ಟಾಪ್ 10 ಸುದ್ದಿಗಳ ಸಂಕ್ಷಿಪ್ತ ಹೂರಣ ಇಲ್ಲಿದೆ
1. ರಾಜಪಥ್ನಲ್ಲಿ ವಿಜಯನಗರ ಸಾಮ್ರಾಜ್ಯದ ಗತವೈಭವ
ಜನವರಿ 26ರಂದು 72ನೇಯ ಗಣರಾಜ್ಯೋತ್ಸವ ದಿನಾಚರಣೆ ಪ್ರಯುಕ್ತ ದೆಹಲಿಯ ರಾಜಪಥ್ ಆವರಣದಲ್ಲಿ ಸ್ತಬ್ಧಚಿತ್ರಗಳ ಮೆರವಣಿಗೆ ನಡೆಯಲಿದೆ. ಮೆರವಣಿಗೆಯಲ್ಲಿ ಗಣಿ ಜಿಲ್ಲೆ ಬಳ್ಳಾರಿಯ ವಿಜಯನಗರ ಸಾಮ್ರಾಜ್ಯದ ಗತವೈಭವ ಸಾರುವ ಸ್ತಬ್ಧ ಚಿತ್ರ ಭಾಗಿಯಾಗಲಿದೆ. ವಿಜಯನಗರ ಸಾಮ್ರಾಜ್ಯದ ಅರಸನಾಗಿದ್ದ, ಶ್ರೀಕೃಷ್ಣದೇವರಾಯನ ಮೂರ್ತಿಯನ್ನ ಪ್ರತಿಷ್ಠಾಪಿಸಲಾದ ಸಾರೋಟ್ನಲ್ಲಿ ಉಗ್ರನರಸಿಂಹ ಹಾಗೂ ಬಳ್ಳಾರಿ ಕನಕದುರ್ಗಮ್ಮ ಮೂರ್ತಿಯ ಸ್ತಬ್ಧಚಿತ್ರಗಳು ಈ ಬಾರಿ ಕೆಂಪು ಕೋಟೆಯಲ್ಲಿ ಗಮನ ಸೆಳೆಯಲಿವೆ.
2. ರಾಜಧಾನಿಯಲ್ಲಿ ಱಲಿಗೆ 2 ಲಕ್ಷ ಟ್ರ್ಯಾಕ್ಟರ್
ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿಯಲ್ಲಿ ನಡೆಯುತ್ತಿರುವ ಪ್ರತಿಭಟನೆ ಮತ್ತಷ್ಟು ತೀವ್ರತೆ ಪಡೆಯೋ ಸಾಧ್ಯತೆಯಿದೆ. ಜನವರಿ 26ರಂದು ಟ್ರ್ಯಾಕ್ಟರ್ ಱಲಿ ನಡೆಸಲು ರೈತರು ಮುಂದಾಗಿದ್ದಾರೆ. ಈ ಟ್ರ್ಯಾಕ್ಟರ್ ಱಲಿಯಲ್ಲಿ 2 ಲಕ್ಷ ಟ್ರ್ಯಾಕ್ಟರ್ಗಳು ಭಾಗವಹಿಸಲಿವೆ ಎಂದು ಹೇಳಲಾಗ್ತಿದೆ. ವಾಹನಗಳ ಸಂಚಾರಕ್ಕೆ ಅನುಕೂಲವಾಗುವಂತೆ 2,500 ಸ್ವಯಂಸೇವಕರನ್ನು ನಿಯೋಜಿಸಲಾಗುವುದು ಅಂತ ಕೀರ್ತಿ ಕಿಸಾನ್ ಯೂನಿಯನ್ ಅಧ್ಯಕ್ಷ ನಿರ್ಭಾಯ್ ಸಿಂಗ್ ಧುಡಿಕೆ ಹೇಳಿದ್ದಾರೆ. ಟ್ರ್ಯಾಕ್ಟರ್ ಱಲಿಯಲ್ಲಿ ಭಾಗವಹಿಸಲು ಪಂಜಾಬ್ನಿಂದ 1 ಲಕ್ಷಕ್ಕೂ ಹೆಚ್ಚು ಟ್ರ್ಯಾಕ್ಟರ್ಗಳು ಬರುವ ನಿರೀಕ್ಷೆಯಿದೆ.
