ಕೆಲವು ಗೋಪುರಗಳು ಗಾಳಿ ಬೀಸೋವರೆಗೂ ಉಕ್ಕಿನ ಗೋಪುರ ಅಂತಲೇ ಅನಿಸುತ್ತೆ. ಹೊಳೆಯುವುದೆಲ್ಲ ಬೆಂಕಿಗೆ ಬೀಳೋವರೆಗೂ ಚಿನ್ನವೇ ಅನಿಸುತ್ತೆ. ಆದ್ರೆ ಜೋರಾಗಿ ಗಾಳಿ ಬೀಸಿದಾಗ ಗೋಪುರಗಳು ಉರಳಿ ಹೋದಾಗ, ಬೆಂಕಿಗೆ ಬಿದ್ದು ಹೊಳಪು ಮಾಸಿದಾಗಲೇ ಅವುಗಳ ನಿಜಬಣ್ಣದ ಅರಿವಾಗುತ್ತೆ. ಅಂಥದ್ದೇ ಪರಿಸ್ಥಿತಿಗೆ ಇಂದು ಚೀನಾ ಸಿಲುಕಿದೆ. ಅಷ್ಟೇ ಅಲ್ಲ ಭಾರತದ ಜೊತೆ ಕಿರಿಕ್ ಮಾಡಿಕೊಂಡು ಸಾಕಷ್ಟು ಕಳೆದುಕೊಳ್ಳುವಂತಾಗಿದೆ.
ನಿಮಗೆ ನಮ್ಮ ಸ್ನೇಹಿತರ ಬಗ್ಗೆ ಹೆಚ್ಚೇನೂ ಗೊತ್ತಿರದೇ ಇದ್ರೂ ತೊಂದರೆಯಿಲ್ಲ. ಆದ್ರೆ ವೈರಿಯ ಬಗ್ಗೆ ಸಂಪೂರ್ಣ ಅರಿವಿರಬೇಕು. ನೀವು ಎಷ್ಟೇ ಬಲಶಾಲಿಯಾಗಿದ್ರೂ ನಿಮ್ಮ ವೈರಿಗಳ ಸಾಮರ್ಥ್ಯವನ್ನು ಚೆನ್ನಾಗಿ ಅರಿತಿರಬೇಕು. ಯಾಕಂದ್ರೆ ಯುದ್ಧಭೂಮಿಯಲ್ಲಿ ಒಂಚೂರು ಎಚ್ಚರ ತಪ್ಪಿದ್ರೂ ಇಂದು ಚೀನಾಕ್ಕೆ ಬಂದ ಸ್ಥಿತಿಯೇ ಬರೋದ್ರಲ್ಲಿ ಅಚ್ಚರಿಯೇನಿಲ್ಲ.
ನಿಜಕ್ಕೂ ಇಂದು ಚೀನಾ ಸ್ಥಿತಿ ಅಯೋಮಯವಾಗಿದೆ. ಶಿ ಜಿನ್ಪಿಂಗ್ ಅನ್ನೋ ಸರ್ವಾಧಿಕಾರಿ ಅಧ್ಯಕ್ಷನ ಹಪಾಹಪಿ, ತನ್ನ ವಿರುದ್ಧ ತನ್ನದೇ ದೇಶದಲ್ಲಿ ಉಂಟಾಗುತ್ತಿರೋ ಅಸಮಾಧಾನ, ಹಲವು ಪ್ರದೇಶಗಳಲ್ಲಿ ಊಟಕ್ಕೂ ಬಂದೊದಗಿರೋ ತಾತ್ವಾರ, ಜಗತ್ತಿನ ಕಣ್ಣಿನಲ್ಲಿ ವಿಲನ್ ಆಗಲು ಕಾರಣವಾಗಿರೋ ಚೀನಿ ಕೊರೊನಾ ವೈರಸ್, ಸೈನ್ಯ ಸೇರಲು ಹಿಂಜರಿಯುತ್ತಿರೋ ಯುವ ಸಮುದಾಯವನ್ನು ಮತ್ತೆ ಮರಳಿ ಸೇನೆಗೆ ತರಬೇಕಾದ ಸವಾಲು, ಎಲ್ಲಕ್ಕಿಂತ ಹೆಚ್ಚಾಗಿ ಭಾರತದ ಬದ್ಧವೈರಿ ಪಾಕಿಸ್ತಾನದ ಜೊತೆ ತಾನು ಕೈಜೋಡಿಸಿರೋದ್ರಿಂದ ಬಲವಾಗುತ್ತಿರೋ ಭಾರತ ತನ್ನ ವಿರುದ್ಧ ಎದೆ ಸೆಟಿಸಿ ನಿಲ್ಲದಂತೆ ಮಾಡಬೇಕು ಅನ್ನೋ ಗುರಿ, ಜೊತೆಗೆ ಅಮೆರಿಕಾದ ಆಪ್ತರಾಷ್ಟ್ರವಾಗುವತ್ತ ಸಾಗುತ್ತಿರೋ ಭಾರತವನ್ನು ಕಟ್ಟಿಹಾಕಬೇಕು ಅನ್ನೋ ಲೆಕ್ಕಾಚಾರ.. ಈ ಎಲ್ಲ ಚಾಲೆಂಜ್ಗಳಿಗೂ ಚೀನಾಕ್ಕೆ ಪರಿಹಾರವಾಗಿ ಕಂಡಿದ್ದು ಲಡಾಖ್ಗೆ ಹೊಂದಿಕೊಂಡಿರೋ ಗಡಿ.
