ಬೆಂಗಳೂರು: ದೇಶದ ಐದು ರಾಜ್ಯಗಳಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮುನ್ನೆಚ್ಚರಿಕೆ ಕೈಗೊಳ್ಳಲು ವೈದ್ಯಕೀಯ ಶಿಕ್ಷಣ ಮತ್ತು ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಇಂದು ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಸಿಇಒ, ಎಸ್‌ಪಿ, ಜಿಲ್ಲಾ ವೈದ್ಯಾಧಿಕಾರಿಗಳು ಮತ್ತು ವೈದ್ಯಕೀಯ ಕಾಲೇಜುಗಳ ಮುಖ್ಯಸ್ಥರ ಜೊತೆ ಸಭೆ ನಡೆಸಿ ಚರ್ಚೆ ಮಾಡಿದ್ದಾರೆ.
ಸಭೆ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಕೇರಳ, ಮಹಾರಾಷ್ಟ್ರ ಗಡಿಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗಿದೆ. ಗಡಿ ಪ್ರವೇಶಿಸುವವರಿಗೆ ಸೋಂಕು ಇದೆಯಾ ಇಲ್ಲವಾ ಎಂಬ ಬಗ್ಗೆ ನಿಗಾ ವಹಿಸಲಾಗುತ್ತಿದೆ. ಸಾಧಕ, ಬಾಧಕಗಳ ಬಗ್ಗೆ ಚರ್ಚೆ ನಡೆದಿದೆ ಎಂದು ಸ್ಪಷ್ಟಪಡಿಸಿದರು.
ಕಠಿಣ ಕ್ರಮ ಕೈಗೊಳ್ಳಲು ಅವಕಾಶ ಕೊಡಬೇಡಿ
ರಾಜ್ಯದಲ್ಲಿ ವಿವಿಧ ಸಮಾರಂಭ ಹಾಗೂ ಜಾತ್ರೆಗಳಲ್ಲಿ ಹೆಚ್ಚು ಜನಸಂದಣಿ ಸೇರುತ್ತಿದೆ. ಇದು ಕೋವಿಡ್ ತಾಂತ್ರಿಕ ಸಲಹಾ ಸಮಿತಿಯ ಆಶಯಕ್ಕೆ ವಿರುದ್ಧವಾಗಿದೆ. ಈ ಬಗ್ಗೆ ಪದೇ ಪದೇ ಎಚ್ಚರಿಕೆ ನೀಡುತ್ತಿದ್ದೇವೆ. ಇದನ್ನ ಜನರು ಅರ್ಥ ಮಾಡಿಕೊಳ್ಳಬೇಕು. ಸರ್ಕಾರ ಕಠಿಣ ಕ್ರಮ ಕೈಗೊಳ್ಳಲು ಜನರೇ ಅನುವು ಮಾಡಿಕೊಟ್ಟಂತಾಗಲಿದೆ. ಅದಕ್ಕೆ ಅವಕಾಶ ಕೊಡಬೇಡಿ ಎಂದು ಸುಧಾಕರ್ ಹೇಳಿದ್ರು. ಮಹಾರಾಷ್ಟ್ರದಲ್ಲಿ ಲಾಕ್ಡೌನ್ ಜಾರಿ ಆಗಿದೆ. ಇದೇ ಪರಿಸ್ಥಿತಿ ನಮ್ಮಲ್ಲಿ ಬರದಂತೆ ನೋಡಿಕೊಳ್ಳಬೇಕು. ಜನರು ಈ ಬಗ್ಗೆ ತುಂಬಾ ಗಂಭೀರವಾಗಿ ಅರಿತುಕೊಳ್ಳಬೇಕು ಎಂದು ಮನವಿ ಮಾಡಿದರು.