3. ಲಾಲೂ ಯಾದವ್ ಆರೋಗ್ಯದಲ್ಲಿ ಮತ್ತೆ ಏರುಪೇರು
ಬಿಹಾರದ ಮಾಜಿ ಸಿಎಂ ಲಾಲೂ ಪ್ರಸಾದ್ ಯಾದವ್ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಶ್ವಾಸಕೋಶದ ಸೋಂಕಿಗೆ ತುತ್ತಾಗಿ ರಾಂಚಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರನ್ನು ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಲಾಲೂ ಪ್ರಸಾದ್ ಯಾದವ್ಗೆ ಗುರುವಾರ ಸಂಜೆಯೇ ಎದೆಯಲ್ಲಿ ನೋವು ಕಾಣಿಸಿಕೊಂಡಿತ್ತು. ಶುಕ್ರವಾರ ಅವರ ಆರೋಗ್ಯ ಸ್ಥಿತಿ ಗಂಭೀರವಾದ ಹಿನ್ನೆಲೆ ಅವರ ಮಗ ತೇಜಸ್ವಿ ಯಾದವ್ ಈ ಬಗ್ಗೆ ಜಾರ್ಖಂಡ್ ಸಿಎಂ ಹೇಮಂತ್ ಸೊರೆನ್ ಅವರನ್ನು ಭೇಟಿ ಮಾಡಿ ಚರ್ಚಿಸಿದ್ರು. ಅಂದಹಾಗೆ ಮೇವು ಹಗರಣ ಸಂಬಂಧ ಲಾಲೂ ಪ್ರಸಾದ್ ಯಾದವ್ ಶಿಕ್ಷೆಗೆ ಗುರಿಯಾಗಿ ಜೈಲಿನಲ್ಲಿದ್ರು.
4. ‘ದೇಶದ ನಾಲ್ಕು ದಿಕ್ಕಿಗೊಂದು ರಾಜಧಾನಿಯಾಗಲಿ’
ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ, ದೇಶಕ್ಕೆ 4 ರಾಜಧಾನಿ ನಿರ್ಮಿಸೋ ಪ್ರಸ್ತಾಪವಿಟ್ಟಿದ್ದಾರೆ. ನೇತಾಜಿ ಜನ್ಮದಿನಾಚರಣೆ ಅಂಗವಾಗಿ ನಿನ್ನೆ ಮಾತನಾಡಿದ ಮಮತಾ, ಭಾರತಕ್ಕೆ ಒಂದೇ ರಾಷ್ಟ್ರ ರಾಜಧಾನಿ ಇರಬೇಕಾ? ಪೂರ್ವ ಮತ್ತು ಪಶ್ಚಿಮ, ಉತ್ತರ ಹಾಗೂ ದಕ್ಷಿಣ ಭಾರತದಲ್ಲಿ ಹೀಗೆ ನಾಲ್ಕು ರಾಜಧಾನಿಗಳೇಕೆ ಇರಬಾರದು? ಅಂತ ಪ್ರಶ್ನಿಸಿದ್ದಾರೆ. ಈ ರೀತಿಯಾಗಿ 4 ರಾಜಧಾನಿಗಳನ್ನಾಗಿ ಮಾಡಿದ್ರೆ, ಸರದಿಯಂತೆ ಕಾರ್ಯ ನಿರ್ವಹಿಸಬಹುದು. ಪ್ರತಿಯೊಂದನ್ನೂ ದಿಲ್ಲಿಗೆ ಏಕೆ ಸೀಮಿತ ಮಾಡಬೇಕು ಅಂತ ಮಮತಾ ಬ್ಯಾನರ್ಜಿ ಪ್ರಶ್ನಿಸಿದ್ರು. 4 ರಾಷ್ಟ್ರ ರಾಜಧಾನಿಗಳ ಬೇಡಿಕೆಯನ್ನು ಸಂಸತ್ತಿನಲ್ಲಿ ಪ್ರಸ್ತಾಪಿಸಲು ಪಕ್ಷದ ಸಂಸದರಿಗೆ ಸೂಚಿಸಲಿದ್ದೇನೆ ಅಂತ ದೀದಿ ಹೇಳಿದ್ದಾರೆ.