ಲಡಾಖ್ನಲ್ಲಿ ಕೇವಲ 2 ಬ್ಯಾಟಲಿಯನ್ ಹೊಂದಿದ್ದ ಭಾರತೀಯ ಸೇನೆಯ ಕಣ್ತಪ್ಪಿಸಿ ತನ್ನ ಸೇನೆಯನ್ನ ನುಗ್ಗಿಸಿ ಭಾರತದ ನೆಲವನ್ನು ಲಪಟಾಯಿಸಿ ತನ್ನ ದೇಶದಲ್ಲಿ ಹೀರೋ ಆಗಬೇಕು, ಜೊತೆಗೆ ಚೀನಾದ ಕಮ್ಯುನಿಸ್ಟ್ ಪಾರ್ಟಿಯಲ್ಲಿ ತನ್ನ ವಿರೋಧಿಗಳನ್ನೂ ಮಟ್ಟ ಹಾಕಬೇಕು ಅನ್ನೋ ಲೆಕ್ಕಾಚಾರದಲ್ಲಿ 2020ರ ಏಪ್ರಿಲ್ ಮೇ ವೇಳೆಗೆ ಪ್ಯಾಂಗಾಂಗ್ ಸೋ ಸರೋವರದ ಉತ್ತರ ಭಾಗದಲ್ಲಿನ ಮನುಷ್ಯನ ಬೆರಳಿನ ಆಕಾರದ ಪರ್ವತ ಶ್ರೇಣಿಯ ಫಿಂಗರ್ 4 ಬಳಿ ಚೀನಾದ ಸೇನೆ ಬಂದು ಕುಳಿತಿತ್ತು. ಸಾಮಾನ್ಯವಾಗಿ ಪ್ರತಿ ಬಾರಿ ಫಿಂಗರ್ 4 ತನಕ ಬಂದು ಪಹರೆ ನಡೆಸಿ ಮರಳಿ ಫಿಂಗರ್ 8ರ ಹಿಂದೆ ಹೋಗುತ್ತಿದ್ದ ಚೀನಿ ಸೇನೆ ಈ ಬಾರಿ ಮಾತ್ರ ಭಾರತಕ್ಕೇ ಸರ್ಪ್ರೈಸ್ ನೀಡಿತ್ತು.
ಭಾರತ ಪ್ರಾರಂಭದಲ್ಲಿ ಚೀನಿ ಮೋಸದಿಂದಾಗಿ ಕೊಂಚ ಹಿನ್ನೆಡೆ ಅನುಭವಿಸಿದ್ದರೂ ನಂತರ ಒಂದೋದೇ ಪೆಟ್ಟು ನೀಡಲು ಆರಂಭಿಸಿತ್ತು. ಮಿಟಿಲಿಟರಿ ಕ್ರಮ, ಆರ್ಥಿಕ ಕ್ರಮ, ರಾಜತಾಂತ್ರಿಕ ಕ್ರಮದ ಜೊತೆಗೆ ಭಾರತವನ್ನು ಒಳಗಿನಿಂದಲೇ ಮತ್ತಷ್ಟು ಬಲಗೊಳಿಸುವಂಥ ಕ್ರಮಗಳನ್ನು ಕೇಂದ್ರ ಸರ್ಕಾರ ನಿರಂತರವಾಗಿ ತೆಗೆದುಕೊಳ್ಳಲು ಆರಂಭಿಸಿತು. ಭಾರತ ತೆಗೆದುಕೊಂಡ ಒಂದೊಂದು ಕ್ರಮಗಳೂ ಚೀನಾಕ್ಕೆ ಅಕ್ಷರಶಃ ಒಂದೊಂದು ಮರ್ಮಾಘಾತವನ್ನೇ ನೀಡುತ್ತಾ ಹೋದವು. ಅದರ ಪರಿಣಾಮವಾಗಿ ಇಂದು ಚೀನಾ ಮರಳಿ ಫಿಂಗರ್ 8ರ ಹಿಂದೆ ಹೋಗಿದೆ. ಜೊತೆಗೆ ಬೆಲೆ ಕಟ್ಟಲಾಗದಷ್ಟು ಸರಣಿ ಸೋಲನ್ನೂ ಅನುಭವಿಸಿದೆ.