ಮದುವೆ ಮನೆಯಲ್ಲಿ ಇನ್ಮುಂದೆ ಮಾರ್ಷಲ್
ಜನಸಾಮಾನ್ಯರು, ವಿಐಪಿ, ವಿವಿಐಪಿಗಳು ಕೂಡ ಕೊರೊನಾ ನಿಯಮಗಳನ್ನ ಪಾಲಿಸುತ್ತಿಲ್ಲ. ಸಾಮಾಜಿಕ ಅಂತರ ಮತ್ತು ಮಾಸ್ಕ್ ಧರಿಸುವ ಕಾರ್ಯ ಮಾಡುತ್ತಿಲ್ಲ. ಇಷ್ಟೊಂದು ಉದಾಸೀನ ಒಳ್ಳೆಯದಲ್ಲ. ಹೀಗಾಗಿ ಮದುವೆ ಸಮಾರಂಭದಲ್ಲಿ ಇನ್ಮುಂದೆ ಒಬ್ಬೊಬ್ಬ ಮಾರ್ಷಲ್ಗಳನ್ನು ಹಾಕಲು ತೀರ್ಮಾನ ಮಾಡಲಾಗಿದೆ. ಸಮಾರಂಭದಲ್ಲಿ ಐನೂರಕ್ಕಿಂತ ಹೆಚ್ಚು ಜನ ಸೇರಬಾರದು. ಮಾಸ್ಕ್, ಸಾಮಾಜಿಕ ಅಂತರದ ನಿಯಮ ಪಾಲಿಸಲು ಮಾರ್ಷಲ್ಗಳನ್ನ ಹಾಕಲು ನಿರ್ಧಾರ ಮಾಡಿದ್ದೇವೆ ಎಂದರು.
ಕೆಲ ಜಿಲ್ಲೆಗಳಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ. ಕಲಬುರಗಿಯಲ್ಲಿ ಶೇಕಡ 1.37, ಬೆಂಗಳೂರಲ್ಲಿ ಶೇ. 1.2, ದಕ್ಷಿಣ ಕನ್ನಡ ಶೇ 1.1ರಷ್ಟು ಸೋಂಕು ಹೆಚ್ಚಳವಾಗಿದೆ. ಹೀಗಾಗಿ ಲಸಿಕೆ ಹಾಕಲು ಹೆಚ್ಚು ಆದ್ಯತೆ ನೀಡಿ, ಎರಡನೇ ಹಂತದ ಕೊರೊನಾ ಅಲೆ ತಪ್ಪಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಶಾಲೆ ಆರಂಭವಾಗಿದ್ದರೂ ಮಕ್ಕಳು ಬರಬೇಕೆಂಬುದು ಕಡ್ಡಾಯವಲ್ಲ. ರಾಜ್ಯದಲ್ಲಿ ಲಾಕ್ಡೌನ್ ಪರಿಸ್ಥಿತಿ ಇಲ್ಲ. ಆ ರೀತಿಯ ಪರಿಸ್ಥಿತಿಗೆ ಅವಕಾಶ ಕೊಡುವುದಿಲ್ಲ. ಆದರೆ ಒಂದೇ ಸ್ಥಳದಲ್ಲಿ ಐದು ಮಂದಿಗೆ ಸೋಂಕು ತಗುಲಿದರೆ ಆ ಪ್ರದೇಶವನ್ನ ಮತ್ತೆ ಕಂಟೋನ್ಮೆಂಟ್ ವಲಯ ಎಂದು ಘೋಷಣೆ ಮಾಡಲಾಗುವುದು ಎಂದು ಸುಧಾಕರ್ ತಿಳಿಸಿದ್ರು.