5. ಶಶಿಕಲಾ ಆಯ್ತು, ಇದೀಗ ನಾದಿನಿಗೆ ಕೊರೊನಾ
ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿರೋ ತಮಿಳುನಾಡಿನ ಮಾಜಿ ಸಿಎಂ ಜಯಲಲಿತಾ ಆಪ್ತೆ ಶಶಿಕಲಾ ಕೊರೊನಾ ಸೋಂಕಿಗೀಡಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದೀಗ ಕಳೆದ 4 ವರ್ಷಗಳಿಂದ ಶಶಿಕಲಾ ಜೊತೆ ಜೈಲಿನಲ್ಲಿ ಒಂದೇ ಸೆಲ್ನಲ್ಲಿದ್ದ ಅವರ ನಾದಿನಿ ಇಳವರಸಿಗೂ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಶಶಿಕಲಾ ಅವರನ್ನು ದಾಖಲಿಸಿರೋ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಇಳವರಸಿಯನ್ನು ದಾಖಲಿಸೋ ಸಾಧ್ಯತೆಯಿದೆ. ಜನವರಿ 27ರಂದು ಶಶಿಕಲಾ ನಟರಾಜನ್ ಬಿಡುಗಡೆಯಾಗಲಿದ್ರೆ, ಇಳವರಸಿ ಫೆಬ್ರವರಿ 5ರಂದು ಬಿಡುಗಡೆಯಾಗಲಿದ್ದಾರೆ.
6. ಭಾರತಕ್ಕೆ ತಿಂಗಳಾಂತ್ಯದಲ್ಲಿ ಇನ್ನು 3 ರಫೇಲ್ ಆಗಮನ
ಈಗಾಗ್ಲೇ 8 ರಫೇಲ್ ಯುದ್ಧವಿಮಾನಗಳು ಭಾರತಕ್ಕೆ ಆಗಮಿಸಿವೆ. ಇನ್ನೂ 3 ಯುದ್ಧವಿಮಾನಗಳು ತಿಂಗಳ ಕೊನೆಯಲ್ಲಿ ಬರೋ ಸಾಧ್ಯತೆಯಿದೆ ಅಂತ ಭಾರತೀಯ ವಾಯುಪಡೆ ಮುಖ್ಯಸ್ಥ ರಾಕೇಶ್ ಕುಮಾರ್ ಸಿಂಗ್ ಭದೌರಿಯಾ ಹೇಳಿದ್ದಾರೆ. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಜೊತೆಗೆ 5ನೇ ಜನರೇಷನ್ ಯುದ್ಧವಿಮಾನ ಯೋಜನೆಯನ್ನ IAF ಆರಂಭಿಸಿದ್ದು, ಯುದ್ಧ ವಿಮಾನಗಳಲ್ಲಿ 6ನೇ ಜನರೇಷನ್ ಸಾಮರ್ಥ್ಯವನ್ನ ಅಳವಡಿಸೋ ಯೋಜನೆಯಿದೆ. ಪ್ರಸ್ತುತ ಸೇನೆ ಬಳಿಯಿರೋ ಆಧುನಿಕ ಯುದ್ಧವಿಮಾನಗಳಲ್ಲಿ ಅತ್ಯಾಧುನಿಕ ತಂತ್ರಜ್ಞಾನ, ಸೆನ್ಸರ್ಗಳನ್ನ ಅಳವಡಿಸೋದು ಗುರಿಯಾಗಿದೆ.