ಗಲ್ವಾನ್ ವ್ಯಾಲಿಯಲ್ಲಿ ರಾಕ್ಷಸರಂತೆ ಮುಗಿಬಿದ್ದ ಚೀನಾ ಸೇನೆ
ಮಹಾ ರುದ್ರನಾಗಿ ಅಘೋರ ರೂಪ ತೋರಿದ ಯೋಧರು
ಚೀನಿ ಸೋಲು 1: ಅದು ಜೂನ್ 14ರ ರಾತ್ರಿ.. ಗಲ್ವಾನ್ ವ್ಯಾಲಿಯ ನದಿ ತಿರುವಿನಲ್ಲಿ ಚೀನಾದ ಟೆಂಟ್ ಮತ್ತೆ ತಲೆ ಎತ್ತಿತ್ತು. ಹಿಂದಿನ ದಿನದ ಮಾತುಕತೆ ವೇಳೆ ತಾನೆ ಒಪ್ಪಿಕೊಂಡು ಭಾರತದ ಭಾಗದಲ್ಲಿದ್ದ ಟೆಂಟ್ ಅನ್ನು ಚೀನಿ ಸೇನೆ ತೆಗೆದು ಹಾಕಿತ್ತು. ಆದ್ರೆ ಮರುದಿನವೇ ಅಲ್ಲಿ ಮತ್ತೆ ಅದು ತಲೆ ಎತ್ತಿದ್ದನ್ನು ಬಿಹಾರ ರೆಜಿಮೆಂಟ್ನ ಕರ್ನಲ್ ಸಂತೋಷ್ ಬಾಬು ಮತ್ತು ತಂಡ ಗಮನಿಸಿತ್ತು. ಸಹಜವಾಗಿ ಮಾತನಾಡಿ ಅವರಿಗೆ ತಿಳಿ ಹೇಳಬೇಕು ಅಂತಾ ಸೌಮ್ಯ ಸ್ವಭಾವದ ಸಂತೋಷ್ ಬಾಬು ಆ ಟೆಂಟ್ ಬಳಿ ತೆರಳಿದಾಗ ಸಮ್ಥಿಂಗ್ ಈಸ್ ರಾಂಗ್ ಅನ್ನೋದು ಅವರ ಗಮನಕ್ಕೆ ಬಂದಿತ್ತು. ಬಳಿಕ ಅಂದು ರಾತ್ರಿ ಮಲ್ಲಯುದ್ಧವೇ ನಡೆದು ಹೋಯ್ತು. ಅನಾಗರಿಕರಂತೆ ಚೀನಿ ಸೈನಿಕರು ಮೊದಲೇ ತಯಾರಾಗಿ ಬಂದಿದ್ದು, ಮೊಳೆ ಇರುವ ರಾಡ್ನೊಂದಿಗೆ ಭಾರತೀಯ ಯೋಧರ ಮೇಲೆ ದಾಳಿ ಮಾಡಿದ್ರು. ಈ ದಾಳಿಯಲ್ಲಿ ಭಾರತ, ಕರ್ನಲ್ ಸಂತೋಷ್ ಬಾಬು ಅವರೂ ಸೇರಿದಂತೆ 20 ಯೋಧರನ್ನು ಕಳೆದುಕೊಂಡಿತ್ತು. ಆದ್ರೆ.. ಭಾರತೀಯ ಯೋಧರು ಬರೋಬ್ಬರಿ 45ಕ್ಕೂ ಹೆಚ್ಚು ಚೀನಿ ಸೈನಿಕರನ್ನು ಹತ್ಯೆ ಮಾಡಿದ್ದಲ್ಲದೇ 100ಕ್ಕೂ ಹೆಚ್ಚು ಚೀನಿಯರನ್ನು ತೀವ್ರವಾಗಿ ಗಾಯಗೊಳಿಸಿದ್ದರು. ಈ ಸೋಲು ಹಾಗೂ ಅಂದು ಉಂಟಾದ ಭಯ ಇಂದಿಗೂ ಚೀನಿ ಸೈನಿಕರನ್ನು ಬೆಚ್ಚಿ ಬೀಳಿಸುವಂತೆ ಮಾಡುತ್ತಿರೋದು ಸುಳ್ಳಲ್ಲ.