ವ್ಯಾಕ್ಸಿನೇಷನ್ ನಿಗದಿತ ಗುರಿ ತಲುಪಬೇಕಿದೆ
ಬೆಂಗಳೂರು ಮಹಾನಗರ ಪಾಲಿಕೆ, ಲಸಿಕೆ ಕೊಡುವುದರಲ್ಲಿ ಹಿಂದೆ ಇದೆ. ಈಗಾಗಲೇ ಆಯುಕ್ತರಿಗೆ ಹೇಳಿದ್ದೇವೆ. ಬೆಂಗಳೂರು, ಬಾಗಲಕೋಟೆ ಸೇರಿದಂತೆ ಕೆಲ ಜಿಲ್ಲೆಗಳಲ್ಲಿ ತುಂಬಾ ಕಡಿಮೆ ಪ್ರಮಾಣದಲ್ಲಿ ವ್ಯಾಕ್ಸಿನೇಷನ್ ಆಗಿದೆ. ರಾಜ್ಯದ ಕಂದಾಯ, ಗ್ರಾಮೀಣಾಭಿವೃದ್ಧಿ, ಗೃಹ, ನಗರಾಭಿವೃದ್ಧಿ ಇಲಾಖೆಯ 2 ಲಕ್ಷ 90 ಸಾವಿರ ಸಿಬ್ಬಂದಿಗೆ ಲಸಿಕೆ ನೀಡಲಾಗಿದೆ. ಆರೋಗ್ಯ ಇಲಾಖೆಯಲ್ಲಿ 4 ಲಕ್ಷದ 24 ಸಾವಿರ ಜನರಿಗೆ, 1 ಲಕ್ಷ 20 ಸಾವಿರ ಫ್ರಂಟ್ ಲೈನ್ ವರ್ಕರ್ಸ್ಗೆ ಲಸಿಕೆ ಕೊಟ್ಟಿದ್ದೇವೆ. ನಾವು 8 ಲಕ್ಷ ಗುರಿಯನ್ನ ಇಟ್ಟುಕೊಂಡಿದ್ದು, ಇದೇ 28ರ ಒಳಗೆ ಗುರಿ ತಲುಪುವಂತೆ ಎಲ್ಲಾ ಜಿಲ್ಲೆಯ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದೇವೆ. ನಾಳೆ, ನಾಡಿದ್ದು ಫ್ರಂಟ್ ಲೈನ್ ವರ್ಕರ್ಸ್ ಲಸಿಕೆ ಪಡೆದುಕೊಳ್ಳಬೇಕು ಎಂದು ಸಚಿವರು ಸ್ಪಷ್ಟಪಡಿಸಿದರು.
ಐವತ್ತು ವರ್ಷ ಮೇಲ್ಪಟ್ಟವರಿಗೆ ಲಸಿಕೆ ಹಾಕುವ ಬಗ್ಗೆ ಶೀಘ್ರದಲ್ಲೇ ಘೋಷಣೆಯಾಗಲಿದೆ. ಆದಷ್ಟು ಬೇಗ ಅಂದರೇ ಮಾರ್ಚ್ನಲ್ಲಿ ಕೇಂದ್ರ ಸರ್ಕಾರದಿಂದ ಈ ಕುರಿತು ಘೋಷಣೆಯಾಗುವ ಸಾಧ್ಯತೆ ಇದೆ. ₹35 ಸಾವಿರ ಕೋಟಿಯನ್ನ ಕೋವಿಡ್ ಲಸಿಕೆಗೆ ಮೀಸಲಿಡಲಾಗಿದೆ. ಗಡಿಯಲ್ಲಿ ಮತ್ತಷ್ಟು ನಿಗಾ ವಹಿಸಿದ್ದೇವೆ. ಆರ್ಟಿಪಿಸಿಆರ್ ಟೆಸ್ಟ್ ಮಾಡಲಾಗುತ್ತಿದೆಯೇ? ಯಾವ ರೀತಿ ಟೆಸ್ಟ್ ನಡೆದಿದೆ? ಎಂಬ ಕುರಿತು ಚರ್ಚೆಯಾಗಿದೆ. ಚಿತ್ರಮಂದಿರಗಳಲ್ಲಿ ಶೇ.100ರಷ್ಟು ಸೀಟಿಂಗ್ ಅವಕಾಶ ನೀಡಿರುವ ಬಗ್ಗೆ ತಿಂಗಳ ಅಂತ್ಯದಲ್ಲಿ ಪರಿಷ್ಕರಣಾ ಸಭೆ ನಡೆಸಿ ಮತ್ತೊಮ್ಮೆ ನಿರ್ಧಾರ ಮಾಡಲಾಗುವುದು. ಈ ಹಿಂದೆ ನಡೆದ ಚಿತ್ರರಂಗದ ಪ್ರತಿನಿಧಿಗಳ ಸಭೆಯಲ್ಲೇ ಈ ವಿಚಾರವನ್ನು ತಿಳಿಸಲಾಗಿದೆ ಎಂದು ಸುಧಾಕರ್ ಹೇಳಿದ್ರು.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post