ಆನೇಕಲ್: ಬೆಂಗಳೂರು ನಗರ ಜಿಲ್ಲೆ ಆನೇಕಲ್ ತಾಲ್ಲೂಕಿನ ಅತ್ತಿಬೆಲೆ ಗಡಿಯಲ್ಲಿ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ತಮಿಳುನಾಡು ಸರ್ಕಾರ ಪ್ರಾರಂಭಿಸಿರುವ ಯೋಜನೆಯ ವಿರುದ್ಧ ಈ ಪ್ರತಿಭಟನೆ ನಡೆದಿದೆ.
ಅತ್ತಿಬೆಲೆ ಕರ್ನಾಟಕ-ತಮಿಳುನಾಡು ಗಡಿಭಾಗದಲ್ಲಿದ್ದು ಈ ಗಡಿಯನ್ನ ಬಂದ್ ಮಾಡಿ ಕನ್ನಡ ಪರ ಹೋರಾಟಗಾರರು ಪ್ರತಿಭಟನೆ ನಡೆಸುತ್ತಿದ್ದು.. ತಮಿಳುನಾಡು ಸರ್ಕಾರ ಕಾವೇರಿಯ ಯೋಜನೆಯ ವಿರುದ್ಧ ಘೋಷಣೆಗಳನ್ನ ಕೂಗಿದ್ದಾರೆ. ತಮಿಳುನಾಡಿನಲ್ಲಿ 118 ಕಿ.ಮೀ. ವ್ಯಾಪ್ತಿಯಲ್ಲಿ ಕಾವೇರಿ ಕಾಮಗಾರಿ ಯೋಜನೆ ನಡೆಯುತ್ತಿದೆ. ಈ ಯೋಜನೆ ಅನುಷ್ಠಾನಗೊಂಡರೆ ರಾಜ್ಯದ ಗಡಿ ಜಿಲ್ಲೆಗಳಿಗೆ ನೀರಿನ ಕೊರತೆ ಉದ್ಭವವಾಗಲಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈಗಾಗಲೇ ಈ ಯೋಜನೆಗೆ ಕೇಂದ್ರ ಸರ್ಕಾರ ಹಣ ಮಂಜೂರು ಮಾಡಿದೆ ಎನ್ನಲಾಗಿದೆ. ತಮಿಳುನಾಡಿನಲ್ಲಿ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆ ಕೇಂದ್ರ ಸರ್ಕಾರ ಈ ಯೋಜನೆಗೆ ಹಣ ಬಿಡುಗಡೆ ಮಾಡಿ ಗಿಮಿಕ್ ಮಾಡುತ್ತಿದೆ ಎಂದು ಕನ್ನಡ ಪರ ಹೋರಾಟಗಾರರು ಆರೋಪಿಸಿದ್ದಾರೆ. ಸಾರಾ ಗೋವಿಂದ್, ಮಂಜುನಾಥ್ ದೇವಾ ಸೇರಿದಂತೆ ಹಲವು ಮುಖಂಡರು ವಾಟಾಳ್ ನಾಗರಾಜ್ಗೆ ಸಾಥ್ ನೀಡಿದ್ದಾರೆ. ಈ ವೇಳೆ ವಾಟಾಳ್ ನಾಗರಾಜ್ ಮತ್ತು ಬೆಂಬಲಿಗರು ಗಡಿಗೆ ಮುತ್ತಿಗೆ ಹಾಕಲು ಮುಂದಾಗಿದ್ದು ಪೊಲೀಸರು ಎಲ್ಲರನ್ನೂ ವಶಕ್ಕೆ ಪಡೆದಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post