ಭಾರತ.. ನಂಬಿಕೆ ಮತ್ತು ತತ್ಯ ಕಥಿತ ಇತಿಹಾಸದ ತಿಕ್ಕಾಟದ ಯುದ್ಧ ಭೂಮಿ.. ಪಾಶ್ಚಾತ್ಯ ಇತಿಹಾಸ ತಜ್ಞರ ಚಾಳಿಸು ಧರಿಸಿ ಅವರು ಬರೆದಿದ್ದನ್ನೇ ಸತ್ಯ ಎಂದು ನಂಬಿಸಿಕೊಂಡಿರುವ ಸಮಾಜ.. ಆದ್ರೆ ಸತ್ಯ ಸೂರ್ಯನಂತೆ.. ಎಷ್ಟೇ ಮೋಡ ಕವಿದರೂ ಮತ್ತೆ ಮತ್ತೆ ಪ್ರಕಾಶ ಮೂಡುತ್ತಲೇ ಇರುತ್ತೆ.. ಇತಿಹಾಸವೂ ಹಾಗೆಯೇ.. ಮುಚ್ಚಿಟ್ಟಷ್ಟೂ.. ಬಚ್ಚಿಟ್ಟಷ್ಟೂ.. ಕಂಡಿದ್ದನ್ನಷ್ಟೇ ನಂಬಿಕೊಂಡಿದ್ದನ್ನು ಅನಾಮತ್ತಾಗಿ ಮುರಿದು ಹಾಕಿ ಹೊಸ ಹೊಳವು ಮೂಡಿಸುವಂಥದ್ದು.. ಇದು ನಿಂತ ನೀರಲ್ಲ ಭೋರ್ಗರೆಯುವ ಪ್ರವಾಹ.. ಹಲವೊಮ್ಮೆ ಮಂದಗಾಮಿನಿ.. ಕೆಲವೊಮ್ಮೆ ಗುಪ್ತಗಾಮಿನಿ..
ಮನುಷ್ಯ ಭವಿಷ್ಯವನ್ನು ತಿಳಿಯಲು ಜ್ಯೋತಿಷ್ಯದ ಮೊರೆ ಹೋಗುತ್ತಾನೆ.. ಆದ್ರೆ ತನ್ನ ಭೂಮಿಯ ಆಳದಲ್ಲಿ ತನ್ನ ಭೂತ ಕಾಲ ಹುಡುಕುತ್ತಾನೆ.. ನಿನ್ನ ಇತಿಯಾಸ ತಿಳಿಯಲು ಇಲ್ಲೇ ನಿಲ್ಲು ಅಂತ ಭೂಮಿಯೂ ಸಂದೇಶ ನೀಡುತ್ತಲೇ ಇರುತ್ತೆ.. ಹಾಗೆ ಭೂಮಿ ನೀಡಿದ ಸಂದೇಶವೊಂದು ಇಂದು ಭಾರತ ಮಾತ್ರವಲ್ಲ ಇಡೀ ವಿಶ್ವದ ಇತಿಹಾಸದ ಭೂತ ಕನ್ನಡಿ ಮೇಲೆ ಕುಳಿತ ಧೂಳನ್ನು ಕೊಡವಿ ಹಾಕಿದೆ..
ಸಿನೋಲಿ ಇದು ಉತ್ತರ ಪ್ರದೇಶದ ಪುಟ್ಟ ಗ್ರಾಮ.. ರಾಷ್ಟ್ರರಾಜಧಾನಿ ದೆಹಲಿಯಿಂದ ಕೇವಲ 60 ಕಿಲೋ ಮೀಟರ್ ದೂರ ಇದ್ದರೂ ಕೃಷಿಯನ್ನೇ ಮೈಗೂಡಿಸಿಕೊಂಡಿರುವ ಹಸಿರು ಹಳ್ಳಿ.. ಆದ್ರೆ ಆ ವರ್ಷ ಈ ಗ್ರಾಮವನ್ನು ವಿಶ್ವದ ಅತ್ಯಂತ ಪ್ರಮುಖ ಸ್ಥಳಗಳ ನಕಾಶೆಯಲ್ಲಿ ಪರ್ಮನೆಂಟ್ ಜಾಗ ತಂದುಕೊಟ್ಟಿತ್ತು..
ಅದು 2005-06.. ಆಗ ಹೊಲದಲ್ಲಿ ಉಳುಮೆ ಮಾಡುತ್ತಿದ್ದ ರೈತರ ನೇಗಿಲು.. ಬರೀ ಹೊಲವನ್ನು ಮಾತ್ರ ಊಳುತ್ತಿರಲಿಲ್ಲ.. ಆದ್ರೆ ಕಣ್ಮರೆಯಾಗಿದ್ದ ಭವ್ಯ ಭಾರತದ ಇತಿಹಾಸದ ಬೆಲೆಕಟ್ಟಲಾಗದಂಥ ತಿಜೋರಿಯ ಬಾಗಿಲನ್ನೇ ತೆರೆದು ಹಾಕಿತ್ತು..