ಮೊದಲ ಬಾರಿ ಚೀನಾದ 59 ಆ್ಯಪ್ಗಳು ಬ್ಯಾನ್
ಒಟ್ಟು 267 ಚೀನಿ ಆ್ಯಪ್ ಬ್ಯಾನ್ ಮಾಡಿದ ಭಾರತ
ಚೀನಾಕ್ಕೆ ವ್ಯಾಪಾರದಲ್ಲೂ ಪೆಟ್ಟುಕೊಟ್ಟ ಸರ್ಕಾರ
ಚೀನಿ ಸೋಲು 2: ಗಲ್ವಾನ್ನಲ್ಲಿ ಹಿಂಸಾಚಾರ ಭುಗಿಲೇಳುವ ತನಕ ಕೇವಲ ಮಾತುಕತೆ ಮೂಲಕ ಚೀನಿಯರ ಮನವನ್ನು ಒಲಿಸುವ ಯತ್ನವನ್ನು ಭಾರತ ಮಾಡುತ್ತಿತ್ತು. ಆದ್ರೆ ಬಳಿಕ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲು ಆರಂಭಿಸಿತು. ಅದರ ಭಾಗವಾಗಿಯೇ ಪ್ರಾರಂಭದಲ್ಲಿ ಜೂನ್ 29, 2020ರಂದು ಮೊದಲ ಬಾರಿಗೆ ಟಿಕ್ಟಾಕ್ ಸೇರಿ 59 ಆ್ಯಪ್ಗಳನ್ನು ಬ್ಯಾನ್ ಮಾಡಲಾಯಿತು. ಚೀನಾದ ಮೇಲೆ ಒತ್ತಡ ಕಾಯ್ದುಕೊಳ್ಳಲು ಡ್ರಾಗನ್ ರಾಷ್ಟ್ರದ ಒಟ್ಟು 267 ಆ್ಯಪ್ಗಳನ್ನು ಭಾರತ ಬ್ಯಾನ್ ಮಾಡಿತು. ಇದರಿಂದಾಗಿ ಆ ದೇಶಕ್ಕೆ ಸಾವಿರಾರು ಕೋಟಿ ರೂಪಾಯಿ ನಷ್ಟವುಂಟಾಗಲು ಶುರುವಾಗಿತ್ತು.
ಅಷ್ಟೇ ಅಲ್ಲ, ಚೀನಾದ ಸಂಸ್ಥೆಗಳು ಭಾರತದಲ್ಲಿ ನೇರವಾಗಿ ಹೂಡಿಕೆ ಮಾಡದಂತೆ ಸಹ ಕಾನೂನಿನಲ್ಲಿ ಕೇಂದ್ರ ಸರ್ಕಾರ ಬದಲಾವಣೆ ಮಾಡಿತು. ಜೊತೆಗೆ ಆ ದೇಶದ ಕಂಪನಿಗಳಿಗೆ ಸಿಕ್ಕಿದ್ದ ಹಲವು ಟೆಂಡರ್ಗಳನ್ನು ರದ್ದು ಮಾಡಲಾಯಿತು. ಚೀನಾದಿಂದ ಆಮದಾಗುವ ಹಲವು ವಸ್ತುಗಳಿಗೆ ತಡೆ ಕೊಡಲಾಯಿತು. ಆಮದು ಶುಲ್ಕವನ್ನು ಕೂಡ ಕೇಂದ್ರ ಸರ್ಕಾರ ಹೆಚ್ಚಿಸಿತು.
ಆತ್ಮನಿರ್ಭರ ಭಾರತ ಯೋಜನೆ ಉದ್ಘಾಟನೆ
ಚೀನಾದ ಮೇಲೆ ಅವಲಂಬನೆ ಕಡಿಮೆ ಮಾಡಿದ ಘೋಷಣೆ
ಚೀನಿ ಸೋಲು 3: ಚೀನಾ ವೈರಸ್ ಕೊರೊನಾ ಸೋಂಕು ಭಾರತದಲ್ಲಿ ಪ್ರಾರಂಭವಾದಾಗ ಭಾರತದಲ್ಲಿ ಒಂದೇ ಒಂದು ಪಿಪಿಇ ಕಿಟ್ ತಯಾರಾಗ್ತಿರಲಿಲ್ಲ. ಎನ್-95 ಮಾಸ್ಕ್ಗಳೂ ಚೀನಾದಿಂದಲೇ ಬರಬೇಕಿತ್ತು. ಅಷ್ಟು ಮಾತ್ರವಲ್ಲ ಪ್ರತಿ ಭಾರತೀಯರೂ ಪ್ರತಿನಿತ್ಯ ಬಳಸುವ ಹಲವು ವಸ್ತುಗಳನ್ನೂ ಚೀನಾದಿಂದಲೇ ಆಮದು