ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ ಪ್ಯಾಂಗಾಂಗ್ ಸೋ ಸರೋವರದಿಂದ ಹಿಂದೆ ಸರಿದಿದೆ. ಇದರಿಂದ ಭಾರತ ಹಾಗೂ ಚೀನಾ ನಡುವೆ ಲಡಾಖ್ ಗಡಿಯಲ್ಲಿ ಉದ್ಭವಿಸಿದ್ದ ಬಿಕ್ಕಟ್ಟು ತಣ್ಣಗಾಗುತ್ತಿದೆ. ಅಂದ್ಹಾಗೆ ಲಡಾಖ್ನಲ್ಲಿ ಚಳಿಗಾಲದ ವೇಳೆ ಅತ್ಯಂತ ವಿಪರೀತ ಶೀತದ ವಾತಾವರಣವನ್ನ ಹೊಂದಿರುತ್ತೆ. ಇಂಥ ಕರಿಣ ಪರಿಸ್ಥಿತಿಯಲ್ಲೂ ನಮ್ಮ ಯೋಧರು ಇಲ್ಲಿ ನಿಯೋಜನೆಗೊಂಡು, ದೇಶದ ಗಡಿ ಕಾಯುತ್ತಿದ್ದಾರೆ. ಅಂಥ ಯೋಧರಿಗಾಗಿ ಖ್ಯಾತ ಇಂಜಿನಿಯರ್ ಹಾಗೂ ಶಿಕ್ಷಣ ಸುಧಾರಕ ಸೋನಮ್ ವಾಂಗ್ಚುಕ್ ವಿಶೇಷ ಟೆಂಟ್ ತಯಾರಿಸಿದ್ದಾರೆ.
ಅಂದ್ಹಾಗೆ ಸೋನಮ್ ವಾಂಗ್ಚುಕ್ ರಿಯಲ್ ಲೈಫ್ ರಾಂಚೋ. ಇವರ ಜೀವನ ಮೇಲೆ ತಯಾರಾದದ್ದೇ ಬಾಲಿವುಡ್ನ ಬ್ಲಾಕ್ ಬಸ್ಟರ್ ಸಿನಿಮಾ 3 ಈಡಿಯಟ್ಸ್. ಗಡಿಯಲ್ಲಿ ನಿಯೋಜನೆಗೊಂಡ ಯೋಧರು ಮುಂದೆ ವಿಪರೀತ ಚಳಿಯಿಂದ ಕಷ್ಟ ಎದುರಿಸುವಂತಾಗಬಾರದು ಅಂತ ವಾಂಗ್ಚುಕ್, ಸೋಲಾರ್ ಹೀಟೆಡ್ ಮಿಲಿಟರಿ ಟೆಂಟ್ ತಯಾರಿಸಿದ್ದಾರೆ. ಹೆಸರೇ ಹೇಳುವಂತೆ ಈ ಟೆಂಟ್ ಸೌರಶಕ್ತಿಯನ್ನ ಬಳಸಿಕೊಂಡು ಕಾರ್ಯನಿರ್ವಹಿಸುತ್ತದೆ. ಹೊರಗಿನ ಉಷ್ಣಾಂಶ ಮೈನಸ್ ಡಿಗ್ರಿ ಸೆಲ್ಶಿಯಸ್ ಇದ್ದರೂ ಕೂಡ ಈ ಟೆಂಟ್ನೊಳಗೆ ಯೋಧರು ಬೆಚ್ಚಗಿರಬಹುದು.
ಈ ಬಗ್ಗೆ ವಾಂಗ್ಚುಕ್ ಕಳೆದ ಶುಕ್ರವಾರ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ಮಾಹಿತಿ ನೀಡಿದ್ದಾರೆ. ಅಂದು ರಾತ್ರಿ 10 ಗಂಟೆ ವೇಳೆಗೆ ಮೈನಸ್ 14 ಡಿಗ್ರಿ ಸೆಲ್ಶಿಯಸ್ ಟೆಂಪರೇಚರ್ ಇತ್ತು. ಆದ್ರೆ ಟೆಂಟ್ ಒಳಗಿನ ಉಷ್ಣಾಂಶ 15 ಡಿಗ್ರಿ ಸೆಲ್ಶಿಯಸ್ ಇತ್ತು. ಅಂದ್ರೆ ಹೊರಗಡೆ ಇದ್ದ ತಾಪಮಾನಕ್ಕಿಂತ ಟೆಂಟ್ನೊಳಗಿನ ಟೆಂಪರೇಚರ್ 29 ಡಿಗ್ರಿ ಸೆಲ್ಶಿಯಸ್ ಅಧಿಕವಿತ್ತು.