ಹೌದು.. ಅಂದು ರೈತರ ನೇಗಿಲಿಗೆ ಸಿಕ್ಕಿದ್ದು ಸಾಮಾನ್ಯ ಮಣ್ಣಲ್ಲ.. ಬದಲಿಗೆ ಸಾವಿರಾರು ವರ್ಷಗಳಿಗೂ ಅಧಿಕ ಹಳೆಯದಾದ ಮಣ್ಣಿನ ಪಾತ್ರೆಗಳು.. ಚಿನ್ನದ ಬಳೆಗಳು.. ತಾಮ್ರದ ತುಣುಕುಗಳು.. ಮತ್ತು ಇತಿಹಾಸದ ಬಹು ಅಮೂಲ್ಯ ಖಜಾನೆ..
ನಿಧಿ ಸಿಕ್ಕಂತಾಗಿತ್ತು ಗ್ರಾಮಕ್ಕೆ
ಸಮಯ ಹಿಡಿತು ಬುದ್ಧಿ ಬರಲು ಸರ್ಕಾರಕ್ಕೆ
ಯಾವಾಗ ತಮ್ಮ ಗ್ರಾಮದ ಜಮೀನಿನಲ್ಲಿ ಚಿನ್ನದ ಬಳೆಗಳು ಸಿಕ್ಕವೋ ಸ್ಥಳೀಯರಿಗೆ ದೊಡ್ಡ ನಿಧಿಯೇ ಸಿಕ್ಕಂತಾಗಿತ್ತು.. ಸಾಕ್ಷಾತ್ ಕುಬೇರನೇ ತನ್ನ ಸಂಪತ್ತನ್ನು ಇವರಿಗೆ ದಾನ ಮಾಡಿದ್ದಾನೆ ಅನ್ನೋ ಭಾವನೆ ಮೂಡಲು ಕಾರಣವಾಗಿತ್ತು.. ಹೀಗಾಗಿ.. ಸುತ್ತಮುತ್ತಲಿನ ಗ್ರಾಮಸ್ಥರೂ ಸಿನೋಲಿಗೆ ಲಗ್ಗೆ ಇಡಲು ಆರಂಭಿಸಿದ್ದರು.. ಜೊತೆಗೆ ತಮ್ಮ ಮನಸ್ಸಿಗೆ ಬಂದಂತೆ ನೆಲ ಅಗೆಯಲೂ ಆರಂಭಿಸಿದ್ದರು.. ಇದರಿಂದಾಗಿ ಸಾಕಷ್ಟು ಅಮೂಲ್ಯ ಸಾಕ್ಷ್ಯ ನಾಶ ಕೂಡ ಆಗಿತ್ತು.. ಯಾವಾಗ ಅಲ್ಲಿ ಚಿನ್ನ ಸಿಕ್ಕಿದೆ ಅನ್ನೋ ಸುದ್ದಿ ಸ್ಥಳೀಯ ಮಾಧ್ಯಮಗಳ ಕಿವಿಗೆ ಬಿತ್ತೋ ಅದು ದೊಡ್ಡ ಮಟ್ಟದ ಪ್ರಚಾರವನ್ನೂ ಪಡೆಯುತ್ತೆ.. ಆಗ ಸರ್ಕಾರ ಆರ್ಕಿಯಾಲಾಜಿಕಲ್ ಸರ್ವೇ ಆಫ್ ಇಂಡಿಯಾಗ ಸ್ಥಳ ಪರಿಶೀಲನೆಗೆ ಸೂಚನೆ ನೀಡುತ್ತಾರೆ.. ಅಲ್ಲಿಗೆ ಆಗಮಿಸಿದ ಆರ್ಕಿಯಾಲಾಜಿಕಲ್ ಸರ್ವೇ ಆಫ್ ಇಂಡಿಯಾದ ಅಧಿಕಾರಿಗಳಿಗೆ ತಾವು ಐತಿಹಾಸಿಕ ಉತ್ಖನಕ್ಕೆ ಸಾಕ್ಷಿಯಾಗುತ್ತಾರೆ ಅನ್ನೋ ಕಿಂಚಿತ್ ಮಾಹಿತಿ ಕೂಡ ಇರ್ಲಿಲ್ಲ..!