ಮಾಡಿಕೊಳ್ಳಬೇಕಿತ್ತು. ದೊಡ್ಡ ದೊಡ್ಡ ವಸ್ತುಗಳೂ ಸೇರಿ ಹೀಗೆ ಪ್ರತಿ ವರ್ಷ ಚೀನಾದಿಂದ ಭಾರತ ಸುಮಾರು 60 ಸಾವಿರ ಕೋಟಿ ರೂಪಾಯಿ ವಸ್ತುಗಳನ್ನು ತರಿಸಿಕೊಳ್ಳುತ್ತಿತ್ತು. ಅದೇ ಭಾರತದಿಂದ ಕೇವಲ ಸುಮಾರು 25 ಸಾವಿರ ಕೋಟಿ ರೂಪಾಯಿಯ ವಸ್ತುಗಳು ಚೀನಾಕ್ಕೆ ರಫ್ತು ಆಗುತ್ತಿದ್ದವು. ಹೀಗಾಗಿ ಒಂದೆಡೆ ಕೊರೊನಾ, ಇನ್ನೊಂದೆಡೆ ಲಡಾಖ್ ಗಡಿಯಲ್ಲಿ ಚೀನಾ ಕಿತಾಪತಿ.. ಈ ಎಲ್ಲ ಕಾರಣದಿಂದಾಗಿ ಭಾರತ ಸ್ವವಾಲಂಬಿಯಾಗಲೇಬೇಕಾದ ಅನಿವಾರ್ಯತೆಗೆ ಸಿಲುಕಿತ್ತು. ಅಂಥ ವೇಳೆಯಲ್ಲೇ ಭಾರತ ಸರ್ಕಾರ ಆತ್ಮನಿರ್ಭರ್ ಭಾರತ್ ಯೋಜನೆ ಘೋಷಿಸೋದರ ಮೂಲಕ ಚೀನಾಕ್ಕೆ ದೊಡ್ಡ ಪೆಟ್ಟು ಕೊಟ್ಟಿತ್ತು. ಲಡಾಖ್ ಗಡಿಯಲ್ಲಿ ಚೀನಿ ಸೇನೆ ಜಮಾವಣೆಯಾಗುವ ತನಕ ಭಾರತ ಮತ್ತು ಚೀನಾದ ವ್ಯಾಪಾರ-ವಹಿವಾಟು ಏರುಗತಿಯಲ್ಲಿ ಸಾಗುತ್ತಿತ್ತು. ಆದ್ರೆ ಚೀನಾ ಮಾಡಿದ ಯಡವಟ್ಟು ಸ್ವಾವಲಂಬಿ ಭಾರತಕ್ಕೆ ಎಡೆ ಮಾಡಿ ಕೊಟ್ಟಿತು.
ಕೈಲಾಶ್ ರೇಂಜ್ ಆಕ್ರಮಿಸಿಕೊಂಡ ಭಾರತೀಯ ಸೇನೆ
ಚೀನಿ ಸೋಲು 4 : ಅದು ಆಗಸ್ಟ್ 30ರ ರಾತ್ರಿ.. ಭಾರತದ ಸೈನಿಕರು ಅದ್ರಲ್ಲೂ ಟಿಬೇಟ್ ಸೈನಿಕರನ್ನು ಒಳಗೊಂಡ ಸ್ಪೆಷಲ್ ಫ್ರಂಟಿಯರ್ ಫೋರ್ಸ್ ಯೋಧರು ಚೀನಿ ಸೇನೆಗೆ ಆ ಜನ್ಮ ಆಘಾತ ನೀಡಿದ್ದರು. ಅಂದು ಭಾರತೀಯ ಯೋಧರು ಪ್ಯಾಂಗಾಂಗ್ ಸೋ ಸರೋವರದ ದಕ್ಷಣ ಭಾಗದಲ್ಲಿನ ಅತ್ಯಂತ ಆಯಕಟ್ಟಿನ ಮತ್ತು ಉನ್ನ ಕೈಲಾಶ್ ರೇಂಜ್ ಪರ್ವ ಶ್ರೇಣಿಗಳನ್ನು ವಶಕ್ಕೆ ಪಡೆದವು. ಚೀನಿ ಸೈನಿಕರನ್ನು ಓಡಿಸಿ ಆ ಪರ್ವತ ಶ್ರೇಣಿ ಆಕ್ರಮಿಸಿಕೊಂಡವು. ಇದು ಚೀನಿ ಸೈನಿಕರಿಗೆ ದೊಡ್ಡ ಸರ್ಪ್ರೈಸ್ ನೀಡಿದ್ದು ಮಾತ್ರವಲ್ಲ ಬದಲಿಗೆ ಇಡೀ ಜಗತ್ತಿಗೆ ಭಾರತೀಯ ಸೇನೆಯ ಶೌರ್ಯವನ್ನು ಪ್ರದರ್ಶಿಸಿತು. ಜೊತೆಗೆ ಮಾತುಕತೆ ವೇಳೆ ಭಾರತಕ್ಕೆ ಬಲವನ್ನೂ ತಂಡುಕೊಟ್ಟಿತು.