7. ಫೆಬ್ರವರಿಯಿಂದ ರೈಲುಗಳಲ್ಲೇ ಇ-ಕ್ಯಾಟರಿಂಗ್
ಭಾರತೀಯ ರೈಲ್ವೇ ಇಲಾಖೆ ಫೆಬ್ರವರಿಯಿಂದ ಪ್ರಯಾಣಿಕರಿಗೆ ಇ-ಕ್ಯಾಟರಿಂಗ್ ಸೌಲಭ್ಯವನ್ನು ಪುನಾರಂಭಿಸಲಿದೆ. ಇದಕ್ಕಾಗಿ ರೈಲ್ವೇ ಸಚಿವಾಲಯ IRCTCಗೆ ಅನುಮತಿ ನೀಡಿದೆ. ಆದ್ದರಿಂದ ರೈಲುಗಳಲ್ಲಿ ಪ್ರಯಾಣದ ಸಮಯದಲ್ಲಿ ಆರ್ಡರ್ಗಳನ್ನು ಕಾಯ್ದಿರಿಸಬಹುದಾಗಿದ್ದು, ಪ್ರಯಾಣಿಕರಿಗೆ ಈ ಹಿಂದಿನಂತೆ ಆಹಾರ ದೊರೆಯಲಿದೆ. ಆರಂಭದಲ್ಲಿ ಈ ಸೇವೆಯನ್ನು ದೇಶದ ಆಯ್ದ ರೈಲ್ವೇ ನಿಲ್ದಾಣಗಳಿಂದ ಮಾತ್ರ ಪ್ರಾರಂಭಿಸಲಾಗುತ್ತೆ. ಕೋವಿಡ್ ಪೂರ್ವದಲ್ಲಿ IRCTC 20 ಪ್ರತಿದಿನ ಸಾವಿರ ಆರ್ಡರ್ಗಳನ್ನು ಪಡೆಯುತ್ತಿತ್ತು. ಕಳೆದ ವರ್ಷ ಮಾರ್ಚ್ 23ರಂದು ಕೋವಿಡ್ನಿಂದಾಗಿ ಎಲ್ಲಾ ರೈಲು ನಿಲ್ದಾಣಗಳನ್ನು ಮುಚ್ಚುವುದಾಗಿ ಕೇಂದ್ರ ಘೋಷಿಸಿತ್ತು. ಇದಾದ ಕೆಲವು ತಿಂಗಳ ನಂತ್ರ ರೈಲು ಸೇವೆಗಳು ಪ್ರಾರಂಭವಾದಾಗ ಇ-ಕ್ಯಾಟರಿಂಗ್ ಅನ್ನು ನಿಲ್ಲಿಸಲಾಗಿತ್ತು.
8. ಚಿರತೆ ಕೊಂದು ತಿಂದ ದುರುಳರು
ತಮಿಳುನಾಡಿನ ಊಟಿಯಲ್ಲಿ ದುಷ್ಕರ್ಮಿಗಳು ಆನೆಗೆ ಬೆಂಕಿ ಹಚ್ಚಿ ಕೊಲೆ ಮಾಡಿರೋ ಘಟನೆ ಬೆನ್ನಲ್ಲೇ ಮತ್ತೊಂದು ಮೂಕಪ್ರಾಣಿಯ ಕೊಲೆ ಮಾಡಿರೋ ಘಟನೆ ಕೇರಳದಲ್ಲಿ ನಡೆದಿದೆ. ಕಾಡಿನಲ್ಲಿ ಓಡಾಡಿಕೊಂಡಿದ್ದ ಚಿರತೆಯನ್ನು ಬಲೆ ಹಾಕಿ ಹಿಡಿದ ಪಾಪಿಗಳು ಅದರ ಮಾಂಸವನ್ನು ತಿಂದು ತೇಗಿದ್ದಾರೆ. ಕೇರಳದ ಇಡುಕ್ಕಿ ಜಿಲ್ಲೆಯಲ್ಲಿ ಇಂತದ್ದೊಂದು ಕ್ರೂರ ಘಟನೆ ನಡೆದಿದೆ. ವಿನೋದ್ ಎಂಬಾತನ ಜಮೀನಿನಲ್ಲಿ ಹಾಕಿದ್ದ ಬಲೆಗೆ ಚಿರತೆ ಬಿದ್ದಿತ್ತು. ಇದನ್ನು ಕಂಡ ವಿನೋದ್, ತನ್ನ ಸ್ನೇಹಿತರಾದ ಕುರಿಕೋಸ್, ಬೀನು, ಕುಂಜಪ್ಪನ್ ಜೊತೆಗೂಡಿ ಚಿರತೆಯನ್ನ ಕೊಂದು ತಿಂದಿದ್ದಾರೆ. ಇದೀಗ ಆರೋಪಿಗಳನ್ನು ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ.
9. ಬೆಂಗಳೂರಿಗರೇ ಹುಷಾರ್, ಚಿರತೆ ಬಂತು..!