ಇತಿಹಾಸ ತಿಳಿಯದವರು ಇತಿಹಾಸ ಸೃಷ್ಟಿಸಲು ಸಾಧ್ಯವಿಲ್ಲ ಅಂತಾರೆ.. ಆದ್ರೆ ತಿಳಿದ ಇತಿಹಾಸವೇ ಬೇರೆ.. ವಾಸ್ತವತೆಯೇ ಬೇರೆ ಎಂದು ತಿಳಿದಾಗ ನಂಬಿಕೆಯನ್ನೇ ಸಂಶಯಿಸುವಂತಾಗುತ್ತೆ.. ಆದ್ರೆ ಅದಕ್ಕೆ ತಕ್ಕ ಪುರಾವೆಗಳು ಸಿಕ್ಕಾಗ ರೋಮಾಂಚನದ ಅನುಭವವಾಗೋದ್ರಲ್ಲಿ ಸಂಶಯವೇ ಇರೋದಿಲ್ಲ..!
ಆರ್ಕಿಯಾಲಾಜಿಕಲ್ ಸರ್ವೇ ಆಫ್ ಇಂಡಿಯಾದ ಅಧಿಕಾರಿಗಳು ಸಿನೋಲಿಗೆ ಬಂದ ಬಳಿಕ.. ನಾಜೂಕಿನಿಂದ ಉತ್ಖನನದ ಕಾರ್ಯ ಆರಂಭಿಸುತ್ತಾರೆ.. ಉತ್ಖನನ ಆರಂಭಿಸಿದ ಸಂಶೋಧಕರಿಗು ಕೂಡ ಮಣ್ಣಿನ ಮಡಕೆಗಳು.. ತಾಮ್ರದ ಚೂರು.. ಕೆಲ ಆಭರಣಗಳು.. ಚಿನ್ನದ ಬಳೆಗಳು ಸಿಗಲು ಆರಂಭಿಸುತ್ತವೆ.. ಆದ್ರೆ ಹೀಗೆ ಹಲವು ವಸ್ತುಗಳು ಸಿಕ್ಕರೂ ಸಹ ಯಾವುದೇ ರೀತಿಯಾದ ಅದ್ಭುತ ಅನ್ನುವಂಥ ಅನುಭವ ಸಂಶೋಧಕರಿಗೆ ಆಗೋದಿಲ್ಲ.. ಆದರೂ ಸಹ ಅಲ್ಲಿ ಸಿಗುತ್ತಿರುವ ವಸ್ತುಗಳು ಏನೋ ಸುಳಿವು ನೀಡುತ್ತಿವೆ ಅನ್ನೋದು ಮಾತ್ರ ಮತ್ತೆ ಮತ್ತೆ ಮನಸ್ಸಿನಲ್ಲಿ ಬರ್ತಾನೇ ಇರುತ್ತೆ…
ನಾಜೂಕಿನ ಉತ್ಖನನ.. ಅಲ್ಲಿ ಸಿಗುತ್ತಿರುವ ವಸ್ತುಗಳ ಆಧುನಿಕ ಸಂಶೋಧನೆ.. ಸಂಶೋಧಕರ ಕುತೂಹಲ ಕೆರಳಿಸುತ್ತಲೇ ಇರುತ್ತವೆ.. ಹೀಗೆ ನಿರಂತರ ಉತ್ಖನನದಿಂದಾಗಿ ಸಂಶೋಧಕರಿಗೆ ಒಂದು ಸಂಗತಿಯಂತೂ ಸ್ಪಷ್ಟವಾಗುತ್ತೆ.. ಇದು ಇದುವರೆಗೂ ಉತ್ಖನನದಲ್ಲಿ ಪತ್ತೆಯಾದ ಅತ್ಯಂತ ದೊಡ್ಡ ಸ್ಮಷಾನ ಅನ್ನೋದು ತಿಳಿದು ಬರುತ್ತೆ…
ಸ್ಮಾರ್ಥ ಪದ್ಧತಿಯಂತೆ ಹೂಳಲಾಗಿದ್ದ ದೇಹಗಳು
ಮತ್ತೂ ಕೆಲಕಡೆ ಶವ ದಹನ ಮಾಡಿದ ಕುರುಹೂ ಪತ್ತೆ
ಹೂಳುವಾಗಲೂ ಇಡಲಾಗಿತ್ತು ಅಪರೂಪದ ವಸ್ತುಗಳು