ಭಾರತೀಯ ಸೇನೆಯ ಆಧುನೀಕರಣಕ್ಕೆ ವೇಗ
ಥಿಯೇಟರ್ ಕಮಾಂಡ್ ನಿರ್ಮಾಣಕ್ಕೂ ಪ್ರೋತ್ಸಾಹ
ಚೀನಿ ಸೋಲು 5: ಸೈಜಿನಲ್ಲಿ ಭಾರತಕ್ಕೆ ಮೂರರಿಂದ ನಾಲ್ಕು ಪಟ್ಟು ದೊಡ್ಡದಾಗಿರೋ ಚೀನಾದ ಗಡಿಗೆ ಹೊಂದಿಕೊಂಡಂತೆ ಬರೋಬ್ಬರಿ 27 ರಾಷ್ಟ್ರಗಳಿವೆ. ರಷ್ಯಾ, ಜಪಾನ್, ಭಾರತ ಸೇರಿದಂತೆ ಎಲ್ಲ ರಾಷ್ಟ್ರಗಳೊಂದಿಗೆ ಅದರ ಕಿರಿಕ್ ಇದೆ. ಆದ್ರೆ, ಭಾರತ ಗಡಿ ವಿವಾದವನ್ನು ವೈರತ್ವಕ್ಕೆ ಕಾರಣವಾಗೋದನ್ನು ಬಯಸಿರಲಿಲ್ಲ. ಆದ್ರೆ ಚೀನಾ ಮಾಡಿದ ಯಡವಟ್ಟು ತನ್ನಷ್ಟೇ ಬಲಶಾಲಿಯಾದ. ಅದ್ರಲ್ಲೂ ಪರ್ವತ ಶ್ರೇಣಿಯ ಯುದ್ಧದಲ್ಲಿ ತನಗಿಂತಲೂ ಬಲವಾಗಿರೋ ಭಾರತವನ್ನು ಎದುರು ಹಾಕಿಕೊಳ್ಳಲು ಕಾರಣವಾಗಿದೆ. ಜೊತೆಗೆ ಮಲಗಿದ ಸಿಂಹವಾಗಿದ್ದ ಭಾರತವನ್ನು ಎಚ್ಚರಿಸಿ ಅದರ ಸೇನೆ ಆಧುನೀಕರಣಕ್ಕೆ ವೇಗ ನೀಡುವಂತೆ ಮಾಡಿದೆ. ಚೀನಿ ಸೇನೆ ಲಡಾಖ್ ಗಡಿಯಲ್ಲಿ ಬಂದು ಕುಳಿತಾಗಿನಿಂದ ಭಾರತೀಯ ಸೇನೆ ತ್ವರಿತವಾಗಿ ಬರೋಬ್ಬರಿ 20 ಸಾವಿರ ಕೋಟಿ ರೂಪಾಯಿ ಶಸ್ತ್ರಾಸ್ತ್ರ ಖರೀದಿಸಿದೆ. ಜೊತೆಗೆ ಭೂ ಸೇನೆ, ವಾಯುಸೇನೆ ಮತ್ತು ಜಲಸೇನೆಯನ್ನು ಮತ್ತಷ್ಟು ಆಧುನೀಕರಣ ಗೊಳಿಸುವ ಪ್ರಕ್ರಿಯೆಗೆ ವೇಗ ನೀಡಿದೆ. ಜೊತೆಗೆ ಎಲ್ಲ ಸೇನೆಗಳ ನಡುವಿನ ಕೊಂಡಿ ಬಲವಾಗಿರೋದಕ್ಕಾಗಿ ವಿವಿಧ ಥಿಯೇಟರ್ ಕಮಾಂಡ್ ರಚಿಸೋ ಯೋಜನೆ ತ್ವರಿತವಾಗಿ ಕಾರ್ಯರೂಪಕ್ಕೆ ಬರಲೂ ಇದು ಕಾರಣವಾದಂತಾಗಿದೆ. ಈ ಮೂಲಕ ಸ್ನೇಹಿತನಾಗಲು ಬಯಸಿದ್ದ ಭಾರತವನ್ನು ವೈರಿಯನ್ನಾಗಿಸಿಕೊಂಡಿರೋ ಚೀನಾ ಲಾಂಗ್ ರನ್ನಲ್ಲಿ ದೊಡ್ಡ ಸೋಲನ್ನೇ ಅನುಭವಿಸಿದಂತಾಗಿದೆ.
