.ಎಚ್.ನಗರಕ್ಕೂ ಇರುವ ಅವಿನಾಭಾವ ಸಂಬಂಧದ ಸರಿಯಾದ ತನಿಖೆ ನಡೆಸಿದರೆ ಇನ್ನಷ್ಟು ಸ್ಫೋಟಕ ಮಾಹಿತಿ ಹೊರ ಬೀಳಬಹುದು ಎನ್ನಲಾಗಿದೆ.
ವಿಶೇಷ ವರದಿ: ಪ್ರಸನ್ನ, ನ್ಯೂಸ್ ಫಸ್ಟ್, ಶಿವಮೊಗ್ಗ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post