ಸಿನೋಲಿಯ ಉತ್ಖನನದ ವೇಳೆ ಕೆಲ ಅದ್ಭುತಗಳಿಗೆ ಸಂಶೋಧಕರು ಸಾಕ್ಷಿಯಾಗುತ್ತಾರೆ.. ಯಾಕಮದ್ರೆ ಈ ಸ್ಮಶಾನದಲ್ಲಿ ಹೂಳಲಾಗಿದ್ದವರ ದೇಹಳು ಸಾಮಾನ್ಯ ದೇಹಗಳಲ್ಲ.. ಬದಲಿಗೆ ಆ ಕಾಲದ ಕಲಿವೀರರ ದೇಹ ಅನ್ನೋದು ಅದರೊಟ್ಟಿಗೆ ಇಟ್ಟ ವಸ್ತುಗಳಿಂದ ಸ್ಪಷ್ಟವಾಗುತ್ತಲೇ ಹೋಗುತ್ತದೆ.. ಅದ್ರಲ್ಲೂ ಪ್ರಮುಖವಾಗಿ ಕಾಟಿನ ಆಕಾರದ ಶವ ಪೆಟ್ಟಿಗೆಯಲ್ಲಿ ಮೃತ ಯೋಧರ ದೇಹವನ್ನಿಟ್ಟು.. ಶವ ಪೆಟ್ಟಿಗೆಯ ಸುತ್ತ.. ಅವರು ಬಳಸಲಾಗುತ್ತಿದ್ದ ವಸ್ತುಗಳನ್ನು ಇಡಲಾಗಿರುತ್ತದೆ.. ಅದ್ರಲ್ಲೂ ಮೊಸರಿನ ಬಿಂದಿಗೆಗಳು.. ತುಪ್ಪದ ಪಾತ್ರೆಗಳು.. ಅವರು ಬಳಸಿದ್ದ ಆಯುಧಗಳು.. ಅದ್ಭುತವಾದ ಕೆತ್ತನೆಯಿರುವ ಗುರಾಣಿಗಳನ್ನು ಸಹ ಹೂಳಲಾಗಿರುತ್ತದೆ.. ಇನ್ನು ಶವ ಸಂಸ್ಕಾರ ಮಾಡಿರುವ ವಿಧಾನ ಗಮನಿಸಿದ ಸಂಶೋಧಕರಿಗೆ ಇದು ಸ್ಮಾರ್ಥ ಪದ್ಧತಿಯಂತೆ ಹೂಳಲಾಗಿರುವ ದೇಹಗಳು ಅನ್ನೋದು ತಿಳಿದು ಬರುತ್ತೆ.. ವಿಶೇಷ ಅಂದ್ರೆ ಹೀಗೆ ಹೂಳಲಾಗಿರುವ ಸಮಾಧಿ ಪಕ್ಕದಲ್ಲೇ ಕೆಲವೆಡೆ ಶವ ದಹನ ಮಾಡಿರುವ ಕುರುಹೂ ಪತ್ತೆಯಾಗುತ್ತೆ..
ಈ ಕಾರಣದಿಂದಾಗಿ ಎರಡು ಸಂಗತಿಗಳಂತೂ ಸಂಶೋಧಕರಿಗೆ ಸ್ಪಷ್ಟವಾಗುತ್ತೆ.. ಒಂದು ಸಂಗತಿಯೆಂದರೆ ಇಲ್ಲಿ ಹೂಳಲಾಗಿರುವ ದೇಹಗಳು ಯೋಧರದ್ದು ಮತ್ತು ಆಗಲೂ ಸಹಜ ಈ ಜನಾಂಗದಲ್ಲಿ ವಿಭಿನ್ನ ರೀತಿಯ ಶವ ಸಂಸ್ಕಾರ ಪದ್ಧತಿ ಜಾರಿಯಲ್ಲಿತ್ತು ಅನ್ನೋದು..
ಇನ್ನೂ ಪ್ರಮಖವಾದ ಸಂಗತಿಯೆಂದರೆ ಈ ಎಲ್ಲ ವಸ್ತುಗಳ ಕಾರ್ಬನ್ ಡೇಟಿಂಗ್, ಜೆನೆಟಿಕ್ ಸ್ಟಡಿ, ಸಿಟಿ ಸ್ಕ್ಯಾನ್, ಎಕ್ಸ್-ರೇ ಮಾಡಿದಾಗ ಮತ್ತೂ ಅಚ್ಚರಿ ಮೂಡಿಸುವಂಥ ಸಂಗತಿ ತಿಳಿದು ಬರುತ್ತೆ.. ಅದೆಂದರೆ ಇಲ್ಲಿ ಸಿಕ್ಕ ವಸ್ತುಗಳು ಮತ್ತು ಹೂಳಲಾಗಿರುವ ದೇಹಗಳು ಕನಿಷ್ಠ 4000-4500 ವರ್ಷಗಳ ಹಿಂದಿನದ್ದು ಅನ್ನೋದು..