ಅಮೆರಿಕಾದೊಂದಿಗೆ ಭಾರತ ಮತ್ತಷ್ಟು ಹತ್ತಿರ
ದಕ್ಷಿಣ ಚೀನಾ ಕಡಲಿನಲ್ಲಿ ಸ್ವಾಯತ್ತತೆ ಕಾಯಲು ಕ್ವಾಡ್
ಚೀನಿ ಸೋಲು 6: ಚೀನಾಕ್ಕೆ ಇದ್ದ ಅತಿ ದೊಡ್ಡ ಭಯವೆಂದರೆ.. ಸದ್ಯಕ್ಕೆ ಬದ್ಧವೈರಿಯಾಗಿ ಬದಲಾಗ್ತಿರೋ ಅಮೆರಿಕಾದೊಂದಿಗೆ ಭಾರತ ಹತ್ತಿರವಾಗುತ್ತೆ ಅನ್ನೋದು. ಇದೇ ಕಾರಣದಿಂದಾಗಿ ಭಾರತಕ್ಕೆ ಎಚ್ಚರಿಸಲು ಅದು ಪಟ್ಟ ಪರಿಪಾಟಲು ಅಸ್ಟಿಷ್ಟಲ್ಲ. ಲಡಾಖ್ನಲ್ಲಿ ಬಂದು ಕುಳಿತುಕೊಳ್ಳುವ ಮೂಲಕ ಭಾರತಕ್ಕೆ ಎಚ್ಚರಿಕೆಯನ್ನೂ ಈ ಬಗ್ಗೆ ಚೀನಾ ಬಹಿರಂಗವಾಗಿಯೇ ಕೊಟ್ಟಿತ್ತು. ಆದ್ರೆ, ಸ್ನೇಹಕ್ಕೆ ಪ್ರಾಣವನ್ನೂ ಕೊಡೋ ಭಾರತೀಯರು ಬೆದರಿಕೆಗೆ ಬಗ್ಗೋರಲ್ಲ ಅನ್ನೋದು ಡ್ರಾಗನ್ ರಾಷ್ಟ್ರಕ್ಕೆ ಗೊತ್ತಿರಲಿಲ್ಲ ಅನಿಸುತ್ತೆ.
ಯಾವಾಗ ಚೀನಾ ಭಾರತದ ಗಡಿಯಲ್ಲಿ ಬಂದು ಕುಳಿತಿತೋ ಅದು ಭಾರತ ಮತ್ತು ಅಮೆರಿಕಾ ಮತ್ತಷ್ಟು ಹತ್ತರಿವಾಗಲು ಕಾರಣವಾಯಿತು. ಹಿಮಾಲಯದಲ್ಲಿ ಭಾರತವನ್ನು ಚೀನಾ ಎದುರು ಹಾಕಿಕೊಂಡಿದ್ದು ಹಿಂದೂ ಮಹಾಸಾಗರದಲ್ಲಿ ಅದಕ್ಕೆ ಎಲ್ಲಿಲ್ಲದ ಸೋಲು ಕಾಣೋಕೆ ಕಾರಣವಾಯಿತು. ಹೌದು, ಚೀನಾ ಕಿರಿಕ್ ಬಳಿಕ ಅಮೆರಿಕಾ ಮತ್ತು ಭಾರತ ಮತ್ತಷ್ಟು ಹತ್ತಿರವಾದವು. ಅಮೆರಿಕಾದ ಸ್ಟ್ರಾಟೆಜಿಕ್ ಪಾರ್ಟ್ನರ್ ಆಗಿ ಭಾರತ ರೂಪಗೊಂಡಿತು. ಇನ್ನೊಂದೆಡೆ ಭಾರತ-ಅಮೆರಿಕಾ-ಆಸ್ಟ್ರೇಲಿಯಾ ಮತ್ತು ಜಪಾನ್ ರಾಷ್ಟ್ರಗಳು ಸೇರಿ ಕ್ವಾಡ್ ಸಂಘಟನೆಯನ್ನು ಮತ್ತಷ್ಟು ಬಲಗೊಳಿಸಲು ನಿರ್ಧರಿಸಿದವು. ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾವನ್ನು ಕಟ್ಟಿಹಾಕಬೇಕು. ಸರಾಗ ಮತ್ತು ಸ್ವತಂತ್ರ ಕಡಲು ಮಾರ್ಗ ರಕ್ಷಣೆ ಮಾಡಬೇಕು ಅನ್ನೋ ಉದ್ದೇಶದಿಂದ ಈ ಸಂಘಟನೆ ಬಲಗೊಂಡಿತು. ಇದು ನಿಜಕ್ಕೂ ಚೀನಾಕ್ಕೆ ಗಂಟಲ ಮುಳ್ಳೇ ಸರಿ.