ಮೇಡ್ ಇನ್ ಇಂಡಿಯಾ ಉತ್ಪನ್ನ
ಈ ಟೆಂಟ್ ಸಂಪೂರ್ಣವಾಗಿ ಮೇಡ್ ಇನ್ ಇಂಡಿಯಾ ಉತ್ಪನ್ನವಾಗಿದೆ. ಇದ್ರಿಂದ ಯೋಧರನ್ನ ಬೆಚ್ಚಗಿಡಲು ಬಳಕೆ ಮಾಡಲಾಗುವ ಟನ್ಗಟ್ಟಲೆ ಸೀಮೆಎಣ್ಣೆಯ ಉಳಿತಾಯವಾಗಲಿದೆ. ಅಲ್ಲದೆ ಮಾಲಿನ್ಯ ತಗ್ಗುತ್ತದೆ. ಹವಾಮಾನ ಬದಲಾವಣೆ ದೃಷ್ಟಿಯಿಂದ ಇದು ಪರಿಸರಸ್ನೇಹಿಯಾಗಿದೆ.
ಒಂದು ಟೆಂಟ್ನಲ್ಲಿ ಸುಮಾರು 10 ಯೋಧರು ಆರಾಮಾಗಿ ವಾಸಿಸಬಹುದು. ಅಲ್ಲದೆ ಎಲ್ಲಾ ಉಪಕರಣಗಳು ಸೇರಿ ಇದು ಸುಮಾರು 30 ಕೆ.ಜಿಗಿಂತ ಕಡಿಮೆ ತೂಕವಿದ್ದು, ಸುಲಭವಾಗಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಾಗಣೆ ಮಾಡಬಹುದು ಎಂದು ವಾಂಗ್ಚುಕ್ ತಿಳಿಸಿದ್ದಾರೆ.
ತಮ್ಮ ಆವಿಷ್ಕಾರಗಳಿಗೆ ಹೆಸರುವಾಸಿಯಾಗಿರೋ ವಾಂಗ್ಚುಕ್ ಇಂಥದ್ದೇ ಪ್ರೋಟೋಟೈಪ್ವೊಂದನ್ನ ತಮ್ಮ ಮನೆಯಲ್ಲಿ ಅಳವಡಿಸಿದ್ದರು. ಅವರ ಇಡೀ ಮನೆಯನ್ನ ಪ್ಯಾಸಿವ್ ಸೋಲಾರ್ ಬಿಲ್ಡಿಂಗ್ ಡಿಸೈನ್ನಲ್ಲಿ ನಿರ್ಮಾಣ ಮಾಡಲಾಗಿದೆ. ಇದರ ಅರ್ಥ ಚಳಿಗಾಲದಲ್ಲಿ ಮನೆಯ ಕಿಟಕಿ, ನೆಲ ಹಾಗೂ ಗೋಡೆಗಳು ಸೌರಶಕ್ತಿಯನ್ನ ಹೀರಿಕೊಂಡು, ಶೇಖರಿಸಿಟ್ಟು ಬಳಿಕ ಅದನ್ನ ಪ್ರತಿಬಿಂಬಿಸಿ ಉಷ್ಣಾಂಶವಾಗಿ ಪಸರಿಸುತ್ತದೆ. ಬೇಸಿಗೆ ಕಾಲದಲ್ಲಿ ಸೂರ್ಯನ ಶಾಖವನ್ನ ತಿರಸ್ಕರಿಸುತ್ತದೆ. ಸೋಲಾರ್ ಹೀಟಿಂಗ್ ವ್ಯವಸ್ಥೆಯಲ್ಲಿ ಇರುವಂತೆ ಇದಕ್ಕೆ ಯಾವುದೇ ಯಾಂತ್ರಿಕ ಮತ್ತು ವಿದ್ಯುತ್ ಘಟಕಗಳ ಬಳಕೆ ಅಗತ್ಯವಿಲ್ಲದ ಕಾರಣ ಇದನ್ನು passive solar architecture (ಜಡ ಸೌರ ವಾಸ್ತುಶಿಲ್ಪ) ಎಂದು ಕರೆಯಲಾಗುತ್ತದೆ.
SOLAR HEATED MILITARY TENT
for #indianarmy at #galwanvalley
+15 C at 10pm now.
Min outside last night was -14 C,
Replaces tons of kerosesne, pollution #climatechange
For 10 jawans, fully portable all parts weigh less than 30 Kgs. #MadeInIndia #MadeInLadakh #CarbonNeutral pic.twitter.com/iaGGIG5LG3— Sonam Wangchuk (@Wangchuk66) February 19, 2021
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post