ಯುದ್ಧದಲ್ಲಿ ಮಹಿಳೆಯರು ಪುರಷರಷ್ಟು ಪ್ರಭಾವಶಾಲಿಯಾಗಿರುತ್ತಾರಾ? ಮಹಿಳೆಯರನ್ನು ಗಡಿ ಕಾಯುವ ಯೋಧರನ್ನಾಗಿ ನೇಮಿಸಿಕೊಳ್ಳಲು ಆಗುತ್ತಾ? ಅನ್ನೋ ಪ್ರಶ್ನೆಗಳನ್ನೂ ಇವತ್ತಿನ ಸೋ ಕಾಲ್ಡ್ ಆಧುನಿಕ ಯುಗದಲ್ಲೂ ಕೇಳಲಾಗುತ್ತೆ.. ಆದ್ರೆ.. ಬರೋಬ್ಬರಿ 4500 ವರ್ಷಗಳ ಹಿಂದೆ ಭಾರತದ ನೆಲದಲ್ಲಿ ಅದ್ರಲ್ಲೂ ಸಿನೋಲಿಯಲ್ಲಿ ವೀರ ಯೋಧೆಯರು ಪುರುಷರಷ್ಟೇ ಯುದ್ಧ ಕೌಶಲ್ಯ ಹೊಂದಿದ್ದರು.. ಆ್ಯಕ್ಟಿವ್ ಯುದ್ಧದಲ್ಲೂ ಪಾಲ್ಗೊಳ್ಳುತ್ತಿದ್ದರು ಅಂದ್ರೆ ಅಚ್ಚರಿ ಎನಿಸಬಹುದು..
ಆದ್ರೆ ಇಲ್ಲಿ ಸಿಕ್ಕಿರುವ ಸಮಾಧಿಯ ಸಂಶೋಧನೆ ಮಾಡಿದಾಗ ಇಂಥದ್ದೊಂದು ಅಪರೂಪದ ಸಂಗತಿ ಬಯಲಾಗಿದೆ.. ಈ ಸಮಾಧಿಯಲ್ಲಿ ಕೇವಲ ಆ ಯೂಧೆಯರು ಬಳಸುತ್ತಿದ್ದ ಖಡ್ಗದಂಥ ಆಯುಧ ಮಾತ್ರವಲ್ಲ.. ಬಿಲ್ಲು.. ಬಾಣಗಳೂ ಸಿಕ್ಕಿವೆ..
ವಿಶೇಷ ಅಂದ್ರೆ ಮಹಿಳಾ ಯೋಧರ ಗುರಾಣಿ ಪುರಷರ ಗುರಾಣಿಯಂತೆ ಇಲ್ಲ.. ಬದಲಿಗೆ ಪುರುಷರ ಗುರಾಣಿ ತಾಮ್ರ ಮತ್ತು ಕಟ್ಟಿಗೆಯನ್ನು ಹೊಂದಿದ್ದರೆ.. ಮಹಿಳೆಯರ ಗುರಾಣಿ ಅದ್ಭುತ ಡಿಸೈನ್ ಅನ್ನು ಹೊಂದಿದೆ.. ಜೊತೆಗೆ ಯುದ್ಧದಲ್ಲಿಯೇ ಅವರು ವೀರ ಮರಣವನ್ನಪ್ಪಿದ್ದರು ಅಂತ ಹೇಳೋದಕ್ಕೆ ಅವರ ದೇಹದಲ್ಲಾದ ಗಾಯಗಳು ಸಾಕ್ಷಿಯಾಗಿ ನಿಲ್ಲುತ್ತವೆ.. ಹೆಚ್ಚಾಗಿ ಸಾವನ್ನಪ್ಪದ ಯೋಧರ ಕಾಲುಗಳು ಕತ್ತರಿಸಲ್ಪಟ್ಟಿರೋದು ಗೋಚರಿಸುತ್ತೆ..
ಹರಪ್ಪಾ ನಾಗರಿಕತೆ ವೇಳೆಯಲ್ಲಿದ್ದರೂ ಇದು ವಿಭಿನ್ನ
ಇಡೀ ವಿಶ್ವಕ್ಕೇ ಅಚ್ಚರಿ ಮೂಡಿಸುತ್ತಿದೆ ರಥದ ಉತ್ಖನನ
ಹೌದು.. ಉತ್ತರ ಭಾರತದಲ್ಲಿ ನಡೆದ ಉತ್ಖನದಲ್ಲಿ ಬಹುತೇಕ ಹರಪ್ಪ ನಾಗರಿಕತೆ ನೆರಳು ಕಂಡು ಬರ್ತಿತ್ತು.. ಹಲವು ಸ್ಥಳಗಳಲ್ಲಿ ಸಿಕ್ಕ ವಸ್ತುಗಳನ್ನು ಸಂಶೋಧನೆಗೆ ಒಳಪಡಿಸಿದಾಗ.. ಹರಪ್ಪಾ ನಾಗರಿಕತೆಯ ಅವನತಿ ನಂತರ ಅಲ್ಲಿಂದ ಚೆದುರಿದ ಜನರು.. ಬಳಸುತ್ತಿದ್ದ ವಸ್ತುಗಳು ಇವು ಅಂತಾ ಹೇಳಲಾಗ್ತಿತ್ತು..
