ವಾಷಿಂಗ್ಟನ್: ಭಾರತ ಸರ್ಕಾರದ ಮೂರು ಹೊಸ ಕೃಷಿ ಕಾಯ್ದೆಗಳನ್ನ ವಿರೋಧಿಸಿ ದೇಶದ ರೈತರು ಹೋರಾಟ ಮಾಡುತ್ತಿರುವ ಹೊತ್ತಲ್ಲೇ ಅಮೆರಿಕಾದಲ್ಲಿ ಈ ಕಾಯ್ದೆಗಳನ್ನ ಬೆಂಬಲಿಸಿ ಕಾರ್ ಱಲಿ ನಡೆಸಲಾಗಿದೆ.
ಕೇಂದ್ರ ಸರ್ಕಾರದ ರೈತರ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ ಕಾಯ್ದೆ-2020, ರೈತರ ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಕಾಯ್ದೆ-2020 ಹಾಗೂ ಅಗತ್ಯ ಸರಕುಗಳ ತಿದ್ದುಪಡಿ ಕಾಯ್ದೆ-2020- ಈ ಮೂರು ಕಾಯ್ದೆಗಳನ್ನು ವಿರೋಧಿಸಿ ಹಲವಾರು ರೈತರು ಕಳೆದ ಸುಮಾರು ಎರಡೂವರೆ ತಿಂಗಳಿನಿಂದ ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ವಿದೇಶದಲ್ಲೂ ಹಲವು ಮಂದಿ ರೈತರನ್ನ ಬೆಂಬಲಿಸಿದ್ದರೆ, ಇನ್ನೂ ಹಲವು ಮಂದಿ ಸರ್ಕಾರದ ಕಾಯ್ದೆಗಳನ್ನ ಬೆಂಬಲಿಸಿದ್ದಾರೆ. ಅಂತರಾಷ್ಟ್ರೀಯ ಸೆಲೆಬ್ರಿಟಿಗಳು ರೈತರ ಪರವಾಗಿ ಟ್ವೀಟ್ ಮಾಡಿದ್ದಾರೆ.
ಇದರ ಬೆನ್ನಲ್ಲೇ ನಿನ್ನೆ ಸ್ಯಾನ್ ಫ್ರಾನ್ಸಿಸ್ಕೋ ಬೇ ಏರಿಯಾದ ಅನಿವಾಸಿ ಭಾರತೀಯರ ತಂಡವೊಂದು, ಕೃಷಿ ಕಾನೂನುಗಳನ್ನ ಬೆಂಬಲಿಸಿ ಕಾರ್ ಜಾಥಾ ನಡೆಸಿದೆ. ನಾವು ಕೃಷಿ ಕಾಯ್ದೆಗಳನ್ನ ಬೆಂಬಲಿಸುತ್ತೇವೆ ಎಂಬ ಭಿತ್ತಿಪತ್ರ ಹಿಡಿದು ಮೆರವಣಿಗೆ ಮಾಡಿದ್ದಾರೆ.
ದೇಶದಲ್ಲೂ ಕೆಲ ದಿನಗಳ ಹಿಂದೆ ಕೃಷಿ ಕಾಯ್ದೆಗಳನ್ನ ವಿರೋಧಿಸಿ ಹಾಗೂ ಬೆಂಬಲಿಸಿ ಟ್ರ್ಯಾಕ್ಟರ್ ಱಲಿಗಳನ್ನ ನಡೆಸಲಾಗಿತ್ತು. ಗಣರಾಜ್ಯೋತ್ಸವದ ದಿನ ರೈತರು ದೆಹಲಿಯಲ್ಲಿ ಟ್ರ್ಯಾಕ್ಟರ್ ಱಲಿ ನಡೆಸಿದ ವೇಳೆ, ರೈತರಿಗೆ ಬೆಂಬಲವಾಗಿ ಅಮೆರಿಕಾದಲ್ಲೂ ಕಾರ್ ಱಲಿ ನಡೆದಿತ್ತು.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post