ಮುಂಬೈ: ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕು ಹೆಚ್ಚಳವಾಗ್ತಿರೋ ಹಿನ್ನೆಲೆ ಅಮರಾವತಿ ನಗರದಲ್ಲಿ ಕರ್ಫ್ಯೂ ಜಾರಿ ಮಾಡಲಾಗಿದೆ. ಇಂದು ಸುದ್ದಿಗೋಷ್ಠಿ ನಡೆಸಿದ ಅಮರಾವತಿ ಜಿಲ್ಲಾಧಿಕಾರಿ ಶೈಲೇಶ್ ನವಲ್, ಕರ್ಫ್ಯೂ ಜಾರಿ ಬಗ್ಗೆ ಘೋಷಣೆ ಮಾಡಿದ್ದಾರೆ.
ಅಮರಾವತಿ ಮತ್ತು ಅಚಲಪುರ ಪುರಸಭೆ ವ್ಯಾಪ್ತಿಯಲ್ಲಿ ಫೆ.22ರ ಬೆಳಗ್ಗೆ 8 ಗಂಟೆಯಿಂದ ಮಾರ್ಚ್ 1ರ ಬೆಳಗ್ಗೆ 6ರವರೆಗೆ ಕರ್ಫ್ಯೂ ಜಾರಿಯಲ್ಲಿರಲಿದೆ. ಕರ್ಫ್ಯೂ ವೇಳೆ ಬೆಳಗ್ಗೆ 8 ರಿಂದ ಮಧ್ಯಾಹ್ನ 3 ಗಂಟೆವರೆಗೂ ಮಾತ್ರ ಅಗತ್ಯ ವಸ್ತುಗಳನ್ನ ಮಾರಾಟ ಮಾಡುವ ಅಂಗಡಿಗಳು ತೆರೆಯಲು ಅನುಮತಿ ನೀಡಲಾಗಿದೆ ಎಂದು ಡಿಸಿ ತಿಳಿಸಿದ್ದಾರೆ. ಪುಣೆಯಲ್ಲೂ ಇಂದಿನಿಂದ ಕರ್ಫ್ಯೂ ಜಾರಿ ಮಾಡಲಾಗಿದೆ.
ಕಳೆದ ವಾರ ಅಮರಾವತಿಯಲ್ಲಿ ವಾರಾಂತ್ಯದ ಲಾಕ್ಡೌನ್ ಘೋಷಿಸಲಾಗಿತ್ತು. ಶನಿವಾರ ಮಹಾರಾಷ್ಟ್ರದಲ್ಲಿ ಒಂದೇ ದಿನ 6,281 ಮಂದಿಗೆ ಸೋಂಕು ತಗುಲಿತ್ತು. ಅಲ್ಲದೇ ಸೋಂಕಿನಿಂದಾಗಿ 40 ಮಂದಿ ಸಾವನ್ನಪ್ಪಿದ್ದರು. ರಾಜ್ಯದಲ್ಲಿ ಹೊಸ ತಳಿಯ ಸೋಂಕು ಹರಡುತ್ತಿರುವ ಬಗ್ಗೆಯೂ ಆತಂಕ ನಿರ್ಮಾಣವಾಗಿದ್ದು, ಅಮರಾವತಿ ಮತ್ತು ಯವತ್ಮಾಲ್ ಜಿಲ್ಲೆಗಳಲ್ಲಿ ಎರಡು ಹೊಸ ತಳಿಯ ವೈರಸ್ಗಳು ಪತ್ತೆಯಾಗಿವೆ. ಆದರೆ ವಿದೇಶಿ ಮಾದರಿ ತಳಿಯ ವೈರಸ್ ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ಜಿಲ್ಲೆಗಳ ಸ್ಯಾಂಪಲ್ ಗಳನ್ನು ಹೆಚ್ಚಿನ ಪರೀಕ್ಷೆಗೆ ಪುಣೆಯ ಲ್ಯಾಬ್ಗೆ ಕಳುಹಿಸಲಾಗಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post