ಆದ್ರೆ.. ಸಿನೋಲಿಯಲ್ಲಿ ನಡೆದ ಉತ್ಖನನ ಮಾತ್ರ ಸಂಪೂರ್ಣ ಸ್ವತಂತ್ರ ನಾಗರಿಕತೆಯನ್ನು ಹೊಂದಿರೋವಂಥದ್ದು ಅನ್ನೋದನ್ನು ಬಯಲು ಮಾಡಿದೆ.. ಸಿನೋಲಿಯಲ್ಲಿನ ಜನರಿಗೆ ಹರಪ್ಪ ನಾಗರಿಕತೆಯ ಜನರೊಂದಿಗೆ ಸಂಪರ್ಕ ಇರೋ ಸಾಧ್ಯತೆ ಇದೆ.. ಇವರ ನಡುವೆ ಸಾಮ್ಯತೆ ಮಾತ್ರ ಕಂಡು ಬರೋದಿಲ್ಲ.. ಯಾಕಂದ್ರೆ ಹರಪ್ಪ ನಾಗರಿಕತೆಯ ಜನರು ಶಾಂತಿ ಪ್ರಿಯರು.. ಅವರಲ್ಲಿ ಯಾವುದೇ ಯುದ್ಧದ ಆಯುಧಗಳಾಗಲೀ.. ಲಕ್ಷಣಗಳಾಗಲೀ ಕಂಡು ಬರೋದಿಲ್ಲ.. ಆದ್ರೆ ಸಿನೋಲಿಯ ಜನರು ಮಾತ್ರ ಯುದ್ಧ ಮಾಡುತ್ತಿದ್ದ ಮಹಾನ್ ಯೋಧರು ಅನ್ನೋದನ್ನು ಉತ್ಖನನ ಬಯಲು ಮಾಡಿದೆ..
ಸಿನೋಲಿಯಲ್ಲಿ ಸಿಕ್ಕ ಹಲವು ಸಮಾಧಿಗಳು ಆ ಕಾಲದ ಮಾಹನ್ ಯೋಧರ ಅಥವಾ ರಾಜರ ಅಥವಾ ತಮ್ಮ ಸಮುದಾಯದ ಮುಖಂಡರದ್ದು ಅನ್ನೋದನ್ನು ಸಂಶೋಧಕರು ಕೂಡ ಕಂಡು ಕೊಂಡಿದ್ದಾರೆ. ಯಾಕಂದ್ರೆ.. ಅಲ್ಲಿ ಸಿಕ್ಕಿರುವ ಎರಡು ಅಲಗಿನ ತಾಮ್ರದ ಅತಿ ಹರಿತವಾದ ಕತ್ತಿಗಳು.. ಶವ ಪೆಟ್ಟಿಗೆಯ ಮೇಲೆ ಯಮನ ಆಕೃತಿ ಹೊಂದಿರುವ ಕೆತ್ತನೆಗಳು.. ರಾಜ ದಂಡಗಳು.. ಹಲವು ಆಯುಧಗಳು.. ಅದ್ಭುತ ಡಿಸೈನ್ ಹೊಂದಿರುವ ಗುರಾಣಿಗಳು ಸಿಕ್ಕಿವೆ.. ಅಷ್ಟೇ ಅಲ್ಲ ಎಲ್ಲಕ್ಕಿಂತ ಮುಖ್ಯವಾಗಿ ಬರೋಬ್ಬರಿ ಮೂರು ರಥಗಳು ಸಿಕ್ಕಿರೋದು ಮಾತ್ರ ಭಾರತದ ಉತ್ಖನನ ಇತಿಹಾಸದಲ್ಲಿ ಪ್ರಮುಖ ಘಟ್ಟವಾಗಿದೆ..