ಬೆಂಗಳೂರಿನ ಬೇಗೂರ್ ರಸ್ತೆಯ ಅಪಾರ್ಟ್‌ಮೆಂಟ್ ಬಳಿ ಶನಿವಾರ ಬೆಳಿಗ್ಗೆ ಚಿರತೆಯೊಂದು ಕಾಣಿಸಿಕೊಂಡಿದೆ. ಚಿರತೆಯನ್ನ ಕಂಡ ಬೇಗೂರಿನ ಅಪಾರ್ಟ್‌ಮೆಂಟ್ ನಿವಾಸಿಗಳು ಭಯಭೀತರಾಗಿದ್ರು. ಕೂಡಲೇ ಪೊಲೀಸ್, ಅಗ್ನಿಶಾಮಕ, ತುರ್ತು ಸೇವೆಗಳು ಹಾಗೂ ಅರಣ್ಯದ ಸಿಬ್ಬಂದಿಯನ್ನು ಸಂಪರ್ಕಿಸಿ, ಚಿರತೆಯನ್ನ ಹಿಡಿಯಲು ಒತ್ತಾಯಿಸಿದ್ದಾರೆ. ಆದ್ರೆ ಎಷ್ಟೇ ಪ್ರಯತ್ನಿಸಿದ್ರೂ ಚಿರತೆಯನ್ನ ಹಿಡಿಯುವಲ್ಲಿ ಸಿಬ್ಬಂದಿ ಯಶಸ್ವಿಯಾಗಿಲ್ಲ.
10. ‘ದ್ರಾವಿಡ್ ಇಮೇಲ್ ಓದಿ, ಬ್ಯಾಟಿಂಗ್ ಮಾಡಿ’
ಮಾಜಿ ಕ್ರಿಕೆಟಿಗ ರಾಹುಲ್ ದ್ರಾವಿಡ್ ಮಾಡಿರೋ ಇಮೇಲ್ ಪ್ರತಿಯನ್ನ ಇಂಗ್ಲೆಂಡ್ ತಂಡದ ಬ್ಯಾಟ್ಸ್‌ಮನ್‌ಗಳಿಗೆ ನೀಡಿ ಎಂದು ಮಾಜಿ ಆಟಗಾರ ಕೆವಿನ್ ಪೀಟರ್ಸನ್ ಹೇಳಿದ್ದಾರೆ. ಸ್ಪಿನ್ನರ್‌ಗಳಿಗೆ ಹೇಗೆ ಪರಿಣಾಮಕಾರಿಯಾಗಿ ಬ್ಯಾಟಿಂಗ್ ಮಾಡಬೇಕೆಂದು ರಾಹುಲ್ ದ್ರಾವಿಡ್ ಇಮೇಲ್ ಮಾಡಿದ್ರು. ಆ ಇಮೇಲ್ ಪ್ರತಿಯನ್ನ ಪ್ರಿಂಟ್ ತೆಗೆದುಕೊಂಡು ಇಂಗ್ಲೆಂಡ್ ತಂಡದ ಬ್ಯಾಟ್ಸ್‌ಮನ್‌ಗಳಾದ ಝ್ಯಾಕ್ ಕ್ರಾವ್ಲಿ ಹಾಗೂ ಡಾಮ್ ಸಿಬ್ಲಿಗೆ ನೀಡಬೇಕೆಂದು ಹೇಳಿದ್ದಾರೆ. ಪ್ರಸ್ತುತ ಶ್ರೀಲಂಕಾ ವಿರುದ್ಧ ನಡೆಯುತ್ತಿರೋ 2ನೇ ಟೆಸ್ಟ್ ಪಂದ್ಯದ 2ನೇ ದಿನದ ಕೊನೆಯ ಅವಧಿಯಲ್ಲಿ ಆತಿಥೇಯರ ಸ್ಪಿನ್ನರ್ ಲಸಿತ್ ಎಂಬುಲ್ಡೆನ್ಯಾ ಅವ್ರಿಗೆ ಕೆಟ್ಟದಾಗಿ ಈ ಇಬ್ಬರೂ ಬ್ಯಾಟ್ಸ್‌ಮನ್‌ಗಳು ವಿಕೆಟ್ ಒಪ್ಪಿಸಿದ್ರು.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post