ನವದೆಹಲಿ: ಜನವರಿ 16 ರಂದು ಆರಂಭದ ಕೊರೊನಾ ಲಸಿಕೆ ವಿತರಣೆ ಅಭಿಯಾನದಲ್ಲಿ ಇಂದು ಮಧ್ಯಾಹ್ನ 2 ಗಂಟೆ ವೇಳೆ ದೇಶದ 25 ಲಕ್ಷ ಮಂದಿಗೆ ವ್ಯಾಕ್ಸಿನೇಷನ್ ಮಾಡಲಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ.
ಮೊದಲ ಹಂತದ ವ್ಯಾಕ್ಸಿನೇಷನ್ ಡ್ರೈವ್ ಕುರಿತು ಮಾಹಿತಿ ನೀಡಿದ ಕೇಂದ್ರ ಆರೋಗ್ಯ ಇಲಾಖೆ ಕಾರ್ಯದರ್ಶಿ ರಾಜೇಶ್ ಭೂಷನ್, ದೇಶದ 25 ಲಕ್ಷ ಮಂದಿಗೆ ಇದುವರೆಗೂ ಲಸಿಕೆ ನೀಡಿದ್ದೇವೆ. ದೇಶದಲ್ಲಿ ಕೊರೊನಾ ಸೋಂಕಿತ ಸಕ್ರಿಯ ಪ್ರಕರಣಗಳು ಕಡಿಮೆಯಾಗಿದ್ದು, ಕೇವಲ 1.75 ಲಕ್ಷ ಸಕ್ರಿಯ ಪ್ರಕರಣಗಳು ಮಾತ್ರ ಇದೆ. ಸ್ಥಿರವಾಗಿ ಮತ್ತು ನಿರಂತರವಾಗಿ ಪ್ರಕರಣಗಳ ಸಂಖ್ಯೆ ಕಡಿಮೆ ಆಗುತ್ತಿದೆ. ಇನ್ನು ದೇಶದ ಎರಡು ರಾಜ್ಯ ಅಂದರೇ ಕೇರಳದಲ್ಲಿ 72,000 ಮತ್ತು ಮಹಾರಾಷ್ಟ್ರದಲ್ಲಿ 44 ಸಾವಿರ ಸಕ್ರಿಯ ಪ್ರಕರಣಗಳಿವೆ ಎಂದು ಹೇಳಿದರು.
ಇಡೀ ವಿಶ್ವದಲ್ಲೇ ಭಾರತ ಅತಿ ಹೆಚ್ಚು ವೇಗವಾಗಿ 10 ಲಕ್ಷ ಮಂದಿಗೆ ಲಸಿಕೆ ನೀಡಿದ ಸಾಧನೆ ಮಾಡಿದ್ದು, ಅಮೆರಿಕಾ ಈ ಸಾಧನೆ ಮಾಡಲು 10 ದಿನ, ಸ್ಪೇನ್ 12, ಇಸ್ರೇಲ್ 14, ಯುಕೆ 18, ಜರ್ಮನಿ 20, ಯುಎಇ 27 ಮತ್ತು ಇಟಲಿ 19 ದಿನಗಳನ್ನು ತೆಗೆದುಕೊಂಡಿತ್ತು ಎಂದರು.
ಇತ್ತ ಮೊದಲ ಹಂತದ ಕೊರೊನಾ ಲಸಿಕೆ ಅಭಿಯಾನ ಶೇ.60-70 ರಷ್ಟು ಸಾಧನೆ ಮಾಡಿದ ಬಳಿಕ ಸರ್ಕಾರ 2ನೇ ಹಂತದ ಅಭಿಯಾನವನ್ನು ಆರಂಭಿಸುವ ಸಾಧ್ಯತೆ ಎನ್ನಲಾಗಿದೆ. ಮೊದಲ ಹಂತದ ಲಸಿಕೆ ವಿತರಣೆ ಅಭಿಯಾನದಲ್ಲಿ ಒಂದು ಕೋಟಿ ಮಂದಿಗೆ ಲಸಿಕೆ ವಿತರಣೆ ಮಾಡುವ ಗುರಿಯನ್ನು ಭಾರತ ಹೊಂದಿದೆ.
ಇನ್ನು ದೇಶದ 146 ಜಿಲ್ಲೆಗಳಲ್ಲಿ ಕಳೆದ 7 ದಿನಗಳಿಂದ ಯಾವುದೇ ಹೊಸ ಕೊರೊನಾ ವರದಿಯಾಗಿಲ್ಲ. ಇದಕ್ಕೆ ಪ್ರಮುಖ ಕಾರಣ 19.5 ಕೋಟಿ ಕೋವಿಡ್ ಪರೀಕ್ಷೆಗಳನ್ನು ಇದುವರೆಗೂ ನಡೆಸಿದ್ದೇವೆ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಮಾಹಿತಿ ನೀಡಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post