ರಥ ಅಂದಾಕ್ಷಣ ಇಂದಿಗೂ ನಮಗೆ ರಥದ ಮೇಲೆ ನಿಂತು ಅರ್ಜುನನಿಗೆ ಭಗವದ್ಗೀತೆ ಭೋದಿಸುತ್ತಿರೋ ಕೃಷ್ಣನ ಚಿತ್ರ ನೆನಪಾಗುತ್ತದೆ.. ರಥ ಅಂದಾಕ್ಷಣಾ ರಮಾನಂದ ಸಾಗರ್ ಅವರ ಧಾರಾವಾಹಿಗಳು ನೆನಪಾಗುತ್ತವೆ.. ಹಂಪಿಯ ಕಲ್ಲಿನ ರಥ ಮೆರಗನ್ನು ಹೆಚ್ಚಿಸುತ್ತದೆ.. ಕೋನಾರ್ಕ್ ಸೂರ್ಯ ದೇವಾಲಯದ ರಥ ಮನಸ್ಸನ್ನು ಸೆಳೆಯುತ್ತದೆ.. ಆದ್ರೆ.. ಇಲ್ಲಿಯವರೆಗೂ ಕ್ರಿಶ್ತ ಪೂರ್ವ ಕಾಲದ ರಥ ಮಾತ್ರ ಭಾರತದಲ್ಲಿ ಪತ್ತೆಯಾಗಿರಲಿಲ್ಲ..
ರಾಮಾಯಣ, ಮಾಹಾಭಾರತದಂಥ ಮಹಾಕಾವ್ಯಗಳಲ್ಲಿ ಬರುತ್ತಿದ್ದ ರಥದ ವರ್ಣನೆ ಕೇವಲ ಕಾಲ್ಪನಿಕ ಅಂತಾನೇ ಸಂಶೋಧಕರು ಭಾವಿಸುವಂತಾಗಿತ್ತು.. ಸೋ ಕಾಲ್ಡ್ ಪೌರಾತ್ಯ ಇತಿಹಾಸಕಾರರು ಕೂಡ ರಥವೇನಿದ್ದರೂ ಮೆಸಟೋನಿಯಾ, ಗ್ರೀಕ್ ನಾಗರಿಕತೆಯಲ್ಲಿ ಮಾತ್ರ ಕಂಡು ಬರುವಂಥದ್ದು.. ಭಾರತಕ್ಕೂ ಅವರೇ ಅದನ್ನು ತಂದಿದ್ದು.. ಅದ್ರಲ್ಲೂ ಯುದ್ಧದಲ್ಲಿ ಬಳಕೆಯಾಗುವ ರಥ ಮತ್ತು ಕುದುರೆಗಳನ್ನು ಭಾರತಕ್ಕೆ ತಂದಿದ್ದೇ ಆಕ್ರಮಣಕಾರರು.. ಅದ್ರಲ್ಲೂ ಇಂದು ಬಹುತೇಕ ಸುಳ್ಳು ಎಂತಲೇ ನಿರೂಪಿತವಾಗುತ್ತಿರುವ ಆರ್ಯನ್ ಆಕ್ರಮಣಕಾರರು ಅಂತಾ ಹೇಳಲಾಗ್ತಿತ್ತು…
ಆದ್ರೆ ಈ ಎಲ್ಲ ಇತಿಹಾಸ ಕಾರರ ವಾದವನ್ನೂ ಸಿನೋಲಿ ಉತ್ಖನನ ಬುಡಮೇಲು ಮಾಡಿ ಹಾಕಿದೆ.. ಗ್ರೀಕರು ರಥ ಬಳಸುತ್ತಿದ್ದಕ್ಕಿಂತ ಎರಡು ಸಾವಿರ ವರ್ಷಗಳ ಹಿಂದೆಯೇ ಭಾರತ ಭೂಮಿಯಲ್ಲಿ ಸಿನೋಲಿಯ ಯೋಧರು ರಥ ಬಳಸುತ್ತಿದ್ದುದ್ದನ್ನು ಅದು ತೆರದಿಟ್ಟಿದೆ.. ಅಷ್ಟು ಮಾತ್ರವಲ್ಲ ಈ ರಥ ಕೂಡ ಸಾಮಾನ್ಯ ರಥ ಅಲ್ಲ.. ಅದ್ಭುತ ಕಲಾಕೃತಿಯನ್ನು ಹೊಂದಿರುವ ರಥ.. ಇಬ್ಬರು ಯೋಧರು ನಿಂತು ಯುದ್ಧಕ್ಕೆ ತೆರಳಬಹುದಾದಂಥ ರಥ.. ಅಷ್ಟೇ ಅಲ್ಲ ಕುದುರೆಯನ್ನು ಕಟ್ಟಿ ಓಡಿಸುತ್ತಿದ್ದಂಥ ರಥವಿದು ಅನ್ನೋ ಅಚ್ಚರಿಯನ್ನೂ ಇದು ಮೂಡಿಸಿದೆ..