ಫಿಂಗರ್ 4ನಿಂದ ಕಾಲ್ಕಿತ್ತ ಚೀನಿ ಸೇನೆ
ಜಗತ್ತಿನಲ್ಲಿ ಕುಂದಿದ ಚೀನಿ ಸೇನೆ ಇಮೇಜ್
ಭಾರತದ ಪ್ರಾಮುಖ್ಯತೆ ಗಣನೀಯ ಹೆಚ್ಚಳ
ಚೀನಿ ಸೋಲು 7: ಹೀಗೆ ಭಾರತೀಯ ಸೇನೆ ಸಾಲು ಸಾಲಾಗಿ ಕೊಟ್ಟ ಪೆಟ್ಟುಗಳು ಚೀನಿ ಸೇನೆಗೆ ಸೋಲಿನ ರುಚಿಯನ್ನು ಉಣಿಸಿದಿವು. ಇದು 1962 ಭಾರತ ಎಂದು ತಿಳಿದುಕೊಂಡಿದ್ದ ಚೀನಾ, 1967ರಲ್ಲಿ ಸೋಲನ್ನು ಉಂಡಿದ್ದನ್ನು ಮರೆತು ಬಿಟ್ಟಿತ್ತು. 2020 ರ ಭಾರತೀಯ ಶೌರ್ಯವನ್ನು ಈಗ ಕಾಣುವಂತಾಗಿತ್ತು.
ಫಿಂಗರ್ 4 ರ ತನಕ ಪ್ರದೇಶ ತನ್ನದೆಂದು ಹೇಳಿಕೊಳ್ಳುತ್ತಿದ್ದ ಚೀನಾ ಈಗ ತನ್ನೆಲ್ಲ ಸೇನೆ ಮತ್ತು ಸರಂಜಾಮುಗಳನ್ನು ಫಿಂಗರ್ 8ರ ಆಚೆ ತೆಗೆದುಕೊಂಡು ಹೋಗಿದೆ. ಅಂದರೆ ಭಾರತ ಫಿಂಗರ್ 8ರ ತನಕದ ಪ್ರದೇಶವನ್ನು ಭಾರತ ತನ್ನದೆಂದು ಹೇಳಿಕೊಳ್ಳುತ್ತೆ. ಭಾರತ ಹೇಳುವಂತೆಯೇ ಇಂದು ಆಗಿದ್ದು ಫಿಂಗರ್ 8 ರ ಆಚೆಗೆ ಚೀನಿ ಸೇನೆ ಹೋಗಿದೆ. ಈ ಬೆಳವಣಿಗೆ ಖಂಡಿತ ಚೀನಾ ಸೇನೆ ಹೊಂದಿದ್ದ ಅತ್ಯಂತ ಪವರ್ ಫುಲ್, ಅತ್ಯಂತ ಮಾಡರ್ನ್. ಸೋಲಿಸಲು ಸಾಧ್ಯವೇ ಇಲ್ಲದ ಬಲ ಅನ್ನೋ ಇಮೇಜ್ ಅನ್ನು ತೊಡೆದು ಹಾಕಿದೆ. ಹೀಗಾಗಿ ವಿಯೆಟ್ನಾಂ, ಮಂಗೋಲಿಯಾದಂಥ ದೇಶಗಳೂ ಈಗ ಚೀನಾ ವಿರುದ್ಧ ಮಾತನಾಡುವ ಬಲ ಪಡೆದುಕೊಳ್ಳುವಂತಾಗಿದೆ. ಇನ್ನೊಂದೆಡೆ ಭಾರತೀಯ ಸೇನೆಯ ಹಾಗೂ ಭಾರತದ ನಾಯಕತ್ವದ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಭಾರತದ ಇಮೇಜ್ ಅನ್ನು ನೂರ್ಮಡಿಗೊಳಿಸಿದೆ. ಜೊತೆಗೆ ವ್ಯಾಕ್ಸಿನ್ ಡಿಪ್ಲೊಮಸಿ ಕಾರಣದಿಂದಾಗಿ ಚೀನಾ ವೈರಸ್ಗೆ ಭಾರತದ ಮದ್ದು ಅನ್ನೋ ಗುಡ್ವಿಲ್ ಅನ್ನು ಕೂಡ ಗಳಿಸಿದೆ.
ಒಟ್ಟಿನಲ್ಲಿ ಭಾರತವನ್ನು ಎದುರು ಹಾಕಿಕೊಂಡರೆ ಏನಾಗುತ್ತೆ ಅನ್ನೋ ಪಾಠವನ್ನು ಈ ಘಟನೆ ಚೀನಾಸೇರಿದಂತೆ ಹಲವು ರಾಷ್ಟ್ರಗಳಿಗೆ ಈ ಬೆಳವಣಿಗೆ ತೋರಿಸಿಕೊಟ್ಟಂತಾಗಿದೆ. ಇನ್ನೊಂದೆಡೆ ಏನೋ ಮಾಡಲು ಹೋಗಿ.. ಏನೋ ಮಾಡಿಕೊಂಡಂತೆ ಚೀನಿ ಸ್ಥಿತಿಯಾಗಿದ್ದು ಶತಮಾನದ ಸೋಲನ್ನು ಉಣ್ಣುವಂತಾಗಿದೆ.
ವಿಶೇಷ ವರದಿ- ರಾಘವೇಂದ್ರ ಗುಡಿ, ಡಿಜಿಟಲ್ ಡೆಸ್ಕ್
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post