ಒಂದೆಡೆ ಆ ಕಾಲದ ಯಾವ ನಾಗರೀಕತೆಯಲ್ಲೂ ಕಂಡು ಬಾರದಂಥ ಅದ್ಭುತ ಹಾಗೂ ನೈಪುಣ್ಯಕಾರಕ ಆಭರಣಗಳು.. ಅದ್ರಲ್ಲೂ ಇಂದಿಗೂ ಕಣ್ಣು ಕುಕ್ಕುವಂತಿರುವ ಚಿನ್ನದ ಬಳೆಗಳು.. ಇಂದಿಗೂ ಹೊಳಪ ಕಳೆದುಕೊಳ್ಳದಿರೋವಂಥ ತಾಮ್ರ ಉತ್ಪಾದಿಸುವ ಪ್ರಾವೀಣ್ಯತೆ ಪಡೆದಿದ್ದ ಖನಿಜಶಾಸ್ತ್ರಜ್ಞರು.. ಹರಿತವಾದ ಖಡ್ಗ, ಆಯುಧ, ಬಿಲ್ಲು-ಬಾಣದ ಬಳಕೆ ತಿಳಿದಿದ್ದ ಯೋಧರು.. ಮತ್ತೊಂದೆಡೆ ಇಂದಿಗೂ ಅಚ್ಚರಿ ಮೂಡಿಸುವಂಥ ಮಹಿಳಾ ಯೋಧರ ಪಡೆಯನ್ನು ಅಂದೇ ಹೊಂದಿದ್ದ ನಾಗರಿಕತೆ.. ಹೀಗೆ.. ಎಲ್ಲ ದೃಷ್ಟಿಯಿಂದಲೂ ಅತ್ಯಂತ ಮಹತ್ವ ಪಡೆದಿರೋ ಆ ಸಮುದಾಯದಕುರಿತು ಇನ್ನೂ ಸಂಶೋಧನೆಯಾಗಬೇಕಿದೆ.. ಸಿನೋಲಿ ಗ್ರಾಮಸ್ಥರೇ ಹೇಳುವಂತೆ ಇಂದಿಗೂ ಬೇರೆ ಬೇರೆ ಸ್ಥಳಗಳಲ್ಲಿ ಹಲವು ವಸ್ತುಗಳು ಅಲ್ಲಿ ಸಿಗುತ್ತಿವೆಯಂತೆ.. ಹೀಗಾಗಿ ಇಡೀ ಪ್ರದೇಶದ ಉತ್ಖನನ ನಡೆಯಬೇಕಿರೋದು ಸದ್ಯದ ಜರೂರತ್ತು.. ಕೇಂದ್ರ ಸರ್ಕಾರ, ಉತ್ತರ ಪ್ರದೇಶ ಸರ್ಕಾರಗಳು ಕೂಡ ಇದನ್ನು ಯುದ್ಧೋಪಾದಿಯಲ್ಲಿ ಮಾಡಬೇಕಿದೆ.. ಯಾಕಂದ್ರೆ ಎಷ್ಟೇ ಅಂದ್ರೂ ಯಾರಿಗೆ ತಮ್ಮ ಇತಿಹಾಸ ತಿಳಿದಿಲ್ಲವೋ ಅಂಥವರು ಇತಿಹಾಸವನ್ನೂ ಸೃಷ್ಟಿಸಲು ಸಾರ್ಧಯವಿಲ್ಲ ಅಲ್ಲವೇ..?!
ಸಿನೋಲಿ ಅನ್ನೋ ಗ್ರಾಮದ ಉಲ್ಲೇಖ ಮಹಾಭಾರತದಲ್ಲಿಯೂ ಬಂದಿದೆ.. ಪಾಂಡವರಿಗಾಗಿ ಶ್ರೀಕೃಷ್ಣ ಪರಮಾತ್ಮ ಕೇಳಿದ ಐದು ಗ್ರಾಮಗಳಲ್ಲಿ ಇದೂ ಒಂದು ಅಂತಾ ಹೇಳಲಾಗ್ತಿದೆ.. ಇಂಥ ಐತಿಹಾಸಿಕ ಮಹತ್ವವುಳ್ಳ ಈ ನಗರ ಭಾರತದ ಇತಿಹಾಸಕ್ಕೆ ಮೆತ್ತಿಕೊಂಡಿದ್ದ ಧೂಳನ್ನೂ ಕಳಚುತ್ತಿರೋದು ಸೋಜಿಗವೇ ಸರಿ..
ವಿಶೇಷ ವರದಿ: ರಾಘವೇಂದ್ರ ಗುಡಿ, ಡಿಜಿಟಲ್ ಡೆಸ್ಕ್
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post